ತಂದೆಯ ಸಾವಿನ ಬಗ್ಗೆ ಮೌನ ಮುರಿದ ತ್ರಿವಿಕ್ರಂ; ಮನದೊಳಗೆ ಎಷ್ಟೊಂದು ದುಃಖ
ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ತ್ರಿವಿಕ್ರಂ ಅವರು ತಮ್ಮ ತಂದೆಯ ಸಾವಿನ ಬಗ್ಗೆ ಭಾವುಕವಾಗಿ ಮಾತನಾಡಿದ್ದಾರೆ. ತಂದೆ ಹೇಗೆ ಮೃತಪಟ್ಟರು ಎಂದು ಅವರು ಬಹಿರಂಗಪಡಿಸಿದ್ದಾರೆ. ತಮ್ಮ ಬಾಲ್ಯದಲ್ಲಿ ತಂದೆಯೊಂದಿಗಿನ ಸಂಬಂಧದ ಕಷ್ಟದ ಅನುಭವಗಳನ್ನು ಹಂಚಿಕೊಂಡ ತ್ರಿವಿಕ್ರಂ, ತಂದೆಯ ನಷ್ಟದ ನೋವನ್ನು ಇನ್ನೂ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ತ್ರಿವಿಕ್ರಂ ಅವರು ಗೆಲ್ಲುವ ಕುದುರೆ ಎನಿಸಿಕೊಂಡಿದ್ದಾರೆ. ಅವರು ಟಾಸ್ಕ್ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ. ಈಗ ತ್ರಿವಿಕ್ರಂ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಜೀವನದಲ್ಲಿ ನಡೆದ ಒಂದು ಕರಾಳ ಘಟನೆ ಬಗ್ಗೆ ವಿವರಿಸಿದ್ದಾರೆ. ಅವರು ತಂದೆಯ ಸಾವಿನ ಬಗ್ಗೆ ಮೌನ ಮುರಿದಿದ್ದಾರೆ. ಅಂದು ಏನಾಯಿತು ಎಂಬುದನ್ನು ಹೇಳಿಕೊಂಡಿದ್ದಾರೆ. ಅವರು ಮನಸ್ಸಿನಲ್ಲಿ ಸಾಕಷ್ಟು ನೋವನ್ನು ಇಟ್ಟುಕೊಂಡು ಹೊರಗೆ ನಗುತ್ತಾ ಇದ್ದಾರೆ.
‘ಬಿಗ್ ಬಾಸ್’ ಕಪ್ ಎದುರು ತಮ್ಮ ಮನದಾಳದ ಮಾತನ್ನು ಸ್ಪರ್ಧಿಗಳು ಹೇಳಿಕೊಳ್ಳಬೇಕಿತ್ತು. ಆಗ ತ್ರಿವಿಕ್ರಂ ಅವರು ಕಪ್ ಎದುರು ಕುಳಿತು ತಮ್ಮ ಮನದಾಳದ ನೋವನ್ನು ಹೇಳಿಕೊಂಡಿದ್ದಾರೆ. ‘ಕಪ್ ಎತ್ತಬೇಕು, ದೊಡ್ಡ ಸ್ಟಾರ್ ಆಗಬೇಕು’ ಎಂದರು ತ್ರಿವಿಕ್ರಂ. ಇದೇ ವೇಳೆ ಅವರು ತಂದೆಯನ್ನು ನೆನೆದರು.
ತ್ರಿವಿಕ್ರಂ ಸಣ್ಣ ವಯಸ್ಸಿನಲ್ಲಿದ್ದಾಗ ತಾಯಿಗೆ ತಂದೆ ಬೈದರು ಎಂಬ ಕಾರಣಕ್ಕೆ ತಂದೆಯ ಬಳಿ ಮಾತನಾಡುವುದನ್ನೇ ತ್ರಿವಿಕ್ರಂ ಅವರು ಬಿಟ್ಟಿದ್ದರು. ಕೊನೆಯ ದಿನಗಳಲ್ಲಿ ತಂದೆಯ ಬಳಿ ಸರಿಯಾಗಿ ಮಾತನಾಡಲು ಸಾಧ್ಯವಾಗಿಲ್ಲ ಎಂಬ ನೋವು ತ್ರಿವಿಕ್ರಂ ಅವರಿಗೆ ಈಗಲೂ ಕಾಡುತ್ತಿದೆ.
ಇದನ್ನೂ ಓದಿ: ‘ಅಪನಿಂದನೆ ಮಾತ್ರ ನಿನಗೆ ಸಿಕ್ಕಿದ್ದು’; ಮಕ್ಕಳ ಕಳ್ಳಿ ಆರೋಪದ ಬಗ್ಗೆ ಮೋಕ್ಷಿತಾಗೆ ಪರೋಕ್ಷವಾಗಿ ಹೇಳಿದ್ರಾ ಗುರೂಜಿ?
ತ್ರಿವಿಕ್ರಂ ಅವರು ಟ್ರಕ್ ಡ್ರೈವರ್ನ ಮಗ. ಅವರ ತಂದೆ ಟ್ರಕ್ ಓಡಿಸುತ್ತಿದ್ದರು. ಅನೇಕರು ಲಾರಿ ಚಾಲಕನ ಮಗ ಎಂದು ತ್ರಿವಿಕ್ರಂನ ಹೀಯಾಳಿಸಿದ್ದು ಇದೆಯಂತೆ. ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಎಲ್ಲವನ್ನೂ ಮೆಟ್ಟಿ ನಿಂತು ಈ ಹಂತದವರೆಗೆ ಬಂದಿದ್ದಾರೆ.
ಅಪಘಾತ
ಕೊರನಾ ಸಂದರ್ಭದಲ್ಲಿ ತ್ರಿವಿಕ್ರಂ ಅವರಿಗೆ ಯಾವುದೇ ಸಿನಿಮಾ ಹಾಗೂ ಧಾರಾವಾಹಿ ಕೆಲಸಗಳು ಇರಲಿಲ್ಲ. ಹೀಗಾಗಿ ಮನೆ ನಡೆಸೋದು ಕಷ್ಟ ಆಗುತ್ತಿತ್ತು. ಆಗ ತ್ರಿವಿಕ್ರಂ ತಂದೆ ಲಾರಿ ತೆಗೆದುಕೊಂಡು ಹೊರಟೇ ಬಿಟ್ಟರು. ಈಗ ಬೇಡ ಎಂದರೂ ಅವರು ಕೇಳಲಿಲ್ಲ. ‘ಇಬ್ಬರೂ ಕೆಲಸ ಇಲ್ಲದೆ ಕುಳಿತರೆ ಹೇಗೆ. ಒಬ್ಬರಾದರೂ ದುಡಿಯಬೇಕು’ ಎಂದು ಹೇಳಿ ಹೊರಟವರು ಮರಳಿ ಬರಲೇ ಇಲ್ಲ. ಗದಗ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಅವರು ನಿಧನ ಹೊಂದಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:49 am, Wed, 22 January 25