‘ಅಖಂಡ 2’: ಮ್ಯಾಜಿಕ್ ಮಾತ್ರವನ್ನೇ ನಂಬಿಕೊಂಡ ಲಾಜಿಕ್ಲೆಸ್ ಸಿನಿಮಾ

- Time - 162 Minutes
- Released - December 12, 2025
- Language - Telugu, Kannada, Tamil, Hindi
- Genre - Action, Drama
ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ ಸಿನಿಮಾ ನೋಡಲು ಹೋಗುವ ಮುನ್ನ ಮೆದುಳು, ಚಿಂತನಾಶಕ್ತಿ, ಫಿಸಿಕ್ಸು, ಕೆಮಿಸ್ಟ್ರಿಗಳನ್ನು ಗುಂಡಿಯಲ್ಲಿ ಹೂತು ಹೋಗಬೇಕು. ‘ಅಖಂಡ 2’ ಸಿನಿಮಾ ಸಹ ಇದಕ್ಕೆ ಹೊರತಲ್ಲ. ಬಾಲಯ್ಯ ತೆರೆ ಮೇಲೆ ಬಂದರೆಂದರೆ ಸಾಕು ಲಾಜಿಕ್ಕು ಮತ್ತು ಫಿಸಿಕ್ಸು ಎರಡೂ ಹೆದರಿ ಥೀಯೇಟರ್ ಬಿಟ್ಟು ಓಡಿ ಹೋಗುತ್ತವೆ. ಬಾಲಯ್ಯನಿಗಿರುವ ಸ್ಟಾರ್ ಗಿರಿಯ ಮ್ಯಾಜಿಕ್ಕೊಂದನ್ನೇ ನೆಚ್ಚಿಕೊಂಡು ಮಾಡಿರುವ ಸಿನಿಮಾ ‘ಅಖಂಡ 2’.
‘ಅಖಂಡ 2’ ಸಿನಿಮಾ 2021ರಲ್ಲಿ ಬಿಡುಗಡೆ ಆಗಿದ್ದ ‘ಅಖಂಡ’ ಸಿನಿಮಾದ ಸೀಕ್ವೆಲ್. ಆದರೆ ಆ ಸಿನಿಮಾಕ್ಕೂ, ಈ ಸಿನಿಮಾಕ್ಕೂ ಕತೆಯಲ್ಲಿ ಹೆಚ್ಚಿನ ಲಿಂಕುಗಳಿಲ್ಲ, ಆ ಸಿನಿಮಾದಲ್ಲಿದ್ದ ಮುಖ್ಯ ಪಾತ್ರಗಳು ಇಲ್ಲಿಯೂ ಇವೆ. ವಿಲನ್ನುಗಳು ಬದಲಾಗಿದ್ದಾರೆ. ಒಬ್ಬ ಬಾಲಯ್ಯನ ಆರ್ಭಟವನ್ನೇ ತಡೆದುಕೊಳ್ಳಲು ಕಷ್ಟ, ಅಂತಹದರಲ್ಲಿ ‘ಅಖಂಡ 2’ನಲ್ಲಿ ಇಬ್ಬಿಬ್ಬರು ಬಾಲಯ್ಯ ಇದ್ದಾರೆ. ಒಬ್ಬ ಮುರಳಿ ಕೃಷ್ಣ ಹೆಸರಿನ ಶಾಸಕ, ಮತ್ತೊಬ್ಬರು ಅಘೋರಿ ಅಖಂಡ. ಒಂದು ಸಮಯದಲ್ಲಂತೂ ತೆರೆ ಮೇಲೆ ಆರು ಬಾಲಯ್ಯ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.
