Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

| Updated By: ರಾಜೇಶ್ ದುಗ್ಗುಮನೆ

Updated on: Sep 23, 2022 | 5:10 PM

Sharan | Guru Shishyaru: ಶರಣ್​ ಮತ್ತು ನಿಶ್ವಿಕಾ ನಾಯ್ಡು ನಟನೆಯ ‘ಗುರು ಶಿಷ್ಯರು’ ಚಿತ್ರದಲ್ಲಿ ಖೊಖೊ ಆಟಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ದೇಸಿ ಕ್ರೀಡೆಯ ಮಸ್ತ್​ ಕಥೆ ಇದರಲ್ಲಿದೆ.

Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ
ಗುರು ಶಿಷ್ಯರು ಸಿನಿಮಾ ಪೋಸ್ಟರ್​
Follow us on

ಸಿನಿಮಾ: ಗುರು ಶಿಷ್ಯರು

ನಿರ್ಮಾಣ: ಶರಣ್​, ತರುಣ್​ ಸುಧೀರ್​

ನಿರ್ದೇಶನ: ಜಡೇಶ್​ ಕೆ. ಹಂಪಿ

ಇದನ್ನೂ ಓದಿ
Dulquer Salmaan: ದುಲ್ಕರ್​ ಸಲ್ಮಾನ್​ ಬಗ್ಗೆ ಬಂದಿತ್ತು ಕೆಟ್ಟ ವಿಮರ್ಶೆ; ‘ಸೀತಾ ರಾಮಂ’ ನಟನ ಆ ನೋವಿನ ದಿನಗಳು ಹೇಗಿತ್ತು?
Anil Kumble: ‘ವಿಕ್ರಾಂತ್​ ರೋಣ’ ಚಿತ್ರ ವೀಕ್ಷಿಸಿ, ಸುದೀಪ್​ ನಟನೆ ಬಗ್ಗೆ ವಿಮರ್ಶೆ ತಿಳಿಸಿದ ಅನಿಲ್​ ಕುಂಬ್ಳೆ
‘ಲವ್​ 360’ ವಿಮರ್ಶೆ: ಮೊದಲು ಮುಗ್ಧ​ ಪ್ರೇಮದ ಅಚ್ಚರಿ,​ ನಂತರ ಮರ್ಡರ್​ ಮಿಸ್ಟರಿ
777 Charlie Review: ಪ್ರಾಣಿಪ್ರಿಯರನ್ನು ನಗಿಸಿ, ಅಳಿಸುವ ಧರ್ಮ-ಚಾ​ರ್ಲಿಯ ಎಮೋಷನಲ್​ ಜರ್ನಿ; ಇಲ್ಲಿದೆ ವಿಮರ್ಶೆ

ಪಾತ್ರವರ್ಗ: ಶರಣ್​, ನಿಶ್ವಿಕಾ ನಾಯ್ಡು, ದತ್ತಣ್ಣ, ಅಪೂರ್ವ ಕಾಸರವಳ್ಳಿ ಮುಂತಾದವರು.

ಸ್ಟಾರ್​: 3.5 / 5

ಕ್ರೀಡೆಯನ್ನೇ ಮುಖ್ಯ ವಿಷಯವಾಗಿ ಇಟ್ಟುಕೊಂಡು ಮಾಡಿದ ಸಿನಿಮಾಗಳು ಸಾಕಷ್ಟಿವೆ. ಹಾಗಿದ್ದರೂ ಇತರೆ ಪ್ರಕಾರದ ಸಿನಿಮಾಗಳಿಗೆ ಹೋಲಿಸಿದರೆ ಕ್ರೀಡಾಧಾರಿತ ಸಿನಿಮಾಗಳ ಸಂಖ್ಯೆ ಕಡಿಮೆ. ಅದರಲ್ಲೂ ದೇಸಿ ಕ್ರೀಡೆಗಳ ಬಗ್ಗೆ ಚಿತ್ರರಂಗದವರು ಆಸಕ್ತಿ ತೋರಿಸಿದ್ದು ವಿರಳ. ಅಪ್ಪಟ ಭಾರತದ ಕ್ರೀಡೆ ಆಗಿರುವ ಖೊಖೊ (Kho Kho) ಆಟವನ್ನೇ ಪ್ರಧಾನವಾಗಿ ಇಟ್ಟುಕೊಂಡು ‘ಗುರು ಶಿಷ್ಯರು’ (Guru Shishyaru) ಸಿನಿಮಾ ಮೂಡಿಬಂದಿದೆ. ಈ ಚಿತ್ರದಲ್ಲಿ ಶರಣ್​ (Sharan) ಅವರು ಖೊಖೊ ತಂಡದ ಕೋಚ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ವೃತ್ತಿಜೀವನದಲ್ಲಿ ಇದೊಂದು ಭಿನ್ನ ಸಿನಿಮಾ ಎಂದರೂ ತಪ್ಪಾಗಲಾರದು.

