ಚಿತ್ರ: ಬ್ಯಾಡ್ ಮ್ಯಾನರ್ಸ್. ನಿರ್ಮಾಣ: ಸುಧೀರ್ ಕೆ.ಎಂ. ನಿರ್ದೇಶನ: ದುನಿಯಾ ಸೂರಿ. ಪಾತ್ರವರ್ಗ: ಅಭಿಷೇಕ್ ಅಂಬರೀಷ್, ರಚಿತಾ ರಾಮ್, ತಾರಾ ಅನುರಾಧಾ, ದತ್ತಣ್ಣ, ಶರತ್ ಲೋಹಿತಾಶ್ವ, ರೋಚಿತ್, ತ್ರಿವಿಕ್ರಮ್, ಸಚ್ಚಿದಾನಂದ, ಪ್ರಶಾಂತ್ ಸಿದ್ಧಿ, ಪೂರ್ಣಚಂದ್ರ ಮೈಸೂರು ಮುಂತಾದವರು. ಸ್ಟಾರ್: 2.5/5
‘ರೆಬೆಲ್ ಸ್ಟಾರ್’ ಅಂಬರೀಷ್ ಅವರ ಪುತ್ರ ಎಂಬ ಕಾರಣಕ್ಕೆ ಅಭಿಮಾನಿಗಳು ಅಭಿಷೇಕ್ ಅಂಬರೀಷ್ಗೆ (Abhishek Ambareesh) ಪ್ರೀತಿ ತೋರಿಸುತ್ತಾರೆ. ಅದೇ ಕಾರಣದಿಂದಲೇ ಅವರ ಸಿನಿಮಾಗಳ ಮೇಲೂ ನಿರೀಕ್ಷೆ ಇಟ್ಟುಕೊಳ್ಳಲಾಗುತ್ತದೆ. ಅಂಬರೀಷ್ ಪುತ್ರ ಎಂಬ ಟ್ಯಾಗ್ ಎಷ್ಟು ಮುಖ್ಯವೋ, ಅದನ್ನೂ ಮೀರಿ ಗುರುತಿಸಿಕೊಳ್ಳಬೇಕಾದ್ದು ಕೂಡ ಅಷ್ಟೇ ಮುಖ್ಯ. ಈ ಎರಡೂ ಪ್ರಯತ್ನಗಳನ್ನು ಮಾಡುವ ನಿಟ್ಟಿನಲ್ಲಿ ಅಭಿಷೇಕ್ ಅವರು ಸಾಗುತ್ತಿರುವಂತಿದೆ. ಅವರು ನಟಿಸಿರುವ ಎರಡನೇ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’ ಬಿಡುಗಡೆ ಆಗಿದೆ. ಇದರಲ್ಲಿ ಅಭಿಷೇಕ್ ಅವರ ಪಾತ್ರ ‘ರೆಬೆಲ್’ ಆಗಿದೆ. ಆದರೆ ಸೂಕ್ತವಾದ ರೀತಿಯಲ್ಲಿ ಅದು ಮೂಡಿಬರದ ಕಾರಣ ಕೆಲವೊಮ್ಮೆ ಪ್ರೇಕ್ಷಕರಿಗೆ ‘ಟ್ರಬಲ್’ ಎನಿಸಲೂಬಹುದು. ಒಟ್ಟಾರೆ ಸಿನಿಮಾ ಹೇಗಿದೆ ಎಂಬುದು ತಿಳಿಯಲು ಈ ವಿಮರ್ಶೆ (Bad Manners Movie Review) ಓದಿ..
