
ಇತ್ತೀಚಿನ ವರ್ಷಗಳಲ್ಲಿ ಅಪ್ಪಟ ಹಳ್ಳಿಗಾಡಿನ ಕಥೆ ಇರುವ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಆ ಕೊರತೆಯನ್ನು ನೀಗಿಸುವಂತಹ ಚಿತ್ರವಾಗಿ ‘ಪ್ರೇಮದ ಊರಲಿ’ ಸಿನಿಮಾ ಮೂಡಿಬಂದಿದೆ. ಇದು ಬರೀ ಗ್ರಾಮೀಣ ಸೊಗಡಿನ ಕಥೆ ಇರುವ ಸಿನಿಮಾ ಮಾತ್ರವಲ್ಲ. ಇದರಲ್ಲಿ ಎಮೋಷನಲ್ ಆದಂತಹ ಪ್ರೇಮಕಥೆ ಕೂಡ ಇದೆ. ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆಯುವಂತಹ ಗುಣ ಈ ಸಿನಿಮಾಗಿದೆ. ಮಮತಾ ದೇವೇಂದ್ರ, ಪ್ರಶಾಂತ ಡಿಎಸ್, ರಮೇಶ್ ಎನ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಪ್ರೇಮದ ಊರಲಿ’ ಚಿತ್ರದ ವಿಮರ್ಶೆ ಇಲ್ಲಿದೆ..
ನಿರ್ದೇಶಕ ಮನೋಜ್ ಕುಮಾರ್ ಅವರು ‘ಪ್ರೇಮದ ಊರಲಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ಅವರು ‘ಅಕ್ಷಿ’ ಸಿನಿಮಾ ಮಾಡಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದ್ದರು. ಈ ಬಾರಿ ಅವರು ಒಂದು ಪಕ್ಕಾ ಕೌಟುಂಬಿಕ ಕಥೆಯನ್ನು ತೆರೆಗೆ ತಂದಿದ್ದಾರೆ. ಸೂಕ್ತವಾದ ಪಾತ್ರವರ್ಗ ಹಾಗೂ ತಾಂತ್ರಿಕ ಬಳಗ ಅವರಿಗೆ ಸಾಥ್ ನೀಡಿದೆ. ಹಾಗಾಗಿ ‘ಪ್ರೇಮದ ಊರಲಿ’ ಸಿನಿಮಾ ಒಂದು ಅಚ್ಚುಕಟ್ಟು ಪ್ರಯತ್ನವಾಗಿ ಮೂಡಿಬಂದಿದೆ.
ಕೃಷಿ ನಂಬಿಕೊಂಡಿರುವ ಯುವಕರಿಗೆ ಹೆಣ್ಣು ಕೊಡಲು ಯಾರೂ ಮುಂದೆಬರುವುದಿಲ್ಲ. ಹಳ್ಳಿಯಲ್ಲಿ ಇರುವ ಯುವತಿಯರು ನಗರದ ಜೀವನಕ್ಕೆ ಆಕರ್ಷಿತರಾಗುತ್ತಿದ್ದಾರೆ. ಹಾಗಾಗಿ ರೈತ ಕುಟುಂಬದಲ್ಲಿ ಹುಟ್ಟಿದ ಯುವಕರಿಗೆ ಮದುವೆಯೇ ಒಂದು ಸವಾಲಾಗಿದೆ ಎಂಬುದು ತಿಳಿದಿರುವ ವಿಷಯ. ಇದೇ ಅಂಶವನ್ನು ಕೇಂದ್ರವಾಗಿ ಇಟ್ಟುಕೊಂಡು ಮನೋಜ್ ಕುಮಾರ್ ಅವರು ‘ಪ್ರೇಮದ ಊರಲಿ’ ಸಿನಿಮಾವನ್ನು ಮಾಡಿದ್ದಾರೆ.