ಈ ಸಿನಿಮಾದಲ್ಲಿ ಖೊಖೊ ಆಟವೇ ಜೀವಾಳ. ಕಥೆ ಇಂಟರ್​ವಲ್​ ಹಂತಕ್ಕೆ ಬಂದಾಗ ‘ಲಗಾನ್​’ ಸಿನಿಮಾ ಖಂಡಿತಾ ನೆನಪಾಗುತ್ತದೆ. ಅಲ್ಲಿ ಕ್ರಿಕೆಟ್​ ಇತ್ತು. ಇಲ್ಲಿ ಖೊಖೊ ಇದೆ. ಆದರೂ ಕೂಡ ಬೇರೆಯದೇ ಮೆರುಗಿನೊಂದಿಗೆ ‘ಗುರು ಶಿಷ್ಯರು’ ಸಿನಿಮಾವನ್ನು ನಿರ್ದೇಶಕ ಜಡೇಶ್​ ಕೆ. ಹಂಪಿ ಕಟ್ಟಿಕೊಟ್ಟಿದ್ದಾರೆ. 1995ರ ಸಮಯದಲ್ಲಿ ಹಳ್ಳಿ ಪರಿಸರದಲ್ಲಿ ನಡೆಯುವ ಖೊಖೊ ಪಂದ್ಯಾವಳಿಯ ಕಥೆಯನ್ನು ಕಾಮಿಡಿ ಮತ್ತು ರೋಚಕತೆ ಮಿಶ್ರಣದಲ್ಲಿ ನಿರೂಪಿಸಲಾಗಿದೆ.

‘ಗುರು ಶಿಷ್ಯರು’ ಎಂಬ ಟೈಟಲ್​ ಕೇಳಿದ ತಕ್ಷಣ ಮೊದಲು ನೆನಪಾಗುವುದೇ ಕಾಮಿಡಿ. ಶರಣ್​ ಸಿನಿಮಾ ಎಂದರೆ ಅಭಿಮಾನಿಗಳು ಮೊದಲು ಬಯಸುವುದೇ ಕಾಮಿಡಿ. ಆದರೂ ಕೂಡ ನಿರ್ದೇಶಕರು ಈ ಸಿನಿಮಾದಲ್ಲಿ ಕಾಮಿಡಿಗಿಂತಲೂ ಹೆಚ್ಚಾಗಿ ಖೊಖೊ ಆಟಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಆ ಕಾರಣದಿಂದಲೇ ಶರಣ್​ ನಟನೆಯ ಚಿತ್ರಗಳ ಪಟ್ಟಿಯಲ್ಲಿ ‘ಗುರು ಶಿಷ್ಯರು’ ಸಿನಿಮಾ ಬೇರೆಯದೇ ರೀತಿಯಲ್ಲಿ ಗುರುತಿಸಿಕೊಳ್ಳುತ್ತದೆ. ಈ ಚಿತ್ರದ ಮೊದಲಾರ್ಧದಲ್ಲಿ ಅವರು ಒಂದಷ್ಟು ನಗಿಸುತ್ತಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರು ಇಷ್ಟ ಆಗುವುದು ದ್ವಿತೀಯಾರ್ಧದ ದೃಶ್ಯಗಳಲ್ಲಿ. ಕ್ಲೈಮ್ಯಾಕ್ಸ್​ ವೇಳೆಗೆ ಅವರು ಸಂಪೂರ್ಣ ಎಮೋಷನಲ್​ ಆಗಿ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ.

