‘ದುಡ್ಡಿಗಾಗಿ ಶಕ್ತಿಮಾನ್ ತನ್ನನ್ನೇ ಮಾರಿಕೊಂಡ’: ಜನರಿಂದ ಮುಕೇಶ್ ಖನ್ನಾಗೆ ತೀವ್ರ ಟೀಕೆ

ಕೆಲವೇ ದಿನಗಳ ಹಿಂದೆ ಸಮಯ್ ರೈನಾ ಮತ್ತು ಮುಕೇಶ್ ಖನ್ನಾ ಕಿತ್ತಾಡಿಕೊಂಡಿದ್ದರು. ಆದರೆ ಈಗ ಕೈ ಜೋಡಿಸಿದ್ದಾರೆ. ಅವರಿಬ್ಬರು ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಹಣದ ಆಸೆಗಾಗಿ ಜಾಹೀರಾತಿನಲ್ಲಿ ಜೊತೆಯಾಗಿ ನಟಿಸಿದ್ದಾರೆ. ಅವರ ಈ ನಡೆಯನ್ನು ಕಂಡು ಜನರು ತೀವ್ರವಾಗಿ ಟೀಕೆ ಮಾಡಿದ್ದಾರೆ.

‘ದುಡ್ಡಿಗಾಗಿ ಶಕ್ತಿಮಾನ್ ತನ್ನನ್ನೇ ಮಾರಿಕೊಂಡ’: ಜನರಿಂದ ಮುಕೇಶ್ ಖನ್ನಾಗೆ ತೀವ್ರ ಟೀಕೆ
Mukesh Khanna, Samay Raina

Updated on: Jun 22, 2026 | 10:01 PM

ತೀವ್ರ ವಾಗ್ದಾಳಿ ಹಾಗೂ ವಿವಾದಗಳ ನಂತರ, ಬಾಲಿವುಡ್‌ನ ಹಿರಿಯ ನಟ ‘ಶಕ್ತಿಮಾನ್’ ಖ್ಯಾತಿಯ ಮುಕೇಶ್ ಖನ್ನಾ (Mukesh Khanna) ಮತ್ತು ಖ್ಯಾತ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಸಮಯ್ ರೈನಾ (Samay Raina) ಈಗ ಕಮರ್ಷಿಯಲ್ ಜಾಹೀರಾತಿನಲ್ಲಿ ಒಂದಾಗಿದ್ದಾರೆ. ನಿನ್ನೆ ಮೊನ್ನೆಯಷ್ಟೇ ಒಬ್ಬರನ್ನೊಬ್ಬರು ಕೆಣಕುತ್ತಾ ಜಗಳವಾಡಿದ್ದ ಈ ಇಬ್ಬರ ದಿಢೀರ್ ಒಂದಾಗಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಮುಕೇಶ್ ಖನ್ನಾ ಅವರ ನಡೆಯನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ‘ದುಡ್ಡಿಗಾಗಿ ಶಕ್ತಿಮಾನ್ ತನ್ನನ್ನೇ ತಾನು ಮಾರಿಕೊಂಡ’ ಎಂದು ಜನರು ಟೀಕಿಸುತ್ತಿದ್ದಾರೆ.

ವಿವಾದದ ಮೂಲ 2025ರ ಫೆಬ್ರವರಿಯಲ್ಲಿ ನಡೆದ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋಗೆ ಹೋಗಿ ನಿಲ್ಲುತ್ತದೆ. ಈ ಶೋನಲ್ಲಿ ರಣವೀರ್ ಅಲಹಾಬಾದಿಯಾ ಆಡಿದ ಕೆಲವು ಮಾತುಗಳು ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿ, ಸಮಯ್ ರೈನಾ ಹಾಗೂ ರಣವೀರ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಈ ವೇಳೆ ಶೋನ ಕಂಟೆಂಟ್ ಬಗ್ಗೆ ಕಿಡಿಕಾರಿದ್ದ ಮುಕೇಶ್ ಖನ್ನಾ, ಇದು ಅತ್ಯಂತ ಅಶ್ಲೀಲ ಶೋ ಎಂದಿದ್ದರು.

