Acharya Movie Review: ಹಳಿ ತಪ್ಪಿದ ‘ಆಚಾರ್ಯ’ನ ಪಾಠ

Acharya Movie Review: ಹಳಿ ತಪ್ಪಿದ ‘ಆಚಾರ್ಯ’ನ ಪಾಠ
ರಾಮ್ ಚರಣ್​-ಚಿರಂಜೀವಿ

ಸ್ಟಾರ್ ಕುಟುಂಬದ ತಂದೆ-ಮಗನನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಎಂದು ಫ್ಯಾನ್ಸ್ ಆಸೆ ಪಡೋದು ಸಹಜ. ಆ ರೀತಿಯ ಕಾಂಬಿನೇಷನ್​ ಸಿನಿಮಾ ಬಂದರೆ ಆ ಬಗ್ಗೆ ನಿರೀಕ್ಷೆ ಹೆಚ್ಚಿರುತ್ತದೆ. ಚಿರಂಜೀವಿ-ರಾಮ್​ ಚರಣ್ ಕಾಂಬಿನೇಷನ್​ನ ‘ಆಚಾರ್ಯ’ ಸಿನಿಮಾ ಕೂಡ ನಿರೀಕ್ಷೆ ಹುಟ್ಟು ಹಾಕಿತ್ತು. ಸಿನಿಮಾ ಹೇಗಿದೆ ಎಂಬ ವಿಮರ್ಶೆ ಇಲ್ಲಿದೆ.

Rajesh Duggumane

|

Apr 29, 2022 | 9:19 AM

ಸಿನಿಮಾ: ಆಚಾರ್ಯ

ಪಾತ್ರವರ್ಗ: ರಾಮ್​ ಚರಣ್, ಚಿರಂಜೀವಿ, ಸೋನು ಸೂದ್, ಪೂಜಾ ಹೆಗ್ಡೆ, ಭಜರಂಗಿ ಲೋಕಿ ಮೊದಲಾದವರು

ನಿರ್ದೇಶನ: ಕೊರಟಾಲ ಶಿವ

ನಿರ್ಮಾಣ: ಕೊನಿಡೆಲಾ ಪ್ರೊಡಕ್ಷನ್ ಕಂಪನಿ

ಸ್ಟಾರ್​:  2.5/5

2020ರ ಡಿಸೆಂಬರ್ ತಿಂಗಳಲ್ಲೇ ಸೆಟ್ಟೇರಿದ್ದ ‘ಆಚಾರ್ಯ’ ಸಿನಿಮಾ ಹಲವು ಅಡೆತಡೆಗಳನ್ನು ಎದುರಿಸಿ ಇಂದು (ಏಪ್ರಿಲ್ 29) ರಿಲೀಸ್ ಆಗಿದೆ. ಖ್ಯಾತ ಡೈರೆಕ್ಟರ್ ಕೊರಟಾಲ ಶಿವ ನಿರ್ದೇಶನ, ಪ್ರಮುಖ ಪಾತ್ರದಲ್ಲಿ ಚಿರಂಜೀವಿ-ರಾಮ್ ಚರಣ್. ಇಷ್ಟು ಒಳ್ಳೆಯ ಕಾಂಬಿನೇಷನ್​ ಇರುವುದರಿಂದ ಒಂದೊಳ್ಳೆಯ ಸಿನಿಮಾ ಸಿದ್ಧಗೊಳ್ಳಬಹುದು ಎಂಬುದು ಅಭಿಮಾನಿಗಳ ನಿರೀಕ್ಷೆ ಆಗಿತ್ತು. ಆದರೆ, ಅದು ಸುಳ್ಳಾಗಿದೆ.

