ಸೆಟ್ನಲ್ಲೇ ಮೂಡಿತು ಪ್ರೀತಿ; ನಾಲ್ಕು ವರ್ಷ ಪ್ರೀತಿ ವಿಚಾರ ಮುಚ್ಚಿಟ್ಟಿದ್ದ ನಮ್ರತಾ-ಮಹೇಶ್ ಬಾಬು
ನಮ್ರತಾ ಶಿರೋಡ್ಕರ್ ಅವರ ಜನ್ಮದಿನದಂದು, ಅವರ ಮತ್ತು ಮಹೇಶ್ ಬಾಬು ಅವರ ಪ್ರೇಮಕಥೆಯನ್ನು ನೆನಪಿಸಿಕೊಳ್ಳೋಣ. 'ವಂಶಿ' ಚಿತ್ರದ ಸೆಟ್‌ನಲ್ಲಿ ಆರಂಭವಾದ ಅವರ ಪ್ರೇಮ, 2005ರಲ್ಲಿ ವಿವಾಹದಲ್ಲಿ ಕುಟುಂಬವಾಗಿ ಬೆಳೆಯಿತು. ನಮ್ರತಾ ತಮ್ಮ ಅಭಿನಯ ವೃತ್ತಿಯನ್ನು ಬಿಟ್ಟು, ಕುಟುಂಬಕ್ಕೆ ಆದ್ಯತೆ ನೀಡಿದರು .
ಮಹೇಶ್ ಬಾಬು ಪತ್ನಿ, ಮಾಜಿ ನಟಿ ನಮ್ರತಾ ಶಿರೋಡ್ಕರ್ ಅವರಿಗೆ ಇಂದು (ಜನವರಿ 22) ಜನ್ಮದಿನ. ಅವರಿಗೆ ದಕ್ಷಿಣ ಭಾರತದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಈಗ ನಟಿಯಾಗಿ ಎನ್ನುವುದಕ್ಕಿಂತ ಮಹೇಶ್ ಬಾಬು ಪತ್ನಿಯಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ನಮ್ರತಾ ಶಿರೋಡ್ಕರ್ ಅವರು ದೊಡ್ಡ ಯಶಸ್ಸನ್ನು ಎಂಜಾಯ್ ಮಾಡಿದವರು. ಈಗ ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಅವರ ಲವ್ಸ್ಟೋರಿ ಬಗ್ಗೆ ಇಂದು ನೋಡೋಣ.
ಮಹೇಶ್ ಬಾಬು ಅವರು 90ರ ದಶಕದಲ್ಲಿ ಚಿತ್ರರಂಗದಲ್ಲಿ ಮಿಂಚುವ ಪ್ರಯತ್ನದಲ್ಲಿ ಇದ್ದರು. 1993ರಲ್ಲಿ ನಮ್ರತಾ ಅವರಿಗೆ ‘ಮಿಸ್ ಇಂಡಿಯಾ ಯೂನಿವರ್ಸ್’ ಪಟ್ಟ ಸಿಕ್ಕಿತು. ನಂತರ ಅವರಿಗೆ ಬಾಲಿವುಡ್ನಲ್ಲಿ ಸಿನಿಮಾ ಅವಕಾಶಕ್ಕೆ ಇದು ಸಹಕಾರಿ ಆಯಿತು. ಮಹೇಶ್ ಬಾಬು ಅವರು 2000ನೇ ಇಸ್ವಿಯಲ್ಲಿ ‘ವಂಶಿ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೊದಲ ಚಿತ್ರವೇ ಹಿಟ್ ಆಯಿತು. ಈ ಸಿನಿಮಾದಲ್ಲಿ ನಮ್ರತಾ ಅವರು ನಾಯಕಿ ಆಗಿ ನಟಿಸಿದ್ದರು. ಇಬ್ಬರ ಮೊದಲ ಭೇಟಿ ಆಗಿದ್ದು ಇದೇ ಸಿನಿಮಾದಲ್ಲಿ.
ಇಬ್ಬರ ಮಧ್ಯೆ ಈ ಸಿನಿಮಾ ಸೆಟ್‌ನಲ್ಲಿ ಪ್ರೀತಿ ಮೂಡಿತು. ಆದರೆ, ಈ ಬಗ್ಗೆ ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ನಾಲ್ಕು ವರ್ಷಗಳ ಬಳಿಕ ಅಂದರೆ 2004ರಲ್ಲಿ ಮಹೇಶ್ ಬಾಬು ಹಾಗೂ ನಮ್ರತಾ ಜೋಡಿ ಈ ವಿಚಾರವನ್ನು ಒಪ್ಪಿಕೊಂಡರು. ಆಗಲೇ ಎಲ್ಲ ಕಡೆಗಳಲ್ಲಿ ಈ ಬಗ್ಗೆ ಸುದ್ದಿಗಳು ಹರಿದಾಡಿದ್ದವು.
2005ರ ಫೆಬ್ರವರಿ 10ರಂದು ಮಹೇಶ್ ಬಾಬು ಹಾಗೂ ನಮ್ರತಾ ಅವರು ಮದುವೆ ಆದರು. ಮನೆಯವರನ್ನು ಮದುವೆಗೆ ಒಪ್ಪಿಸಿ ಈ ಜೋಡಿ ವಿವಾಹ ಆಗಿ ಹೊಸ ಬಾಳಿಗೆ ಕಾಲಿಟ್ಟಿತು. ಮುಂಬೈನಲ್ಲಿ ನಮ್ರತಾ ಕುಟುಂಬದವರು ಅದ್ದೂರಿಯಾಗಿ ಮದುವೆ ಮಾಡಿದರು. ಫೋಟೋಗಳು ಆಗ ಪೇಪರ್ಗಳಲ್ಲಿ ಮುದ್ರಿಸಲ್ಪಟ್ಟವು.
ಮದುವೆ ಬಳಿಕ ನಮ್ರತಾ ಅವರು ತಮ್ಮ ಜವಾಬ್ದಾರಿಯನ್ನು ಬದಲಿಸಿಕೊಂಡರು. ಪತಿಗೆ ಸಿನಿಮಾ ಮಾಡಲು ಅವಕಾಶ ಕೊಟ್ಟ ಅವರು, ಇವರು ಕುಟುಂಬದ ಕಡೆ ಗಮನ ಹರಿಸಿದರು. ಈ ದಂಪತಿಗೆ ಗೌತಮ್ ಹೆಸರಿನ ಮಗ, ಸಿತಾರಾ ಹೆಸರಿನ ಮಗಳು ಇದ್ದಾರೆ.
ಇದನ್ನೂ ಓದಿ: ಕೊನೆಗೂ ಶುರುವಾಯ್ತು ರಾಜಮೌಳಿ-ಮಹೇಶ್ ಬಾಬು ಸಿನಿಮಾ
ಮಹೇಶ್ ಬಾಬು ಅವರು ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್. ಕುಟುಂಬಕ್ಕೆ ಅವರು ಹೆಚ್ಚು ಒತ್ತು ನೀಡುತ್ತಾರೆ. ಕುಟುಂಬದ ಜೊತೆ ಸಾಕಷ್ಟು ಸಮಯ ಕಳೆಯುತ್ತಾರೆ. ಶೂಟಿಂಗ್ನಿಂದ ಬಿಡುವಿದ್ದಾಗಿ ಅವರು ವಿದೇಶಕ್ಕೆ ತೆರಳಿ ಸಮಯ ಕಳೆಯುತ್ತಾರೆ. ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿ ನಮ್ರತಾ ಬಳಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Wed, 22 January 25