Hoysala Review: ಹೆಚ್ಚಿಗೆ ಸುತ್ತಾಡಿದರೂ ಮೆಚ್ಚುಗೆ ಗಳಿಸುವ ಹೊಯ್ಸಳ; ಆ್ಯಕ್ಷನ್​ ಜೊತೆ ಜಾತಿ, ಪ್ರೀತಿ, ನೀತಿ ಇತ್ಯಾದಿ..

|

Updated on: Mar 30, 2023 | 2:39 PM

Daali Dhananjay | Hoysala Movie Review: ಖಾಕಿ​ ಗತ್ತಿನಲ್ಲಿ ಡಾಲಿ ಧನಂಜಯ್​ ಅಬ್ಬರಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಅವರು ವಿಲನ್​ಗಳ ಬೆಂಡೆತ್ತಿದ್ದಾರೆ. ‘ಹೊಯ್ಸಳ’ ಚಿತ್ರದ ಪ್ಲಸ್​ ಏನು? ಮೈನಸ್​ ಏನು? ಇಲ್ಲಿದೆ ಉತ್ತರ..

Hoysala Review: ಹೆಚ್ಚಿಗೆ ಸುತ್ತಾಡಿದರೂ ಮೆಚ್ಚುಗೆ ಗಳಿಸುವ ಹೊಯ್ಸಳ; ಆ್ಯಕ್ಷನ್​ ಜೊತೆ ಜಾತಿ, ಪ್ರೀತಿ, ನೀತಿ ಇತ್ಯಾದಿ..
ಡಾಲಿ ಧನಂಜಯ್
Follow us on

ಚಿತ್ರ: ಗುರುದೇವ್​ ಹೊಯ್ಸಳ

ನಿರ್ಮಾಣ: ಕೆಆರ್​ಜಿ ಸ್ಟುಡಿಯೋಸ್

ನಿರ್ದೇಶನ: ವಿಜಯ್​ ಎನ್​.

ಇದನ್ನೂ ಓದಿ
Triple Riding Movie Review: ‘ತ್ರಿಬಲ್​ ರೈಡಿಂಗ್​’ ರೇಸ್​ನಲ್ಲಿ ಓವರ್​ಟೇಕ್​ ಮಾಡಿದ ಸಾಧುಕೋಕಿಲ, ರಂಗಾಯಣ ರಘು
Shubhamangala: ‘ಶುಭಮಂಗಳ’ ಸಿನಿಮಾ ವಿಮರ್ಶೆ; ಇದು ಆರು ಪ್ರೇಮಕಥೆಗಳ ಸುಂದರ ಸಂಕಲನ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Guru Shishyaru Review: ರೋಚಕ ಖೊಖೊ ಪಂದ್ಯದ ಜೊತೆ ಹಿತ-ಮಿತವಾದ ಕಾಮಿಡಿ

ಪಾತ್ರವರ್ಗ: ಡಾಲಿ ಧನಂಜಯ್​, ಅಮೃತಾ ಅಯ್ಯಂಗಾರ್​, ನವೀನ್​ ಶಂಕರ್, ಅನಿರುದ್ಧ್​ ಭಟ್​, ಮಯೂರಿ ನಟರಾಜ್​, ಅಚ್ಯುತ್​ ಕುಮಾರ್​, ರಾಜೇಶ್​ ನಟರಂಗ ಮುಂತಾದವರು.

