ಟಾಲಿವುಡ್ನ ತಾರಾ ಜೋಡಿಗಳಲ್ಲಿ ಒಂದಾಗಿದ್ದ ನಾಗ ಚೈತನ್ಯ (Naga Chaitanya)ಹಾಗೂ ಸಮಂತಾ (Samantha) ಕಳೆದ ವರ್ಷದ ಅಕ್ಟೋಬರ್ 2ರಂದು ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು. ನಾಲ್ಕು ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ ಈ ಜೋಡಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬರೆದುಕೊಂಡು, ಬಹಳ ಯೋಚಿಸಿ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಇದು ಅವರ ಅಭಿಮಾನಿಗಳಿಗೆ ಶಾಕಿಂಗ್ ಎನ್ನಿಸಿತ್ತು. ನಂತರ ಈರ್ವರೂ ತಮ್ಮ ತಮ್ಮ ಚಿತ್ರಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಸಮಂತಾ ಹಲವೆಡೆ ಬ್ರೇಕಪ್ ಕುರಿತು ಮುಕ್ತವಾಗಿ ಮಾತನಾಡಿದ್ದರು. ಆದರೆ ನಾಗ ಚೈತನ್ಯ ಎಲ್ಲೂ ಸಾರ್ವಜನಿಕವಾಗಿ ಈ ವಿಚಾರದ ಕುರಿತು ಮಾತನಾಡಿರಲಿಲ್ಲ. ಇದೀಗ ಅವರ ನೂತನ ‘ಬಂಗಾರ್ರಾಜು’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರ ಹಾಗೂ ವೈಯಕ್ತಿಕ ಜೀವನದ ಕುರಿತು ಮಾತನಾಡುತ್ತಾ, ಬ್ರೇಕಪ್ ಕುರಿತೂ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ವೈಯಕ್ತಿಕ ಜೀವನದಲ್ಲಿ ಹಲವು ಸಮಸ್ಯೆ ಎದುರಿಸಿದಿರಿ, ಇದನ್ನೆಲ್ಲಾ ಹೇಗೆ ಎದುರಿಸಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ನಾಗ ಚೈತನ್ಯ, ‘‘ಆ ನಿರ್ಧಾರವನ್ನು ಇಬ್ಬರೂ ಸೇರಿ ತೆಗೆದುಕೊಂಡಿದ್ದು. ಆಕೆ (ಸಮಂತಾ) ಖುಷಿಯಾಗಿದ್ದರೆ ನನಗೂ ಖುಷಿ’’ ಎಂದಿದ್ದಾರೆ. ಅಲ್ಲದೇ ಆ ಸಂದರ್ಭದಲ್ಲಿ ನಾವು ತೆಗೆದುಕೊಂಡ ಉತ್ತಮ ನಿರ್ಧಾರ ಅದಾಗಿತ್ತು ಎಂದೂ ನಾಗ ಚೈತನ್ಯ ಹೇಳಿದ್ದಾರೆ.
ಸಮಂತಾ ಈ ಹಿಂದೆ ತಮ್ಮ ಬ್ರೇಕಪ್ ಕುರಿತು ಮಾತನಾಡುತ್ತಾ, ಆ ಸಂದರ್ಭವನ್ನು ಎದುರಿಸಿದ್ದನ್ನು ವಿವರಿಸಿದ್ದರು. ‘‘ನಾನು ಇನ್ನು ನನ್ನ ಬದುಕನ್ನು ಬದುಕಬೇಕು. ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲು ನಾನು ಸಮರ್ಥಳಿದ್ದೆ ಎಂಬುದರ ಕುರಿತು ನನಗೆ ಅನುಮಾನವಿತ್ತು. ಆದರೆ ನನಗೇ ಅಚ್ಚರಿಯಾಗುವಂತೆ ಇದನ್ನೆಲ್ಲಾ ಎದುರಿಸಲು ನಾನು ಶಕ್ತಳಿದ್ದೇನೆ. ನಾನು ಇಷ್ಟು ಗಟ್ಟಿಗಿತ್ತಿಯಾಗಿರುವುದಕ್ಕೆ ಹೆಮ್ಮೆ ಇದೆ’’ ಎಂದಿದ್ದರು.
ಚಿತ್ರಗಳ ವಿಷಯಕ್ಕೆ ಬಂದರೆ, ನಾಗ ಚೈತನ್ಯ ನಟನೆಯ ‘ಬಂಗಾರ್ರಾಜು’ ಹಲವು ಕಾರಣಕ್ಕೆ ಸದ್ದು ಮಾಡುತ್ತಿದೆ. ನಾಗಾರ್ಜುನ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ದೊಡ್ಡ ತಾರಾಗಣ ಇರುವ ಚಿತ್ರ ಇದಾಗಿದ್ದು, ಕೃತಿ ಶೆಟ್ಟಿ, ರಮ್ಯಾ ಕೃಷ್ಣ ಮೊದಲಾದವರು ಬಣ್ಣಹಚ್ಚಿದ್ದಾರೆ. ಕಲ್ಯಾಣ್ ಕೃಷ್ಣ ಕುರಸಲ ನಿರ್ದೇಶಿಸಿದ್ದಾರೆ. ನಾಗಾರ್ಜುನ ಸದ್ಯ ‘ಲವ್ಸ್ಟೋರಿ’ ಚಿತ್ರದ ಯಶಸ್ಸಿನಲ್ಲಿದ್ದಾರೆ. ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಂಡ ಶೇಖರ್ ಕಮ್ಮುಲ ನಿರ್ದೇಶನದ ಆ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವೆಯೂ ಸಂಕ್ರಾಂತಿಯ ಸಂದರ್ಭದಲ್ಲಿ ಚಿತ್ರವನ್ನು ತೆರೆಕಾಣಿಸಲು ‘ಬಂಗಾರ್ರಾಜು’ ಚಿತ್ರತಂಡ ನಿರ್ಧರಿಸಿದೆ. ನಾಗ ಚೈತನ್ಯ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಅಮೆಜಾನ್ ಪ್ರೈಮ್ ನಿರ್ಮಿಸುತ್ತಿರುವ ಹಾರರ್ ವೆಬ್ ಸೀರೀಸ್ ಒಂದರಲ್ಲೂ ನಾಗ ಚೈತನ್ಯ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
ಅಕ್ಷಯ್ ಕುಮಾರ್ಗೆ 170 ಕೋಟಿ ರೂ. ಸಂಭಾವನೆ; ಹೊಸ ಸಿನಿಮಾ ಬಗ್ಗೆ ಹರಿದಾಡುತ್ತಿದೆ ಬಿಗ್ ನ್ಯೂಸ್
Salman Khan: ಸಲ್ಮಾನ್- ಸಮಂತಾ ಜತೆಯಿರುವ ಚಿತ್ರಗಳು ವೈರಲ್; ಏನಿದು ಸಮಾಚಾರ?