‘ಬೃಂದಾವಿಹಾರಿ’ ವಿಮರ್ಶೆ: ಗಣೇಶ್ ಅಭಿಮಾನಿಗಳಿಗೆ ಇಷ್ಟ ಆಗುವ ರಿಯಾಲಿಟಿ ಶೋ ಕಹಾನಿ

‘ಬೃಂದಾವಿಹಾರಿ’ ವಿಮರ್ಶೆ: ಗಣೇಶ್ ಅಭಿಮಾನಿಗಳಿಗೆ ಇಷ್ಟ ಆಗುವ ರಿಯಾಲಿಟಿ ಶೋ ಕಹಾನಿ
Golden Star Ganesh

ಬೃಂದಾವಿಹಾರಿ

UA
  • Time - 159 Minutes
  • Released - November 20, 2026
  • Language - Kannada
  • Genre - Drama, Musical, Romantic
Cast - ಗಣೇಶ್, ಮಾಳವಿಕಾ ಶರ್ಮಾ, ದೇವಿಕಾ ಭಟ್, ಲಕ್ಷ್ಮಿ, ಕುರಿ ಪ್ರತಾಪ್, ಮಂಜು ಪಾವಗಡ, ಜಗ್ಗಪ್ಪ, ರಂಗಾಯಣ ರಘು, ರಾಮ್ ಕುಮಾರ್, ಸಾಧು ಕೋಕಿಲ, ಅಚ್ಯುತ್ ಕುಮಾರ್ ಮುಂತಾದವರು.
Director - ಶ್ರೀನಿವಾಸ ರಾಜು
3
Critic's Rating

Updated on: Nov 20, 2026 | 5:03 PM

ನಟ ‘ಗೋಲ್ಡನ್ ಸ್ಟಾರ್’ ಗಣೇಶ್ ಅವರು ಎರಡು ವರ್ಷಗಳ ಗ್ಯಾಪ್ ಬಳಿಕ ದೊಡ್ಡ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. 2024ರಲ್ಲಿ ಅವರು ನಟಿಸಿದ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಬಿಡುಗಡೆ ಆಗಿತ್ತು. ಆ ಬಳಿಕ ಅವರು ಗ್ಯಾಪ್ ತೆಗೆದುಕೊಂಡು ‘ಬೃಂದಾವಿಹಾರಿ’ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಎದುರು ಬಂದಿದ್ದಾರೆ. ನವೆಂಬರ್ 20ರಂದು ತೆರೆಕಂಡಿರುವ ಈ ಸಿನಿಮಾಗೆ ಶ್ರೀನಿವಾಸ ರಾಜು ಅವರು ನಿರ್ದೇಶನ ಮಾಡಿದ್ದಾರೆ. ಸಮೃದ್ಧಿ ಮಂಜುನಾಥ್ ಅವರು ನಿರ್ಮಾಣ ಮಾಡಿದ್ದಾರೆ. ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

‘ಕೃಷ್ಣಂ ಪ್ರಣಯ ಸಖಿ’ ಸಿನಿಮಾದ ಮೂಲಕ ನಿರ್ದೇಶಕ ಶ್ರೀನಿವಾಸ ರಾಜು ಹಾಗೂ ನಟ ಗಣೇಶ್ ಅವರು ಫ್ಯಾಮಿಲಿ ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು. ಬಳಿಕ ಅವರಿಬ್ಬರ ಕಾಂಬಿನೇಷನ್​ನಲ್ಲಿ ‘ಬೃಂದಾವಿಹಾರಿ’ ಘೋಷಣೆ ಆದಾಗ ಸಹಜವಾಗಿಯೇ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿತ್ತು. ಈ ಬಾರಿ ಕೂಡ ಅವರು ಕೌಟುಂಬಿಕ ಪ್ರೇಕ್ಷಕರನ್ನೇ ಗಮನದಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಆದರೆ ಕಥೆ ಶೈಲಿ ಬೇರೆ ರೀತಿ ಇದೆ.

Loading...

