ಸಿನಿಮಾ: ಅವತಾರ ಪುರುಷ
ಪಾತ್ರವರ್ಗ: ಶರಣ್, ಆಶಿಕಾ ರಂಗನಾಥ್, ಸಾಯಿ ಕುಮಾರ್, ಭವ್ಯ ಮೊದಲಾದವರು
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಪುಷ್ಕರ್ ಫಿಲ್ಮ್ಸ್
ಸ್ಟಾರ್: 3/5
ಕಥಾ ನಾಯಕ ಅನಿಲ್ (ಶರಣ್) ಯಾರದ್ದಾದರೂ ಸಾವಾದರೆ ಹೆಣಕ್ಕೆ ಹೆಗಲು ಬೇಕಾದರೂ ಕೊಡ್ತಾನೆ, ಮದುವೆ ಆದರೆ ಅಲ್ಲಿ ಅಕ್ಷತೆ ಕಾಳು ಹಾಕಿ ಹಾರೈಸ್ತಾನೆ. ಏಕೆಂದರೆ, ಆತ ಓರ್ವ ಜ್ಯೂನಿಯರ್ ಆರ್ಟಿಸ್ಟ್. ದೊಡ್ಡ ಹೀರೋ ಆಗಬೇಕು ಎಂಬುದು ಆತನ ಕನಸು. ಆದರೆ, ಅವನಿಗೆ ಸಿಗೋದೆಲ್ಲ ಚಿಕ್ಕ-ಪುಟ್ಟ ಪಾತ್ರಗಳು. ಹೀಗಿರುವಾಗಲೇ ಆತ ಒಂದು ಆಡಿಷನ್ಗೆ ಹೋಗುತ್ತಾನೆ. ಹಾಗಂತ ಇದು ಸಿನಿಮಾ ಆಡಿಷನ್ ಅಲ್ಲ. ರಿಯಲ್ ಲೈಫ್ನಲ್ಲಿ ಒಂದು ತಾಯಿಗೆ ಮಗನಾಗಿ ನಟಿಸಬೇಕು. ಈ ಆಡಿಷನ್ ಮಾಡೋದು ಸಿರಿ (ಆಶಿಕಾ ರಂಗನಾಥ್). ಆ ಬಳಿಕ ಸಿನಿಮಾ ಕಥೆ ಸಿರಿಯ ಅಜ್ಜನ ಮನೆಯಲ್ಲೇ ಸಾಗುತ್ತದೆ. ಮತ್ತೊಂದು ಟ್ರ್ಯಾಕ್ನಲ್ಲಿ ಸಾಗುವ ತಂತ್ರ ಮಂತ್ರಗಳ ಕಥೆಗೂ ಸಿರಿಯ ಅಜ್ಜನ ಮನೆಯ ಮೇಲೆ ಕಣ್ಣು. ಅಷ್ಟಕ್ಕೂ ಅನಿಲ್ ಈ ಮನೆಗೆ ಬಂದಿದ್ದು ಕಾಕತಾಳಿಯವೋ ಅಥವಾ ಇದರ ಹಿಂದೆ ಉದ್ದೇಶ ಇತ್ತೋ? ಅವನ ನಿಜವಾದ ಮುಖ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ.
ಸಿಂಪಲ್ ಸುನಿ ಸಿನಿಮಾದಲ್ಲಿ ಕಾಮಿಡಿಗೆ ಹೆಚ್ಚು ಆದ್ಯತೆ. ಈ ಸಿನಿಮಾದಲ್ಲೂ ಅದು ಮುಂದುವರಿದಿದೆ. ಮೊದಲಾರ್ಧ ಅನೇಕ ದೃಶ್ಯಗಳು ನಗಿಸುತ್ತ ಸಾಗುತ್ತವೆ. ದ್ವಿತಿಯಾರ್ಧ ಕೊಂಚ ಗಂಭೀರತೆ ಪಡೆದುಕೊಳ್ಳುತ್ತದೆ. ಪಂಚಿಂಗ್ ಡೈಲಾಗ್ಗಳು ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಈ ಸಿನಿಮಾದಲ್ಲಿ ಮಾಟ ಮಂತ್ರ, ತ್ರಿಶಂಕು ಲೋಕದ ವಿಚಾರಗಳನ್ನು ಸುನಿ ಹೇಳಿದ್ದು, ಇದಕ್ಕಾಗಿ ಅವರು ಸಾಕಷ್ಟು ಅಧ್ಯಯನ ನಡೆಸಿದ್ದು ವೀಕ್ಷಕರಿಗೆ ಸ್ಪಷ್ಟವಾಗುತ್ತದೆ. ತಂತ್ರ-ಮಂತ್ರ ಹಾಗೂ ಹಾಸ್ಯವನ್ನು ಹದವಾಗಿ ಬೆರೆಸಿ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ ನಿರ್ದೇಶಕರು. ತಂತ್ರ-ಮಂತ್ರಗಳ ವಿಚಾರವನ್ನು ಹೇಳಿರುವುದರಿಂದ ಆ ಪ್ರಕಾರದ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಅವತಾರ ಪುರುಷ’ ಹೆಚ್ಚು ಆಪ್ತವಾಗಲಿದೆ.