ಸ್ಟಾರ್​: 3/5

ನಟ ಧನಂಜಯ್​ ಅವರು ಎಲ್ಲ ಬಗೆಯ ಪಾತ್ರಗಳನ್ನು ಪ್ರಯತ್ನಿಸುತ್ತಾರೆ. ಆ ಕಾರಣದಿಂದ ಅವರ ಪ್ರತಿಯೊಂದು ಸಿನಿಮಾ ಕೂಡ ಅಭಿಮಾನಿಗಳಿಗೆ ಸ್ಪೆಷಲ್​ ಎನಿಸುತ್ತದೆ. ಈಗ ಅವರು ‘ಹೊಯ್ಸಳ’ ಸಿನಿಮಾ ಮೂಲಕ ಪೊಲೀಸ್​ ಅಧಿಕಾರಿಯಾಗಿ ಜನರ ಮುಂದೆ ಬಂದಿದ್ದಾರೆ. ರಾಮ ನವಮಿ ಪ್ರಯುಕ್ತ ಈ ಚಿತ್ರ ಅದ್ದೂರಿಯಾಗಿ ರಿಲೀಸ್​ ಆಗಿದೆ. ವಿಜಯ್​ ಎನ್​. ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಡಾಲಿಗೆ ಜೋಡಿಯಾಗಿ ಅಮೃತಾ ಐಯ್ಯಂಗಾರ್​ ನಟಿಸಿದ್ದಾರೆ. ಅಭಿಮಾನಿಗಳಿಗೆ ಇವರಿಬ್ಬರ ಕಾಂಬಿನೇಷನ್​ ಬಗ್ಗೆ ವಿಶೇಷ ಪ್ರೀತಿ ಇದೆ. ಟ್ರೇಲರ್​ ಮೂಲಕ ‘ಹೊಯ್ಸಳ’ ಚಿತ್ರ ನಿರೀಕ್ಷೆ ಮೂಡಿಸಿತ್ತು. ಹಾಗಾದರೆ ಪೂರ್ತಿ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

ಆ್ಯಂಗ್ರಿ ಯಂಗ್​ ಮ್ಯಾನ್​ ಡಾಲಿ:

ಚಿತ್ರರಂಗದಲ್ಲಿ ಪೊಲೀಸ್​ ಕಥೆಗಳಿಗೆ ಕೊರತೆ ಏನೂ ಇಲ್ಲ. ಲೆಕ್ಕವಿಲ್ಲದಷ್ಟು ಹೀರೋಗಳು ಪೊಲೀಸ್​ ಸಮವಸ್ತ್ರ ಧರಿಸಿ ಕ್ಯಾಮೆರಾ ಎದುರಿಸಿದ್ದಾರೆ. ಮತ್ತೆ ಅಂಥದ್ದೇ ಪಾತ್ರ ಮಾಡಬೇಕು ಅಂದರೆ ಅದರಲ್ಲಿ ಏನೋ ಹೊಸತನ ಇರಲೇಬೇಕು. ಡಾಲಿ ಧನಂಜಯ್​ ಅವರು ಈ ಬಾರಿ ಗುರುದೇವ್ ಎಂಬ ಪೊಲೀಸ್​ ಅಧಿಕಾರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಫ್​ ಆ್ಯಂಡ್​ ಟಫ್​, ಆ್ಯಂಗ್ರಿ ಯಂಗ್​ ಮ್ಯಾನ್​ ರೀತಿಯ ಪಾತ್ರ ಇದು. ತಪ್ಪು ಮಾಡಿದವರಿಗೆ ಮುಲಾಜಿಲ್ಲದೇ ಶಿಕ್ಷೆ ನೀಡುವ ಪೊಲೀಸ್​ ಆಗಿ ಡಾಲಿ ಮಿಂಚಿದ್ದಾರೆ. ಹಾಗಂತ ಗುರುದೇವ್ ಪಾತ್ರ ಒಂದು ಸೂಪರ್​ ಹೀರೋ ರೀತಿಯಲ್ಲಿ ಇಲ್ಲ. ಆತನಿಗೂ ಇತಿ-ಮಿತಿಗಳಿವೆ. ಅದೆಲ್ಲವನ್ನೂ ದಾಟಿಕೊಂಡು ಆತ ಹೇಗೆ ಲಾ ಆ್ಯಂಡ್​ ಆರ್ಡರ್​ ಕಾಪಾಡುತ್ತಾನೆ ಎಂಬುದು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

‘ಹೊಯ್ಸಳ’ ಚಿತ್ರದ ಕಥೆ:

