Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್​

|

Updated on: Mar 15, 2024 | 4:07 PM

‘ಕೆರೆಬೇಟೆ’ ಸಿನಿಮಾದಲ್ಲಿ ಗೌರಿಶಂಕರ್​ ಅವರು ಒಂದು ಡಿಫರೆಂಟ್​ ಆದಂತಹ ಪಾತ್ರ ಮಾಡಿದ್ದಾರೆ. ನಿರ್ದೇಶಕ ರಾಜ್​ಗುರು ಅವರು ಮಲೆನಾಡಿನ ಹಿನ್ನೆಲೆಯಲ್ಲಿ ಸಸ್ಪೆನ್ಸ್​ ತುಂಬಿದ ಕಥೆಯನ್ನು ತೆರೆಗೆ ತಂದಿದ್ದಾರೆ. ಪ್ರತಿಭಾವಂತ ಕಲಾವಿದರಿಂದ ಈ ಸಿನಿಮಾದ ಮೆರುಗು ಹೆಚ್ಚಿದೆ. ‘ಜನಮನ ಸಿನಿಮಾಸ್​’ ಮೂಲಕ ನಿರ್ಮಾಣ ಆಗಿರುವ ‘ಕೆರೆಬೇಟೆ’ ಸಿನಿಮಾದ ವಿಮರ್ಶೆ ಇಲ್ಲಿದೆ..

Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್​
ಕೆರೆಬೇಟೆ ಸಿನಿಮಾ ಪೋಸ್ಟರ್​
Follow us on

ಸಿನಿಮಾ: ಕೆರೆಬೇಟೆ. ನಿರ್ಮಾಣ: ಜಯಶಂಕರ್​ ಪಟೇಲ್​. ನಿರ್ದೇಶನ: ರಾಜ್​ಗುರು ಬಿ. ಪಾತ್ರವರ್ಗ: ಗೌರಿಶಂಕರ್​, ಬಿಂದು ಶಿವರಾಮ್​, ಗೋಪಾಲಕೃಷ್ಣ ದೇಶಪಾಂಡೆ, ಹರಿಣಿ ಶ್ರೀಕಾಂತ್​, ಸಂಪತ್​ ಮೈತ್ರೇಯ ಮುಂತಾದವರು. ಸ್ಟಾರ್​: 3.5/5

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ನಟ ಗೌರಿಶಂಕರ್​ (Gowrishankar) ಅವರು ಈ ಮೊದಲು ‘ಜೋಕಾಲಿ’, ‘ರಾಜಹಂಸ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಅವರು ‘ಕೆರೆಬೇಟೆ’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಈ ಬಾರಿ ಅವರು ವಿಶೇಷವಾದ ಒಂದು ಕಥಾಹಂದರವನ್ನು ಜನರ ಮುಂದಿಟ್ಟಿದ್ದಾರೆ. ಮಲೆನಾಡಿನ ಭಾಗದವರಾದ ಗೌರಿಶಂಕರ್​ ಅವರು ಆ ನೆಲದ ಕಹಾನಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ರಾಜ್​ಗುರು ಬಿ. ಅವರು ‘ಕೆರೆಬೇಟೆ’ (Kerebete) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಹೊಸ ನಟಿ ಬಿಂದು ಶಿವರಾಮ್​ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈವರೆಗೂ ಹಾಡು ಮತ್ತು ಟ್ರೇಲರ್​ ಮೂಲಕ ಗಮನ ಸೆಳೆದಿದ್ದ ಈ ಸಿನಿಮಾ ಇಂದು (ಮಾರ್ಚ್​ 15) ಬಿಡುಗಡೆ ಆಗಿದೆ. ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ (Kerebete Movie Review) ಓದಿ..