ಸಿನಿಮಾಗಳ ಆಯ್ಕೆಯಲ್ಲಿ ಅಭಿಷೇಕ್ ಅಂಬರೀಷ್ ಅವರು ಬಹಳ ಚ್ಯೂಸಿ. ಅವರ ಮೊದಲ ಸಿನಿಮಾ ‘ಅಮರ್’ ಬಂದಿದ್ದು 2019ರಲ್ಲಿ. ಆ ಚಿತ್ರ ತೆರೆಕಂಡು 4 ವರ್ಷಗಳು ಕಳೆದ ಬಳಿಕ ‘ಬ್ಯಾಡ್ ಮ್ಯಾನರ್ಸ್’ ಬಿಡುಗಡೆ ಆಗಿದೆ. ಈ ಸಿನಿಮಾಗೆ ‘ದುನಿಯಾ’ ಸೂರಿ ನಿರ್ದೇಶನ ಮಾಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಎಂಬ ಕಾರಣಕ್ಕೆ ನಿರೀಕ್ಷೆ ಸ್ವಲ್ಪ ಜಾಸ್ತಿಯೇ ಇತ್ತು. ಅದನ್ನು ಇನ್ನಷ್ಟು ಹೆಚ್ಚಿಸಿದ್ದು ಚರಣ್ ರಾಜ್ ಅವರು ಸಂಗೀತ. ಪಾತ್ರವರ್ಗದಲ್ಲಿ ರಚಿತಾ ರಾಮ್ ಕೂಡ ಇರುವುದರಿಂದ ಅವರ ಅಭಿಮಾನಿಗಳೂ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಇಷ್ಟೆಲ್ಲ ಸ್ಟಾರ್ ಆಕರ್ಷಣೆ ಇದ್ದರೂ ಕೂಡ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಕೊಂಚ ಹಳಿ ತಪ್ಪಿದಂತಿದೆ. ಈ ಸಿನಿಮಾದಲ್ಲಿ ಎಲ್ಲವೂ ಇದ್ದರೂ ಪ್ರೇಕ್ಷಕರಿಗೆ ಏನೋ ಕಳೆದುಕೊಂಡ ಫೀಲ್ ಬರುತ್ತದೆ.
ಇದನ್ನೂ ಓದಿ: Garadi Movie Review: ಕುಸ್ತಿ, ಪ್ರೀತಿ ಮತ್ತು ಮಸ್ತಿ ತುಂಬಿದ ಯೋಗರಾಜ್ ಭಟ್ಟರ ‘ಗರಡಿ’
ಇರುವ ಒಂದು ಸಿಂಪಲ್ ಕಥೆಯನ್ನು ಹಿಂದೆ-ಮುಂದೆ ಮಾಡಿ ಹೇಳುವ ಮೂಲಕ ‘ಟಗರು’ ಸಿನಿಮಾ ಮಾಡಿದ ಸೂರಿ ಅವರು ಸಕ್ಸಸ್ ಕಂಡಿದ್ದರು. ಅದೇ ರೀತಿಯ ಸೂತ್ರವನ್ನು ಅವರು ‘ಪಾಪ್ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲೂ ಪ್ರಯತ್ನಿಸಿದ್ದರು. ಈಗ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲೂ ಅದು ಮರುಕಳಿಸಿದೆ. ನಡೆದ ಘಟನೆಗಳನ್ನು ಸೂಕ್ತ ಉದ್ದೇಶವೇ ಇಲ್ಲದೇ ಸುತ್ತಿ, ಬಳಸಿ, ಉಲ್ಟಾ-ಪಲ್ಟಾ, ಹಿಂದೆ-ಮುಂದೆ ಮಿಕ್ಸ್ ಮಾಡಿ ಹೇಳಲಾಗಿದೆ. ಇದರಿಂದ ಮನರಂಜನೆ ಸಿಗುವುದಕ್ಕಿಂತಲೂ ಅನಗತ್ಯ ಪ್ರಶ್ನೆಗಳು ಹುಟ್ಟಿಕೊಳ್ಳುವುದೇ ಹೆಚ್ಚು. ಪ್ರೇಕ್ಷಕರು ಪರದೆ ಮೇಲೆ ಬಿತ್ತರವಾದ ಉಲ್ಟಾಪಲ್ಟಾ ಕಥೆಯನ್ನು ಕಾಲಾನುಕ್ರಮದಲ್ಲಿ ಜೋಡಿಸಿಕೊಳ್ಳುವುದರಲ್ಲೇ ಸುಸ್ತಾಗುತ್ತಾರೆ. ಆಗಾಗ ಬಂದು ಮಾಯವಾಗುವ ಪಾತ್ರಗಳಿಗೆ ಪರಸ್ಪರ ಇರುವ ಸಂಬಂಧ ಏನು ಎಂಬುದು ತಿಳಿಯುವುದರೊಳಗೆ ಬಹುತೇಕ ಸಿನಿಮಾ ಮುಗಿದಿರುತ್ತದೆ. ಇಂಥ ಕಾರಣಗಳಿಂದಾಗಿ ‘ಬ್ಯಾಡ್ ಮ್ಯಾನರ್ಸ್’ ಕೆಲವೊಮ್ಮೆ ಆಕಳಿಕೆ ತರಿಸುತ್ತದೆ.
ಇದನ್ನೂ ಓದಿ: SSE Side B Review: ‘ಸೈಡ್ ಎ’ ಬಳಿಕ ಮನು, ಪ್ರಿಯಾ ಬದುಕು ಬದಲಾದರೂ ‘ಸೈಡ್ ಬಿ’ ಲಯ ಬದಲಾಗಿಲ್ಲ
ಭೂಗತ ಲೋಕದ ಕಥೆಯನ್ನು ಸೂರಿ ಚೆನ್ನಾಗಿ ಹೇಳಬಲ್ಲರು. ಅಂಥ ಕಹಾನಿಗಳ ಬಗ್ಗೆ ಅವರಿಗೆ ವಿಶೇಷ ಆಸಕ್ತಿ ಇದೆ. ‘ದುನಿಯಾ’, ‘ಕೆಂಡಸಂಪಿಗೆ’, ‘ಕಡ್ಡಿಪುಡಿ’ ರೀತಿಯ ಸಿನಿಮಾಗಳನ್ನು ಮೆಚ್ಚಿಕೊಂಡ ಪ್ರೇಕ್ಷಕರಿಗೆ ಸಹಜವಾಗಿಯೇ ಸೂರಿಯ ಕಸುಬುದಾರಿಕೆ ಮೇಲೆ ನಿರೀಕ್ಷೆ ಇರುತ್ತದೆ. ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲೂ ಸೂರಿ ಅವರು ಅಂಡರ್ವರ್ಲ್ಡ್ ಕಥೆಯನ್ನೇ ಆಯ್ದುಕೊಂಡಿದ್ದಾರೆ. ಅಕ್ರಮ ಗನ್ ತಯಾರಿಕೆ ಮತ್ತು ಸಾಗಾಣಿಕೆಯ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಅವರು ಕಥೆಯನ್ನು ವಿವರಿಸುವ ರೀತಿಯಲ್ಲಿ ತೀವ್ರತೆ ಕಾಣಿಸಿಲ್ಲ. ನಡುನಡುವೆ ಫಿಲಾಸಫಿ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಕಥೆಯ ಒಳಗಡೆ ಅದು ಚೆನ್ನಾಗಿ ಹೊಂದಿಕೊಂಡಿಲ್ಲ. ಕಥೆಗೂ, ಪಾತ್ರಕ್ಕೂ, ಸಂಭಾಷಣೆಗೂ ಹದವಾದ ಮೇಳೈಸುವಿಕೆ ಕಾಣಿಸುತ್ತಿಲ್ಲ.
ಇದನ್ನೂ ಓದಿ: Tagaru Palya Review: ‘ಟಗರು ಪಲ್ಯ’ದಲ್ಲಿದೆ ನಗು-ಅಳು ತುಂಬಿದ ಮನರಂಜನೆಯ ಫ್ಯಾಮಿಲಿ ಪ್ಯಾಕೇಜ್
ಮೇಲ್ನೋಟಕ್ಕೆ ನೋಡಿದರೆ ಅಭಿಷೇಕ್ ಅಂಬರೀಷ್ ಅವರಿಗೆ ‘ಬ್ಯಾಡ್ ಮ್ಯಾನರ್ಸ್’ ಸಿನಿಮಾದ ಹೀರೋ ಪಾತ್ರ ಹೇಳಿಮಾಡಿಸಿದಂತಿದೆ. ಖಡಕ್ ಪೊಲೀಸ್ ಅಧಿಕಾರಿಯಾಗಿ ಅವರು ಕಾಣಿಸಿಕೊಂಡಿದ್ದಾರೆ. ಆದರೆ ಕೇವಲ ಅಬ್ಬರದ ಡೈಲಾಗ್ ಮತ್ತು ಹೊಡಿಬಡಿ ದೃಶ್ಯಗಳಿಂದ ಮಾತ್ರ ಈ ಪಾತ್ರಕ್ಕೆ ಜೀವ ತುಂಬಲು ಸಾಧ್ಯವಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಎಮೋಷನ್ಗಳನ್ನು ಅಭಿವ್ಯಕ್ತಿಸುವ ಅವಕಾಶ ಈ ಪಾತ್ರಕ್ಕೆ ಬಹಳ ಕಡಿಮೆ ಇದೆ. ಆ ಕೆಲವು ಅವಕಾಶಗಳನ್ನು ಕೂಡ ಅಭಿಷೇಕ್ ಅವರು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಕೇವಲ ಫೈಟಿಂಗ್ ದೃಶ್ಯಗಳಲ್ಲಿ ಮಾತ್ರ ಅವರು ಅಬ್ಬರಿಸುತ್ತಾರೆ. ಅವರನ್ನು ಮಾಸ್ ಆಗಿ ನೋಡಬೇಕು ಎಂಬ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟ ಆಗುತ್ತದೆಯಷ್ಟೇ.
