Vikalpa Film Review: ಸೈಕಲಾಜಿಕಲ್ ಥ್ರಿಲ್ಲರ್ ಕಥೆಯ ಅಚ್ಚುಕಟ್ಟು ಸಿನಿಮಾ ‘ವಿಕಲ್ಪ’

Vikalpa Film Review: ಸೈಕಲಾಜಿಕಲ್ ಥ್ರಿಲ್ಲರ್ ಕಥೆಯ ಅಚ್ಚುಕಟ್ಟು ಸಿನಿಮಾ ‘ವಿಕಲ್ಪ’
Vikalpa Film Review
Image Credit source: Tv9 Kannada
ವಿಕಲ್ಪ
UA
  • Time - 113 Minutes
  • Released - January 30, 2026
  • Language - Kannada
  • Genre - Mystery, Psychological, Thriller
Cast - ಪೃಥ್ವಿರಾಜ್ ಪಾಟೀಲ್, ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್, ಗಣಪತಿ ಹೆಗಡೆ ವಡ್ಡಿನಗದ್ದೆ ಮುಂತಾದವರು.
Director - ಪೃಥ್ವಿರಾಜ್ ಪಾಟೀಲ್
3
Critic's Rating

Updated on: Jan 30, 2026 | 5:24 PM

ಕನ್ನಡದಲ್ಲಿ ಸೈಕಲಾಜಿಕಲ್ ಥ್ರಿಲ್ಲರ್ (Psychological Thriller) ಸಿನಿಮಾಗಳ ಸಂಖ್ಯೆ ಕಡಿಮೆ. ಈ ಪ್ರಕಾರದ ಸಿನಿಮಾಗಳಿಗೆ ಪ್ರೇಕ್ಷಕರನ್ನು ಸೆಳೆದುಕೊಳ್ಳುವ ಗುಣ ಇರುತ್ತದೆ. ಕೊನೆಯ ತನಕ ಕುತೂಹಲ ಜಾಗೃತವಾಗಿಯೇ ಇರುತ್ತದೆ. ಅಂಥ ಸಿನಿಮಾಗಳ ಸಾಲಿಗೆ ‘ವಿಕಲ್ಪ’ (Vikalpa Movie) ಕೂಡ ಸೇರ್ಪಡೆ ಆಗಿದೆ. ಜನವರಿ 30ರಂದು ರಿಲೀಸ್ ಆಗಿರುವ ಈ ಸಿನಿಮಾದಲ್ಲಿ ಪೃಥ್ವಿರಾಜ್ ಪಾಟೀಲ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಲ್ಲದೇ, ಅವರೇ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮಾನಸಿಕ ಸಮಸ್ಯೆಗಳ ಒಂದಷ್ಟು ಆಯಾಮಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಇಂದಿರಾ ಶಿವಸ್ವಾಮಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

‘ವಿಕಲ್ಪ’ ಚಿತ್ರದ ಕಥಾನಾಯಕ ಚಿಕ್ಕ ವಯಸ್ಸಿನಲ್ಲಿ ಏನನ್ನೋ ನೋಡಿ ಹೆದರಿಕೊಂಡಿರುತ್ತಾನೆ. ಆ ಭಯ 33ನೇ ವಯುಸ್ಸಿನ ತನಕವೂ ಕಾಡುತ್ತಲೇ ಇರುತ್ತದೆ. ಹಗಲು-ರಾತ್ರಿ, ನಗರ-ಹಳ್ಳಿ, ದೇಶ-ವಿದೇಶ ಎನ್ನದೇ ಎಲ್ಲ ಜಾಗದಲ್ಲೂ ಎಲ್ಲ ಸಮಯದಲ್ಲೂ ಆತನಿಗೆ ವಿಚಿತ್ರವಾದ ಅನುಭವ ಆಗುತ್ತದೆ. ಅದರಿಂದ ಅವನ ಜೀವನದಲ್ಲಿ ಹಲವು ತೊಂದರೆಗಳು ಉಂಟಾಗುತ್ತವೆ. ಅಂತಿಮವಾಗಿ ಅದಕ್ಕೆ ಯಾವ ರೀತಿಯ ಪರಿಹಾರ ಸಿಗುತ್ತದೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಬೆಂಗಳೂರು ಮತ್ತು ಮಲೆನಾಡಿನ ಹಲವು ಪ್ರದೇಶಗಳಲ್ಲಿ ‘ವಿಕಲ್ಪ’ ಸಿನಿಮಾವನ್ನು ಚಿತ್ರಿಸಲಾಗಿದೆ. ಆಯಾ ಪ್ರದೇಶ ಮತ್ತು ಆ ಪ್ರದೇಶದ ಪಾತ್ರಗಳಿಗೆ ತಕ್ಕಂತೆ ಸಂಭಾಷಣೆಯನ್ನು ಬರೆಯಲಾಗಿದೆ. ಆ ಮೂಲಕ ಸಿನಿಮಾ ಹೆಚ್ಚು ನೈಜವಾಗಿ ಮೂಡಿಬರುವಂತೆ ನೋಡಿಕೊಳ್ಳಲಾಗಿದೆ. ಕಥೆಯ ಶುರುವಿನಿಂದ ಅಂತ್ಯದ ತನಕ ಸಸ್ಪೆನ್ಸ್ ಕಾಪಾಡಿಕೊಳ್ಳಲಾಗಿದೆ.

