‘ಆಪನ್ಹೈಮರ್’ ಯಶಸ್ಸಿನ ಬಳಿಕ ಹಾರರ್ ಸಿನಿಮಾ ಮಾಡ್ತಾರೆ ಕ್ರಿಸ್ಟೋಫರ್ ನೋಲನ್
2023ರಲ್ಲಿ ತೆರೆಕಂಡ ‘ಆಪನ್ಹೈಮರ್’ ಸಿನಿಮಾದ ಯಶಸ್ಸಿನಿಂದ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಅವರ ಖ್ಯಾತಿ ಹೆಚ್ಚಾಗಿದೆ. ಈಗಾಗಲೇ ಸೂಪರ್ ಹೀರೋ, ಸೈನ್ಸ್ ಫಿಕ್ಷನ್, ಐತಿಹಾಸಿಕ, ಬಯೋಪಿಕ್ ಪ್ರಕಾರಗಳನ್ನು ಪ್ರಯತ್ನಿಸಿರುವ ಅವರು ಈಗ ಹಾರರ್ ಸಿನಿಮಾವನ್ನು ಮಾಡಲು ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಹಾಲಿವುಡ್ನಲ್ಲಿ ಪ್ರಭಾವಿ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕ್ರಿಸ್ಟೋಫರ್ ನೋಲನ್ (Christopher Nolan) ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ಸಾವಿರಾರು ನಿರ್ದೇಶಕರಿಗೆ ಸ್ಫೂರ್ತಿ ಆಗಿವೆ. ಸೂಪರ್ ಹೀರೋ ಕಾನ್ಸೆಪ್ಟ್ ಇರುವ ‘ಬ್ಯಾಟ್ ಮ್ಯಾನ್’ ಸಿನಿಮಾವನ್ನು ಅವರು ನಿರ್ದೇಶಿಸಿ ಸೈ ಎನಿಸಿಕೊಂಡರು. ನಂತರ ‘ಇನ್ಸೆಪ್ಷನ್’, ‘ಇಂಟರ್ಸ್ಟೆಲ್ಲರ್’ ಮುಂತಾದ ಸೈನ್ಸ್ ಫಿಕ್ಷನ್ ಸಿನಿಮಾಗಳನ್ನೂ ಮಾಡಿ ಜನಮೆಚ್ಚುಗೆ ಪಡೆದರು. ಈಗ ಅವರು ಹೊಸ ಪ್ರಕಾರವನ್ನು ಪ್ರಯತ್ನಿಸಿಲು ಸಜ್ಜಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ (Horror Movie) ಮಾಡಲು ಕ್ರಿಸ್ಟೋಫರ್ ನೋಲನ್ ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಬ್ರಿಟಿಷ್ ಫಿಲ್ಮ್ ಇನ್ಸ್ಟಿಟ್ಯೂಟ್’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
ಯಾವುದೇ ಪ್ರಕಾರದ ಸಿನಿಮಾ ಇದ್ದರೂ ಇದಕ್ಕೆ ಕ್ರಿಸ್ಟೋಫರ್ ನೋಲನ್ ಅವರು ನ್ಯಾಯ ಒದಗಿಸುತ್ತಾರೆ ಎಂಬುದರಲ್ಲಿ ಅನುಮಾನವೇ ಬೇಡ. ಸೂಪರ್ ಹೀರೋ ಸಿನಿಮಾ, ಸೈನ್ಸ್ ಫಿಕ್ಷನ್ ಸಿನಿಮಾ ಮಾತ್ರವಲ್ಲದೇ ‘ಡಂಕಿರ್ಕ್’ ಚಿತ್ರದ ಮೂಲಕ ಐತಿಹಾಸಿಕ ಕಥೆಯನ್ನು ಕೂಡ ಅವರು ಬಹಳ ಚೆನ್ನಾಗಿ ತೆರೆಗೆ ತಂದಿದ್ದಾರೆ. ಅದೇ ರೀತಿ, ‘ಆಪನ್ಹೈಮರ್’ ಸಿನಿಮಾದ ಮೂಲಕ ಬಯೋಪಿಕ್ ಮಾಡುವುದರಲ್ಲೂ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಈಗ ಹಾರರ್ನತ್ತ ಅವರ ಮನಸ್ಸು ಎಳೆಯುತ್ತಿದೆ.
ಕ್ರಿಸ್ಟೋಫರ್ ನೋಲನ್ ಅವರು ಹೊಸ ಸಿನಿಮಾ ಘೋಷಣೆ ಮಾಡುತ್ತಾರೆ ಎಂದರೆ ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಎಗ್ಸೈಟ್ ಆಗುತ್ತಾರೆ. ಅಷ್ಟರಮಟ್ಟಿಗೆ ಅವರು ಫೇಮಸ್ ಆಗಿದ್ದಾರೆ. ಒಂದು ವೇಳೆ ಕ್ರಿಸ್ಟೋಫರ್ ನೋಲನ್ ಅವರು ಹಾರರ್ ಸಿನಿಮಾ ಮಾಡಿದ್ದೇ ಹೌದಾದರೆ ಅದು ಎಷ್ಟು ಭಯಾನಕವಾಗಿರಬಹುದು ಎಂದು ಅಭಿಮಾನಿಗಳು ಈಗಲೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಫ್ಯಾನ್ಸ್ ಚರ್ಚೆ ಮಾಡುತ್ತಿದ್ದಾರೆ.
ಹಾಲಿವುಡ್ನಲ್ಲಿ ಹಾರರ್ ಸಿನಿಮಾಗಳಿಗೇನೂ ಕೊರತೆ ಇಲ್ಲ. ಈಗಾಗಲೇ ಅಂತಹ ನೂರಾರು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಈಗ ಕ್ರಿಸ್ಟೋಫರ್ ನೋಲನ್ ಅವರು ಅದೇ ಪ್ರಕಾರದ ಮೇಲೆ ಕಣ್ಣಿಟ್ಟಿದ್ದಾರೆ. ‘ಹಾರರ್ ಸಿನಿಮಾಗಳು ತುಂಬ ಇಂಟರೆಸ್ಟಿಂಗ್ ಆಗಿರುತ್ತವೆ. ಅವು ಸಂಪೂರ್ಣವಾಗಿ ಸಿನಿಮ್ಯಾಟಿಕ್ ಸಾಧನದ ಮೇಲೆ ಅವಲಂಬಿತವಾಗಿವೆ. ನನಗೂ ಹಾರರ್ ಸಿನಿಮಾ ಮಾಡಬೇಕು ಎಂಬ ಬಯಕೆ ಇದೆ. ಆದರೆ ಒಂದು ಅತ್ಯುತ್ತಮವಾದ ಹಾರರ್ ಸಿನಿಮಾಗೆ ತುಂಬ ಚೆನ್ನಾಗಿ ಇರುವ ಐಡಿಯಾ ಬೇಕು’ ಎಂದು ಕ್ರಿಸ್ಟೋಫರ್ ನೋಲನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.