ಪಾದಮ್​ಘಟ್ಟ ಎಂಬ ಪ್ರದೇಶ. ಈ ಕಾಡಿನಲ್ಲಿರುವ ಜನರು ಆಯುರ್ವೇದ ಔಷಧ ತಯಾರಿಸುತ್ತಾ ಜೀವನ ನಡೆಸುತ್ತಿರುತ್ತಾರೆ. ನಗರದವರು ಬಂದು ಆಫರ್ ನೀಡಿದರೂ ಅವರು ಅದನ್ನು ಸ್ವೀಕರಿಸುವುದಿಲ್ಲ. ಜನರ ಪ್ರಾಣ ಉಳಿಸುವುದು ಮಾತ್ರ ಅವರ ಉದ್ದೇಶವೇ ಹೊರತು ಹಣ ಮಾಡುವುದಲ್ಲ. ಇನ್ನು, ಧರ್ಮಸ್ಥಲವು ಪಾದಮ್​ಘಟ್ಟ ಜನರ ಆರಾಧ್ಯ ಕೇಂದ್ರ. ಅಲ್ಲಿನ ಜನರನ್ನು ಕಾಯುತ್ತಾ ಇರುವ ಸಿದ್ಧನ (ರಾಮ್​ ಚರಣ್​) ಹಿನ್ನೆಲೆ ಏನು? ಅವನಿಗೆ ಆಚಾರ್ಯನ (ಚಿರಂಜೀವಿ) ಭೇಟಿ ಹೇಗಾಗುತ್ತದೆ? ಧರ್ಮಸ್ಥಲದಲ್ಲಿ ಅಧರ್ಮ ನೆಲೆಸುವುದು ಹೇಗೆ? ಅಧರ್ಮ ತೋರುವವರ ಸಂಹಾರ ಹೇಗೆ ಎಂಬುದು ಸಿನಿಮಾದ ಕಥೆ.

‘ಆಚಾರ್ಯ’ ಸಿನಿಮಾದಲ್ಲಿ ಹೊಸತನಕ್ಕೆ ಅವಕಾಶವೇ ಇಲ್ಲ. ಸಿನಿಮಾ ಬಗ್ಗೆ ಸ್ವಲ್ಪ ಜ್ಞಾನವಿದ್ದರೂ ಸಾಕು, ‘ಆಚಾರ್ಯ’ ಸಿನಿಮಾದ ಪ್ರತೀ ದೃಶ್ಯಗಳನ್ನು ಕರಾರುವಕ್ಕಾಗಿ ಊಹಿಸಬಹುದು. ಸಿನಿಮಾದ ಆರಂಭದಿಂದ ಕೊನೆಯವರೆಗೆ ಕಥೆಯನ್ನು ತುಂಬಾನೇ ಜಾಳುಜಾಳಾಗಿ ಹೇಳಿಕೊಂಡೇ ಹೋಗುತ್ತಾರೆ ನಿರ್ದೇಶಕರು. ನಿರೂಪಣೆಯಲ್ಲಿ ಒಂದು ಗಟ್ಟಿತನ ಇಲ್ಲ, ಕಥೆಯಲ್ಲಿ, ದೃಶ್ಯಗಳಲ್ಲಿ ಹೊಸತನ ಇಲ್ಲ. ಅನೇಕ ದೃಶ್ಯಗಳಲ್ಲಿ ಲಾಜಿಕ್​​ಅನ್ನು ಗಂಟುಮೂಟೆ ಕಟ್ಟಿ ಕಾಡಿನಿಂದ ಹೊರಕ್ಕೆ ಎಸೆಯಲಾಗಿದೆ.

