LGM Movie: ಧೋನಿ ನಿರ್ಮಾಣದ ‘ಎಲ್ಜಿಎಂ’ ಫಸ್ಟ್ ಲುಕ್ ಬಿಡುಗಡೆ; ಫ್ಯಾಮಿಲಿ ಪ್ರೇಕ್ಷಕರೇ ಟಾರ್ಗೆಟ್
LGM Movie First Look: ‘ಎಲ್ಜಿಎಂ’ ಸಿನಿಮಾಗೆ ರಮೇಶ್ ತಮಿಳ್ಮಣಿ ನಿರ್ದೇಶನ ಮಾಡುತ್ತಿದ್ದಾರೆ. ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಧೋನಿ ಅವರು ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.
ಒಂದೆಡೆ ಎಂಎಸ್ ಧೋನಿ (MS Dhoni) ಅವರು ಐಪಿಎಲ್ ಅಂಗಳದಲ್ಲಿ ಮಿಂಚುತ್ತಿದ್ದಾರೆ. ಇನ್ನೊಂದೆಡೆ ಅವರು ಸಿನಿಮಾ ಕ್ಷೇತ್ರದಲ್ಲೂ ಸದ್ದು ಮಾಡುತ್ತಿದ್ದಾರೆ. ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ‘ಎಲ್ಜಿಎಂ’. ‘ಲೆಟ್ಸ್ ಗೆಟ್ ಮ್ಯಾರೀಡ್’ (Let’s Get Married) ಎಂಬುದು ಈ ಶೀರ್ಷಿಕೆಯ ವಿಸ್ತೃತ ರೂಪ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ‘ಎಲ್ಜಿಎಂ’ ಸಿನಿಮಾದ (LGM Movie) ಮೂಲಕ ಫ್ಯಾಮಿಲಿ ಪ್ರೇಕ್ಷಕರನ್ನು ಎಂ.ಎಸ್. ಧೋನಿ ಟಾರ್ಗೆಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡಿರುವ ಅವರು ಇಡೀ ತಂಡಕ್ಕೆ ವಿಶ್ ಮಾಡಿದ್ದಾರೆ. ‘ಎಲ್ಜಿಎಂ ಸಿನಿಮಾದ ಫಸ್ಟ್ಲುಕ್ ಬಿಡುಗಡೆ ಮಾಡಲು ಸಂತಸ ಆಗುತ್ತಿದೆ. ನಿಮ್ಮ ಮುಖದಲ್ಲಿ ನಗು ಮೂಡಿಸುವ ಫ್ಯಾಮಿಲಿ ಎಂಟರ್ಟೇನರ್ ಸಿನಿಮಾಗಾಗಿ ಸಿದ್ಧರಾಗಿ. ಇಡೀ ತಂಡಕ್ಕೆ ಆಲ್ ದ ಬೆಸ್ಟ್’ ಎಂದು ಎಂಎಸ್ ಧೋನಿ ಪೋಸ್ಟ್ ಮಾಡಿದ್ದಾರೆ.
‘ಎಲ್ಜಿಎಂ’ ಸಿನಿಮಾ ತಮಿಳಿನಲ್ಲಿ ಮೂಡಿಬರುತ್ತಿದೆ. ಚೈನ್ನೈ ಸೂಪರ್ ಕಿಂಗ್ಸ್ ಟೀಮ್ನ ನಾಯಕತ್ವ ವಹಿಸುವ ಮೂಲಕ ತಮಿಳುನಾಡಿನ ಅಭಿಮಾನಿಗಳ ಜೊತೆ ಧೋನಿ ವಿಶೇಷ ನಂಟು ಬೆಳೆಸಿಕೊಂಡಿದ್ದಾರೆ. ಹಾಗಾಗಿ ಅವರ ಪ್ರೊಡಕ್ಷನ್ ಹೌಸ್ ಮೂಲಕ ತಮಿಳು ಚಿತ್ರವನ್ನು ಅವರು ಮೊದಲು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್, ನದಿಯಾ, ಇವಾನಾ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ.
IPL 2023: ಶತಕ ಬಾರಿಸು ಎಂದ ಧೋನಿ ಫ್ಯಾನ್ಗೆ ಕೊಹ್ಲಿ ಪಾಠ ಕಲಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ವಿಕಾಸ್ ಹಸಿಜಾ ಅವರು ‘ಎಲ್ಜಿಎಂ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಫಸ್ಟ್ ಲುಕ್ ಬಿಡುಗಡೆ ಸಂದರ್ಭದಲ್ಲಿ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ‘ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ಶೀಘ್ರದಲ್ಲಿಯೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಲಿವೆ. ಈ ಸಿನಿಮಾ ಮೂಲಕ ತಮಿಳು ಚಿತ್ರೋದ್ಯಮದಲ್ಲಿ ನಮ್ಮ ಪಯಣ ಆರಂಭವಾಗಿದೆ’ ಎಂದು ಅವರು ಹೇಳಿದ್ದಾರೆ.
‘ಎಲ್ಜಿಎಂ’ ಸಿನಿಮಾಗೆ ರಮೇಶ್ ತಮಿಳ್ಮಣಿ ನಿರ್ದೇಶನ ಮಾಡುತ್ತಿದ್ದಾರೆ. ಹರೀಶ್ ಕಲ್ಯಾಣ್, ನದಿಯಾ, ಇವಾನಾ ಜೊತೆಗೆ ಯೋಗಿ ಬಾಬು, ಮಿರ್ಚಿ ವಿಜಯ್ ಮುಂತಾದವರು ನಟಿಸುತ್ತಿದ್ದಾರೆ. ರಮೇಶ್ ತಮಿಳ್ಮಣಿ ಅವರು ಆ್ಯಕ್ಷನ್-ಕಟ್ ಹೇಳುವುದರ ಜೊತೆಗೆ ಸಂಗೀತ ನಿರ್ದೇಶನದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ‘ಇದು ಹೊಸ ಪರಿಕಲ್ಪನೆಯ ಚಿತ್ರ. ಅನೇಕ ಸ್ವಾರಸ್ಯಕರ ಅಂಶಗಳು ಇದರಲ್ಲಿವೆ. ಪ್ರತಿಭಾನ್ವಿತ ಚಿತ್ರತಂಡ ಹಾಗೂ ತಾಂತ್ರಿಕ ಬಳಗ ಈ ಚಿತ್ರದಲ್ಲಿದೆ’ ಎಂದು ಸಿನಿಮಾ ಕ್ರಿಯೇಟಿವ್ ಹೆಡ್ ಪ್ರಿಯಾಂಶು ಚೋಪ್ರಾ ಹೇಳಿದ್ದಾರೆ.
‘ಧೋನಿ ಎಂಟರ್ಟೇನ್ಮೆಂಟ್’ ಸಂಸ್ಥೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದೆ. ದಳಪತಿ ವಿಜಯ್ ಮತ್ತು ಧೋನಿ ಅವರು ಒಂದು ಸಿನಿಮಾಗಾಗಿ ಕೈ ಜೋಡಿಸಲಿದ್ದಾರೆ ಎಂಬ ನಿರೀಕ್ಷೆ ಇದೆ. ಆದರೆ ಆ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಸಿಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:13 pm, Tue, 11 April 23