ಮೀಟುಗೋಲು | Meetugolu : 1990 ರಿಂದ 2008ರವರೆಗಿನ ಕಾಲ ಕಾಶ್ಮೀರದಲ್ಲಿ ಭಯೋತ್ಪಾದನೆಯ ಅಟ್ಟಹಾಸ ಮೆರೆದ ಕಾಲ. ಇದನ್ನೇ ವಸ್ತುವಾಗಿಕೊಂಡು ಸಿದ್ಧವಾಗಿರುವ ಕಾಶ್ಮೀರ ಫೈಲ್ಸ್ ಸಿನಿಮಾ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ಪುನೀತ್ ಇಸ್ಸಾರ್, ಪಲ್ಲವಿ ಜೋಷಿ ಮೊದಲಾದ ಉನ್ನತ ದರ್ಜೆಯ ಕಲಾವಿದರ ನಟನೆಯಿಂದ ಕಳೆಕಟ್ಟಿದೆ. ಉಳಿದ ಮುಖ್ಯ ಭೂಮಿಕೆಯಲ್ಲಿರುವ ನಟಿಯರು, ಉಗ್ರನ ಪಾತ್ರಧಾರಿ, ಬಾಲಕಲಾವಿದರೆಲ್ಲರ ನಟನೆಯಲ್ಲಿ ಅಪರೂಪದ ಸಂಯಮವನ್ನು ಕಾಣಬಹುದು. ಈ ಮಂದಗತಿಯ ಓಟ ಸಿನಿಮಾದ ವಿಷಯಕ್ಕೆ ಬಹಳ ಪೂರಕವಾಗಿ ಒದಗಿ ಬಂದಿದೆ. ಭಾವಪ್ರಧಾನತೆಗಿಂತ ಬುದ್ಧಿಪ್ರಧಾನವಾಗಿಯೇ ಸಿನಿಮಾ ನೋಡುಗನನ್ನು ಕುರ್ಚಿಗೆ ಕಟ್ಟಿ ಹಾಕುತ್ತದೆ. ಈ ಮಾಧ್ಯಮದ ಅಗತ್ಯಕ್ಕೆ ತಕ್ಕಂತೆ ಅಲ್ಲಲ್ಲಿ ಸಿನಿಮೀಯತೆ ಇದೆ. ನಿರ್ದೇಶಕ ತನ್ನ ನಿರ್ದಿಷ್ಟ ಉದ್ದೇಶಕ್ಕಾಗಿ ಸೀನ್ಗಳನ್ನು ಜೋಡಿಸುತ್ತ ಹೋಗಿರುವುದರಿಂದ ಸಿನಿಮಾ ಏಕಮುಖವಾಗಿ ಒಂದು ಪ್ರೊಪಗಾಂಡಾದಂತೆ ಸಾಗುತ್ತದೆ ಎಂದು ನನಗೆ ಅನ್ನಿಸಿತು. ಇದಕ್ಕೆ. ಕಾರಣ 2010ರ ನನ್ನ ಕಾಶ್ಮೀರ ಪ್ರವಾಸದ ಅನುಭವವೂ ಇರಬಹುದೇನೊ.
ಸಿನೆಮಾ : ದಿ ಕಾಶ್ಮೀರ ಫೈಲ್ಸ್ (The Kashmir Files) | ಲೇಖಕಿ : ನೂತನ ದೋಶೆಟ್ಟಿ (Nutan Doshetty)
(ಭಾಗ 2)
2009ರಲ್ಲಿ ಭಾರತ ಸರ್ಕಾರ ತನ್ನ ಉದ್ಯೋಗಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾಶ್ಮೀರ ಪ್ರವಾಸದ ಯೋಜನೆಯೊಂದನ್ನು ಘೋಷಿಸಿತ್ತು. ಇದರ ಪ್ರಕಾರ ವಿಮಾನಯಾನದ ದರದಲ್ಲಿ ಕಡಿತ ಮಾಡಿದ್ದಲ್ಲದೇ ಯಾವುದೇ ಕಂಪನಿಯ ವಿಮಾನಯಾನವನ್ನೂ ಮಾಡಬಹುದಾಗಿತ್ತು. ಆಗಷ್ಟೇ ಭಯೋತ್ಪಾದನೆಯ ತತ್ತರದಿಂದ ಕಾಶ್ಮೀರ ಕಣ್ಣು ಬಿಡುತ್ತಿದ್ದ ಕಾಲ. ಸುಮಾರು ಎರಡು ದಶಕಗಳ ಕಾಲ ರಕ್ತಪಾತ, ಬಂದೂಕು, ಗುಂಡಿನ ಸದ್ದು, ಬಾಂಬಿನ ಸದ್ದುಗಳನ್ನೇ ಕೇಳಿ ನರಕಸದೃಶವಾಗಿದ್ದ ಆ ಭುವಿಯ ಮೇಲಿನ ಸ್ವರ್ಗದಲ್ಲಿ ಮತ್ತೆ ಹಸಿರು ಚಿಗುರಲಾರಂಭಿಸಿತ್ತು. ಭಯೋತ್ಪಾದಕರ ದೌರ್ಜನ್ಯ ಮತ್ತೆ ಯಾವಾಗಲಾದರೂ ಪ್ರಾರಂಭವಾಗಬಹುದು; ಅಷ್ಟರೊಳಗೇ ಹೋಗಿ ಬಂದು ಬಿಡೋಣ ಎಂದು ನಾನು ಕುಟುಂಬ ಸಮೇತ ಅಲ್ಲಿಗೆ ಹೋದದ್ದು ಆಗಸ್ಟ್ನಲ್ಲಿ. ಚುಮುಚುಮು ಬಿಸಿಲಿನಲ್ಲಿ. ಇಡಿಯ ಕಾಶ್ಮೀರ ಸೋನ್ಮಾರ್ಗದಂತೆ ಅಂದರೆ ಬಂಗಾರದ ಲೇಪನದಿಂದ ಫಳಫಳಿಸುತ್ತಿತ್ತು. ಅದನ್ನು ಸೂರ್ಯಾಸ್ತ ಹಾಗೂ ಸೂರ್ಯೋದಯದ ಹೊತ್ತಿಗೆ ನೋಡುವ ಕಣ್ಣುಗಳು ನಿಜಕ್ಕೂ ಧನ್ಯ.