ಟೀಕೆಗೆ ಗುರಿಯಾದ ಜಾಹೀರಾತು:

ಇದಕ್ಕೆ ಪ್ರತಿಯಾಗಿ ಸಮಯ್ ರೈನಾ ಅವರು ತಮ್ಮ ಕಾಮಿಡಿ ಶೋನಲ್ಲಿ ಮುಕೇಶ್ ಖನ್ನಾ ಮತ್ತು ಶಕ್ತಿಮಾನ್ ಪಾತ್ರವನ್ನು ಅಣಕಿಸಿದ್ದರು. ಇದರಿಂದ ಕೋಪಗೊಂಡಿದ್ದ ಮುಕೇಶ್ ಖನ್ನಾ, ‘ಸಮಯ್ ರೈನಾ ನಿನ್ನ ಮುಖಕ್ಕೆ ಮಸಿ ಬಳಿದು ಕತ್ತೆ ಮೇಲೆ ಕೂರಿಸಿ ಇಡೀ ದೇಶ ಸುತ್ತಿಸಬೇಕು. ಮಕ್ಕಳು ನಿನ್ನ ಮೇಲೆ ಮೊಟ್ಟೆ, ಟೊಮೆಟೊ ಎಸೆಯಬೇಕು’ ಎಂದು ತೀವ್ರವಾಗಿ ನಿಂದಿಸಿದ್ದರು.

ಹೀಗೆ ಸಾರ್ವಜನಿಕವಾಗಿ ಪರಸ್ಪರ ಕಿಡಿಕಾರಿದ್ದ ಇಬ್ಬರು, ಈಗ ದಿಢೀರನೆ ಒಂದೇ ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇದು ನೆಟ್ಟಿಗರಲ್ಲಿ ಎರಡು ಬಗೆಯ ಅಭಿಪ್ರಾಯವನ್ನು ಮೂಡಿಸಿದೆ. ಕೆಲವರು ಇದನ್ನು ‘ಜಿಟಿಎ 6 ಗೇಮ್ ರಿಲೀಸ್ ಆಗುವ ಮುನ್ನ ನೋಡುತ್ತಿರುವ ಅತ್ಯಂತ ಅನಿರೀಕ್ಷಿತ ಕೊಲಾಬರೇಷನ್’ ಎಂದು ಹಾಸ್ಯ ಮಾಡಿದ್ದರೆ, ಇನ್ನು ಕೆಲವರು ಮುಕೇಶ್ ಖನ್ನಾ ಅವರ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ರಣವೀರ್ ಸಿಂಗ್‌ ಶಕ್ತಿಮಾನ್ ಆಗಲು ಮುಖೇಶ್ ಖನ್ನಾ ಒಪ್ಪಿಲ್ಲ ಎಂಬುದೆಲ್ಲ ಪ್ರಚಾರದ ಗಿಮಿಕ್’

ಮುಕೇಶ್ ಖನ್ನಾ ಅವರ ದ್ವಂದ್ವ ನಿಲುವನ್ನು ಟೀಕಿಸಿರುವ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು, ‘ಕೆಲವೇ ದಿನಗಳ ಹಿಂದೆ ಸಂಸ್ಕೃತಿ ಹಾಳು ಮಾಡುತ್ತಿದ್ದಾನೆ ಎಂದು ಸಮಯ್ ರೈನಾನನ್ನು ಬಾಯಿಗೆ ಬಂದಂತೆ ಬೈದಿದ್ದ ಶಕ್ತಿಮಾನ್, ಇಂದು ಅದೇ ಸಮಯ್ ಜೊತೆ ನಗುತ್ತಾ ಶೂಟಿಂಗ್ ಮಾಡುತ್ತಿದ್ದಾರೆ. ಹಣಕ್ಕಾಗಿ ತಮ್ಮ ಸಂಸ್ಕಾರ ಮತ್ತು ನೈತಿಕತೆಯನ್ನು ಮಾರಿಬಿಟ್ಟರೇ’ ಎಂದು ಪ್ರಶ್ನಿಸಿದ್ದಾರೆ. ‘ಕೊನೆಗೂ ನಮ್ಮ ಶಕ್ತಿಮಾನ್ ಕೂಡ ಮಾರಾಟವಾದರು. ಸಮಯ್ ರೈನಾ ಜೊತೆ ವಿವಾದ ಮಾಡಿಕೊಂಡರೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತದೆ ಎಂಬುದು ಇವರಿಗೆ ಅರ್ಥವಾಗಿದೆ’ ಎಂದು ಟೀಕಿಸಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us