ನಿರ್ದೇಶಕ ರಾಜ್​ಗುರು ಅವರು ಕೂಡ ಸ್ಯಾಂಡಲ್​ವುಡ್​ನಲ್ಲಿ ಅನೇಕ ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಸ್ವತಂತ್ರ ನಿರ್ದೇಶಕರಾಗಿ ಅವರು ಆ್ಯಕ್ಷನ್​-ಕಟ್​ ಹೇಳಿರುವ ಮೊದಲ ಸಿನಿಮಾ ‘ಕೆರೆಬೇಟೆ’. ಗೌರಿಶಂಕರ್​ ಕೂಡ ಮಲೆನಾಡಿನವರೇ ಆದ್ದರಿಂದ ಅವರಿಗೆ ಆ ಭಾಗದ ಸಂಪ್ರದಾಯ, ಪದ್ಧತಿ, ಭಾಷೆಯ ಬಗ್ಗೆ ತಿಳಿದಿದೆ. ಅಲ್ಲಿನ ಸೊಗಡಿನಲ್ಲಿ ಅವರು ಒಂದು ಸಸ್ಪೆನ್ಸ್​ ಥ್ರಿಲ್ಲರ್​ ಕಥೆಯನ್ನು ‘ಕೆರೆಬೇಟೆ’ ಸಿನಿಮಾದಲ್ಲಿ ಹೇಳಿದ್ದಾರೆ. ಉತ್ತಮವಾದ ತಾಂತ್ರಿಕ ವರ್ಗ ಹಾಗೂ ಕಲಾವಿದರ ಬಳಗದಿಂದ ಈ ಸಿನಿಮಾವನ್ನು ಚೆನ್ನಾಗಿ ಕಟ್ಟಿಕೊಡಲು ಅವರಿಗೆ ಸಾಧ್ಯವಾಗಿದೆ.

ಹಳ್ಳಿಯಲ್ಲಿ ನಡೆಯುವ ಒಂದು ವಿಶೇಷವಾದ ಕಥೆ ‘ಕೆರೆಬೇಟೆ’ ಸಿನಿಮಾದಲ್ಲಿದೆ. ಮಲೆನಾಡಿನಲ್ಲಿ ಮೀನು ಹಿಡಿಯುವ ಆಚರಣೆಗೆ ಕೆರೆಬೇಟೆ ಎನ್ನುತ್ತಾರೆ. ಹಾಗಂತ ಇಡೀ ಸಿನಿಮಾದ ಕಥೆ ಈ ಪದ್ದತಿಯ ಮೇಲೆ ಇರುವುದಲ್ಲ. ಕೆರೆಬೇಟೆಯನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಒಂದು ಗಂಭೀರವಾದ ಕಹಾನಿಯನ್ನೇ ನಿರ್ದೇಶಕ ರಾಜ್​ಗುರು ಅವರು ಪ್ರಸ್ತುತಪಡಿಸಿದ್ದಾರೆ. ಕಥಾನಾಯಕ ಹುಲಿಮನೆ ನಾಗ (ಗೌರಿಶಂಕರ್​) ಓರ್ವ ಮುಂಗೋಪಿ. ಅವನಲ್ಲಿ ಕೆಲವು ನೆಗೆಟಿವ್​ ಗುಣಗಳು ಇವೆ. ಆದರೆ ಆತ ಸಂಪೂರ್ಣ ಕೆಟ್ಟವನಲ್ಲ. ಹೆಣ್ಣುಮಕ್ಕಳಿಗೆ ಗೌರವ ನೀಡುತ್ತಾನೆ. ಊರಿನ ಹುಡುಗಿಯರಿಗೆ ಯಾರಾದರೂ ಕಿರುಕುಳ ಕೊಟ್ಟರೆ ಅಂಥವರಿಗೆ ಅವನು ಕೂಡಲೇ ಪಾಠ ಕಲಿಸುತ್ತಾನೆ. ಆದರೆ ಕಥೆ ಸಾಗಿದಂತೆಲ್ಲ ಹುಲಿಮನೆ ನಾಗನೇ ಮಹಿಳೆಯರ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ. ಆಗ ಎದುರಾಗುವುದೇ ಟ್ವಿಸ್ಟ್​!

