‘ಲೋಕಃ’ ಸಿನಿಮಾ ವಿಮರ್ಶೆ; ಮಲಯಾಳಂನಲ್ಲಿ ಉದಯಿಸಿದ ಮಹಿಳಾ ಸೂಪರ್ ಹೀರೋ

- Time - 151 Minutes
- Released - Agust 28, 2025
- Language - Malayalam
- Genre - Fantasy/Adventure
ಹಾಲಿವುಡ್ನಲ್ಲಿ ಹಲವು ಸೂಪರ್ ಹೀರೋ, ಸೂಪರ್ ನ್ಯಾಚುರಲ್ ಹಾಗೂ ಫ್ಯಾಂಟಸಿ ಕಥೆಗಳು ಬಂದು ಹೋಗಿವೆ. ಇದನ್ನು ಭಾರತದಲ್ಲೂ ಕೆಲ ನಿರ್ದೇಶಕರು ಪ್ರಯತ್ನಿಸಿದ್ದಾರೆ. ಈ ಪೈಕಿ ಒಂದಷ್ಟು ಯಶಸ್ಸು ಕಂಡರೆ ಮತ್ತೂ ಒಂದಷ್ಟು ಫ್ಲಾಪ್ ಆಗಿವೆ. ಮಲಯಾಳಂನ ‘ಲೋಕಃ:ಚಾಪ್ಟರ್-1, ಚಂದ್ರ’ ಹೊಸ ಪ್ರಯತ್ನ. ಇದರಲ್ಲಿ ನಿರ್ದೇಶಕ ಅರುಣ್ ಅವರು ಯಶಸ್ಸು ಕಂಡಿದ್ದಾರೆ.
ಚಂದ್ರ (ಕಲ್ಯಾಣಿ ಪ್ರಿಯದರ್ಶನ್) ಸ್ವೀಡನ್ನಿಂದ ಬೆಂಗಳೂರಿಗೆ ಬಂದು ನೆಲೆಸುತ್ತಾಳೆ. ರಾತ್ರಿ ಹೋಟೆಲ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ಆಕೆಗೆ ಸನ್ನಿ (ನಸ್ಲೆನ್) ಪರಿಚಯ ಆಗುತ್ತದೆ. ಹೆಚ್ಚು ಹೊರ ಜಗತ್ತಿನ ಜೊತೆ ಬೆರೆಯದಂತೆ ಆಕೆಗೆ ಸೂಚನೆ ಇರುತ್ತದೆ. ಆದರೆ, ಅವಳು ಅಂದುಕೊಂಡಂತೆ ಅಲ್ಲಿ ಯಾವುದೂ ನಡೆಯೋದಿಲ್ಲ. ಎಲ್ಲವೂ ಕೈ ಮೀರುತ್ತದೆ. ಆಕೆ ಬೆಂಗಳೂರಿಗೆ ಬರಲು ಕಾರಣ ಏನು? ಸನ್ನಿ ಜೊತೆಗಿನ ಭೇಟಿ ಪೂರ್ವ ನಿಯೋಜಿತವೇ ಎಂಬುದನ್ನು ಸಿನಿಮಾದಲ್ಲೇ ನೋಡಿ ತಿಳಿದುಕೊಳ್ಳಬೇಕು.
ಭಾರತದಲ್ಲಿ ಸೂಪರ್ ಹೀರೋ ಸಿನಿಮಾಗಳು ಬಂದಿದ್ದು ಬೆರಳೆಣಿಕೆ ಮಾತ್ರ. ಈಗ ‘ಲೋಕಃ’ ಅದಕ್ಕೆ ಹೊಸ ಸೇರ್ಪಡೆ. ಭಾರತದಲ್ಲಿ ಮಹಿಳೆಯೊಬ್ಬರು ಸೂಪರ್ ಹೀರೋ ಪಾತ್ರ ಮಾಡಿದ್ದು ಇದೇ ಮೊದಲು. ಕಲ್ಯಾಣಿ ಪ್ರಿಯದರ್ಶನ್ ಅವರು ಸೂಪರ್ ಹೀರೋ ಪಾತ್ರದ ಮೂಲಕ ಇಷ್ಟ ಆಗುತ್ತಾರೆ. ರೊಮ್ಯಾಂಟಿಕ್ ಗರ್ಲ್ ಆಗಿ ಇಷ್ಟ ಆಗುತ್ತಿದ್ದ ಕಲ್ಯಾಣಿ ಈ ಸಿನಿಮಾದಲ್ಲಿ ಬೇರೆಯದೇ ರೀತಿಯ ಪಾತ್ರ ಮಾಡಿದ್ದಾರೆ. ಸಿನಿಮಾ ಉದ್ದಕ್ಕೂ ಅವರ ಪಾತ್ರ ಹೈಲೈಟ್ ಆಗುತ್ತದೆ.
ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡ ಕಲ್ಯಾಣಿ ಅವರ ನಟನೆ ಪ್ರತಿ ಫ್ರೇಮ್ನಲ್ಲೂ ಅಚ್ಚುಕಟ್ಟಾಗಿ ಬಂದಿದೆ. ಆರಂಭದಲ್ಲಿ ಕಲ್ಯಾಣಿಯ ಸೌಂದರ್ಯಕ್ಕೆ ಎಲ್ಲರೂ ಫಿದಾ ಆದರೆ, ನಂತರ ಅವರ ಬೇರೆಯದೇ ಮುಖ ತೆರೆದುಕೊಳ್ಳುತ್ತದೆ. ನಲ್ಸೆನ್ ಪಾತ್ರಕ್ಕೂ ಸಾಕಷ್ಟು ಒತ್ತು ಹಾಗೂ ತೂಕವಿದೆ. ಅವರು ತಮ್ಮ ಸಹಜ ನಟನೆಯಿಂದ ಎಲ್ಲರನ್ನೂ ನಗಿಸುತ್ತಾರೆ.
ಸೂಪರ್ ಹೀರೋ ಸಿನಿಮಾ ಎಂದಾಗ ಮೊದಲೇ ಹುಟ್ಟಿದ ಒಬ್ಬ ವಿಲನ್ ಇರುತ್ತಾನೆ. ಆತನಿಗೂ ಒಂದು ವಿಶೇಷ ಶಕ್ತಿ ಇರುತ್ತದೆ. ಇಲ್ಲಿಯೂ ಓರ್ವ ವಿಲನ್ ಇದ್ದಾನೆ. ಆತನೇ ಪೋಲಿಸ್ ಇನ್ಸ್ಪೆಕ್ಟರ್ ನಾಚಿಯಪ್ಪ ಗೌಡ. ಸ್ಯಾಂಡಿ ಈ ಪಾತ್ರ ಅದ್ಭುತವಾಗಿ ನಿರ್ವಹಿಸಿದ್ದಾರೆ. ಅವರು ಹಂತ ಹಂತವಾಗಿ ಸೂಪರ್ ವಿಲನ್ ಆಗುತ್ತಾರೆ. ಅವರ ಟ್ರಾನ್ಸ್ಫಾರ್ಮೇಷನ್ಗೂ ಒಂದು ಕಾರಣ ಇದೆ. ಅದೇನೆಂಬುದು ಸಿನಿಮಾ ನೋಡಿ ತಿಳಿದುಕೊಳ್ಳಬೇಕು. ಸಣ್ಣ ಪುಟ್ಟ ಪಾತ್ರಗಳು ಹೀಗೆ ಬಂದು ಹಾಗೆ ಹೋಗುತ್ತವೆ. ಇನ್ನು, ಅತಿಥಿ ಪಾತ್ರಗಳು ಸಾಕಷ್ಟಿವೆ. ಟುವಿನೋ ಥಾಮಸ್, ಸನ್ನಿ ವೈನೆ, ದುಲ್ಖರ್ ಸಲ್ಮಾನ್, ಸೌಬಿನ್ ಶಾಹಿರ್ ಸಿನಿಮಾದ ಹೈಲೈಟ್ಗಳಲ್ಲಿ ಒಂದು. ಅವರು ಯಾಕೆ ಬರುತ್ತಾರೆ ಎಂಬ ಪ್ರಶ್ನೆಗೆ ಸಿನಿಮಾದಲ್ಲೇ ಉತ್ತರ ಕಂಡುಕೊಳ್ಳಬೇಕು. ಕೆಲವು ಪ್ರಶ್ನೆಗೆ ಉತ್ತರ ಹುಡುಕಿದರೂ ಸಿಗೋದಿಲ್ಲ.