ಮೈನಿಂಗ್ ನಡೆಯುವ ಪ್ರದೇಶದಲ್ಲಿ ವೈರಿಗಳನ್ನು ಸಿದ್ಧ ಹಾಗೂ ಆಚಾರ್ಯ ಕೊಲ್ಲೋಕೆ ಬರುತ್ತಾರೆ. ಆ ಫೈಟ್​ಅನ್ನು ಅತಿ ಸಿಲ್ಲಿಯಾಗಿ ತೋರಿಸಿದ್ದಾರೆ ನಿರ್ದೇಶಕರು. ಇದು ಬೇಕಿತ್ತಾ ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡದೇ ಇರದು. ನಾಯಕಿ ಪಾತ್ರದಲ್ಲಿ ಪೂಜಾ ಹೆಗ್ಡೆ ಬದಲು ಬೇರೆ ಯಾರೇ ಕಾಣಿಸಿಕೊಂಡಿದ್ದರೂ ಅಂತಹ ವ್ಯತ್ಯಾಸವೇನೂ ಆಗುತ್ತಿರಲಿಲ್ಲ. ನಾಯಕಿ ಪಾತ್ರಕ್ಕೆ ಇಲ್ಲಿ ಪ್ರಾಮುಖ್ಯತೆ ಇಲ್ಲ. ಜೆಶ್ಶು ಸೇನಗುಪ್ತಾ, ಭಜರಂಗಿ ಲೋಕಿ ಪಾತ್ರ ಗಮನ ಸೆಳೆಯುತ್ತದೆ.

ರಾಮ್​ ಚರಣ್ ಹಾಗೂ ಚಿರಂಜೀವಿ ಕಾಂಬಿನೇಷನ್​ಅನ್ನು ಇನ್ನೂ ಚೆನ್ನಾಗಿ ತೋರಿಸಲು ಅವಕಾಶ ಇತ್ತು. ಎರಡೂ ನಟರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಿರ್ದೇಶಕರು ಕಥೆಯನ್ನು ಗಟ್ಟಿಯಾಗಿ ಹಣೆದಿದ್ದರೆ ಒಂದೊಳ್ಳೆಯ ಸಿನಿಮಾ ಎನಿಸಿಕೊಳ್ಳುತ್ತಿತ್ತು. ಆದರೆ, ಆ ಕೆಲಸ ಆಗಿಲ್ಲ. ರಾಮ್​ ಚರಣ್ -ಚಿರಂಜೀವಿ ಕಾಂಬಿನೇಷನ್​ನ ಫೈಟ್ಸ್​​, ಡ್ಯಾನ್ಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ವಿಲನ್ ಪಾತ್ರದಲ್ಲಿ ಸೋನು ಸೂದ್ ಮಿಂಚಿದ್ದಾರೆ. ತಿರು ಸಿನಿಮಾಟೋಗ್ರಫಿ ಉತ್ತಮವಾಗಿದೆ. ಮಣಿ ಶರ್ಮಾ ಸಂಗೀತ, ಹಿನ್ನೆಲೆ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಲು ವಿಫಲವಾಗಿದೆ.

ಇಬ್ಬರು ಸ್ಟಾರ್​ ನಟರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದಾಗ ನಿರ್ದೇಶಕನಿಗೆ ದೊಡ್ಡ ಜವಾಬ್ದಾರಿ ಇರುತ್ತದೆ. ಆದರೆ, ನಿರ್ದೇಶಕರು ಈ ವಿಚಾರದಲ್ಲಿ ಬೇಜವಾಬ್ದಾರಿ ತೋರಿದ್ದಾರೆ. ಇನ್ನೂ ಒಳ್ಳೆಯ ಕಥೆಯೊಂದಿಗೆ ಬಂದಿದ್ದರೆ ಯಶಸ್ಸು ಸಿಗುತ್ತಿತ್ತೇನೋ. ಆದರೆ, ಸಿಕ್ಕ ಅವಕಾಶವನ್ನು ನಿರ್ದೇಶಕರು ಕೈ ಚೆಲ್ಲಿದ್ದಾರೆ.

ಇದನ್ನೂ ಓದಿ: Kajal Aggarwal: ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ಪಾತ್ರ ಏಕಿಲ್ಲ? ಕಾರಣ ಬಹಿರಂಗಪಡಿಸಿದ ನಿರ್ದೇಶಕ

Acharya: ರಾಮ್​ ಚರಣ್-ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾದ ಮೊದಲಾರ್ಧ ಹೇಗಿದೆ? ಇಲ್ಲಿದೆ ವಿವರ

Follow us on

Related Stories

Most Read Stories

Click on your DTH Provider to Add TV9 Kannada