‘ಇನ್ಸೆಪ್ಷನ್ ರೀತಿ ಐಡಿಯಾ ನನಗೂ ಇತ್ತು’: ಟ್ರೋಲ್ ಆದ ‘ಕಲ್ಕಿ 2898 ಎಡಿ’ ನಿರ್ದೇಶಕ

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರು ನೀಡಿದ ಒಂದು ಹೇಳಿಕೆ ಸಖತ್ ಟ್ರೋಲ್ ಆಗಿದೆ. 2010ರಲ್ಲಿ ತೆರೆಕಂಡ ‘ಇನ್ಸೆಪ್ಷನ್’ ಸಿನಿಮಾದ ರೀತಿಯೇ ತಮಗೂ ಒಂದು ಐಡಿಯಾ ಮೊದಲೇ ಬಂದಿತ್ತು ಎಂದು ಅವರು ಹೇಳಿದ್ದಾರೆ. ಈ ಮಾತನ್ನು ಕೇಳಿ ನೆಟ್ಟಿಗರು ಲೇವಡಿ ಮಾಡುತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ..

‘ಇನ್ಸೆಪ್ಷನ್ ರೀತಿ ಐಡಿಯಾ ನನಗೂ ಇತ್ತು’: ಟ್ರೋಲ್ ಆದ ‘ಕಲ್ಕಿ 2898 ಎಡಿ’ ನಿರ್ದೇಶಕ
Nag Ashwin, Inception Movie Poster

Updated on: Apr 16, 2025 | 7:34 PM

ಟಾಲಿವುಡ್ ನಿರ್ದೇಶಕ ನಾಗ್ ಅಶ್ವಿನ್ (Nag Ashwin) ಅವರು ಗಮನಾರ್ಹ ಸಿನಿಮಾಗಳನ್ನು ನೀಡಿದ್ದಾರೆ. ಅವರು ನಿರ್ದೇಶಿಸಿದ ‘ಮಹಾನಟಿ’, ‘ಕಲ್ಕಿ 2898 ಎಡಿ’ ಸಿನಿಮಾಗಳು ಸೂಪರ್​ ಹಿಟ್ ಆದವು. ಈಗ ಅವರು ಮುಂದಿನ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಅವರು ನೀಡಿದ ಒಂದು ಹೇಳಿಕೆಯಿಂದ ಸಖತ್ ಟ್ರೋಲ್ ಆಗುತ್ತಿದ್ದಾರೆ. ಹೌದು, ನಾಗ್ ಅಶ್ವಿನ್ ಅವರು ಕ್ರಿಸ್ಟೋಫರ್ ನೋಲನ್ (Christopher Nolan) ನಿರ್ದೇಶನದ ‘ಇನ್ಸೆಪ್ಷನ್’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ‘ಇನ್ಸೆಪ್ಷನ್’ (Inception) ಸಿನಿಮಾ ಬರುವುದಕ್ಕೂ ಮುನ್ನ ಅದೇ ರೀತಿಯ ಐಡಿಯಾ ತಮಗೂ ಬಂದಿತ್ತು ಎಂದು ನಾಗ್ ಅಶ್ವಿನ್ ಅವರು ಹೇಳಿದ್ದಾರೆ. ಈ ಮಾತು ಕೇಳಿ ನೆಟ್ಟಿಗರು ಮುಸಿಮುಸಿ ನಕ್ಕಿದ್​ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗ್ ಅಶ್ವಿನ್ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಂದಿನ ಇಂಟರ್​ನೆಟ್ ಯುಗದಲ್ಲಿ ಸಂಪೂರ್ಣ ಒರಿಜಿನಲ್ ಕಥೆ ಬರೆಯುವುದು ಎಷ್ಟು ಚಾಲೆಂಜಿಂಗ್ ಕೆಲಸ ಎಂಬ ಬಗ್ಗೆ ಅವರು ಚರ್ಚೆ ಮಾಡುತ್ತಿದ್ದರು. ಆಗ ‘ಇನ್ಸೆಪ್ಷನ್’ ಸಿನಿಮಾದ ವಿಷಯವನ್ನು ಅವರು ಪ್ರಸ್ತಾಪಿಸಿದರು.