ಈ ಸಿನಿಮಾದಲ್ಲಿ ಕೂಡ ಹಲವಾರು ಪಾತ್ರಗಳಿವೆ. ಅನುಭವಿ ಕಲಾವಿದರು ಆ ಪಾತ್ರಗಳನ್ನು ಮಾಡಿದ್ದಾರೆ. ಲಕ್ಷ್ಮಿ, ರಾಮ್ ಕುಮಾರ್, ಅಚ್ಯುತ್ ಕುಮಾರ್, ಅವಿನಾಶ್, ರಂಗಾಯಣ ರಘು, ಅಶ್ವತ್ಥ್ ನೀನಾಸಂ, ಮಂಜು ಪಾವಗಡ, ಕುರಿ ಪ್ರತಾಪ್, ಜಗಪ್ಪ, ರಾಜೇಶ್ ನಟರಂಗ.. ಹೀಗೆ ಬೆಳೆಯುತ್ತಾ ಸಾಗುತ್ತದೆ ಈ ಚಿತ್ರದ ಕಲಾವಿದರ ಪಟ್ಟಿ. ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಮತ್ತು ಮಾಳವಿಕಾ ಶರ್ಮಾ ಅವರು ಅಭಿನಯಿಸಿದ್ದಾರೆ. ಇಷ್ಟೆಲ್ಲ ಕಲಾವಿದರ ದಂಡು ಇದ್ದರೂ ಕೂಡ ಗಣೇಶ್ ಪಾತ್ರದ ಸುತ್ತವೇ ಇಡೀ ಸಿನಿಮಾ ಸುತ್ತುತ್ತದೆ.

ಕಥೆಯ ವಿಚಾರಕ್ಕೆ ಬಂದರೆ, ನಿರ್ದೇಶಕ ಶ್ರೀನಿವಾಸ ರಾಜು ಅವರು ಈ ಬಾರಿ ಡಿಫರೆಂಟ್ ಎನಿಸುವಂತಹ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಧ್ಯಂತರದ ತನಕ ಪ್ರೇಕ್ಷಕರಿಗೆ ಒಂದು ರೀತಿಯ ಅನುಭವವಾದರೆ, ಮಧ್ಯಂತರದ ನಂತರ ಎದುರಾಗುವ ಅನುಭವೇ ಬೇರೆ. ಅದೇನು ಎಂಬುದನ್ನು ಪ್ರೇಕ್ಷಕರು ಚಿತ್ರಮಂದಿರದಲ್ಲಿಯೇ ನೋಡಿ ತಿಳಿದುಕೊಳ್ಳಬೇಕು. ಈ ಕಥೆಯಲ್ಲಿ ತ್ರಿಕೋನ ಪ್ರೇಮವಿದೆ, ಫ್ಯಾಮಿಲಿ ಸೆಂಟಿಮೆಂಟ್ ಇದೆ, ಹಾಸ್ಯದ ಸನ್ನಿವೇಶಗಳಿವೆ, ಒಂಚೂರು ಆ್ಯಕ್ಷನ್ ಕೂಡ ಇದೆ.

ಬೃಂದಾವನ ಎಂಬ ಜಾಗದಲ್ಲಿ ಈ ಸಿನಿಮಾದ ಬಹುತೇಕ ಕಥೆ ಸಾಗುತ್ತದೆ. ಆ ಊರಿನಲ್ಲಿ ಇನ್ನೂ ಬ್ರಿಟಿಷರ ಆಳ್ವಿಕೆ ಇದೆ! ಟಿವಿ, ಮೊಬೈಲ್ ಮುಂತಾದ ಯಾವುದೇ ಆಧುನಿಕ ಸೌಕರ್ಯಗಳು ಅಲ್ಲಿಲ್ಲ. ಕಥಾನಾಯಕ ಮಾಧವ (ಗಣೇಶ್) ಒಮ್ಮೆಯೂ ಆ ಬೃಂದಾವನದಿಂದ ಆಚೆಗೆ ಹೋದವನೇ ಅಲ್ಲ. ಹೊರಗೆ ಹೋಗಲು ಬ್ರಿಟಿಷರು ಅನುಮತಿ ನೀಡುವುದಿಲ್ಲ. ಹಾಗಾಗಿ, ಆ ಬೃಂದಾವನ ಬಿಟ್ಟರೆ ಹೊರಗಡೆ ಬೇರೊಂದು ಜಗತ್ತು ಹೇಗಿದೆ ಎಂಬುದೇ ಅವನಿಗೆ ತಿಳಿದಿಲ್ಲ. ಬೇರೆ ಊರಿನಿಂದ ಬರುವ ಮೀರಾ (ಮಾಳವಿಕಾ ಶರ್ಮಾ) ಮತ್ತು ರಾಧಾ (ದೇವಿಕಾ ಭಟ್) ಅವರಿಂದಾಗಿ ಮಾಧವನ ಬದುಕಿನಲ್ಲಿ ಬಿರುಗಾಳಿ ಬೀಸುತ್ತದೆ. ನಂತರ ಏನಾಗುತ್ತದೆ ಎಂಬುದೇ ಕಥೆಯ ತಿರುಳು.