ಅಪೂರ್ವ ಕಾಸರವಳ್ಳಿ ಅವರು ಈ ಸಿನಿಮಾದ ಸ್ಪೆಷಲ್​ ಪ್ಯಾಕೇಜ್​. ವಿಲನ್​ ಪಾತ್ರದಲ್ಲಿ ಅವರು ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ನಿಶ್ವಿಕಾ ನಾಯ್ಡು ಅವರ ಪಾತ್ರಕ್ಕೆ ಹೆಚ್ಚೇನೂ ಮಹತ್ವ ಇಲ್ಲ. ಸಿಕ್ಕ ಅವಕಾಶವನ್ನು ಅವರು ಸೂಕ್ತವಾಗಿ ಉಪಯೋಗಿಸಿಕೊಂಡಿದ್ದಾರೆ. ಶಾಲಾ ಮಕ್ಕಳ ಪಾತ್ರ ಮಾಡಿರುವ ಎಲ್ಲರ ಅಭಿನಯವೂ ಮೆಚ್ಚುವಂತಿದೆ. ಶರಣ್​ ಜೊತೆ ಕಾಮಿಡಿ ಕಿಕ್​ ನೀಡಲು ಮಸಲ್​ ಮಣಿ ಪ್ರಯತ್ನಿಸಿದ್ದಾರೆ. ಚಿತ್ರದುದ್ದಕ್ಕೂ ಅವರ ಪಾತ್ರ ಸಾಗಿಬರುತ್ತದೆ. ದತ್ತಣ್ಣ ಕೆಲವೇ ಹೊತ್ತು ಕಾಣಿಸಿಕೊಂಡರೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತುತ್ತಾರೆ.

ಮೊದಲೇ ಹೇಳಿದಂತೆ ಈ ಚಿತ್ರದ ವಿಶೇಷ ಅಂಶವೇ ಖೊಖೊ. ತಮ್ಮ ಊರನ್ನೇ ಪಣಕ್ಕೆ ಇಟ್ಟು ಖೊಖೊ ಆಟಲು ಸಜ್ಜಾಗುವ ಶಾಲಾ ಬಾಲಕರು ಮತ್ತು ಅವರ ಕೋಚ್​ ಏನೆಲ್ಲ ಕಷ್ಟಪಡುತ್ತಾರೆ ಎಂಬುದನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಚಿತ್ರಮಂದಿರದಲ್ಲಿ ಕುಳಿತು ರೋಚಕವಾದ ಖೊಖೊ ಪಂದ್ಯಗಳನ್ನು ನೋಡಿದ ಅನುಭವ ದೊರೆಯುತ್ತದೆ. ವಾವ್​ ಎನ್ನುವಂತಹ ಒಂದಷ್ಟು ದೃಶ್ಯಗಳು ಸೆಕೆಂಡ್​ ಹಾಫ್​ನಲ್ಲಿ ಹೈಲೈಟ್​ ಆಗಿವೆ. ಖೊಖೊ ಆಟದ ಉಳಿವಿನ ಬಗ್ಗೆಯೂ ಈ ಚಿತ್ರ ಮಾತನಾಡುತ್ತದೆ. ಆದರೆ ಅದನ್ನು ಭೋದನೆ ರೀತಿ ಹೇಳದೇ ಸೂಕ್ಷ್ಮವಾಗಿ ವಿವರಿಸುವ ಪ್ರಯತ್ನ ಆಗಿದೆ.

ಅಜನೀಶ್​ ಬಿ. ಲೋಕನಾಥ್​ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತದಿಂದ ಚಿತ್ರದ ಮೆರುಗು ಹೆಚ್ಚಿದೆ. ಆರೂರು ಸುಧಾಕರ್​ ಶೆಟ್ಟಿ ಛಾಯಾಗ್ರಹಣಕ್ಕೆ ಮೆಚ್ಚುಗೆ ಸಲ್ಲಲೇಬೇಕು. ಮಾಸ್ತಿ ಬರೆದಿರುವ ಸಂಭಾಷಣೆಗಳು ಸರಳ-ಸುಂದರವಾಗಿವೆ. ಡೈಲಾಗ್​ಗಳ ಮೂಲಕ ಅವರು ಇನ್ನಷ್ಟು ಕಾಮಿಡಿ ಕಚಗುಳಿ ಇಡಲು ಪ್ರಯತ್ನಿಸಿದ್ದರೆ ಚೆನ್ನಾಗಿರುತ್ತಿತ್ತು.

ಒಟ್ಟಾರೆಯಾಗಿ ‘ಗುರು ಶಿಷ್ಯರು’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಒಂದು ಗಮನಾರ್ಹ ಪ್ರಯತ್ನ ಎನಿಸಿಕೊಳ್ಳುತ್ತದೆ. ಕ್ರೀಡಾಧಾರಿತ ಚಿತ್ರಗಳನ್ನು ಇಷ್ಟಪಡುವವರಿಗೆ ಈ ಸಿನಿಮಾ ಉತ್ತಮ ಆಯ್ಕೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:32 pm, Fri, 23 September 22