ಹಾಗಂತ ‘ಪ್ರೇಮದ ಊರಲಿ’ ಸಿನಿಮಾದ ಕಥೆ ಇಷ್ಟು ಸಿಂಪಲ್ ಆಗಿಲ್ಲ. ಇದನ್ನು ಒಂದು ಸಾಕ್ಷ್ಯಚಿತ್ರದ ರೀತಿಯೂ ಅವರು ತೋರಿಸಿಲ್ಲ. ರೈತ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂಬುದನ್ನು ಕೇಂದ್ರಬಿಂದುವಾಗಿ ಮಾತ್ರ ಇಟ್ಟುಕೊಂಡು, ಅದರ ಸುತ್ತ ಒಂದು ಸುಂದರವಾದ ಪ್ರೇಮಕಥೆಯನ್ನು ತೋರಿಸಲಾಗಿದೆ. ಅಲ್ಲಿ ತ್ರಿಕೋನ ಪ್ರೇಮಕಥೆ ಕೂಡ ಹೈಲೈಟ್ ಆಗಿದೆ. ಕೌಟುಂಬಿಕ ಮೌಲ್ಯಗಳನ್ನು ಉತ್ತಮವಾಗಿ ಕಟ್ಟಿಕೊಡಲಾಗಿದೆ.
ಪತ್ನಿಯನ್ನು ಕಳೆದುಕೊಂಡ ನಾಗಣ್ಣ (ರಂಗಾಯಣ ರಘು) ಇನ್ನೊಂದು ಮದುವೆ ಆಗಲು ಒಪ್ಪುವುದಿಲ್ಲ. ಮಗ ಸಂತುನನ್ನು (ಶ್ರೀರಾಮ್) ತುಂಬಾ ಪ್ರೀತಿಯಿಂದ ನಾಗಣ್ಣ ಸಾಗುತ್ತಾನೆ. ಆದರೆ ವಿದ್ಯಾಭ್ಯಾಸ ಎಂದರೆ ಸಂತುಗೆ ಅಷ್ಟಕಷ್ಟೇ. ಶಾಲೆಗೆ ಹೋಗದ ಮಗನಿಗೆ ಪದವಿ ಓದಿದ ಹುಡುಗಿ ತಂದು ಮದುವೆ ಮಾಡಬೇಕು ಎಂಬುದು ನಾಗಣ್ಣನ ಆಸೆ. ಆದರೆ ವಿದ್ಯೆ ಇಲ್ಲದೇ ಬರೀ ಕೃಷಿಕನಾಗಿರುವ ಸಂತುಗೆ ಯಾರೂ ಹೆಣ್ಣು ಕೊಡಲ್ಲ. ಇಂಥ ಸವಾಲಿನ ನಡುವೆಯೂ, ವಿದೇಶ ಸುತ್ತಿಬಂದ ಓರ್ವ ಸುಶಿಕ್ಷಿತ ಹುಡುಗಿಯ ಜೊತೆ ಸಂತು ಮದುವೆ ಆಗುತ್ತದೆ! ಆ ಮದುವೆ ಹೇಗೆ ನಡೆಯಿತು? ಅದರೊಳಗೆ ಇರುವ ಟ್ವಿಸ್ಟ್ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ಯಾವುದೇ ಸಂಬಂಧದಲ್ಲಿ ನಂಬಿಕೆಯೇ ಬಹಳ ಮುಖ್ಯ ಎಂಬುದನ್ನು ತುಂಬಾ ಚೆನ್ನಾಗಿ ಮನವರಿಕೆ ಮಾಡಿಕೊಡಲು ನಿರ್ದೇಶಕರು ಈ ಸಿನಿಮಾ ಮೂಲಕ ಪ್ರಯತ್ನಿಸಿದ್ದಾರೆ. ತಂದೆ-ಮಗನ ಸೆಂಟಿಮೆಂಟ್, ಪ್ರೇಮಿಗಳ ಸಂಬಂಧ, ಗಂಡ-ಹೆಂಡತಿ ನಡುವಿನ ಪ್ರೀತಿ, ಅಣ್ಣ-ತಂಗಿಯ ಬಾಂಧವ್ಯ ಸೇರಿದಂತೆ ಹಲವು ಭಾವನೆಗಳು ಈ ಸಿನಿಮಾದಲ್ಲಿ ಹೈಲೈಟ್ ಆಗಿವೆ. ಜೊತೆಗೆ ತಿಳಿಯಾದ ಹಾಸ್ಯ ಮತ್ತು ಮಿತವಾದ ಆ್ಯಕ್ಷನ್ ಕೂಡ ಇದೆ. ಒಟ್ಟಾರೆಯಾಗಿ ಈ ಸಿನಿಮಾ ಒಂದು ಮನರಂಜನೆಯ ಪ್ಯಾಕೇಜ್ ಆಗಿದೆ.