ಸಿನಿಮಾದ ಆರಂಭದಲ್ಲಿ ಹಾಸ್ಯ ಮತ್ತು ಹಾರರ್ ಅಂಶಗಳಿಗೆ ಒತ್ತು ನೀಡಲಾಗಿದೆ. ಕಥಾನಾಯಕನ ಅನುಭವಕ್ಕೆ ಬರುತ್ತಿರುವ ವಿಚಿತ್ರ ಘಟನೆಗಳನ್ನು ತೋರಿಸುವಾಗ ಹಾರರ್ ಸಿನಿಮಾ ನೋಡಿದ ಅನುಭವ ಆಗುತ್ತದೆ. ಆ ಘಟನೆಗಳಿಗೆ ಕಾರಣ ಏನಿರಬಹುದು ಎಂಬ ಕುತೂಹಲ ಪ್ರತಿ ಹಂತದಲ್ಲೂ ಮೂಡುತ್ತದೆ. ಜೊತೆಗೆ ಒಂದು ಲವ್ ಸ್ಟೋರಿ ಕೂಡ ಈ ಸಿನಿಮಾದಲ್ಲಿದೆ. ತಾಯಿ ಸೆಂಟಿಮೆಂಟ್ ಕೂಡ ಜಾಗ ಪಡೆದುಕೊಂಡಿದೆ. ಈ ಎಲ್ಲ ಅಂಶಗಳನ್ನು ಸರಿದೂಗಿಸಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಯಕ್ಷಗಾನವನ್ನು ಒಂದು ಮುಖ್ಯ ಅಂಶವಾಗಿ ಬಳಸಿಕೊಳ್ಳಲಾಗಿದೆ.

‘ವಿಕಲ್ಪ’ ಕ್ಲೈಮ್ಯಾಕ್ಸ್​​ನಲ್ಲಿ ಒಂದಷ್ಟು ಮನೋವೈಜ್ಞಾನಿಕ ಅಂಶಗಳನ್ನು ಪ್ರೇಕ್ಷಕರಿಗೆ ತಿಳಿಸಲಾಗಿದೆ. ಆ ಮೂಲಕ ಮುಖ್ಯವಾದ ಸಂದೇಶ ನೀಡಲಾಗಿದೆ. ದೆವ್ವ-ಭೂತ ಎಂಬ ಮೌಢ್ಯ ಬಿತ್ತುವ ಸಿನಿಮಾಗಳ ನಡುವೆ ‘ವಿಕಲ್ಪ’ ಚಿತ್ರ ಒಂದು ಉತ್ತಮ ಪ್ರಯತ್ನವಾಗಿ ಇಷ್ಟ ಆಗುತ್ತದೆ. ಒಟ್ಟಾರೆ ಈ ಚಿತ್ರದ ಕಥೆ ಸಿಂಪಲ್ ಆಗಿದ್ದರೂ ಕೂಡ ಅದನ್ನು ಫ್ಲ್ಯಾಶ್​ಬ್ಯಾಕ್ ತಂತ್ರದ ಮೂಲಕ ಹೇಳಿದ್ದರಿಂದ ಕೊನೆವರೆಗೂ ಕುತೂಹಲ ಉಳಿಸಿಕೊಳ್ಳುತ್ತದೆ. ಆದರೆ ಕಥೆಯನ್ನು ಇನ್ನಷ್ಟು ರೋಚಕವಾಗಿಸಿದ್ದರೆ ‘ವಿಕಲ್ಪ’ ಸಿನಿಮಾ ಹೆಚ್ಚು ಆಪ್ತವಾಗಬಹುದಿತ್ತು.

ಇದನ್ನೂ ಓದಿ: Chowkidar Review: ಅಪ್ಪನ ಅಗಾಧ ಪ್ರೀತಿಯ ಪ್ಲಸ್, ಮೈನಸ್ ತೋರಿಸುವ ‘ಚೌಕಿದಾರ್’

ಪೃಥ್ವಿರಾಜ್ ಪಾಟೀಲ್ ಅವರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನುಳಿದ ಕಲಾವಿದರಾದ ನಾಗಶ್ರೀ ಹೆಬ್ಬಾರ್, ಸಂಧ್ಯಾ ವಿನಾಯಕ್, ಪೂಜಾ, ಸ್ವರೂಪ್ ಅವರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಕಾಮಿಡಿ ಪಾತ್ರದಲ್ಲಿ ಗಣಪತಿ ಹೆಗಡೆ ವಡ್ಡಿನಗದ್ದೆ ಅವರು ಸಖತ್ ರಿಲೀಫ್ ನೀಡುತ್ತಾರೆ. ಸಂವತ್ಸರ ಅವರ ಸಂಗೀತದಲ್ಲಿ ಮೂಡಿಬಂದ ಹಾಡುಗಳು ಚಿತ್ರಕ್ಕೆ ಪ್ಲಸ್ ಆಗಿವೆ. ಹಿನ್ನೆಲೆ ಸಂಗೀತ ಕೂಡ ಚೆನ್ನಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 5:23 pm, Fri, 30 January 26