
ತೆಲುಗು ಚಿತ್ರರಂಗದಲ್ಲಿ ಒಂದರ ಇಂದೆ ಒಂದು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅದರಲ್ಲೂ ಕೆಲವು ಸ್ಟಾರ್ ನಟರ, ಬಿಗ್ಬಜೆಟ್ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಆದರೆ ಕೋವಿಡ್ ಬಳಿಕ ಚಿತ್ರರಂಗದಲ್ಲಿ ಮಾಡಿಕೊಂಡಿರುವ ಒಳ ಒಪ್ಪಂದಂತೆ ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುವಂತಿಲ್ಲ. ಆದರೆ ಈಗ ಎರಡು ದೊಡ್ಡ ನಟರ ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗುತ್ತಿದ್ದು, ಇದರಿಂದ ಚಿತ್ರರಂಗದಲ್ಲಿ ಸಮಸ್ಯೆ ಎದುರಾಗಿದೆ. ಇಬ್ಬರು ಸ್ಟಾರ್ ನಿರ್ದೇಶಕರು, ಇಬ್ಬರು ಸ್ಟಾರ್ ನಟರುಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದೇ ಕಾರಣಕ್ಕೆ ನಟಿಯೊಬ್ಬರು ಸ್ಟಾರ್ ನಟನನ್ನು ಸೋಷಿಯಲ್ ಮೀಡಿಯಾನಲ್ಲಿ ಅನ್ಫಾಲೋ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 15 ರಂದು ಮಾಸ್ ಮಹಾರಾಜ ರವಿತೇಜ ನಟನೆಯ ‘ಮಿಸ್ಟರ್ ಬಚ್ಚನ್’ ಸಿನಿಮಾ ಬಿಡುಗಡೆ ಆಗಲಿದೆ. ಅದೇ ದಿನ ರಾಮ್ ಪೋತಿನೇನಿ ನಟಿಸಿರುವ ‘ಡಬಲ್ ಇಸ್ಮಾರ್ಟ್’ ಸಿನಿಮಾ ತೆರೆಗೆ ಬರಲಿದೆ. ಈ ಎರಡೂ ಸಿನಿಮಾಗಳು ಒಂದೇ ಜಾನರ್ನ ಸಿನಿಮಾಗಳಾಗಿದ್ದು, ಒಂದೇ ದಿನ ಬಿಡುಗಡೆ ಆಗುತ್ತಿರುವುದರಿಂದ ಯಾವುದಾದರೂ ಒಂದು ಸಿನಿಮಾಕ್ಕೆ ಹೊಡೆತ ಪಕ್ಕ ಎನ್ನಲಾಗುತ್ತಿದೆ.
ರವಿತೇಜರ ‘ಮಿಸ್ಟರ್ ಬಚ್ಚನ್’ ಸಿನಿಮಾವನ್ನು ಹ್ಯಾರಿಸ್ ಶಂಕರ್ ನಿರ್ದೇಶನ ಮಾಡಿದ್ದರೆ ‘ಡಬಲ್ ಇಸ್ಮಾರ್ಟ್’ ಸಿನಿಮಾವನ್ನು ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಆದರೆ ತಮ್ಮ ‘ಡಬಲ್ ಇಸ್ಮಾರ್ಟ್’ ಸಿನಿಮಾದ ಎದುರು ರವಿತೇಜರ ಸಿನಿಮಾ ಬಿಡುಗಡೆ ಆಗುತ್ತಿರುವುದು ಪುರಿ ಜಗನ್ನಾಥ್ಗೆ ಇಷ್ಟವಾಗುತ್ತಿಲ್ಲ. ‘ಡಬಲ್ ಇಸ್ಮಾರ್ಟ್’ ಸಿನಿಮಾಕ್ಕೆ ನಟಿ ಚಾರ್ಮಿ ಬಂಡವಾಳ ಹೂಡಿದ್ದು, ತಮ್ಮ ಸಿನಿಮಾದ ಎದುರು ಸಿನಿಮಾ ಬಿಡುಗಡೆ ಮಾಡುತ್ತಿರುವುದರಿಂದ ಸಿಟ್ಟಾಗಿ ನಟ ರವಿತೇಜ ಹಾಗೂ ಹ್ಯಾರಿಸ್ ಶಂಕರ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ.
