‘ಲವ್ 360’ ವಿಮರ್ಶೆ: ಮೊದಲು ಮುಗ್ಧ ಪ್ರೇಮದ ಅಚ್ಚರಿ, ನಂತರ ಮರ್ಡರ್ ಮಿಸ್ಟರಿ
Love 360 Movie Review: ಚೊಚ್ಚಲ ಸಿನಿಮಾದಲ್ಲೇ ನಟ ಪ್ರವೀಣ್ ಗಮನ ಸೆಳೆಯುವಂತೆ ಅಭಿನಯಿಸಿದ್ದಾರೆ. ನಟಿ ರಚನಾ ಇಂದರ್ ಪಾತ್ರ ಸ್ಪೆಷಲ್ ಆಗಿದೆ.
ಚಿತ್ರ: ಲವ್ 360
ನಿರ್ಮಾಣ: ಶಶಾಂಕ್, ಮಂಜುಳಾ ಮೂರ್ತಿ
ನಿರ್ದೇಶನ: ಶಶಾಂಕ್
ಪಾತ್ರವರ್ಗ: ಪ್ರವೀಣ್, ರಚನಾ ಇಂದರ್, ಗೋಪಾಲ ದೇಶಪಾಂಡೆ, ಮಹಂತೇಶ್, ಸುಜಿತ್, ಡ್ಯಾನಿ ಕುಟ್ಟಪ್ಪ, ಕಾವ್ಯಾ ಶಾಸ್ತ್ರಿ, ಸುಕನ್ಯಾ ಗಿರೀಶ್ ಮುಂತಾದವರು.
ಸ್ಟಾರ್: 3/5
‘ಜಗವೇ ನೀನು ಗೆಳತಿಯೇ..’ ಹಾಡಿನ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ ‘ಲವ್ 360’. ಹೊಸಬರ ಸಿನಿಮಾದ ಈ ಹಾಡು ಕೋಟಿಗಟ್ಟಲೆ ವೀಕ್ಷಣೆ ಕಂಡಿರುವುದು ವಿಶೇಷ. ಆ ಕಾರಣದಿಂದ ಹೈಪ್ ಹೆಚ್ಚಾಯಿತು. ಈಗ ಈ ಸಿನಿಮಾ ಬಿಡುಗಡೆ ಆಗಿದೆ. ‘ಮೊಗ್ಗಿನ ಮನಸು’, ‘ಕೃಷ್ಣನ್ ಲವ್ ಸ್ಟೋರಿ’, ‘ಕೃಷ್ಣ ಲೀಲಾ’ ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ಶಶಾಂಕ್ ಅವರು ಈ ಬಾರಿ ಹೊಸ ಪ್ರತಿಭೆಗಳ ಜೊತೆ ಸೇರಿ ‘ಲವ್ 360’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಮಿಡಲ್ ಕ್ಲಾಸ್ ಬದುಕಿನ ಕಥೆಗಳನ್ನು ನಿರೂಪಿಸುವಲ್ಲಿ ನಿರ್ದೇಶಕ ಶಶಾಂಕ್ ಫೇಮಸ್. ಈ ಬಾರಿಯೂ ಅವರು ಅಂಥ ಒಂದು ಕಹಾನಿಯನ್ನು ತೆರೆಗೆ ತಂದಿದ್ದಾರೆ. ಇಲ್ಲಿನ ಕಥಾನಾಯಕ ರಾಮ್ (ಪ್ರವೀಣ್) ಹಾಗೂ ಕಥಾನಾಯಕಿ ಜಾನಕಿ (ರಚನಾ) ಅನಾಥರು. ಜಾನಕಿಗೆ ಬುದ್ಧಿ ಚುರುಕಿಲ್ಲ. ನೆನಪು ಆಗಾಗ ಕೈ ಕೊಡುತ್ತದೆ. ಅವಳನ್ನು ಹೇಗಾದರೂ ಮಾಡಿ ಗುಣಪಡಿಸಬೇಕು ಎಂದು ರಾಮ್ ಪ್ರಯತ್ನಿಸುತ್ತಿರುವಾಗಲೇ ಖಳರ ಎಂಟ್ರಿ ಆಗುತ್ತದೆ. ಆರಂಭದಲ್ಲಿ ತುಂಬ ಸಿಂಪಲ್ ಎನಿಸುವ ಈ ಕಥೆ ಮಧ್ಯಂತರದ ಬಳಿಕ ಬೇರೆಯದೇ ರೂಪ ಪಡೆದುಕೊಳ್ಳುತ್ತದೆ. ಒಂದು ಮರ್ಡರ್ ಮಿಸ್ಟರಿ ಕಹಾನಿ ತೆರೆದುಕೊಳ್ಳುತ್ತದೆ.