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿಗೆ ಹುಲಿಮನೆ ನಾಗ ಚಿತ್ರಹಿಂಸೆ ನೀಡುತ್ತಾನೆ. ಅಷ್ಟಕ್ಕೂ ಕಥಾನಾಯಕನೇ ಇಂಥ ದುಷ್ಟ ವ್ಯಕ್ತಿಯಾಗಿ ಬದಲಾಗುತ್ತಾನೆ ಎಂದಾಗ ಪ್ರೇಕ್ಷಕರ ಮನದಲ್ಲಿ ದೊಡ್ಡ ಪ್ರಶ್ನೆ ಮೂಡುತ್ತದೆ. ಅವನು ಆ ರೀತಿ ಬದಲಾಗಲು ಕಾರಣ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು. ಇಂಥ ಒಂದು ಪಾತ್ರವನ್ನು ಆಯ್ದುಕೊಳ್ಳುವ ಮೂಲಕ ನಟ ಗೌರಿಶಂಕರ್​ ಅವರು ರಿಸ್ಕಿ ಆದಂತಹ ಪ್ರಯೋಗ ಮಾಡಿದ್ದಾರೆ. ಪ್ರೇಕ್ಷಕರ ಕಣ್ಣಿನಲ್ಲಿ ಒಳ್ಳೆಯವನಾಗಿ ಕಾಣಿಸಿಕೊಳ್ಳಲು ಎಲ್ಲ ಹೀರೋಗಳು ಬಯಸುತ್ತಾರೆ. ಆದರೆ ಗೌರಿಶಂಕರ್​ ಅವರು ನೆಗೆಟಿವ್​ ಶೇಡ್​ ಇರುವ ಪಾತ್ರವನ್ನು ಒಪ್ಪಿಕೊಂಡು ಧೈರ್ಯ ತೋರಿಸಿದ್ದಾರೆ.

ಇದನ್ನೂ ಓದಿ: Blink Movie Review: ಟೈಮ್​ ಟ್ರಾವೆಲ್​ ಮೂಲಕ ಸ್ಯಾಂಡಲ್​ವುಡ್​ಗೆ ಬಂದ ಈಡಿಪಸ್​

ಕಥೆಯ ಒಂದು ಹಂತದಲ್ಲಿ ಕಥಾನಾಯಕನೇ ಖಳನಾಯಕನಾಗುತ್ತಾನೆ. ಅದೇ ‘ಕೆರೆಬೇಟೆ’ ಸಿನಿಮಾದ ಹೈಲೈಟ್​. ‘ನಮ್ಮ ಮಗನನ್ನು ಸಾಯಿಸಿಬಿಡಿ’ ಎಂದು ಹೀರೋ ತಾಯಿಯೇ ಪೊಲೀಸರ ಮುಂದೆ ಕಣ್ಣೀರಿಡುತ್ತಾ ಮನವಿ ಮಾಡಿಕೊಳ್ಳುತ್ತಾಳೆ. ಇಷ್ಟೆಲ್ಲ ಕೆಟ್ಟಗುಣಗಳು ಇರುವ ವ್ಯಕ್ತಿಯನ್ನ ನಿರ್ದೇಶಕರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬ ಕೌತುಕ ಮೂಡುತ್ತದೆ. ಈ ಸಿನಿಮಾ ಪ್ರೀ-ಕ್ಲೈಮ್ಯಾಕ್ಸ್​ ಹಂತಕ್ಕೆ ಬಂದಾಗ ಮಾತ್ರ ಎಲ್ಲವೂ ಅರ್ಥ ಆಗುತ್ತದೆ. ವಿಲನ್ ಆಗಿ ಬದಲಾದ ಹೀರೋ ಬಗ್ಗೆ ಅಸಲಿ ಸಂಗತಿಗಳು ಬಯಲಾಗುತ್ತವೆ. ಸುಲಭಕ್ಕೆ ಊಹಿಸಲು ಸಾಧ್ಯವಾಗದ ಒಂದು ಟ್ವಿಸ್ಟ್ ಎದುರಾಗುತ್ತದೆ. ಈ ಎಲ್ಲ ಕಾರಣಗಳಿಂದ ‘ಕೆರೆಬೇಟೆ’ ಸಿನಿಮಾ ವಿಶೇಷ ಎನಿಸಿಕೊಳ್ಳುತ್ತದೆ.