ನಿರ್ದೇಶಕ ಅರುಣ್ ಅವರು ಒಂದೊಳ್ಳೆಯ ಗ್ರಿಪ್ ಆದ ಕಥೆಯನ್ನು ಪ್ರೇಕ್ಷಕರ ಎದುರು ಇಟ್ಟಿದ್ದಾರೆ. ಅವರು ಸೂಪರ್ ಹೀರೋ ಕಥೆಯನ್ನು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರ ನಿರ್ದೇಶನ ಪ್ರಬುದ್ಧತೆಯಿಂದ ಕೂಡಿದೆ. ಸಿನಿಮಾದ ದೊಡ್ಡ ಬಲದಲ್ಲಿ ವಿಎಫ್ಎಕ್ಸ್ ಕೂಡ ಒಂದು. ಬರಹದಿಂದ ಅರುಣ್ ಇಷ್ಟ ಆಗುತ್ತಾರೆ. ಅದರಲ್ಲೂ, ಚಂದ್ರನ ಹಿನ್ನೆಲೆ, ಆಕೆ ಹೀಗೆ ಆಗಲು ಕಾರಣ ಏನು ಎಂಬುದರ ಸ್ಪಷ್ಟತೆಯನ್ನು ಪ್ರೇಕ್ಷಕರಿಗೆ ಕೊಡುವ ಕೆಲಸ ಅವರಿಂದ ಆಗಿದೆ. ಅನೇಕ ಕಡೆಗಳಲ್ಲಿ ಗೂಸ್ಬಂಪ್ಸ್ ದೃಶ್ಯಗಳೂ ಇವೆ. ಬಿಜಿಎಂ ಕೂಡ ಸಿನಿಮಾನ ಮತ್ತಷ್ಟು ಚೆಂದ ಕಾಣಿಸಿದೆ. ಛಾಯಾಗ್ರಹಣ ಕೂಡ ಭಿನ್ನ ಆಯಾಮದೊಂದಿಗೆ ಮೂಡಿ ಬಂದಿದೆ.
ದುಲ್ಖರ್ ಸಲ್ಮಾನ್ ನಟನೆಯ ‘ಬೆಂಗಳೂರು ಡೇಸ್’ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದ ಕಥೆ ಸಾಗೋದು ಬೆಂಗಳೂರಿನಲ್ಲಿ. ಈಗ ಅವರು ನಿರ್ಮಾಣ ಮಾಡಿರೋ ‘ಚಂದ್ರ’ ಚಿತ್ರದ ಸಂಪೂರ್ಣ ಕಥೆ ನಮ್ಮ ಬೆಂಗಳೂರಿನಲ್ಲೇ ಸಾಗುತ್ತದೆ. ಇದು ಮಲಯಾಳಂ ಚಿತ್ರವಾದರೂ ಅನೇಕ ಕಡೆಗಳಲ್ಲಿ ಕನ್ನಡ ಬಳಕೆ ಆಗಿದೆ. ಈ ಕಾರಣಕ್ಕೂ ಸಿನಿಮಾ ಕನ್ನಡಿಗರಿಗೆ ಆಪ್ತ ಎನಿಸುತ್ತದೆ. ಕಡಿಮೆ ಬಜೆಟ್ನಲ್ಲಿ ಒಳ್ಳೆಯ ಸೆಟ್ಗಳನ್ನು ಹಾಕಿ, ಉತ್ತಮ ವಿಎಫ್ಎಕ್ಸ್ ಮಾಡಿ ಸಿನಿಮಾ ಮಾಡೋದು ಹೇಗೆ ಎಂಬುದನ್ನು ನಿರ್ಮಾಪಕ ದುಲ್ಖರ್ ತೋರಿಸಿಕೊಟ್ಟಿದ್ದಾರೆ.
ಸಿನಿಮಾದಲ್ಲಿ ಅನೇಕ ಪಾತ್ರಗಳು ಬಂದು ಹೋಗುತ್ತವೆ. ಆ ಪಾತ್ರಗಳ ಹಿನ್ನೆಲೆ ಬಗ್ಗೆ ಅಲ್ಲಿ ವಿವರ ಇಲ್ಲ. ಕೆಲವು ಪಾತ್ರಗಳು ಹೆಚ್ಚು ಆಳ ಹೊಂದಿಲ್ಲ. ಬಹುಶಃ ಮುಂದಿನ ಚಾಪ್ಟರ್ ಬಂದರೆ ಆ ಬಗ್ಗೆ ವಿವರಣೆ ಸಿಗಬಹುದು. ಹೀಗೆ ಕೆಲವು ಸಣ್ಣ ಪುಟ್ಟ ವಿಚಾರಗಳನ್ನು ನಿರ್ಲಕ್ಷಿಸಿದರೆ ಸಿನಿಮಾ ಇಷ್ಟ ಆಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




