ನಾನಿ (Nani) ನಟನೆಯ ಮೊದಲ ಪ್ಯಾನ್ ಇಂಡಿಯಾ (Pan India) ಸಿನಿಮಾ ದಸರಾ (Dasara) ಜೋರಾಗಿ ಸದ್ದು ಮಾಡುತ್ತಿದೆ. ಮಾರ್ಚ್ 30 ರಂದು ಬಿಡುಗಡೆ ಆದ ಈ ಸಿನಿಮಾ ನಾಲ್ಕು ದಿನಕ್ಕೆ ದೊಡ್ಡ ಮೊತ್ತವನ್ನು ಬಾಕ್ಸ್ ಆಫೀಸ್ನಲ್ಲಿ ಕಲೆ ಹಾಕಿದ್ದು, ಜೈತಯಾಥ್ರೆಯನ್ನು ಮುಂದುವರೆಸಿದೆ. ನಾನಿಯ ಈವರೆಗಿನ ವೃತ್ತಿ ಜೀವನದ ದೊಡ್ಡ ಸಿನಿಮಾ ಆಗಿ ದಸರಾ ಹೊರಹೊಮ್ಮಿದ್ದು ಮೊದಲ ದಿನವೇ 38 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ನಾಲ್ಕನೇ ದಿನದ ವೇಳೆಗೆ ನೂರು ಕೋಟಿ ಸಮೀಪಕ್ಕೆ ಬಂದಿದೆ.
ಮಾರ್ಚ್ 30 ರಂದು ಬಿಡುಗಡೆ ಆಗಿದ್ದ ದಸರಾ ಸಿನಿಮಾ ಮೊದಲ ದಿನ 38 ಕೋಟಿ ಗಳಿಸಿ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಅದಾದ ಬಳಿಕ ಎರಡನೇ ದಿನ 15 ಕೋಟಿಗೂ ಹೆಚ್ಚು ಹಣ ಗಳಿಸಿ ಐವತ್ತು ಕೋಟಿ ಮಾರ್ಕ್ ಅನ್ನು ದಾಟಿತ್ತು. ಅದಾದ ಬಳಿಕ ಮೂರನೇ ದಿನ ಅಂದರೆ ಶನಿವಾರ ಕೆಲಕ್ಷನ್ ಹೆಚ್ಚಿಸಿಕೊಂಡು 18 ಕೋಟಿ ಕಲೆಕ್ಷನ್ ಮಾಡಿತ್ತು, ಭಾನುವಾರವೂ ಒಳ್ಳೆಯ ಕಲೆಕ್ಷನ್ ಮಾಡಿದ ದಸರಾ 16 ಕೋಟಿ ಗಳಿಸಿ ನಾಲ್ಕನೇ ದಿನದ ಅಂತ್ಯಕ್ಕೆ ವಿಶ್ವದಾದ್ಯಂತ 87 ಕೋಟಿ ಗಳಿಸಿದೆ. ಇದೇ ವಾರದಲ್ಲಿ ನೂರು ಕೋಟಿ ಕಲೆಕ್ಷನ್ ಅನ್ನು ದಾಟಲಿದೆ ದಸರಾ.
ವಿಶ್ವದಾದ್ಯಂತ 87 ಕೋಟಿ ಗಳಿಸಿರುವ ದಸರಾ ಸಿನಿಮಾ ಭಾರತದಲ್ಲಿ ಈವರೆಗೆ 56 ಕೋಟಿ ಗಳಿಸಿದೆ. ತೆಲುಗು ರಾಜ್ಯಗಳನ್ನು ಹೊರತುಪಡಿಸಿದರೆ ಹಿಂದಿ ಭಾಗದಿಂದ ಸಿನಿಮಾಕ್ಕೆ ಉತ್ತಮ ಕಲೆಕ್ಷನ್ ಹರಿದು ಬಂದಿದೆ. ಸಿನಿಮಾದ ಒಟಿಟಿ ಹಕ್ಕುಗಳು ಈಗಾಗಲೇ ಭಾರಿ ಮೊತ್ತಕ್ಕೆ ಮಾರಾಟವಾಗಿದ್ದು ಸ್ಯಾಟಲೈಟ್, ಆಡಿಯೋ ಹಕ್ಕುಗಳನ್ನು ಸಹ ದೊಡ್ಡ ಮೊತ್ತಕ್ಕೆ ಮಾರಿದೆ ಚಿತ್ರತಂಡ.
ಇದನ್ನೂ ಓದಿ: ಅಬ್ಬರದ ಓಪನಿಂಗ್ ಪಡೆದ ನಾನಿ ನಟನೆಯ ‘ದಸರಾ’; ಆದರೂ, ‘ಕಬ್ಜ’ ದಾಖಲೆ ಮುರಿಯಲಿಲ್ಲ
ದಸರಾ ಸಿನಿಮಾವು ನಾನಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾಕ್ಕೆ ಹಿಂದಿಯ ಭೋಲಾ, ತಮಿಳಿನ ಪತ್ತು ತಲ ಹಾಗೂ ವಿಡುದಲೈ ಹಾಗೂ ಕನ್ನಡದ ಹೊಯ್ಸಳ ಸಿನಿಮಾಗಳಿಂದ ಪ್ರತಿಸ್ಪರ್ಧೆ ಎದುರಾಗಿತ್ತು. ಆದರೆ ಎಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ ಈ ವಾರದ ಸೂಪರ್ ಹಿಟ್ ಸಿನಿಮಾ ಆಗಿ ದಸರಾ ಹೊರಹೊಮ್ಮಿದೆ. ಸಿನಿಮಾದ ಯಶಸ್ಸನ್ನು ಚಿತ್ರತಂಡ ಸಂಭ್ರಮಿಸುತ್ತಿದ್ದು, ಸಿನಿಮಾವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ನಟ ನಾನಿ ಸಾಮಾಜಿಕ ಜಾಲತಾಣದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ದಸರಾ ಸಿನಿಮಾವು ಕಲ್ಲಿದ್ದಲು ಗಣಿಯ ಸುತ್ತ ನಡೆಯುವ ಗ್ರಾಮೀಣ ಸೊಗಡಿನ ಕತೆಯನ್ನು ಒಳಗೊಂಡಿದೆ. ನಟ ನಾನಿ ಜೊತೆಗೆ ಮಲಯಾಳಂ ನಟಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದ ನಟ ದೀಕ್ಷಿತ್ ಸಹ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಮಲಯಾಳಂನ ಖ್ಯಾತ ನಟ ಶೈನ್ ಚಾಕೊ, ತಮಿಳಿನ ಸಮುದ್ರಕಿಣಿ, ಸಾಯಿಕುಮಾರ್ ಅವರುಗಳು ಸಹ ಇದ್ದಾರೆ. ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶನ ಮಾಡಿದ್ದು, ಇದು ಅವರ ಮೊದಲ ಸಿನಿಮಾ ಆಗಿದೆ. ಸಿನಿಮಾ ನಿರ್ಮಾಣ ಮಾಡಿರುವುದು ಸುಧಾಕರ ಚೆರುಕುರಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