ಸುನಾದ್ ಗೌತಮ್ ಅವರು ಸಂಗೀತ ನೀಡಿರುವ ಹಾಡುಗಳಿಂದ ‘ಪ್ರೇಮದ ಊರಲಿ’ ಸಿನಿಮಾದ ಭಾವತೀವ್ರತೆ ಹೆಚ್ಚಿದೆ. ರಾಜ್ಕಾಂತ್ ಅವರ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ. ರಂಗಾಯಣ ರಘು ಅವರು ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಆರಂಭದಿಂದ ಕೊನೆಯ ತನಕ ಆ ಪಾತ್ರದ ಸುತ್ತವೇ ಕಥೆ ಸುತ್ತುತ್ತದೆ. ನಟ ಶ್ರೀರಾಮ್ ಅವರ ವೃತ್ತಿಜೀವನದ ಬೆಸ್ಟ್ ಚಿತ್ರವಾಗಿ ‘ಪ್ರೇಮದ ಊರಲಿ’ ಮೂಡಿಬಂದಿದೆ. ನಟಿ ಇಳಾ ವಿಟ್ಲಾ ಅವರು ಅಜ್ಜಿಯ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ನಾಯಕಿಯರಾದ ತಪಸ್ವಿನಿ ಪೂಣಚ್ಚ ಮತ್ತು ರಮಿಕಾ ಶಿವು ಅವರು ಚಪ್ಪಾಳೆ ಗಿಟ್ಟಿಸುತ್ತಾರೆ.
ಇದನ್ನೂ ಓದಿ: ಈ ವಾರ ರಿಲೀಸ್ ಆಗುತ್ತಿವೆ ಹಲವಾರು ಸಿನಿಮಾಗಳು: ಪಟ್ಟಿ ಇಲ್ಲಿದೆ ನೋಡಿ
‘ಪ್ರೇಮದ ಊರಲಿ’ ಸಿನಿಮಾದ ಒಟ್ಟಾರೆ ನಿರೂಪಣೆಯು ಹಳೇ ಶೈಲಿಯಲ್ಲಿದೆ. ಚಿತ್ರದ ಅವಧಿ ಕೊಂಚ ದೀರ್ಘ ಎನಿಸುತ್ತದೆ ಕೂಡ. ಈ ಬಗ್ಗೆ ನಿರ್ದೇಶಕರು ಗಮನ ಹರಿಸಿದ್ದರೆ ಸಿನಿಮಾ ಇನ್ನೂ ಚೆನ್ನಾಗಿರುತ್ತಿತ್ತು. ಕೆಲವೇ ಕೆಲವು ಸಣ್ಣ-ಪುಟ್ಟ ಮೈನಸ್ ಅಂಶಗಳ ನಡುವೆಯೂ ಇದೊಂದು ಉತ್ತಮ ಸಿನಿಮಾ ಎನಿಸಿಕೊಳ್ಳುತ್ತದೆ. ಪ್ರೇಮಿಗಳು, ದಂಪತಿಗಳು ಜೊತೆಯಾಗಿ ನೋಡಿದರೆ ಹೆಚ್ಚು ಕನೆಕ್ಟ್ ಆಗುತ್ತದೆ. ಫ್ಯಾಮಿಲಿ ಪ್ರೇಕ್ಷಕರು ಹಲವು ದೃಶ್ಯಗಳಲ್ಲಿ ಭಾವುಕರಾಗುವುದು ಖಚಿತ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:00 pm, Fri, 25 September 26