
ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ‘ಅನಂತ ಪಯಣ’ ಸಿನಿಮಾ ಮಾಡಲಾಗಿದೆ. ಶ್ರೀ ಕಾಕಾ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಲ್ಲದೇ, ಅವರೇ ಹೀರೋ ಆಗಿ ಕೂಡ ಅಭಿನಯಿಸಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನಲ್ಲಿ ಈ ಸಿನಿಮಾ ಮೂಡಿಬಂದಿದೆ. ಮಾಮೂಲಿ ಕಮರ್ಷಿಯಲ್ ಕಥೆಗಳಿಗಿಂತ ಭಿನ್ನವಾದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ಅವರು ಈ ಸಿನಿಮಾ ಮಾಡಿದ್ದಾರೆ. ‘ಅನಂತ ಪಯಣ’ ಚಿತ್ರದ ವಿಮರ್ಶೆ ಇಲ್ಲಿದೆ ಓದಿ..
ಸಿನಿಮಾ ಎಂದರೆ ಕೇವಲ ಮುಖ್ಯವಾಹಿನಿಗೆ ಸಂಬಂಧಿಸಿದ ಮಾಧ್ಯಮ ಅಲ್ಲ. ಹಿಂದುಳಿದ ಸಮುದಾಯಗಳ ಕಥೆ ಕೂಡ ಸಿನಿಮಾ ಆಗಬಹುದು ಮತ್ತು ಆಗಬೇಕು ಎಂಬುದಕ್ಕೆ ‘ಅನಂತ ಪಯಣ’ ಒಂದು ಉತ್ತಮ ಉದಾಹರಣೆ. ಅಲೆಮಾರಿ ಕುರಿಗಾಹಿಗಳ ಕುರಿತ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಒಂದು ಕಡೆ ನೆಲೆ ನಿಲ್ಲದೇ, ಕುರಿಗಳನ್ನು ಮೇಯಿಸಲು ಊರೂರು ಸುತ್ತುತ್ತ ಜೀವನ ಸಾಗಿಸುವ ಜನರ ಬದುಕಿನ ಕುರಿತು ಈ ಸಿನಿಮಾ ಮೂಡಿಬಂದಿದೆ.
ಒಂದು ಕಡೆ ಊರು, ಮನೆ, ವಿಳಾಸ ಹೊಂದಿದ್ದು, ಸೂಕ್ತ ನೆಲೆ ಕಂಡುಕೊಂಡಿರುವ ಸಾಮಾನ್ಯ ಜನರಿಗೆ ಎಷ್ಟೊಂದು ಕಷ್ಟಗಳು ಇರುವಾಗ ಎಲ್ಲಿಯೂ ನೆಲೆ ಕಾಣದ ಸಂಚಾರಿ ಕುರಿಗಾಹಿಗಳ ಜೀವನದಲ್ಲಿ ಎಷ್ಟೆಲ್ಲ ಕಷ್ಟಗಳು ಇರಬಹುದು ಎಂಬುದನ್ನು ‘ಅನಂತ ಪಯಣ’ ಸಿನಿಮಾ ಎಳೆಎಳೆಯಾಗಿ ವಿವರಿಸುತ್ತದೆ. ಬರೀ ಕಷ್ಟಗಳು ಮಾತ್ರವಲ್ಲದೇ ಕುರಿಗಾಹಿಗಳ ಜೀವನಮೌಲ್ಯ ಮತ್ತು ಆಚಾರಗಳನ್ನು ಕೂಡ ಈ ಚಿತ್ರದಲ್ಲಿ ತೋರಿಸಲಾಗಿದೆ.
ಅಲೆಮಾರಿ ಕುರಿಗಾಹಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೆಣ್ಣು ಮಕ್ಕಳ ಮೇಲೆ ಶೋಷಣೆಗಳು ನಡೆಯುತ್ತವೆ. ಶ್ರೀಮಂತರ ದರ್ಪಗಳನ್ನು ಇವರು ಎದುರಿಸಬೇಕಾಗುತ್ತದೆ. ಇಂಥ ಅನ್ಯಾಯಗಳ ವಿರುದ್ಧ ಹೋರಾಡಬೇಕು ಎಂದರೆ ಈ ಸಮುದಾಯದವರಿಗೆ ಸೂಕ್ತ ನೆಲೆಯೇ ಇಲ್ಲ. ಹಾಗಾಗಿ ಪೊಲೀಸ್ ಠಾಣೆ, ಕೋರ್ಟ್, ಕಚೇರಿಗಳನ್ನು ಸುತ್ತುವುದು ಎಂದರೆ ಇನ್ನೂ ಕಷ್ಟ. ಇಂಥ ಎಲ್ಲ ಅಂಶಗಳನ್ನು ಜೊತೆಯಾಗಿಸಿಕೊಂಡು ‘ಅನಂತ ಪಯಣ’ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.