ಕತೆಯ ಎಳೆ ಇಷ್ಟೆ, ಭಾರತದ ಒಬ್ಬ ರಾಜಕೀಯ ನಾಯಕನ ನೆರವಿನಿಂದ ಮಹಾ ಕುಂಭಮೇಳ ಸಮಯದಲ್ಲಿ ಚೀನಿಯರು ವೈರಸ್ ಒಂದನ್ನು ನದಿಗೆ ಸೇರಿಸುತ್ತಾರೆ. ಅದರಿಂದ ಜನ ಹಾಸಿಗೆ ಹಿಡಿಯುತ್ತಾರೆ. ಈ ನಡುವೆ ಶಾಸಕ ಬಾಲಯ್ಯನ ಪುತ್ರಿ ಜನನಿ, ರಾಮಾಯಣದಿಂದ ಸ್ಪೂರ್ತಿ ಪಡೆದು ವ್ಯಾಕ್ಸಿನ್ ತಯಾರಿಸುತ್ತಾಳೆ. ಆ ವ್ಯಾಕ್ಸಿನ್ ಅನ್ನು ವಶಪಡಿಸಿಕೊಳ್ಳಲು ದುರುಳರು ಯುವತಿಯ ಹಿಂದೆ ಬೀಳುತ್ತಾರೆ. ಇನ್ನೇನು ದುಷ್ಟರು ಆಕೆಯನ್ನು ಮುಗಿಸೇ ಬಿಡುತ್ತಾರೆ ಎನ್ನುವಾಗ ಆಕೆಯ ಅಂಕಲ್ ಅಖಂಡ ನೆರವಿಗೆ ಬರುತ್ತಾರೆ. ಈ ಕತೆ ಹೇಳಲು ಇಬ್ಬರು ಬಾಲಯ್ಯ, ಇಬ್ಬರು ನಾಯಕಿಯರು, ಆರೇಳು ವಿಲನ್ಗಳು, ಮೂರು ಹಾಡುಗಳು (ಅದರಲ್ಲೊಂದು ಪಾರ್ಟಿ ಸಾಂಗು), ಸುಮಾರು ಆರೇಳು ಫೈಟು, ವಿಪರೀತ ಗ್ರಾಫಿಕ್ಸುಗಳನ್ನು ನಿರ್ದೇಶಕ ಬೊಯಪಾಟಿ ಶ್ರೀನು ಬಳಸಿಕೊಂಡಿದ್ದಾರೆ.
ಇದನ್ನೂ ಓದಿ:The Devil Movie Review: ‘ದಿ ಡೆವಿಲ್’ ರಾಜಕೀಯ ಸಮರದಲ್ಲಿ ದರ್ಶನ್ ವರ್ಸಸ್ ದರ್ಶನ್
ಸಿನಿಮಾದಲ್ಲಿನ ಪ್ರತಿ ಫೈಟ್ಗೆ ಮುಂಚೆ ಮತ್ತು ನಂತರ ಬಾಲಕೃಷ್ಣ ಭಾಷಣ ಮಾಡಿದ್ದಾರೆ. ದೇಶ, ಧರ್ಮ, ಸಮಾಜ ಹೀಗೆ ಪ್ರತಿ ಬಾರಿ ಒಂದೊಂದು ವಿಷಯವನ್ನು ಅವರು ಭಾಷಣಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಸಿನಿಮಾದ ಆಕ್ಷನ್ ದೃಶ್ಯಗಳ ಬಗ್ಗೆ ಬರೆದಷ್ಟೂ ಕಡಿಮೆ. ಫೈಟ್ ದೃಶ್ಯಗಳಿಗೆ ಅಬ್ಬರದ ಹಿನ್ನೆಲೆ ಮ್ಯೂಸಿಕ್ ನೀಡಿದ್ದಾರೆ ಸಂಗೀತ ನಿರ್ದೇಶಕ ಎಸ್ ತಮನ್, ಬಾಲಯ್ಯನ ಪ್ರತಿ ಕದಲಿಕೆಯನ್ನೂ ಎಲಿವೇಟ್ ಮಾಡಿ ತೋರಿಸಿದ್ದಾರೆ ಬೊಯಪಾಟಿ ಶ್ರೀನು. ಫೈಟ್ ಸೀನ್ಗಳಲ್ಲಿ ನಿಜಕ್ಕೂ ಮೆಚ್ಚಬೇಕಾದುದು, ಆಕ್ಷನ್ ಕಲಾವಿದರನ್ನು. ಬಾಲಯ್ಯ ಮುಟ್ಟಿದರೆ ಸಾಕು ಡಿಸೈನ್-ಡಿಸೈನ್ ಆಗಿ ಹಾರಿ ಬೀಳುವ ಅವರ ಶ್ರಮ ಸಾಮಾನ್ಯದ್ದಲ್ಲ. ಕೊನೆಯ ಫೈಟ್ನಲ್ಲಂತೂ ಬಾಲಯ್ಯ ಶತ್ರು ದೇಶದ ಸೈನ್ಯದ ವಿರುದ್ಧ ಹೋರಾಡುತ್ತಾರೆ ಅದೂ ಕೇವಲ ತ್ರಿಶೂಲ ಮಾತ್ರವೇ ಹಿಡಿದು. ರೋಬೋಗಳನ್ನೂ ಸಹ ಬಿಡದೆ ಕೊಂದು ಹಾಕುತ್ತಾರೆ. ರೋಬೊಗಳ ಎದುರು ಫೈಟ್ ಮಾಡುವಾಗ ಜಲ, ವಾಯು, ಅಗ್ನಿ ಹೀಗೆ ಪಂಚಭೂತಗಳ ಅವತಾರ ತಾಳಿ ರೋಬೊಗಳನ್ನೇ ಗಾಬರಿಗೊಳಿಸುತ್ತಾರೆ ಬಾಲಯ್ಯ. ಇಂಥಹಾ ಮಾನವ ಸಹಜವಲ್ಲದ ಐಡಿಯಾಗಳು ಬೊಯಪಾಟಿಗೆ ಮಾತ್ರವೇ ಬರಲು ಸಾಧ್ಯವೇನೊ.
ನಟನೆಯ ವಿಷಯಕ್ಕೆ ಬರುವುದಾದರೆ ಬಾಲಯ್ಯ ತಮ್ಮ ಎಂದಿನ ಉಗ್ರರೂಪಿ ನಟನೆಯಿಂದ ರಂಜಿಸಿದ್ದಾರೆ. ಕಣ್ಣು ದೊಡ್ಡದು ಮಾಡಿ, ಉಸಿರು ಬಿಗಿ ಹಿಡಿದು ಅವರು ಹೇಳುವ ಡೈಲಾಗ್ಗಳು ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸುತ್ತವೆ. ಜನನಿ ಪಾತ್ರಧಾರಿ ಹರ್ಷಾಲಿ ಮುದ್ದಾಗಿ ಕಾಣುತ್ತಾರೆ. ನಾಯಕಿ ಸಂಯುಕ್ತಾ, ಬಾಲಯ್ಯನಿಗೆ ಬಿಲ್ಡಪ್ ಕೊಡುವ ಎರಡು ಡೈಲಾಗ್ ಹೇಳಿ, ಒಂದು ಹಾಡಿನಲ್ಲಿ ಹಾಟ್ ಆಗಿ ಬಾಲಯ್ಯನ ಜೊತೆ ಡ್ಯಾನ್ಸ್ ಮಾಡಿ ಬಳಿಕ ವಿಲನ್ಗಳ ಕೈಯಿಂದ ಸತ್ತು ಹೋಗುತ್ತಾರೆ. ಇನ್ನುಳಿದ ಪಾತ್ರಗಳಿಗೆ ಹೆಚ್ಚಿನ ಕೆಲಸ ಇಲ್ಲ ಬಾಲಯ್ಯನ ಬಗ್ಗೆ ಏನಾದರೂ ಬಿಲ್ಡಪ್ ಕೊಡುವ ಸಂಭಾಷಣೆ ಹೇಳುವುದು ಅಥವಾ ಇತರೆ ಪಾತ್ರಗಳು ಬಾಲಯ್ಯನ ಬಗ್ಗೆ ಏನಾದರೂ ಹೇಳಿದಾಗ ರಿಯಾಕ್ಷನ್ ಕೊಡುವುದಷ್ಟೆ ಅವುಗಳ ಕೆಲಸ. ಮಂತ್ರವಾದಿ ವಿಲನ್ ಆಗಿ ಆದಿ ಪಿನಿಶೆಟ್ಟಿ ತುಸು ಗಮನ ಸೆಳೆಯುತ್ತಾರೆ.
