ದೃಶ್ಯಂ 3: ಮೋಹನ್​ಲಾಲ್ ಕಾರ್ ನಂಬರ್​ನಿಂದ ರೈತನಿಗೆ ಮಾನಸಿಕ ಕಿರಿಕಿರಿ; ದಾಖಲಾಯ್ತು ದೂರು

ಜೀತು ಜೋಸೆಫ್ ನಿರ್ದೇಶನದ, ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ದೃಶ್ಯಂ 3’ ಸಿನಿಮಾ ಈಗಾಗಲೇ ವಿಶ್ವಾದ್ಯಂತ ಬರೋಬ್ಬರಿ 236 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಆದರೆ ಸಿನಿಮಾದಲ್ಲಿ ಬಳಸಿದ ಕಾರಿನ ನೋಂದಣಿ ಸಂಖ್ಯೆಯಿಂದ ಕಾನೂನಿನ ತೊಂದರೆ ಎದುರಾಗಿದೆ. ಆ ಬಗ್ಗೆ ಇಲ್ಲಿದೆ ವಿವರ..

ದೃಶ್ಯಂ 3: ಮೋಹನ್​ಲಾಲ್ ಕಾರ್ ನಂಬರ್​ನಿಂದ ರೈತನಿಗೆ ಮಾನಸಿಕ ಕಿರಿಕಿರಿ; ದಾಖಲಾಯ್ತು ದೂರು
Mohanlal

Updated on: Jun 12, 2026 | 8:23 PM

ಮಲಯಾಳಂ ಚಿತ್ರರಂಗದಲ್ಲಿ ಇತ್ತೀಚೆಗಷ್ಟೇ ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಸೂಪರ್ ಸ್ಟಾರ್ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ (Drishyam 3) ಸಿನಿಮಾ ಈಗ ಅನಿರೀಕ್ಷಿತ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಲ್ಲಿ ಜಾರ್ಜ್‌ಕುಟ್ಟಿ (ಮೋಹನ್‌ಲಾಲ್) ಚಲಾಯಿಸುವ ಕಾರಿನ ನಂಬರ್ (Drishyam 3 Car Number) ಪ್ಲೇಟನ್ನು ತನ್ನ ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಇಡುಕ್ಕಿ ಜಿಲ್ಲೆಯ ರೈತರೊಬ್ಬರು ಪೊಲೀಸ್ ದೂರು ದಾಖಲಿಸಿದ್ದಾರೆ.

ಕೇರಳದ ಇಡುಕ್ಕಿ ಜಿಲ್ಲೆಯ ಕುಂಚಿತ್ತಣ್ಣಿ ನಿವಾಸಿ, ರೈತ ಆರ್.ಡಿ. ರಾಜೀವ್ ಎಂಬುವರು ಮುನ್ನಾರ್ ಪೊಲೀಸರಿಗೆ ಚಿತ್ರದ ನಿರ್ಮಾಪಕ ಆಂಟೋನಿ ಪೆರುಂಬಾವೂರ್ ಮತ್ತು ನಿರ್ದೇಶಕ ಜೀತು ಜೋಸೆಫ್ ವಿರುದ್ಧ ಅಧಿಕೃತ ದೂರು ನೀಡಿದ್ದಾರೆ. ‘ದೃಶ್ಯಂ 3’ ಚಿತ್ರದಲ್ಲಿ ಮೋಹನ್‌ಲಾಲ್ ಅವರ ಪಾತ್ರ ಚಲಾಯಿಸುವ ವಾಹನಕ್ಕೆ ಬಳಸಿರುವ ‘KL 69 D 2772’ ನೋಂದಣಿ ಸಂಖ್ಯೆ ತಮಗೆ ಸೇರಿದ್ದಾಗಿದೆ ಎಂದು ರಾಜೀವ್ ಆರೋಪಿಸಿದ್ದಾರೆ.

ರಾಜೀವ್ ಅವರ ಸ್ನೇಹಿತರು ಥಿಯೇಟರ್‌ನಲ್ಲಿ ಸಿನಿಮಾ ನೋಡುತ್ತಿದ್ದಾಗ ಈ ನಂಬರ್ ಪ್ಲೇಟ್ ಗಮನಿಸಿ ಅವರಿಗೆ ತಿಳಿಸಿದ್ದಾರೆ. ತದನಂತರ ಸ್ವತಃ ರಾಜೀವ್ ಅವರೇ ಚಿತ್ರವನ್ನು ವೀಕ್ಷಿಸಿ ಈ ವಿಷಯವನ್ನು ಖಚಿತಪಡಿಸಿಕೊಂಡಿದ್ದಾರೆ. ವಿಶೇಷವೆಂದರೆ, ರಾಜೀವ್ ಅವರದ್ದು, ಬಿಳಿ ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು. ಚಿತ್ರದಲ್ಲಿ ಇದೇ ನಂಬರ್ ಅನ್ನು ಮತ್ತೊಂದು ಮಾಡೆಲ್‌ನ ವಾಹನಕ್ಕೆ ಬಳಸಲಾಗಿದೆ.

ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದ್ದಂತೆ ಇತ್ತ ರಾಜೀವ್ ಅವರಿಗೆ ಮಾನಸಿಕ ಕಿರಿಕಿರಿ ಶುರುವಾಗಿದೆ. ಸಾರ್ವಜನಿಕರು ಮತ್ತು ಯುವ ಪೀಳಿಗೆಯವರು ರಸ್ತೆಯಲ್ಲಿ ಅವರ ಕಾರನ್ನು ನೋಡಿದಾಗ ‘ದೃಶ್ಯಂ ವಾಹನ’ ಎಂದು ಕರೆಯುತ್ತಿದ್ದು, ಅವರನ್ನು ‘ದೃಶ್ಯಂ ರಾಜೀವ್’ ಎಂದು ಚುಡಾಯಿಸುತ್ತಿದ್ದಾರಂತೆ. ಸಿನಿಮಾದ ಕಾಲ್ಪನಿಕ ಕ್ರಿಮಿನಲ್ ಕಥೆಯೊಂದಿಗೆ ತನ್ನ ವಾಹನದ ನಂಬರ್ ಲಿಂಕ್ ಆಗಿರುವುದರಿಂದ ಭವಿಷ್ಯದಲ್ಲಿ ತನಗೆ ಕಾನೂನು ತೊಡಕುಗಳು ಎದುರಾಗಬಹುದು ಎಂದು ರಾಜೀವ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕನ್ನಡಕ್ಕೆ ಬರಲ್ಲ ದೃಶ್ಯಂ 3; ನಿರ್ದೇಶಕ ಜೀತು ಜೋಸೆಫ್ ಬಿಚ್ಚಿಟ್ಟ ಅಸಲಿ ಕಾರಣ

ತಮ್ಮ ದೂರಿನೊಂದಿಗೆ ವಾಹನದ ಅಸಲಿ ಆರ್‌ಸಿ (RC) ಪ್ರತಿಯನ್ನು ಪೊಲೀಸರಿಗೆ ಸಲ್ಲಿಸಿರುವ ರಾಜೀವ್, ಚಿತ್ರತಂಡ ತನಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಮತ್ತು ವಿವಾದಿತ ನಂಬರ್ ಪ್ಲೇಟ್ ಇರುವ ದೃಶ್ಯಗಳನ್ನು ತಕ್ಷಣವೇ ಚಿತ್ರದಿಂದ ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲಿಯವರೆಗೆ ಚಿತ್ರದ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ಮುನ್ನಾರ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us