ನಾಪತ್ತೆಯಾದ ಪೊಲೀಸ್​ ಅಧಿಕಾರಿಯೊಬ್ಬರನ್ನು ಹುಡುಕಲು ಮತ್ತೊಬ್ಬ ಖಡಕ್​ ಅಧಿಕಾರಿ ಗುರುದೇವ್​ (ಧನಂಜಯ್) ನೇಮಕವಾಗುತ್ತಾನೆ. ಆ ತನಿಖೆಯ ವೇಳೆ ಮರಳು ಮಾಫಿಯಾ ಎದುರಾಗುತ್ತದೆ. ಅದರ ಜೊತೆಗೆ ಇಬ್ಬರು ಪ್ರೇಮಿಗಳು ಸಿಕ್ಕಿ ಹಾಕಿಕೊಳ್ಳುತ್ತಾರೆ. ಅವರ ಪ್ರೇಮ್​ ಕಹಾನಿಯನ್ನು ಕೆದಕಿದಾಗ ಜಾತಿ ತಾರತಮ್ಯದ ಪಿಡುಗು ಕಾಣಿಸಿಕೊಳ್ಳುತ್ತದೆ. ಅಲ್ಲಿಂದ ಕಥೆ ಬೇರೆಯದೇ ತಿರುವು ಪಡೆದುಕೊಂಡು ಮರ್ಯಾದೆ ಹತ್ಯೆವರೆಗೂ ಸಾಗುತ್ತದೆ. ಈ ಎಲ್ಲ ಅಂಶಗಳನ್ನು ಒಂದಕ್ಕೊಂದು ಪೋಣಿಸಿ ಸಿನಿಮಾ ಮಾಡಿದ್ದಾರೆ ನಿರ್ದೇಶಕರು.

ಇದನ್ನೂ ಓದಿ: Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ

ಮನರಂಜನೆ ಜೊತೆಗೆ ಮೆಸೇಜ್​:

ಮರ್ಯಾದೆ ಹತ್ಯೆ ಘಟನೆಗಳು ಆಗಾಗ ವರದಿ ಆಗುತ್ತಲೇ ಇವೆ. ಆ ಕುರಿತು ಅನೇಕ ಸಿನಿಮಾಗಳು ಬಂದಿವೆ. ಅದೇ ವಿಚಾರವನ್ನು ‘ಹೊಯ್ಸಳ’ ಸಿನಿಮಾ ಬೇರೆ ರೀತಿಯಲ್ಲಿ ಹೇಳುತ್ತದೆ. ಜಾತಿ ಪಿಡುಗಿನ ಬಗ್ಗೆ ಮೆಸೇಜ್​ ನೀಡುತ್ತದೆ. ಒಂದಷ್ಟು ನೀತಿ ಪಾಠವನ್ನೂ ಮಾಡುತ್ತದೆ. ಹಾಗಂತ ಎಲ್ಲಿಯೂ ಬೋರು ಹೊಡೆಸುವುದಿಲ್ಲ. ಕಮರ್ಷಿಯಲ್ ಆಯಾಮಗಳನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದೇಶಕ ವಿಜಯ್ ಅವರು ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ.

ಪಾತ್ರಧಾರಿಗಳ ನಟನೆ ಹೇಗಿದೆ?

ಗುರುದೇವ್​ ಎಂಬ ಪೊಲೀಸ್​ ಅಧಿಕಾರಿಯ ಪಾತ್ರಕ್ಕೆ ಧನಂಜಯ್​ ಅವರು ನ್ಯಾಯ ಒದಗಿಸಿದ್ದಾರೆ. ಅವರ ವಿರುದ್ಧ ವಿಲನ್​ ಆಗಿ ಅಬ್ಬರಿಸಿರುವ ಅವಿನಾಶ್​ ಬಿಎಸ್​ ಕೂಡ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಲಿ ಎಂಬ ಖಳನಾಯಕನಾಗಿ ಕಾಣಿಸಿಕೊಂಡಿರುವ ನವೀನ್​ ಶಂಕರ್​ ಅವರ ನಟನೆ ಗಮನಾರ್ಹವಾಗಿದೆ. ಹೊಸ ನಟ ಅನಿರುದ್ಧ್​ ಭಟ್​ ಭರವಸೆ ಮೂಡಿಸಿದ್ದಾರೆ. ನಟಿ ಮಯೂರಿ ನಟರಾಜ್​ ಸಹ ಉತ್ತಮವಾಗಿ ಅಭಿನಯಿಸಿದ್ದಾರೆ. ಅಮೃತಾ ಅಯ್ಯಂಗಾರ್​ ನಿಭಾಯಿಸಿರುವ ಪಾತ್ರಕ್ಕೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ. ಕೆಲವೇ ಹೊತ್ತು ತೆರೆಮೇಲೆ ಕಾಣಿಸಿಕೊಂಡು ನಗಿಸುತ್ತಾರೆ ನಾಗಭೂಷಣ್​.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ತಂತ್ರಜ್ಞರ ಕೆಲಸಕ್ಕೂ ಚಪ್ಪಾಳೆ:

