
ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿ ಮತ್ತು ರಾಕಿ ಭಾಯ್ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ನಟನೆಯ ಕುರಿತು ಹಿರಿಯ ನಟ ಮುಕೇಶ್ ಖನ್ನಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಣಬೀರ್ ಅವರ ‘ಅನಿಮಲ್’ ಸಿನಿಮಾದ ಶೇಡ್ಸ್ ಈ ಪಾತ್ರದ ಮೇಲೆ ಪ್ರಭಾವ ಬೀರಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರ ಜೊತೆ ಮಾತನಾಡಿದ ಮುಕೇಶ್ ಖನ್ನಾ ‘ಅನಿಮಲ್’ ಸಿನಿಮಾದ ನಂತರ ರಣಬೀರ್ ಕಪೂರ್ ಅವರಿಗೆ ಹೊಸ ಇಮೇಜ್ ಬಂದಿದೆ ಎಂದಿದ್ದಾರೆ. ಪ್ರೇಕ್ಷಕರು ರಣಬೀರ್ ಅವರನ್ನು ಅದೇ ಹಳೆಯ ಇಮೇಜ್ ಮೂಲಕ ನೋಡಬಾರದು ಎಂದು ಅವರು ಆಶಿಸಿದ್ದಾರೆ. ‘ಅನಿಮಲ್’ ಚಿತ್ರದಲ್ಲಿದ್ದ ರಣಬೀರ್ ಪಾತ್ರವು ಮಕ್ಕಳಿಗೆ ತಪ್ಪು ಸಂದೇಶ ನೀಡಿತ್ತು. ಆ ಚಿತ್ರದ ಶೈಲಿ ತಮಗೂ ವೈಯಕ್ತಿಕವಾಗಿ ಇಷ್ಟವಾಗಿರಲಿಲ್ಲ ಎಂದು ಮುಕೇಶ್ ಖನ್ನಾ ಬಹಿರಂಗವಾಗಿ ಹೇಳಿದ್ದಾರೆ.
ಇದೇ ವೇಳೆ ‘ರಾಮಾಯಣ’ ಚಿತ್ರದಲ್ಲಿ ನಟ ಯಶ್ ಅವರ ರಾವಣನ ಪಾತ್ರದ ಬಗ್ಗೆಯೂ ಅವರು ಮಾತನಾಡಿದ್ದಾರೆ. ಟ್ರೇಲರ್‌ನಲ್ಲಿ ರಾವಣನ ಪಾತ್ರಕ್ಕೆ ಶ್ರೀರಾಮನಿಗಿಂತ ಹೆಚ್ಚಿನ ಪ್ರಾಮುಖ್ಯತೆ ನೀಡುವುದು ಸರಿಯಲ್ಲ ಎಂದಿದ್ದಾರೆ. ಶ್ರೀರಾಮನಿಗಿಂತ ರಾವಣನೇ ಹೆಚ್ಚಾಗಿ ಕಾಣಿಸಿಕೊಂಡರೆ ಭಕ್ತರ ನಂಬಿಕೆಗೆ ಧಕ್ಕೆಯಾಗಲಿದೆ. ಮಹಾಭಾರತದಲ್ಲಿ ತಾವು ಭೀಷ್ಮ ಪಾತ್ರ ಮಾಡಲು ಉತ್ತಮ ಸಂಭಾಷಣೆಗಳೇ ಕಾರಣವಾಗಿದ್ದವು ಎಂದು ಅವರು ನೆನಪಿಸಿಕೊಂಡಿದ್ದಾರೆ.
ನಟರಿಗೆ ಸಿಗುವ ಪಾತ್ರ ಮತ್ತು ಸಂಭಾಷಣೆಗಳು ಸಿನಿಮಾ ಯಶಸ್ಸಿಗೆ ಮುಖ್ಯ ಕಾರಣವಾಗುತ್ತವೆ. ‘ಧುರಂಧರ್’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಉತ್ತಮ ಅಭಿನಯ ನೀಡಲು ನಿರ್ದೇಶಕರ ಶ್ರಮವೇ ಕಾರಣ. ಅವರಿಗೆ ನೀಡಲಾದ ಸನ್ನಿವೇಶಗಳು ಮತ್ತು ಸಂಭಾಷಣೆಗಳು ಪಾತ್ರವನ್ನು ಎತ್ತಿಹಿಡಿದಿದ್ದವು. ಹಾಗೆಯೇ ‘ರಾಮಾಯಣ’ ಚಿತ್ರದಲ್ಲೂ ಯಶ್ ಅವರಿಗೆ ಸೂಕ್ತ ಸಂಭಾಷಣೆಗಳನ್ನು ನೀಡಿರುವುದರಿಂದ ರಾವಣನ ಪಾತ್ರಕ್ಕೆ ಹೆಚ್ಚು ಮೆರುಗು ಬಂದಿರಬಹುದು ಎಂದು ವಿಶ್ಲೇಷಿಸಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಹಂಚಿಕೆಗೆ ಮುಂದಾದ ದಿಲ್ ರಾಜು: ಎಷ್ಟು ಕೋಟಿ ಆಫರ್?
ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ 1’ ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದೆ. ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರವಿ ದುಬೆ, ಕಾಜಲ್ ಅಗರ್ವಾಲ್ ಸೇರಿದಂತೆ ಹಲವು ನಟರು ಮುಖ್ಯ ಪಾತ್ರಗಳಲ್ಲಿದ್ದಾರೆ. ಈ ಬೃಹತ್ ವೆಚ್ಚದ ಸಿನಿಮಾ ನವೆಂಬರ್ 6 ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ರಾಮಾಯಣದಲ್ಲಿ ರಣಬೀರ್ ಮತ್ತು ಯಶ್ ಅವರ ಪಾತ್ರಗಳ ಮೇಲಿನ ಚರ್ಚೆಗಳು ಈಗ ಬಾಲಿವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.