Bheema Movie Review: ಹೇಗಿದೆ ‘ಭೀಮ’ ಸಿನಿಮಾ? ನಿರ್ದೇಶಕರ ಉದ್ದೇಶ ಈಡೇರಿದೆಯೇ?
ಭೀಮ ಚಿತ್ರ ವಿಮರ್ಶೆ: ದುನಿಯಾ ವಿಜಯ್ ನಿರ್ದೇಶನದ ಎರಡನೇ ಸಿನಿಮಾ ‘ಭೀಮ’ ಇಂದು ಬಿಡುಗಡೆ ಆಗಿದೆ. ಈ ಸಿನಿಮಾ ಮಾದಕ ವಸ್ತುವಿನ ವಿರುದ್ಧ ಸಂದೇಶ ಹೊಂದಿರುವ ಸಿನಿಮಾ ಎನ್ನಲಾಗಿತ್ತು. ಅಂದಹಾಗೆ ಸಿನಿಮಾ ಹೇಗಿದೆ?
ಸಿನಿಮಾ: ‘ಭೀಮ’
ನಿರ್ದೇಶನ: ದುನಿಯಾ ವಿಜಯ್
ಪಾತ್ರವರ್ಗ: ದುನಿಯಾ ವಿಜಯ್, ಅಶ್ವಿನಿ, ಗೋಪಾಲ ದೇಶಪಾಂಡೆ, ಬ್ಲಾಕ್ ಡ್ರಾಗನ್ ಮಂಜು,
ನಿರ್ಮಾಣ: ಕೃಷ್ಣ ಸಾರ್ಥಕ್, ಜಗದೀಶ್ ಗೌಡ
ರೇಟಿಂಗ್: 2.5/5
ಈ ಹಿಂದೆ ‘ಸಲಗ’ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ದುನಿಯಾ ವಿಜಯ್, ಎರಡನೇ ಸಿನಿಮಾ ‘ಭೀಮ’ ಮೂಲಕ ಪ್ರೇಕ್ಷಕರೆದುರು ಬಂದಿದ್ದಾರೆ. ಮೊದಲ ನಿರ್ದೇಶನದ ಸಿನಿಮಾ ‘ಸಲಗ’ದಲ್ಲಿ ಚಿತ್ರಕತೆಗೆ ನಿಷ್ಟರಾಗಿದ್ದಂತೆ ತೋರಿದ್ದ ದುನಿಯಾ ವಿಜಯ್, ‘ಭೀಮ’ ಸಿನಿಮಾನಲ್ಲಿ ಆಯ್ದ ಪ್ರೇಕ್ಷಕ ವರ್ಗಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಮನರಂಜನೆಗಾಗಿ ದೃಶ್ಯಗಳನ್ನು ಕಟ್ಟಿದಂತಿದೆ. ಸಿನಿಮಾ ‘ಮಾದಕ ವಸ್ತು’ವಿನ ವಿರುದ್ಧ ನಾಯಕನ ಸಮರ ಎಂದು ಹೊರನೋಟಕ್ಕೆ ಕಾಣಿಸುತ್ತದೆಯಾದರೂ ಒಳಗಿಳಿದು ನೋಡಿದರೆ ನಾಯಕನ ವೈಭವೀಕರಣ, ಸ್ಲಂ ಯುವಕರ ‘ಫಂಕ್’ ಜೀವನವನ್ನು ತೋರಿಸಲು ಹೆಚ್ಚು ಶ್ರಮ ಹಾಕಿರುವಂತೆ ಕಾಣುತ್ತದೆ.
ಸಿನಿಮಾ, ಆರಂಭದಲ್ಲಿ ಭರವಸೆ ಮೂಡಿಸುತ್ತದೆ. ಕತೆಯ ಒಳಕ್ಕೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗುವ ರೀತಿ, ಪಾತ್ರಗಳನ್ನು ಪರಿಚಯ ಮಾಡಿಸಿರುವ ರೀತಿ ಚೆನ್ನಾಗಿದೆ. ಗ್ಯಾರೆಜ್ ಮೆಕಾನಿಕ್, ಆ ಬಳಿಕ ರಸ್ತೆಯಲ್ಲಿ ಟೀ ಮಾರುವ ವಿಲನ್ ಹೇಗೆ ಹಂತ-ಹಂತವಾಗಿ ದುಷ್ಕೃತ್ಯಗಳನ್ನು ಮಾಡಿ ಬೆಳೆಯುತ್ತಾನೆ ಎಂಬುದನ್ನು ನಿರ್ದೇಶಕ ತೋರಿಸುತ್ತಾರೆ. ಆದರೆ ನಾಯಕ-ವಿಲನ್ ಎದುರಾದ ಬಳಿಕ ಕತೆಯಲ್ಲಿ ಮುಖ್ಯ ವಿಲನ್ ಗೌಣವಾಗುತ್ತಾನೆ. ನಾಯಕನಷ್ಟೆ ವಿಜೃಂಭಿಸುತ್ತಾನೆ.