ತಾಂತ್ರಿಕವಾಗಿ ‘ಹೊಯ್ಸಳ’ ಸಿನಿಮಾ ಅಚ್ಚುಕಟ್ಟಾಗಿದೆ. ಅಜನೀಶ್​ ಬಿ. ಲೋಕನಾಥ್​ (ಸಂಗೀತ), ಕಾರ್ತಿಕ್​ ಎಸ್​ (ಛಾಯಾಗ್ರಹಣ), ದೀಪು ಎಸ್​. ಕುಮಾರ್​ (ಸಂಕಲನ) ಅವರು ತಮ್ಮತಮ್ಮ ವಿಭಾಗಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಮಾಸ್ತಿ ಅವರ ಸಂಭಾಷಣೆಯಿಂದಾಗಿ ಹಲವು ದೃಶ್ಯಗಳ ತೂಕ ಹೆಚ್ಚಿದೆ. ದಿಲೀಪ್​ ಸುಬ್ಬರಾಯನ್​ ಹಾಗೂ ಅರ್ಜುನ್ ರಾಜ್​ ಅವರ ಸಾಹಸ ಸಂಯೋಜನೆಯಲ್ಲಿ ಮೂಡಿಬಂದಿರುವ ಫೈಟಿಂಗ್​ ದೃಶ್ಯಗಳು ಆ್ಯಕ್ಷನ್​ ಪ್ರಿಯರ ಚಪ್ಪಾಳೆ ಗಿಟ್ಟಿಸುತ್ತವೆ.

ಹೆಚ್ಚಾಯಿತು ‘ಹೊಯ್ಸಳ’ ಸುತ್ತಾಟ:

‘ಹೊಯ್ಸಳ’ ಪೊಲೀಸ್​ ಗಸ್ತುಪಡೆಯ ವಾಹನ ಊರೆಲ್ಲ ಸುತ್ತು ಹಾಕುತ್ತದೆ. ಅದೇ ರೀತಿ ಈ ಸಿನಿಮಾದ ಕಥೆ ಕೂಡ ಸಿಕ್ಕಾಪಟ್ಟೆ ಸುತ್ತಾಟ ನಡೆಸಿದೆ. ಆ ಬಗ್ಗೆ ನಿರ್ದೇಶಕರು ಕೊಂಚ ಗಮನ ಹರಿಸಿದ್ದರೆ ಸಿನಿಮಾವನ್ನು ಇನ್ನಷ್ಟು ಮೊನಚಾಗಿಸುವ ಸಾಧ್ಯತೆ ಇತ್ತು. ದ್ವಿತೀಯಾರ್ಧದಲ್ಲಿ ಬರುವ ರೊಮ್ಯಾಂಟಿಕ್​ ಹಾಡು ಕೂಡ ಕಥೆಯ ಓಟಕ್ಕೆ ಅಡ್ಡಗಾಲು ಹಾಕಿದಂತಿದೆ. ಲಾಜಿಕಲ್​ ಪ್ರಶ್ನೆಗಳನ್ನೆಲ್ಲ ಬದಿಗಿಟ್ಟು ನೋಡಿದರೆ ‘ಹೊಯ್ಸಳ’ ಇಷ್ಟ ಆಗುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.