ಒಂದು ರಿಯಾಲಿಟಿ ಶೋ ಪರಿಕಲ್ಪನೆಯಲ್ಲಿ ಈ ಕಥೆಯನ್ನು ಹೆಣೆಯಲಾಗಿದೆ. ಅದು ಸಣ್ಣ ರಿಯಾಲಿಟಿ ಶೋ ಅಲ್ಲ. ಬರೋಬ್ಬರಿ 25 ವರ್ಷ ನಡೆಯುವ ರಿಯಾಲಿಟಿ ಶೋ! ಈ ರೀತಿಯ ಕಥೆ ಬಹಳ ಹೊಸದಾಗಿದೆ. ಆದರೆ ಆ ಕಥೆಯಲ್ಲಿ ನಡೆಯುತ್ತಿರುವುದನ್ನು ಒಪ್ಪಿಕೊಳ್ಳುವುದು ತುಸು ಕಷ್ಟ. ಆದರೆ ಎಲ್ಲವನ್ನೂ ಅಭಿಮಾನದಿಂದ ನೋಡುವ ಪ್ರೇಕ್ಷಕರಿಗೆ ಈ ಸಿನಿಮಾ ಹಿಡಿಸುತ್ತದೆ. ಈ ಸಿನಿಮಾದ ಮೂಲಕ ಸಂಬಂಧಗಳ ಅರ್ಥ ತಿಳಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ‘ಬೃಂದಾವಿಹಾರಿ’ ಸಿನಿಮಾಕ್ಕೆ ಬೆಂಬಲ ನೀಡಿದ ‘ಪ್ರೇಮದ ಊರಲಿ’ ತಂಡ

ಇಡೀ ಸಿನಿಮಾದಲ್ಲಿ ಸ್ವಲ್ಪಮಟ್ಟಿಗೆ ರಿಲೀಫ್ ನೀಡುವುದು ಕಾಮಿಡಿ ದೃಶ್ಯಗಳು. ಗಣೇಶ್, ಕುರಿ ಪ್ರತಾಪ್, ಮಂಜು ಪಾವಗಡ ಹಾಗೂ ಜಗ್ಗಪ್ಪ ಅವರ ಕಾಂಬಿನೇಷನ್​ನ ದೃಶ್ಯಗಳು ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಕುರಿ ಪ್ರತಾಪ್ ಅವರು ಪಂಚಿಂಗ್ ಸಂಭಾಷಣೆಗಳ ಮೂಲಕ ನಗಿಸಿದರೆ, ಮಂಜು ಪಾವಗಡ ಅವರ ಮಾತು ಬಾರದ ವ್ಯಕ್ತಿಯಾಗಿ ನಗು ಉಕ್ಕಿಸುತ್ತಾರೆ.

ಈ ಸಿನಿಮಾ ತಾಂತ್ರಿಕವಾಗಿ ಅಚ್ಚುಕಟ್ಟಾಗಿದೆ. ತಾಂತ್ರಿಕ ಗುಣಮಟ್ಟದಲ್ಲಿ ಯಾವುದೇ ಕೊರತೆ ಕಾಣದಂತೆ ನಿರ್ಮಾಣ ಮಾಡಲಾಗಿದೆ. ಕಲಾವಿದರ ಅಭಿನಯವೂ ಮೆಚ್ಚುವಂತಿದೆ. ಕ್ಲೈಮ್ಯಾಕ್ಸ್​ನ ಭಾವುಕ ದೃಶ್ಯದಲ್ಲಿ ಗಣೇಶ್ ಅವರು ಗಮನ ಸೆಳೆಯುತ್ತಾರೆ. ಆ್ಯಕ್ಷನ್ ಬಯಸುವ ಪ್ರೇಕ್ಷಕರನ್ನು ರಂಜಿಸಲು ಕೂಡ ಅವರು ಪ್ರಯತ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 4:07 pm, Fri, 20 November 26

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us