ಇದನ್ನೂ ಓದಿ:Bheema First Half Review:‘ ಭೀಮ’ ಸಿನಿಮಾದ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಇಲ್ಲಿದೆ ವಿವರ
ಗಾಂಜಾ ದೆಸೆಯಿಂದ ಅಚುತ್ ಕುಮಾರ್ ಮಗನ ಕಳೆದುಕೊಳ್ಳುತ್ತಾನೆ. ಮಗನ ಜಾಗಕ್ಕೆ ಬರುವ ದುನಿಯಾ ವಿಜಯ್ ಗಾಂಜಾ ವಿರೋಧಿ. ಸ್ವತಃ ಒಂದು ಏರಿಯಾದ ನಾಯಕ ಆಗಿರುವ ವಿಜಯ್ಗೆ, ಗಾಂಜಾ ವ್ಯಾಪಾರದ ಕಿಂಗ್ ಎದುರಾಳಿ. ಗಾಂಜಾ ಹೇಗೆ ನಗರದೆಲ್ಲೆಡೆ ಪ್ರಸಾರವಾಗುತ್ತಿದೆ. ಗಾಂಜಾ ಪಾಕೆಟ್ ಗಳನ್ನು ಮಾಡಲು, ಅದನ್ನು ವಿತರಣೆ ಮಾಡಲು ಹೇಗೆ ಸ್ಲಂ ಕುಟುಂಬಗಳನ್ನು, ಯುವಕ-ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇಂಥಹಾ ಕೆಲವು ದೃಶ್ಯಗಳು ಮಾಹಿತಿಪೂರ್ಣವಾಗಿವೆ, ನೈಜತೆಗೆ ಹತ್ತಿರದಂತೆ ಕಾಣುತ್ತವೆಯಾದರು ಇಡೀ ಸಿನಿಮಾದಲ್ಲಿ ಇದನ್ನೇ ನಿರೀಕ್ಷಿಸುವಂತಿಲ್ಲ.
ಕೆಲವು ದೃಶ್ಯಗಳು ನೋಡಲು ಕಷ್ಟವಾಗುತ್ತದೆ. ಯುವಕ, ಯುವತಿಯರು ನಶೆ ಮಾಡುವ ದೃಶ್ಯಗಳು, ಮೀಸೆ ಮೂಡದ ಯುವಕರು ಭೀಕರವಾಗಿ ಕೊಲೆ ಮಾಡುವ ದೃಶ್ಯಗಳು. ಇವೆಲ್ಲವೂ ನೋಡುಗರಿಗೆ ಅನ್ಕಂಫರ್ಟ್ ಅನ್ನಿಸುತ್ತವೆ. ಇನ್ನು ಸಿನಿಮಾದ ಪಾತ್ರಗಳು ಸರಾಗವಾಗಿ ಅವಾಚ್ಯ ಬೈಗುಳಗಳನ್ನು ಪರಸ್ಪರ ಬೈದು ಕೊಳ್ಳುತ್ತವೆ. ಬೈಗುಳಗಳಿಗೆ ಯಾವುದೇ ಫಿಲ್ಟರ್ ಇಲ್ಲ. ಬೈಗುಳಕ್ಕೆ ಲಿಂಗ ತಾರತಮ್ಯವೂ ಇಲ್ಲ. ಸಿನಿಮಾದಲ್ಲಿ ಚಿಮ್ಮುವ ರಕ್ತಕ್ಕೂ ಮಿತಿ ಇಲ್ಲ. ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಿರುವುದು ಸಮ್ಮತವೇ.