ಈ ಸಿನಿಮಾದಲ್ಲಿ ಶ್ರೀಕಾಕಾ ಅವರ ಜೊತೆಗೆ ನಿವಿಷ್ಕಾ ಪಾಟೀಲ್, ಬಾಲ ರಾಜ್ವಾಡಿ, ಲಕ್ಷ್ಮಿ ಸಿದ್ದಯ್ಯ, ಅಪೂರ್ವ, ಪ್ರಶಾಂತ್ ಸಿದ್ದಿ, ಮಂಜುನಾಥ ಹೆಗಡೆ, ಸಂದೀಪ್ ನೀನಾಸಂ, ಅನನ್ಯ ಮುಂತಾದವರು ನಟಿಸಿದ್ದಾರೆ. ಇದು ಗಂಭೀರವಾದ ಕಥೆಯ ಸಿನಿಮಾ ಆದರೂ ಕೂಡ ಇದರಲ್ಲಿ ಒಂದು ಸಣ್ಣ ಪ್ರೇಮಕಥೆ, ತೆಳುವಾದ ಹಾಸ್ಯವನ್ನು ಕೂಡ ಬೆರೆಸಲಾಗಿದೆ. ಹಾಡುಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಹೊಡಿಬಡಿ ದೃಶ್ಯಗಳು ಕೂಡ ಇವೆ. ಅಷ್ಟೇ ಅಲ್ಲದೇ, ಐಟಂ ಸಾಂಗ್ ಸಹ ಇದೆ. ಆ ಮೂಲಕ ಒಂದಷ್ಟು ಕಮರ್ಷಿಯಲ್ ಅಂಶಗಳನ್ನು ಸೇರಿಸಲಾಗಿದೆ.
‘ಅನಂತ ಪಯಣ’ ಸಿನಿಮಾವನ್ನು ಸಂಪೂರ್ಣವಾಗಿ ಒಂದು ಆರ್ಟ್ ಸಿನಿಮಾದ ರೀತಿ ಕಟ್ಟಿಕೊಟ್ಟಿದ್ದರೆ ಅದರ ಸ್ವರೂಪ ಬೇರೆಯದೇ ರೀತಿ ಇರುತ್ತಿತ್ತು. ಅಥವಾ, ಪೂರ್ತಿ ಕಮರ್ಷಿಯಲ್ ಆಗಿ ತೋರಿಸಿದ್ದರೆ ಅದು ಕೂಡ ಭಿನ್ನವಾಗಿ ಇರುತ್ತಿತ್ತು. ಆದರೆ ಈ ಸಿನಿಮಾ ಎರಡೂ ಶೈಲಿಯ ಮಿಶ್ರಣದಂತಿದೆ. ಐಟಂ ಸಾಂಗ್ ರೀತಿಯ ಅನಗತ್ಯ ಸೇರ್ಪಡೆಯಿಂದಾಗಿ ಈ ಸಿನಿಮಾದ ಮೂಲ ಆಶಯ ಕೊಂಚ ಮಂಕಾದಂತೆ ಎನಿಸುತ್ತದೆ. ಆ ಬಗ್ಗೆ ನಿರ್ದೇಶಕರು ಗಮನ ಹರಿಸಿದ್ದರೆ ಚೆನ್ನಾಗಿರುತ್ತಿತ್ತು.
ಇದನ್ನೂ ಓದಿ: ಸಿನಿಮಾ ವಿಮರ್ಶೆ: ಕಾಮಿಡಿ ಜೊತೆ ಭಾವುಕತೆ ಬೆರೆತ ‘ಲಕ್ಷ್ಮೀಪುತ್ರ’ನ ಪ್ರೇಮಕಥೆ
ಆಕಾಶ ಪರ್ವ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿನ ಆರು ಹಾಡುಗಳು ಗುನುಗುವಂತಿವೆ. ವಿನೋದ್ ಭಾರತಿ ಅವರ ಛಾಯಾಗ್ರಹಣ, ದೀಪು ಅವರ ಸಂಕಲನದಿಂದಾಗಿ ಈ ಸಿನಿಮಾ ತಾಂತ್ರಿಕವಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಹೊಸ ನಟ ಶ್ರೀ ಕಾಕಾ ಅವರಿಗೆ ಅನುಭವಿಗಳಾದ ಲಕ್ಷ್ಮೀ ಸಿದ್ದಯ್ಯ, ಬಾಲ ರಾಜ್ವಾಡಿ ಮುಂತಾದವರು ಸಾಥ್ ನೀಡಿರುವುದರಿಂದ ಎಲ್ಲರ ನಟನೆ ಗಮನ ಸೆಳೆಯುವಂತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.