‘ನಾವೆಲ್ಲರೂ ಏನಾದರೂ ಬರೆಯುತ್ತೇವೆ. ಕೆಲವು ತಿಂಗಳು ಕಳೆದ ನಂತರ ಯಾವುದೋ ಟ್ರೇಲರ್ ನೋಡಿದಾಗ ಅದರಲ್ಲಿ ನಿಮ್ಮ ಕಾನ್ಸೆಪ್ಟ್ ಅಥವಾ ಐಡಿಯಾ ಕಾಣಿಸುತ್ತದೆ. ನಿಮ್ಮ ಉತ್ಸಾಹ ಕಡಿಮೆ ಆಗುತ್ತದೆ. 2007 ಅಥವಾ 2008ರಲ್ಲಿ ನನಗೆ ಒಂದು ಐಡಿಯಾ ಇತ್ತು. ಅದು ಸೇಮ್ ಅಲ್ಲ, ಆದರೆ ಇನ್ಸೆಪ್ಷನ್ ಸಿನಿಮಾವನ್ನು ಹೋಲುವಂತಿತ್ತು’ ಎಂದು ನಾಗ್ ಅಶ್ವಿನ್ ಹೇಳಿದ್ದಾರೆ.

‘ನಾನು ನೆನಪುಗಳ ಬಗ್ಗೆ ಸ್ಕ್ರಿಪ್ಟ್ ಬರೆಯುತ್ತಿದ್ದೆ. ಆದರೆ ಇನ್ಸೆಪ್ಷನ್ ಸಿನಿಮಾ ಕನಸುಗಳ ಬಗ್ಗೆ ಇತ್ತು. ನಾನು ಇನ್ಸೆಪ್ಷನ್ ಟ್ರೇಲರ್ ನೋಡಿದಾಗ ಒಂದು ವಾರ ಖಿನ್ನತೆಗೆ ಒಳಗಾಗಿದ್ದೆ’ ಎಂದು ನಾಗ್ ಅಶ್ವಿನ್ ಅವರು ಹೇಳಿದ್ದಾರೆ. ಅವರ ಈ ಮಾತನ್ನು ಕೇಳಿಸಿಕೊಂಡು ಜನರು ಲೇವಡಿ ಮಾಡುತ್ತಿದ್ದಾರೆ. ‘ಈ ಹಿಂದೆ ನಟ ಗೋವಿಂದ ಅವರು ತಮಗೆ ಅವತಾರ್ ಸಿನಿಮಾದ ಆಫರ್ ಬಂದಿತ್ತು ಅಂತ ಹೇಳಿದ್ದರು. ನಿಮ್ಮದು ಕೂಡ ಅದೇ ರೀತಿಯೇ?’ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ‘ಆಪನ್​ಹೈಮರ್​’ ಯಶಸ್ಸಿನ ಬಳಿಕ ಹಾರರ್​ ಸಿನಿಮಾ ಮಾಡ್ತಾರೆ ಕ್ರಿಸ್ಟೋಫರ್​ ನೋಲನ್​​

‘ಹಾಗಾದ್ರೆ ನಿಮ್ಮ ಸಿನಿಮಾಗೆ ಪ್ರಭಾಸ್ ಡಿಕಾಪ್ರಿಯೋ ಹೀರೋ ಆಗಬೇಕಿತ್ತಾ’ ಎಂದು ಸಹ ಟ್ರೋಲ್ ಮಂದಿ ಪ್ರಶ್ನಿಸಿದ್ದಾರೆ. ಈ ಟ್ರೋಲ್​ಗಳಿಗೆ ನಾಗ್​ ಅಶ್ವಿನ್ ಅವರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.