ರಫ್​ ಆ್ಯಂಡ್​ ಟಫ್​ ಹಳ್ಳಿ ಹೈದನಾಗಿ ಗೌರಿಶಂಕರ್​ ಅವರು ನಟಿಸಿದ್ದಾರೆ. ಸಾಗರ, ಸೊರಬ ಭಾಗದ ಗ್ರಾಮೀಣ ಸೊಗಡಿನಲ್ಲಿ ಅವರು ಡೈಲಾಗ್​ ಹೊಡೆದಿದ್ದಾರೆ. ಕಥಾನಾಯಕಿಯ ತಂದೆ ಪಾತ್ರದಲ್ಲಿ ನಟಿಸಿರುವ ಗೋಪಾಲಕೃಷ್ಣ ದೇಶಪಾಂಡೆ ಅವರ ನಟನೆಗೆ ಈ ಸಿನಿಮಾದಲ್ಲಿ ಹೆಚ್ಚು ಸ್ಕೋಪ್​ ಇದೆ. ನಟಿ ಬಿಂದು ಶಿವರಾಮ್​ ಅವರು ಚೊಚ್ಚಲ ಚಿತ್ರದಲ್ಲೇ ಗಮನಾರ್ಹವಾಗಿ ನಟಿಸಿದ್ದಾರೆ. ನಟಿ ಹರಿಣಿ ಅವರು ಕೂಡ ಸಿನಿಮಾದ ತೂಕ ಹೆಚ್ಚಲು ಕಾರಣರಾಗಿದ್ದಾರೆ. ಕೆರೆಬೇಟೆಯ ಬಗ್ಗೆ ತಿಳಿಸುತ್ತಾ, ಸ್ಪೆಸ್ಪೆನ್ಸ್​ ಆಗಿರುವ ಕಥೆಯನ್ನು ನಿರ್ದೇಶಕ ರಾಜ್​ಗುರಿ ಅವರು ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ: Karataka Damanaka review: ಹುಟ್ಟಿದೂರಿನ ಮಹತ್ವ ಸಾರುವ ಸಿನಿಮಾದಲ್ಲಿ ಏನಿದೆ? ಏನಿಲ್ಲ?

ಕಥಾನಾಯಕ ಕೆಟ್ಟವನಾಗಿ ಬದಲಾದ ನಂತರ ಪ್ರೇಕ್ಷಕರ ಗೊಂದಲ ಹೆಚ್ಚುತ್ತದೆ. ಆತನ ದುಷ್ಟತನ ಮಿತಿ ಮೀರಿದಾಗ ಪ್ರೇಕ್ಷಕರ ತಾಳ್ಮೆ ಕೆಡುತ್ತದೆ. ಆದರೂ ಕೂಡ ಕೊನೆವರೆಗೂ ತಾಳ್ಮೆಯಿಂದ ಸಿನಿಮಾ ನೋಡುವ ಪ್ರೇಕ್ಷಕರಿಗೆ ಅಸಲಿಯತ್ತು ತಿಳಿಯುತ್ತದೆ. ಇಂಥ ರಿಸ್ಕಿ ಆದಂತಹ ನಿರೂಪಣೆ ಈ ಸಿನಿಮಾದಲ್ಲಿದೆ. ರಿಸ್ಕಿ ಯಾಕೆಂದರೆ, ಈ ಪ್ರಯೋಗವನ್ನು ಪ್ರೇಕ್ಷಕಕರು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ. ಕೆಲವು ಬೈಗುಳಗಳಿಗೆ ಕತ್ತರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ. ಯಾಕೆಂದರೆ ಕಥಾನಾಯಕನ ಬಾಯಲ್ಲಿ ಪದೇ ಪದೇ ಬರುವ ಅಂತಹ ಸಂಭಾಷಣೆಯಿಂದ ಚಿತ್ರಕ್ಕೆ ಹೆಚ್ಚೇನೂ ಸಹಕಾರಿ ಆಗಿಲ್ಲ.

ಕೀರ್ತನ್​ ಪೂಜಾರಿ ಅವರ ಛಾಯಾಗ್ರಹಣದಿಂದ ಸಿನಿಮಾದ ಮೆರುಗು ಹೆಚ್ಚಿದೆ. ಹಾಡುಗಳಿಗಿಂತಲೂ ಹಿನ್ನೆಲೆ ಸಂಗೀತದಲ್ಲಿ ಗಗನ್​ ಬಡೇರಿಯಾ ಅವರು ಹೆಚ್ಚು ಗಮನ ಸೆಳೆಯುತ್ತಾರೆ. ಮರ್ಯಾದೆಗೇಡು ಹತ್ಯೆಯಂತಹ ಗಂಭೀರ ವಿಷಯ ಈ ಸಿನಿಮಾದಲ್ಲಿದೆ. ಅದನ್ನು ಬೇರೆ ರೀತಿಯಲ್ಲಿ ಹೇಳಿದ ಕಾರಣಕ್ಕೆ ‘ಕೆರೆಬೇಟೆ’ ಸಿನಿಮಾ ಡಿಫರೆಂಟ್​ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.