ಸಿನಿಮಾನಲ್ಲಿ ಬಾಲಯ್ಯ ಸಾಕಷ್ಟು ಪಂಚಿಂಗ್ ಡೈಲಾಗ್ಗಳನ್ನು ಹೇಳಿದ್ದಾರೆ. ಚೀನಾಕ್ಕೆ ಹೋಗಿ, ಅಲ್ಲಿನ ಸೈನ್ಯಾಧಿಕಾರಿಗಳಿಗೆ ಭಾರತದ ಇತಿಹಾಸ ಪಾಠ ಮಾಡಿದ್ದಾರೆ. ಧರ್ಮದ ಬಗ್ಗೆ ಹಲವು ಸಂಭಾಷಣೆ ಇವೆ. ಕೆಲವು ಹೌದೆನ್ನುವಂತಿದ್ದರೆ ಕೆಲವು ಪೇಲವ ಒಣ ವಾದದಂತೆ ಅನಿಸುತ್ತವೆ. ದೇವರು ಯಾಕೆ ಬರುತ್ತಿಲ್ಲ ಎಂದು ಕೇಳಿದಾಗ ಬಾಲಯ್ಯ ಕೊಡುವ ಫೋನೆತ್ತದ ಗೆಳೆಯನ ಉದಾಹರಣೆ ನಗು ತರಿಸುತ್ತದೆ. ಸಿನಿಮಾನಲ್ಲಿ ಸರಳ ಸಂಭಾಷಣೆ ಎಂಬುದು ಬಲು ವಿರಳ. ಪ್ರತಿ ಪಾತ್ರ, ಪ್ರತಿ ಸಂಭಾಷಣೆಯನ್ನು ಮಾಸ್ ಡೈಲಾಗ್ ರೀತಿಯೋ ಅಥವಾ ಮೆಲೊಡ್ರಾಮಾ ರೀತಿಯೇ ಹೇಳುವುದು. ಒಂದು ಪಾತ್ರವಂತೂ ನಾಯಕನ ತಾಯಿಯ ಅಂತಿಮ ಸಂಸ್ಕಾರ ಆಗಿದ್ದನ್ನು ಮಾಸ್ ಡೈಲಾಗ್ ರೀತಿ ಹೇಳುವುದು ನಗು ತರಿಸುತ್ತದೆ.
ಸಿನಿಮಾನಲ್ಲಿ ಒಳ್ಳೆಯ ದೃಶ್ಯಗಳೇ ಇಲ್ಲವೆಂದೇನೂ ಇಲ್ಲ ಆದರೆ ಅದನ್ನು ಕಷ್ಟಪಟ್ಟು ಹುಡುಕಬೇಕು, ಅಥವಾ ಬಹಳ ವಿಶಾಲ ಹೃದಯ, ಕ್ಷಮಾಗುಣ ಇದ್ದರೆ ಒಂದೆರಡು ದೃಶ್ಯಗಳನ್ನು ಎತ್ತಿ ತೋರಿಸಬಹುದು. ಭಕ್ತನ ಋಣ ತೀರಿಸಲು ದೇವರು ಭಕ್ತನ ರೂಪದಲ್ಲಿ ಬರುವ ದೃಶ್ಯ ಚೆನ್ನಾಗಿದೆ. ಅದೊಂದು ಒಳ್ಳೆಯ ಆಲೋಚನೆ ಅನಿಸುತ್ತದೆ. ಅದರ ಹೊರತಾಗಿ ಸಿನಿಮಾನಲ್ಲಿ ಕ್ರಿಂಜ್ ಎನಿಸುವ ದೃಶ್ಯಗಳೇ ಹೆಚ್ಚಾಗಿವೆ. ಬಾಲಯ್ಯನ ಸ್ಟಾರ್ ಗಿರಿಯ ಮ್ಯಾಜಿಕ್ಕನ್ನು ನೆಚ್ಚಿಕೊಂಡು, ಸನಾತನ ಧರ್ಮವನ್ನು ಸೆಲ್ಲಿಂಗ್ ಪಾಯಿಂಟ್ ಆಗಿ ಬಳಸಿಕೊಂಡು ಮಾಡಲಾಗಿರುವ ಲಾಜಿಕ್ಲೆಸ್ ಸಿನಿಮಾ ‘ಅಖಂಡ 2’.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Fri, 12 December 25