ಶರಣ್ ಅವರು ಜ್ಯೂನಿಯರ್ ಆರ್ಟಿಸ್ಟ್ ಆಗಿ ಒದ್ದಾಡುವ ಅನಿಲನಾಗಿ ಮಿಂಚಿದ್ದಾರೆ. ಅವರ ಕಾಮಿಡಿ ಪಂಚ್ ಸಖತ್ ಆಗಿದೆ. ಅಮ್ಮನ ಜತೆಗಿನ ಸೆಂಟಿಮೆಂಟ್ ದೃಶ್ಯಗಳಲ್ಲಿ ಉತ್ತಮ ನಟನೆ ತೋರಿದ್ದಾರೆ. ಮಗನಿಗಾಗಿ ಪರಿತಪಿಸುವ ಪಾತ್ರದಲ್ಲಿ ಭವ್ಯ ಮಿಂಚಿದ್ದಾರೆ. ಹಳ್ಳಿ ಔಷಧಿ ಕೊಡುವ ಗಂಭೀರ ವ್ಯಕ್ತಿಯಾಗಿ ಸಾಯಿ ಕುಮಾರ್ ನಟನೆ ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತದೆ. ನಟಿ ಆಶಿಕಾ ರಂಗನಾಥ್ ಹೆಚ್ಚು ಗ್ಲಾಮರಸ್ ಆಗಿ ಕಾಣಿಸಿಕೊಳ್ಳದೆ ಸಿಂಪಲ್ ಲುಕ್ನಲ್ಲಿ ಇಷ್ಟವಾಗುತ್ತಾರೆ. ಹಿನ್ನುಡಿ ಪಾತ್ರದಲ್ಲಿ ಬಾಲಾಜಿ ಮನೋಜರ್ ಭಯ ಹುಟ್ಟಿಸುತ್ತಾರೆ. ಕೊನೆಯಲ್ಲಿ ಬರುವ ಶ್ರೀನಗರ ಕಿಟ್ಟಿ ಪಾತ್ರ ಗಮನ ಸೆಳೆಯುತ್ತದೆ.
ಸಿನಿಮಾದಲ್ಲಿ ಹಾಸ್ಯಕ್ಕೆ ಹೆಚ್ಚು ಆದ್ಯತೆ ಕೊಡಲಾಗಿದೆ. ಈ ಕಾರಣಕ್ಕೆ ಸಾಧು ಕೋಕಿಲ ಅವರ ಟ್ರ್ಯಾಕ್ ಒಂದನ್ನು ಸೇರಿಸಲಾಗಿದೆ. ಇದು ಹಾಸ್ಯಕ್ಕೆ ಮಾತ್ರ ಸೀಮಿತವಾಗಿದ್ದು, ಚಿತ್ರದ ಕಥೆಗೆ ಪೂರಕವಾಗಿಲ್ಲ. ಈ ಚಿತ್ರದಲ್ಲಿ ಲವ್ ವಿಚಾರಕ್ಕೆ ನಿರ್ದೇಶಕರು ಹೆಚ್ಚು ಒತ್ತು ನೀಡಿಲ್ಲ. ಕೊನೆಯಲ್ಲಿ ಹೇಳುವ ಮಾಟದ ವಿಚಾರ ಪ್ರೇಕ್ಷಕನಿಗೆ ಕೊಂಚ ಗೊಂದಲ ಮೂಡಿಸಬಹುದು. ಆ ಬಗ್ಗೆ ನಿರ್ದೇಶಕರು ಕೊಂಚ ಗಮನ ಹರಿಸಬೇಕಿತ್ತು. ಜಾಹೀರಾತುಗಳನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡು ಮಾಡಿದ ‘ಲಡ್ಡು ಬಂದು ಬಾಯಿಗ್ ಬಿತ್ತಾ..’ ಹಾಗೂ ಉತ್ತರ ಕರ್ನಾಟಕದ ‘ಹೀರೋ ಹೊಂಡಾ..’ ಹಾಡು ಗಮನ ಸೆಳೆಯುತ್ತದೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕೆ ಚೆನ್ನಾಗಿ ಒಪ್ಪಿದೆ. ಹಿನ್ನೆಲೆ ಸಂಗೀತದಲ್ಲೂ ಅರ್ಜುನ್ ಜನ್ಯ ಗಮನ ಸೆಳೆಯುತ್ತಾರೆ. ‘ಅವತಾರ ಪುರುಷ 2’ ಕೂಡ ಬರುತ್ತಿದೆ. ಈ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಎರಡನೇ ಚಾಪ್ಟರ್ಗೆ ಕನೆಕ್ಷನ್ ನೀಡಲಾಗಿದೆ.
ಕೇವಲ ಟ್ರೆಂಡ್ ಫಾಲೋ ಮಾಡುವ ಸಲುವಾಗಿ ಸುನಿ ಅವರು ಒಂದೇ ಕಥೆಯನ್ನು ಎರಡು ಪಾರ್ಟ್ನಲ್ಲಿ ಹೇಳಲು ನಿರ್ಧರಿಸಿದರಾ ಎಂಬ ಪ್ರಶ್ನೆ ಮೂಡುತ್ತದೆ. ಕೆಲವು ದೃಶ್ಯಗಳು ಜಾಳು ಜಾಳಾಗಿವೆ. ಅವುಗಳಿಗೆಲ್ಲ ಕತ್ತರಿ ಹಾಕಿ, ಒಂದೇ ಸಿನಿಮಾದಲ್ಲಿ ಪೂರ್ತಿ ಕಥೆ ಹೇಳಬಹುದಿತ್ತೇನೋ ಎನಿಸುತ್ತದೆ. ಪಾರ್ಟ್ 2 ನೋಡಿದ ಬಳಿಕವಷ್ಟೇ ಪ್ರೇಕ್ಷಕರಿಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಬೇಕಿದೆ.