The Devil Movie Review: ‘ದಿ ಡೆವಿಲ್’ ರಾಜಕೀಯ ಸಮರದಲ್ಲಿ ದರ್ಶನ್ ವರ್ಸಸ್ ದರ್ಶನ್

- Time - 169 Minutes
- Released - December 11, 2025
- Language - Kannada
- Genre - Action, Drama, Thriller
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ (Darshan) ಅಭಿನಯದ ‘ದಿ ಡೆವಿಲ್’ ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆ ಆಗಿದೆ. ಡಿಸೆಂಬರ್ 11ರಂದು ತೆರೆಕಂಡಿರುವ ಈ ಸಿನಿಮಾದಲ್ಲಿ ರಾಜಕೀಯದ ಕಥಾಹಂದರ ಇದೆ. ದರ್ಶನ್ ಜೊತೆ ಅಚ್ಯುತ್ ಕುಮಾರ್, ಮಹೇಶ್ ಮಂಜ್ರೇಕರ್ ಮುಂತಾದ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ. ‘ಮಿಲನ’, ‘ತಾರಕ್’ ಖ್ಯಾತಿಯ ನಿರ್ದೇಶಕ ಪ್ರಕಾಶ್ ವೀರ್ ಅವರು ‘ದಿ ಡೆವಿಲ್’ (The Devil) ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಸಿನಿಮಾದಲ್ಲಿ ಏನುಂಟು, ಏನಿಲ್ಲ ತಿಳಿಯಲು ಈ ವಿಮರ್ಶೆ ಓದಿ..
ನಟ ದರ್ಶನ್ ಅವರಿಗೆ ಮಾಸ್ ಇಮೇಜ್ ಇದೆ. ಹಾಗೆಯೇ, ನಿರ್ದೇಶಕ ಪ್ರಕಾಶ್ ವೀರ್ ಅವರಿಗೆ ಕ್ಲಾಸ್ ಇಮೇಜ್ ಇದೆ. ಆ ಎರಡರ ಮಿಶ್ರಣ ‘ದಿ ಡೆವಿಲ್’ ಸಿನಿಮಾದಲ್ಲಿ ಆಗಿದೆ. ಪ್ರಕಾಶ್ ಅವರು ಎಲ್ಲಕ್ಕಿಂತ ಹೆಚ್ಚಾಗಿ ಕಥೆಗೆ ಮಹತ್ವ ನೀಡಿದ್ದಾರೆ. ಮಾಸ್ ಅಂಶಗಳ ಜೊತೆಯಲ್ಲೇ ಒಂದು ಕ್ಲಾಸ್ ಆದಂತಹ ಕಥೆಯನ್ನು ಅವರು ಪ್ರೇಕ್ಷಕರ ಎದುರು ತಂದಿದ್ದಾರೆ. ಈ ಕಥೆಯಲ್ಲಿ ಸಂಪೂರ್ಣ ಹೊಸತನ ಇಲ್ಲದೇ ಇದ್ದರೂ ಒಮ್ಮೆ ನೋಡಿಸಿಕೊಂಡು ಹೋಗುವ ಗುಣ ಇದೆ.
ಟ್ರೇಲರ್ನಲ್ಲಿ ಸುಳಿವು ನೀಡಿದಂತೆಯೇ ‘ದಿ ಡೆವಿಲ್’ ಸಿನಿಮಾದಲ್ಲಿ ದರ್ಶನ್ ಅವರು ದ್ವಿಪಾತ್ರ ಮಾಡಿದ್ದಾರೆ. ಒಂದು ನೆಗೆಟಿವ್, ಇನ್ನೊಂದು ಪಾಸಿಟಿವ್. ಎರಡೂ ಪಾತ್ರಗಳಿಗೆ ಅವರು ನ್ಯಾಯ ಒದಗಿಸಿದ್ದಾರೆ. ನೆಗೆಟಿವ್ ಶೇಡ್ ಪಾತ್ರದಲ್ಲಿ ಅವರು ಹೆಚ್ಚು ಅಬ್ಬರಿಸಿದ್ದಾರೆ. ಈ ಕಥೆಯಲ್ಲಿ ಅವರೇ ಹೀರೋ, ಅವರೇ ವಿಲನ್. ದರ್ಶನ್ ವರ್ಸಸ್ ದರ್ಶನ್ ಮುಖಾಮುಖಿಯೇ ‘ದಿ ಡೆವಿಲ್’ ಸಿನಿಮಾದ ಹೈಲೈಟ್.
‘ದಿ ಡೆವಿಲ್’ ಸಿನಿಮಾದ ಕಥೆ ಏನು?
ಭ್ರಷ್ಟಾಚಾರದ ಆರೋಪದಿಂದ ಮುಖ್ಯಮಂತ್ರಿ ರಾಜಶೇಖರ್ (ಮಹೇಶ್ ಮಂಜ್ರೇಕರ್) ಸ್ಥಾನಕ್ಕೆ ಕುತ್ತು ಬರುತ್ತದೆ. ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಎದುರಾಗುತ್ತದೆ. ತನ್ನ ಮಗ ಧನುಷ್ (ದರ್ಶನ್) ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬೇಕು ಎಂಬುದು ರಾಜಶೇಖರ್ ಉದ್ದೇಶ. ಆದರೆ ಧನುಷ್ ಪಕ್ಕಾ ವಿಲನ್! ಅವನ ಬದಲು ಅವನ ರೀತಿಯೇ ಕಾಣುವ ಕೃಷ್ಣ ಎಂಬ ವ್ಯಕ್ತಿಯನ್ನು ಧನುಷ್ ಎಂದು ತೋರಿಸಿ ಜನರನ್ನು ನಂಬಿಸಲಾಗುತ್ತದೆ. ಅಂತಿಮವಾಗಿ ಈ ರಹಸ್ಯ ಎಲ್ಲಿಯವರೆಗೆ ಸಾಗುತ್ತದೆ? ಅಖಾಡಕ್ಕೆ ರಿಯಲ್ ಧನುಷ್ ಎಂಟ್ರಿ ನೀಡಿದಾಗ ಏನೆಲ್ಲ ಸಂಘರ್ಷಗಳು ಆಗುತ್ತವೆ ಎಂಬುದೇ ‘ದಿ ಡೆವಿಲ್’ ಸಿನಿಮಾದ ಕಥೆ.
ಇದನ್ನೂ ನೋಡಿ: ‘ನರ್ತಕಿ’ ಚಿತ್ರಮಂದಿರದ ಎದುರು ‘ದಿ ಡೆವಿಲ್’ ಕಟೌಟ್ ಹೇಗಿದೆ ನೋಡಿ
ದರ್ಶನ್ಗೆ ಹೊಸ ಪ್ರಯತ್ನ:
ಈ ಮೊದಲು ದರ್ಶನ್ ಅವರು ಪೂರ್ಣ ಪ್ರಮಾಣದ ರಾಜಕೀಯದ ಕಥೆ ಇರುವ ಸಿನಿಮಾಗಳನ್ನು ಪ್ರಯತ್ನಿಸಿರಲಿಲ್ಲ. ‘ದಿ ಡೆವಿಲ್’ ಸಿನಿಮಾದಲ್ಲಿ ಸಂಪೂರ್ಣ ಪೊಲಿಟಿಕಲ್ ಕಹಾನಿ ಇದೆ. ಆರಂಭದಿಂದ ಕೊನೇ ತನಕ ಈ ಸಿನಿಮಾದ ಕಥೆ ರಾಜಕೀಯದ ಸುತ್ತವೇ ಸುತ್ತುತ್ತದೆ. ನಟ ದರ್ಶನ್ ಅವರು ನೆಗೆಟಿವ್ ಮತ್ತು ಪಾಸಿಟಿವ್ ಎರಡೂ ಪಾತ್ರಗಳನ್ನು ತಮ್ಮ ಅಭಿಮಾನಿಗಳಿಗೆ ಇಷ್ಟ ಆಗುವ ರೀತಿಯಲ್ಲಿ ನಿಭಾಯಿಸಿದ್ದಾರೆ.
ಇನ್ನುಳಿದ ಕಲಾವಿದರ ನಟನೆ:
‘ದಿ ಡೆವಿಲ್’ ಸಿನಿಮಾದಲ್ಲಿ ದರ್ಶನ್ ಬಳಿಕ ಹೆಚ್ಚು ಸ್ಕ್ರೀನ್ ಸ್ಪೇಸ್ ಗಿಟ್ಟಿಸಿರುವುದು ನಟ ಅಚ್ಯುತ್ ಕುಮಾರ್. ಮುಖ್ಯಮಂತ್ರಿಯ ಸಲಹೆಗಾರನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕಥೆಗೆ ಹಲವು ತಿರುವುಗಳನ್ನು ನೀಡುವ ಪಾತ್ರ ಇದಾಗಿದೆ. ನಟಿ ರಚನಾ ರೈ ಅವರು ತಮಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಶರ್ಮಿಳಾ ಮಾಂಡ್ರೆ ಅವರು ಕಡಿಮೆ ಹೊತ್ತು ಕಾಣಿಸಿಕೊಂಡರೂ ಟ್ವಿಸ್ಟ್ ನೀಡುತ್ತಾರೆ. ಹುಲಿ ಕಾರ್ತಿಕ್ ಮತ್ತು ಗಿಲ್ಲಿ ನಟ ಅವರು ಕಾಮಿಡಿ ಕಚಗುಳಿ ನೀಡಲು ಪ್ರಯತ್ನಿಸಿದ್ದಾರೆ.
ಇದನ್ನೂ ಓದಿ: ‘ದಿ ಡೆವಿಲ್’ ಫಸ್ಟ್ ಹಾಫ್ನಲ್ಲಿ ದರ್ಶನ್ ಅಭಿಮಾನಿಗಳಿಗೆ ಇಷ್ಟ ಆಗುವಂಥದ್ದು ಏನೆಲ್ಲ ಇದೆ?
ಆ್ಯಕ್ಷನ್ ದೃಶ್ಯಗಳು ಹೇಗಿವೆ?
ನಿರ್ದೇಶಕ ಪ್ರಕಾಶ್ ವೀರ್ ಅವರು ಆ್ಯಕ್ಷನ್ ದೃಶ್ಯಗಳನ್ನು ಅನವಶ್ಯಕವಾಗಿ ತುರುಕಿಲ್ಲ. ಕಥೆಗೆ ಎಷ್ಟು ಬೇಕೋ ಅಷ್ಟು ಆ್ಯಕ್ಷನ್ ಮಾತ್ರ ಇಟ್ಟಿದ್ದಾರೆ. ಇರುವಷ್ಟು ಸಾಹಸ ದೃಶ್ಯಗಳಲ್ಲೇ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಮಾಸ್ ಮನರಂಜನೆ ನೀಡುತ್ತಾರೆ. ಭರಪೂರ ಆ್ಯಕ್ಷನ್ ಬೇಕು ಎಂದು ಬಯಸುವವರಿಗೆ ಕೊಂಚ ನಿರಾಸೆ ಆಗಬಹುದು.
ಡೆವಿಲ್ ಮೈನಸ್ ಏನು?
ಮೊದಲೇ ಹೇಳಿದಂತೆ ‘ದಿ ಡೆವಿಲ್’ ಸಿನಿಮಾದಲ್ಲಿ ತುಂಬಾ ಹೊಸತನ ಇಲ್ಲ. ಹಲವು ದೃಶ್ಯಗಳಲ್ಲಿ ಲಾಜಿಕ್ ಕಣ್ಮರೆ ಆಗಿದೆ. ಈ ಸಿನಿಮಾ ಕಥೆಯು ಪ್ರೀ-ಕ್ಲೈಮ್ಯಾಕ್ಸ್ ತಲುಪುವ ವೇಳೆಗೆ ಸ್ಕ್ರಿಪ್ಟ್ ಜಾಳಾಗಿರುವುದು ಗೋಚರ ಆಗುತ್ತದೆ. ಗಿಲ್ಲಿ ನಟ ಇದ್ದರೂ ಕೂಡ ಕಾಮಿಡಿ ದೃಶ್ಯಗಳು ಹೇಳಿಕೊಳ್ಳುವಷ್ಟು ಉತ್ತಮವಾಗಿ ಮೂಡಿಬಂದಿಲ್ಲ. ಕ್ಲೈಮ್ಯಾಕ್ಸ್ ಕೊಂಚ ಗೊಂದಲಮಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