‘ರವಿತೇಜ’ ಸಿನಿಮಾ ರಂಗದಲ್ಲಿ ಸ್ಟಾರ್ ಆಗಿ ಬೆಳೆಯಲು ಪುರಿ ಜಗನ್ನಾಥ್ ಮುಖ್ಯ ಕಾರಣ. ರವಿತೇಜ ನಾಯಕರಾದ ಸಮಯದಲ್ಲಿ ಕೆಲವು ಒಳ್ಳೆಯ ಸಿನಿಮಾಗಳನ್ನು ಅವರಿಗಾಗಿ ನಿರ್ದೇಶಿಸಿದರು. ಇನ್ನು ‘ಮಿಸ್ಟರ್ ಬಚ್ಚನ್’ ನಿರ್ದೇಶಕ ಹ್ಯಾರಿಸ್ ಶಂಕರ್, ಪುರಿ ಜಗನ್ನಾಥ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಈಗ ಗುರುವಿಗೇ ಎದುರಾಳಿಯಾಗಿ ಹೋಗುತ್ತಿದ್ದಾರೆ ರವಿತೇಜ ಮತ್ತು ಹ್ಯಾರಿಸ್ ಶಂಕರ್.
ಇದನ್ನೂ ಓದಿ:ತೆಲುಗು ಚಿತ್ರರಂಗದಿಂದ ದೂರಾದ ನಟಿ ಪೂಜಾ ಹೆಗ್ಡೆ, ಕಾರಣವೇನು?
ವಿವಾದದ ಬಗ್ಗೆ ಮಾತನಾಡಿರುವ ‘ಮಿಸ್ಟರ್ ಬಚ್ಚನ್’ ಸಿನಿಮಾದ ನಿರ್ದೇಶಕ ಹ್ಯಾರಿಸ್ ಶಂಕರ್, ‘ಕೆಲವು ಆರ್ಥಿಕ ಕಾರಣಗಳಿಂದಾಗಿ ನಾವು ಆಗಸ್ಟ್ 15 ರಂದೇ ಸಿನಿಮಾ ಬಿಡುಗಡೆ ಮಾಡಬೇಕಿದೆ. ಒಟಿಟಿ ಬಿಡುಗಡೆ ಇನ್ನಿತರೆ ಒಪ್ಪಂದಗಳನ್ನು ನಾವು ಈಗಾಗಲೇ ಮಾಡಿಕೊಂಡಿದ್ದು, ಒಂದೊಮ್ಮೆ ಸಿನಿಮಾ ಬಿಡುಗಡೆಯನ್ನು ತಡ ಮಾಡಿದರೆ ಸಿನಿಮಾಕ್ಕೆ ಆರ್ಥಿಕವಾಗಿ ಪೆಟ್ಟು ಬೀಳಲಿದೆ’ ಎಂದಿದ್ದಾರೆ. ತಮಗೆ ಪುರಿ ಜಗನ್ನಾಥ್ ಗುರುವಿದ್ದಂತೆ, ಅವರಿಗೆ ಸವಾಲು ಹಾಕುವಷ್ಟು ಪ್ರತಿಭೆ ನನಗೆ ಇಲ್ಲವೆಂದು ಸಹ ಹ್ಯಾರಿಸ್ ವಿನಯ ಪ್ರದರ್ಶಿಸಿದ್ದಾರೆ. ಆದರೆ ‘ಲೈಗರ್’ ಸಿನಿಮಾ ಮೂಲಕ ಭಾರಿ ನಷ್ಟ ಅನುಭವಿಸಿರುವ ಪುರಿ ಜಗನ್ನಾಥ್ ಮತ್ತು ಚಾರ್ಮಿ ‘ಡಬಲ್ ಇಸ್ಮಾರ್ಟ್’ ಸಿನಿಮಾ ಮೂಲಕ ನಷ್ಟವನ್ನು ಸರಿತೂಗಿಸುವ ಯೋಚನೆಯಲ್ಲಿದ್ದಾರೆ. ಆದರೆ ಏನಾಗಲಿದೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