ಇದನ್ನೂ ಓದಿ : Cinema : ಮೀಟುಗೋಲು ; ಮರ ಎಷ್ಟೇ ಬೆಳೆದರೂ ನೆಲವ ತಬ್ಬಿದ ಬೇರನ್ನು ಮರೆಯಬಾರದು ‘ಅಮೆರಿಕಾ ಅಮೆರಿಕಾ’
ಜನವಸತಿ ಕಡಿಮೆಯಿರುವ ಪುಟ್ಟ ತಾಲೂಕುಗಳಂತೆ ಇದ್ದ ಆ ಊರು ದಾಳಿಗಳಿಗೆ ನಲುಗಿದ್ದ ಕುರುಹು ಅಲ್ಲಿ ಇನ್ನೂ ಜೀವಂತವಾಗಿತ್ತು. ಸುಟ್ಟ ಮನೆಗಳು, ಅರೆಬಿದ್ದ ಮನೆಗಳಿಗೆ ಆಗ ತಾನೇ ಸರ್ಕಾರ ಮರಮ್ಮತ್ತು ಮಾಡಿತ್ತು. ಮೊಘಲ್ ಗಾರ್ಡನ್ನಿನ ಹೊಟೆಲ್ಲಿನ ಗೋಡೆಗಳಲ್ಲೂ ಸುಟ್ಟ ಕರಿ ಹಾಗೆಯೇ ಇತ್ತು. ಅಳಿದುಳಿದ ಕೆಲವೇ ಮೇಜು ಕುರ್ಚಿಗಳನ್ನು ಒಪ್ಪವಾಗಿ ಇಟ್ಟುಕೊಂಡ ಮಾಲಿಕನ ಕಣ್ಣಲ್ಲಿ ಮಡುಗಟ್ಟಿದ್ದ ಭಯ ನನಗೀಗಲೂ ನೆನಪಿದೆ. ಅಲ್ಲಿ ಏನೂ ಸಿದ್ಧವಿರುತ್ತಿರುಲಿಲ್ಲ. ಸ್ಯಾಂಡ್ವಿಚ್, ಪಕೋಡ, ಬೋರ್ನವೀಟಾ ಇಷ್ಟೇ ಅಲ್ಲಿ ತಯಾರಾಗುತ್ತಿದ್ದರೂ ಅವುಗಳನ್ನೇ ನಾವು ಒಪ್ಪಿ ಹೇಳಿದ ಅರ್ಧಗಂಟೆಯ ಮೇಲೆ ಅವನು ಮಾಡಿಕೊಡುತ್ತಿದ್ದ. ಈ ದಿನ ಚೆನ್ನಾಗಿದೆ. ನಾಳೆ ಹೇಗೋ ಎಂದು ಅನ್ನುವಾಗ ಅವನ, ನಮ್ಮ ಕಣ್ಣಾಲಿಗಳು ತುಂಬಿಬಂದಿದ್ದವು. ಹೋಟೆಲ್ಲನ್ನು ಹದಿನೈದು ದಿನಗಳಿಂದ ತೆರೆದಿರಲಿಲ್ಲವಂತೆ. ಅಂದೇ ಅವನು ತೆಗೆದದ್ದು. ನಾವೇ ಅಲ್ಲಿಗೆ ಹೋದ ಮೊದಲ ಪ್ರವಾಸಿಗಳು. ನಮಗೆ ಇನ್ನೂ ತಿನ್ನುವ ಹಸಿವಿತ್ತು. ಆದರೆ ಅವನಲ್ಲಿ ಕೊಡಲು ಏನೂ ಇರಲಿಲ್ಲ. ಒಳ್ಳೆಯ ಕಾಲವೇ ಹೀಗಿದ್ದರೆ ಹಿಂದಿನ ಎರಡು ದಶಕಗಳ ಕೆಟ್ಟ ಕಾಲ ಹೇಗಿದ್ದಿರಬಹುದು?
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಭಾಗ 1 : The Kashmir Files: ಮೀಟುಗೋಲು; ಈಗ ವಿವಾದಗಳು ತಾವಾಗಿಯೇ ಹುಟ್ಟುವುದಿಲ್ಲ, ಹುಟ್ಟಿಸಲಾಗುತ್ತದೆ
ಎಲ್ಲ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/meetugolu
Published On - 10:03 am, Wed, 16 March 22