ರಾಮ್-ಜಾನಕಿ ಮುಗ್ಧ ಪ್ರೇಮಿಗಳು. ಅವರಿಗೆ ಎದುರಾಗುವ ವಿಲನ್ಗಳೆಲ್ಲ ಕ್ರೂರ ಮನಸ್ಥಿತಿಯವರು. ಹೀಗೆ ಮುಗ್ಧತೆ ಮತ್ತು ಕ್ರೌರ್ಯದ ನಡುವಿನ ಸಮರದ ರೀತಿಯಲ್ಲಿ ಇಡೀ ಸಿನಿಮಾ ಮೂಡಿಬಂದಿದೆ. ಕೇವಲ ಲವ್ ಸ್ಟೋರಿ ಹೇಳಲು ನಿರ್ದೇಶಕರು ಇಡೀ ಸಿನಿಮಾವನ್ನು ಸೀಮಿತವಾಗಿಸಿಲ್ಲ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಅಂಶಗಳನ್ನೂ ಸೇರಿಸಿ ಇದನ್ನೊಂದು ಪತ್ತೇದಾರಿ ಸಿನಿಮಾವಾಗಿಸಿದ್ದಾರೆ. ಹಾಗಾಗಿ ಇದು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
ಮೊದಲಾರ್ಧದಲ್ಲಿ ರಾಮ್ ಮತ್ತು ಜಾನಕಿಯ ಕ್ಯೂಟ್ ಪ್ರೇಮಕಥೆಯೇ ಹೆಚ್ಚು ಸ್ಪೇಸ್ ಪಡೆದುಕೊಂಡಿದೆ. ಇದರಿಂದ ಪ್ರೇಕ್ಷಕರಿಗೆ ಸ್ವಲ್ಪ ಎಳೆದಾಡಿದಂತೆ ಅನಿಸಬಹುದು. ಆದರೆ ದ್ವಿತೀಯಾರ್ಧದಲ್ಲಿ ಚಿತ್ರಕ್ಕೆ ಹೊಸ ವೇಗ ಸಿಕ್ಕಿದೆ. ಇಲ್ಲಿ ಪ್ರತಿ ಪಾತ್ರಗಳೂ ಮಹತ್ವದ ತಿರುವುಗಳನ್ನು ನೀಡುತ್ತ ಪ್ರೇಕ್ಷಕರನ್ನು ರಂಜಿಸುತ್ತವೆ. ಮಹಾಂತೇಶ್, ಸುಜಿತ್, ಸುಕನ್ಯಾ ಗಿರೀಶ್ ಮಾಡಿರುವ ಪಾತ್ರಗಳು ಸರ್ಪ್ರೈಸ್ ನೀಡುತ್ತವೆ. ಅಷ್ಟರಮಟ್ಟಿಗೆ ಟ್ವಿಸ್ಟ್ಗಳನ್ನು ಇಟ್ಟಿದ್ದಾರೆ ನಿರ್ದೇಶಕರು.
ನಟ ಪ್ರವೀಣ್ ಅವರಿಗೆ ಇದು ಮೊದಲ ಸಿನಿಮಾ. ಆದರೆ ಓರ್ವ ಅನುಭವಿ ನಟನ ರೀತಿಯಲ್ಲಿ ಅವರು ಅಭಿನಯಿಸಿದ್ದಾರೆ. ಈ ಹಿಂದೆ ‘ಹೆಂಗೆ ನಾವು..’ ಎಂದು ಫೇಮಸ್ ಆಗಿದ್ದ ರಚನಾ ಇಂದರ್ ಅವರು ‘ಲವ್ 360’ ಸಿನಿಮಾದಲ್ಲಿ ಹಳೇ ಇಮೇಜ್ ಬದಲಾಗುವ ರೀತಿಯಲ್ಲಿ ನಟಿಸಿದ್ದಾರೆ. ಗೋಪಾಲ್ ದೇಶಪಾಂಡೆ ಅವರ ನಟನೆ ಕೂಡ ಗಮನ ಸೆಳೆಯುವಂತಿದೆ. ಡ್ಯಾನಿ ಕುಟ್ಟಪ್ಪ ಅವರು ಎಂದಿನಂತೆ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವ ಖಳನಾಗಿ ಮಿಂಚಿದ್ದಾರೆ.
ಫ್ಯಾಮಿಲಿ ಸಮೇತ ಕುಳಿತು ನೋಡಬಹುದಾದ ಚಿತ್ರದಲ್ಲಿ ಇರಬೇಕಾದ ಎಲ್ಲ ಅಂಶಗಳು ಈ ‘ಲವ್ 360’ ಸಿನಿಮಾದಲ್ಲಿದೆ. ನಗುವಿನ ಕಚಗುಳಿ ಇರಿಸುವ ಕಾಮಿಡಿ ದೃಶ್ಯಗಳಿವೆ. ಆ್ಯಕ್ಷನ್ ಇಷ್ಟಪಡುವವರಿಗಾಗಿ ಫೈಟಿಂಗ್ ಸೀನ್ಗಳಿವೆ. ಬುದ್ಧಿಗೆ ಕೆಲಸ ಕೊಡುವ ಪ್ರೇಕ್ಷಕರಿಗಾಗಿ ಮರ್ಡರ್ ಮಿಸ್ಟರಿ ಇದೆ. ಎಲ್ಲವೂ ಸೇರಿ ಒಂದೊಳ್ಳೆಯ ಮನರಂಜನೆ ಸಿಗುತ್ತದೆ. ಯಾವುದೂ ಕೂಡ ಸಿನಿಮಾದ ಆಶಯವನ್ನು ಮೀರದ ಹಾಗೆ ನಿರ್ದೇಶಕರು ನೋಡಿಕೊಂಡಿದ್ದಾರೆ.
ತಾಂತ್ರಿಕವಾಗಿಯೂ ಈ ಚಿತ್ರ ಅಚ್ಚುಕಟ್ಟಾಗಿದೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರದ ಪ್ಲಸ್ ಪಾಯಿಂಟ್. ಅಭಿಲಾಷ್ ಕಲಾಥಿ ಅವರ ಛಾಯಾಗ್ರಹಣ ಸಹ ಗಮನ ಸೆಳೆಯುವಂತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.