ಕಾನ್​ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಪಾಯಲ್​ ಕಪಾಡಿಯಾಗೆ ನರೇಂದ್ರ ಮೋದಿ ಅಭಿನಂದನೆ

ನಿರ್ದೇಶಕಿ ಪಾಯಲ್​ ಕಪಾಡಿಯಾ ಅವರಿಗೆ ಕಾನ್​ ಚಿತ್ರೋತ್ಸವದಲ್ಲಿ ‘ಗ್ರ್ಯಾಂಡ್​ ಪ್ರಿಕ್ಸ್​’ ಪ್ರಶಸ್ತಿ ನೀಡಲಾಗಿದೆ. ಈ ಕಾರಣಕ್ಕಾಗಿ ಭಾರತೀಯರಿಗೆ 77ನೇ ಸಾಲಿನ ಕಾನ್​ ಫಿಲ್ಮ್​ ಫೆಸ್ಟಿವಲ್​ ವಿಶೇಷವಾಗಿದೆ. ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದ್ದು, ನರೇಂದ್ರ ಮೋದಿ ಅವರು ಪಾಯಲ್​ ಕಪಾಡಿಯಾಗೆ ಅಭಿನಂದನೆ ಸಲ್ಲಿಸಿದ್ದಾರೆ.

ಕಾನ್​ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗೆದ್ದ ಪಾಯಲ್​ ಕಪಾಡಿಯಾಗೆ ನರೇಂದ್ರ ಮೋದಿ ಅಭಿನಂದನೆ
ಚಿತ್ರತಂಡದ ಜೊತೆ ಪಾಯಲ್​ ಕಪಾಡಿಯಾ

Updated on: May 26, 2024 | 8:25 PM

77ನೇ ಸಾಲಿನ ಕಾನ್ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾರತಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. ನಿರ್ದೇಶಕಿ ಪಾಯಲ್​ ಕಪಾಡಿಯಾ ಅವರ ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ (All We Imagine As Light) ಸಿನಿಮಾಗೆ ಗ್ರ್ಯಾಂಡ್​ ಪ್ರಿಕ್ಸ್​ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿ ಪಡೆದ ಭಾರತದ ಮೊದಲ ಡೈರೆಕ್ಟರ್​ ಎಂಬ ಖ್ಯಾತಿಗೆ ಪಾಯಲ್​ ಕಪಾಡಿಯಾ (Payal Kapadia) ಅವರು ಪಾತ್ರರಾಗಿದ್ದಾರೆ. ಅವರಿಗೆ ಸೋಶಿಯಲ್​ ಮೀಡಿಯಾ ಮೂಲಕ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ. ಪಾಯಲ್​ ಕಪಾಡಿಯಾ ಅವರಿಂದಾಗಿ ಯುವ ಫಿಲ್ಮ್​ ಮೇಕರ್​ಗಳಿಗೆ ಸ್ಫೂರ್ತಿ ಸಿಕ್ಕಿದೆ ಎಂದು ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.

‘ಪಾಯಲ್​ ಕಪಾಡಿಯಾ ಅವರಿಂದ ಭಾರತಕ್ಕೆ ಹೆಮ್ಮೆ ಆಗಿದೆ. 77ನೇ ಕಾನ್​ ಚಿತ್ರೋತ್ಸವದಲ್ಲಿ ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ ಸಿನಿಮಾಗೆ ಅವರು ಗ್ರ್ಯಾಂಡ್​ ಪ್ರಿಕ್ಸ್​ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಫಿಲ್ಮ್​ ಆ್ಯಂಡ್​ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಹಳೇ ವಿದ್ಯಾರ್ಥಿಯಾದ ಅವರು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆಯಿಂದ ಶೈನ್​ ಆಗುತ್ತಿದ್ದಾರೆ. ಭಾರತದ ಶ್ರೀಮಂತ ಸೃಜನಶೀಲತೆಗೆ ಅವರು ಸಾಕ್ಷಿ. ಈ ಪ್ರತಿಷ್ಠಿತ ಪ್ರಶಸ್ತಿಯು ಅವರಿಗೆ ಸಂದ ಗೌರವ ಮಾತವಲ್ಲದೇ, ಭಾರತದಲ್ಲಿನ ಹೊಸ ತಲೆಮಾರಿನ ಫಿಲ್ಮ್​ ಮೇಕರ್​ಗಳಿಗೆ ಸ್ಫೂರ್ತಿಯಾಗಿದೆ’ ಎಂದು ನರೇಂದ್ರ ಮೋದಿ ಅವರು ‘ಎಕ್ಸ್​’ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಕಳೆದ 30 ವರ್ಷಗಳಲ್ಲಿ ಕಾನ್​ ಚಿತ್ರೋತ್ಸವದ ಮುಖ್ಯ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಸಿನಿಮಾ ಇದಾಗಿದೆ. ಬೇರೆ ಬೇರೆ ದೇಶಗಳ ಸಿನಿಮಾಗಳ ಜೊತೆ ಸ್ಪರ್ಧಿಸಿ ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ ಸಿನಿಮಾ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಿನಿಮಾದ ಕಲಾವಿದರ ಜೊತೆ ನಿರ್ದೇಶಕಿ ಪಾಯಲ್​ ಕಪಾಡಿಯಾ ಅವರು ಕಾನ್​ ಚಿತ್ರೋತ್ಸವಕ್ಕೆ ತೆರಳಿದ್ದಾರೆ.

ಇದನ್ನೂ ಓದಿ: ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ಗೆ ಮೆರುಗು ತಂದ ಅದಿತಿ ರಾವ್​ ಹೈದರಿ

ನಿರ್ದೇಶಕಿ ಪಾಯಲ್​ ಕಪಾಡಿಯಾ ಅವರ ಈ ಸಾಧನೆಗಾಗಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಇಂಡೋ-ಫ್ರೆಂಚ್ ಪ್ರೊಡಕ್ಷನ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಮೇ 23ರಂದು ಈ ಸಿನಿಮಾದ ಪ್ರೀಮಿಯರ್​ ಆಯಿತು. ಅಂದು ಸಿನಿಮಾ ಮುಗಿದ ಬಳಿಕ ಪ್ರೇಕ್ಷಕರು 8 ನಿಮಿಷಗಳ ಕಾಲ ಎದ್ದು ನಿಂತು ಈ ಚಿತ್ರತಂಡಕ್ಕೆ ಗೌರವ ಸಲ್ಲಿಸಿದರು ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us