‘ಬ್ಯಾಡ್ ಮ್ಯಾನರ್ಸ್’ ಸಿನಿಮಾದಲ್ಲಿ ರಚಿತಾ ರಾಮ್ ಅವರ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ. ಕೆಲವೇ ದೃಶ್ಯಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ. ಇದರಿಂದ ಅವರ ಅಭಿಮಾನಿಗಳಿಗೆ ನಿರಾಸೆ ಆಗಬಹುದು. ಈ ಸಿನಿಮಾದಲ್ಲಿ ಕಲಾವಿದರ ದಂಡು ಇದೆ. ತಾರಾ, ಶರತ್ ಲೋಹಿತಾಶ್ವ, ದತ್ತಣ್ಣ, ಶೋಭರಾಜ್ ಅವರಂತಹ ಹಿರಿಯರ ಜೊತೆ ರೋಚಿತ್, ತ್ರಿವಿಕ್ರಮ್ ಮುಂತಾದ ಉದಯೋನ್ಮುಖ ಕಲಾವಿದರು ಕೂಡ ಅಭಿನಯಿಸಿದ್ದಾರೆ. ಆದರೆ ಯಾವ ಪಾತ್ರವೂ ಮನಸ್ಸಿನಲ್ಲಿ ಉಳಿಯುವುದಿಲ್ಲ. ಪಾತ್ರಗಳಿಗಿಂತಲೂ ಆ ಪಾತ್ರಗಳ ಕೈಯಲ್ಲಿ ಇರುವ ಗನ್ ಬಗ್ಗೆಯೇ ಪ್ರೇಕ್ಷಕರು ಹೆಚ್ಚು ಗಮನ ನೀಡುವಂತೆ ನಿರ್ದೇಶಕರು ಮಾಡಿದ್ದಾರೆ. ಸಚ್ಚಿದಾನಂದ ನಿಭಾಯಿಸಿರುವ ಮಹಾರಾಜ್ ಎಂಬ ಪಾತ್ರ ಪ್ರಶ್ನಾರ್ಥಕವಾಗಿ ಉಳಿದುಕೊಳ್ಳುತ್ತದೆ.
ಇದನ್ನೂ ಓದಿ: Ghost Review: ಮಾಸ್ ಪ್ರೇಕ್ಷಕರಿಗಾಗಿ ಅವಸರದಲ್ಲಿ ಹೇಳಿಮುಗಿಸಿದ ‘ಘೋಸ್ಟ್’ ಕಹಾನಿ
ಈ ಸಿನಿಮಾದಲ್ಲಿ ಅದ್ದೂರಿತನ ಕಾಣಿಸುತ್ತದೆ. ಮಾಸ್ ಪ್ರೇಕ್ಷಕರಿಗೆ ಬೇಕಾದ ಭರ್ಜರಿ ಫೈಟಿಂಗ್ ದೃಶ್ಯಗಳು ಇಲ್ಲಿವೆ. ಆದರೆ ಹೆಚ್ಚು ಲಾಜಿಕ್ ಹುಡುಕುವಂತಿಲ್ಲ. ಚರಣ್ ರಾಜ್ ಅವರು ಸಂಗೀತದ ಮೂಲಕ ಸಿನಿಮಾದ ತೂಕ ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ಹಾಡುಗಳು ಚೆನ್ನಾಗಿದ್ದರೂ ಕಥೆಯ ಮಧ್ಯೆ ಬಲವಂತಕ್ಕೆ ತುರುಕಿದಂತಿವೆ. ಶೇಖರ್ ಎಸ್. ಅವರ ಛಾಯಾಗ್ರಹಣ ಚೆನ್ನಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:26 pm, Fri, 24 November 23