ಸಿನಿಮಾದ ಹಲವು ಪಾತ್ರಗಳನ್ನು ನಾಯಕನಿಗೆ ಅನುಕೂಲಕ್ಕಾಗಿಯೇ ಸೃಷ್ಟಿಸಲಾಗಿದೆ. ನಾಯಕನ ಸ್ನೇಹಿತರಿಗಂತೂ ನಾಯಕನ ಹಿಂದೆ ಬೈಕ್ನಲ್ಲಿ ಓಡಾಡುವುದು ಬಿಟ್ಟರೆ ಹೆಚ್ಚು ಕೆಲಸವಿಲ್ಲ. ಫೈಟ್ ದೃಶ್ಯಗಳಲ್ಲಿ ನಾಯಕನ ಗೆಳೆಯರು ಅದೃಶ್ಯರಾಗಿಬಿಡುತ್ತಾರೆ. ನಾಯಕಿಯ ಪಾತ್ರಕ್ಕೆ ತುಸುವಾದರೂ ಪ್ರಾಧಾನ್ಯತೆ ಸಿಕ್ಕಂತೆ ಕಾಣುತ್ತದೆ. ನಾಯಕ ಮೃದು ಹೃದಯಿ ಎಂದು ತೋರಿಸುವ ಕಾರಣಕ್ಕೆ ಅಣ್ಣನ ಪಾತ್ರವೊಂದನ್ನು ನಿರ್ದೇಶಕರು ಸೃಷ್ಟಿಸಿದ್ದಾರೆ. ಸಿನಿಮಾದ ಪವರ್ಫುಲ್ ಪೊಲೀಸ್ ಪಾತ್ರವೂ ಸಹ ಸುಖಾ ಸುಮ್ಮನೆ ಭೀಮನ ಪರ ಸಿಂಪತಿ ಇರುವಂತೆ ವರ್ತಿಸುತ್ತದೆ. ಸಿನಿಮಾದ ಮೊದಲಿನಿಂದಲೂ ಭೀಮನ ಕಂಡರೆ ಉರಿದು ಬೀಳುವ ಪೊಲೀಸ್ ಕೊನೆಯಲ್ಲಿ ಭೀಮ, ವಿಲನ್ ಸಂಹಾರಕ್ಕೆ ಹೊರಡುವಾಗ ಭೀಮನ ಪರ ನಿಲ್ಲುತ್ತದೆ.
ಇದನ್ನೂ ಓದಿ:ದುನಿಯಾ ವಿಜಯ್-ಗಣೇಶ್ ಕಾಂಬಿನೇಷನ್ನಲ್ಲಿ ಬರಲಿದೆ ಸಿನಿಮಾ; ಇರಲಿದೆ ‘ಭೀಮ’ನ ನಿರ್ದೇಶನ
ಸಿನಿಮಾದಲ್ಲಿ, ಸ್ಲಂ ಯುವಕರೆಲ್ಲ ಬೈಕ್ ವೀಲಿಂಗ್ ಮಾಡುವ ದೃಶ್ಯವೊಂದಿದೆ, ಅಲ್ಲೆಲ್ಲೊ ದಾರಿಯಲ್ಲಿ ನಿಂತಿದ್ದ ಜೋಡಿಯೊಂದನ್ನು ರೇಗಿಸಿದ್ದಕ್ಕೆ ಆ ಜೋಡಿಯೂ ಬೈಕ್ ಮೇಲೆ ವೀಲಿಂಗ್ ಮಾಡಿ ಪ್ರಾಣ ಕಳೆದುಕೊಳ್ಳುತ್ತದೆ. ಆ ದೃಶ್ಯ ಮುಗಿಯುತ್ತಿದ್ದಂತೆ, ಪೊಲೀಸ್ ಅಧಿಕಾರಿ ಹಿಂದೊಮ್ಮೆ ಯುವತಿಯನ್ನು ರಕ್ಷಿಸಿದ್ದ ದೃಶ್ಯ ಬರುತ್ತದೆ. ಹೀಗೆ ಬಿಡಿ ದೃಶ್ಯಗಳು ಕತೆಗೆ ಸ್ಪಷ್ಟತೆ ಕೊಡುವಲ್ಲಿ ಎಡವುತ್ತವೆ. ಸ್ಪಷ್ಟತೆ ಇಲ್ಲದ ಕೆಲವು ದೃಶ್ಯಗಳೂ ಇವೆ. ರಿಹ್ಯಾಬಿಟೇಷನ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರು ಸುಧಾರಣೆ ಆಗುತ್ತಿದ್ದಾರೆ ಎಂದು ತೋರಿಸುವ ದೃಶ್ಯವೊಂದಿದೆ. ಆದರೆ ಸಿನಿಮಾದ ಅಂತ್ಯದಲ್ಲಿ ಅದೇ ಹುಡುಗರು ರಿಹ್ಯಾಬಿಟೇಷನ್ ಸೆಂಟರ್ನಿಂದ ತಪ್ಪಿಸಿಕೊಂಡು ಹೊರಬಂದು ಸೈಕೋಗಳಂತೆ ಒಬ್ಬನ ಕೊಲೆ ಮಾಡುತ್ತಾರೆ. ಡ್ರಗ್ಸ್ ಯಾರು ಸಪ್ಲೈ ಮಾಡುತ್ತಿದ್ದಾರೆ ಎಂಬುದು ನಾಯಕನಿಗೆ ಮೊದಲೇ ಗೊತ್ತಿದ್ದರೂ ಸಹ ಅವನು ಅವರ ಮೇಲೆ ಯುದ್ಧಕ್ಕೆ ನಿಲ್ಲುವುದಿಲ್ಲ. ಕೊನೆಗೆ ಅಣ್ಣನ ಕೊಲೆ ಆದಾಗಲೇ ಅವನು ಯುದ್ಧ ಸಾರುವುದು. ಇದು ಮಾದಕ ವಸ್ತುಗಳ ವಿರುದ್ಧ ಹೋರಾಟವೋ ಅಥವಾ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಮಾಡಿದ ಯುದ್ಧವೋ ಪ್ರೇಕ್ಷಕರಲ್ಲಿ ಗೊಂದಲ ಮೂಡುತ್ತದೆ.
ನಟನೆಯ ವಿಷಯಕ್ಕೆ ಬಂದರೆ ಆರಂಭದಲ್ಲಿ ಅಚ್ಯುತ್ ಕುಮಾರ್ ಗಮನ ಸೆಳೆಯುತ್ತಾರೆ, ಆಕ್ಷನ್ ದೃಶ್ಯಗಳಲ್ಲಿ ದುನಿಯಾ ವಿಜಯ್ ಶಿಳ್ಳೆ ಗಿಟ್ಟಿಸುತ್ತಾರೆ. ಸಿಕ್ಕಿರುವ ಕಡಿಮೆ ಅವಕಾಶದಲ್ಲಿಯೇ ನಾಯಕಿಯೂ ಗಮನ ಸೆಳೆಯುತ್ತಾರೆ. ಗೋಪಾಲ ದೇಶಪಾಂಡೆ ನಟನೆ ತೆರೆದಿಡುವ ಗಟ್ಟಿ ದೃಶ್ಯಗಳು ಅವರಿಗೆ ಇಲ್ಲ. ಇನ್ನು ಸಿನಿಮಾದ ಮುಖ್ಯ ವಿಲನ್ ದೈತ್ಯ ದೇಹಿ, ತೆರೆಯ ಮೇಲೆ ಅದ್ಧೂರಿಯಾಗಿ ಕಾಣುತ್ತಾರೆ. ಮೊದಲಾರ್ಧದಲ್ಲಿ ಚುರುಕಾಗಿ ಕಾಣುವ ಅವರು ದ್ವಿತೀಯಾರ್ಧದಲ್ಲಿ ಅವರ ಕಿರುಚಾಟವೇ ಹೆಚ್ಚು ಕಾಣುತ್ತದೆ. ಸಿನಿಮಾದಲ್ಲಿ ಗಮನ ಸೆಳೆಯುವುದು ಕೆಲ ಹಾಡುಗಳು. ಕನ್ನಡ ರ್ಯಾಪ್ ಮಾದರಿಯ ಹಾಡುಗಳು ಚೆನ್ನಾಗಿವೆ. ಜೊತೆಗೆ ಅಲ್ಲಲ್ಲಿ ಹಿನ್ನೆಲೆ ಸಂಗೀತವೂ ಗಮನ ಸೆಳೆಯುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:50 pm, Fri, 9 August 24