
ಮಲಯಾಳಂ ಚಿತ್ರರಂಗದ (Mollywood) ಲೆಜೆಂಡರಿ ನಟ ಮೋಹನ್ ಲಾಲ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ‘ದೃಶ್ಯಂ’, ‘ಲೂಸಿಫರ್’, ‘ದೃಶ್ಯಂ 2’, ‘ಪುಲಿ ಮುರುಗನ್’ ರೀತಿಯ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಅವರಿಗೆ ಭರ್ಜರಿ ಡಿಮ್ಯಾಂಡ್ ಇದೆ. ಮೋಹನ್ ಲಾಲ್ ಜೊತೆ ಸಿನಿಮಾ ಮಾಡಲು ಹಲವಾರು ನಿರ್ದೇಶಕರು ಹಂಬಲಿಸುತ್ತಾರೆ. ಆದರೆ ಅವಕಾಶ ಸಿಗುವುದು ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ. ಈಗ ಕನ್ನಡದ ನಿರ್ದೇಶಕ ನಂದ ಕಿಶೋರ್ (Nanda Kishore) ಅವರು ಬಿಗ್ ಚಾನ್ಸ್ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಹಲವು ಸಿನಿಮಾಗಳನ್ನು ಮಾಡಿ ಅನುಭವ ಹೊಂದಿರುವ ಅವರು ಈಗ ಮಾಲಿವುಡ್ನತ್ತ ಮುಖ ಮಾಡಿದ್ದಾರೆ. ಮೋಹನ್ ಲಾಲ್ (Mohanlal) ಜೊತೆ ಅವರು ಸಿನಿಮಾ ಮಾಡುವುದು ಖಚಿತವಾಗಿದೆ. ಸ್ವತಃ ಮೋಹನ್ ಲಾಲ್ ಅವರೇ ಈ ಮಾಹಿತಿಯನ್ನು ಅಧಿಕೃತಗೊಳಿಸಿದ್ದಾರೆ. ಈ ಚಿತ್ರಕ್ಕೆ ‘ವೃಷಭ’ ಎಂದು ಹೆಸರು ಇಡಲಾಗಿದೆ.
ಎಲ್ಲ ಬಗೆಯ ಪಾತ್ರಗಳಿಗೂ ಸೈ ಎಂಬಂತಹ ನಟ ಮೋಹನ್ ಲಾಲ್ ಅವರ ಚಿತ್ರಕ್ಕೆ ನಿರ್ದೇಶನ ಮಾಡುವ ಚಾನ್ಸ್ ಸಿಕ್ಕಿರುವುದು ನಂದ ಕಿಶೋರ್ಗೆ ಖುಷಿ ನೀಡಿದೆ. ಇದು ಪಕ್ಕಾ ಕಮರ್ಷಿಯಲ್ ಸಿನಿಮಾ ಆಗಿರಲಿದ್ದು, ಮೋಹನ್ ಲಾಲ್ ಅವರಿಗೆ ಹಲವು ಶೇಡ್ನ ಪಾತ್ರ ಇರಲಿದೆ ಎಂದು ಹೇಳಲಾಗಿದೆ. ವಿಶೇಷ ಏನೆಂದರೆ, ‘ವೃಷಭ’ ಸಿನಿಮಾದಲ್ಲಿ ತೆಲುಗು ಚಿತ್ರರಂಗದ ಕೆಲವು ಸ್ಟಾರ್ ಕಲಾವಿದರು ಕೂಡ ಬಣ್ಣ ಹಚ್ಚುವ ಸಾಧ್ಯತೆ ಇದೆ. ಆ ಬಗ್ಗೆ ಮಾತುಕಥೆ ನಡೆಯುತ್ತಿದೆ.
ನಂದ ಕಿಶೋರ್ ಮತ್ತು ಮೋಹನ್ ಲಾಲ್ ಕಾಂಬಿನೇಷನ್ನ ಸಿನಿಮಾ ಸೆಟ್ಟೇರಲು ಒಂದಷ್ಟು ಸಮಯ ಹಿಡಿಯಲಿದೆ. 2023ರ ಜುಲೈ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ. ಚಿತ್ರದ ಬಗ್ಗೆ ಹೆಚ್ಚಿನ ಅಪ್ಡೇಟ್ ತಿಳಿಯಲು ಅಭಿಮಾನಿಗಳು ಕಾಯುತ್ತಿದ್ದಾರೆ. ಕನ್ನಡದ ನಿರ್ದೇಶಕ ಮತ್ತು ಮಲಯಾಳಂ ಸ್ಟಾರ್ ನಟ ಕೈ ಜೋಡಿಸುತ್ತಿರುವುದರಿಂದ ಸಿನಿಪ್ರಿಯರ ವಲಯದಲ್ಲಿ ಕೌತುಕ ಮೂಡುವಂತಾಗಿದೆ.
I’m excited to have signed in for “Vrushabha,” the first movie from AVS Studios, directed by Nanda Kishore and produced by Abhishek Vyas, Praveer Singh, and Shyam Sunder. This multilingual movie is filled with action and emotion, and I seek all your support and blessings. pic.twitter.com/omOaAB2Fub
— Mohanlal (@Mohanlal) August 27, 2022
‘ಎವಿಸ್ ಸ್ಟುಡಿಯೋಸ್ ನಿರ್ಮಾಣದ ‘ವೃಷಭ’ ಚಿತ್ರಕ್ಕೆ ಸಹಿ ಮಾಡಿದ್ದೇನೆ. ನಂದಕಿಶೋರ್ ನಿರ್ದೇಶಿಸಲಿರುವ ಈ ಸಿನಿಮಾವನ್ನು ಅಭಿಷೇಕ್ ವ್ಯಾಸ್, ಪ್ರವೀರ್ ಸಿಂಗ್ ಮತ್ತು ಶ್ಯಾಮ್ ಸುಂದರ್ ನಿರ್ಮಾಣ ಮಾಡಲಿದ್ದಾರೆ. ಈ ಬಹುಭಾಷಾ ಸಿನಿಮಾದಲ್ಲಿ ಎಮೋಷನ್ ಮತ್ತು ಆ್ಯಕ್ಷನ್ ತುಂಬಿರಲಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಆಶೀರ್ವಾದ ಬಯಸುತ್ತೇನೆ’ ಎಂದು ಮೋಹನ್ ಲಾಲ್ ಟ್ವೀಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ನಂದ ಕಿಶೋರ್ ಅವರು ಸಕ್ರಿಯರಾಗಿದ್ದಾರೆ. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’, ‘ಮುಕುಂದ ಮುರಾರಿ’, ‘ಪೊಗರು’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಅವರು ಗುರುತಿಸಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.