ಪವಿತ್ರಾ-ನರೇಶ್​ರ ‘ಮಳ್ಳಿ ಪೆಳ್ಳಿ’ ಸಿನಿಮಾಕ್ಕೆ ಸಂಕಷ್ಟ, ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನರೇಶ್ ಪತ್ನಿ

Naresh-Pavitra: ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟಿಸಿರುವ ಮಳ್ಳಿ ಪೆಳ್ಳಿ ಸಿನಿಮಾಕ್ಕೆ ಸಂಕಷ್ಟ ಎದರಾಗಿದೆ. ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಪವಿತ್ರಾ-ನರೇಶ್​ರ 'ಮಳ್ಳಿ ಪೆಳ್ಳಿ' ಸಿನಿಮಾಕ್ಕೆ ಸಂಕಷ್ಟ, ಸಿನಿಮಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನರೇಶ್ ಪತ್ನಿ
ರಮ್ಯಾ-ನರೇಶ್
Follow us
ಮಂಜುನಾಥ ಸಿ.
|

Updated on: May 25, 2023 | 4:35 PM

ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ನಟಿಸಿರುವ ಮಳ್ಳಿ ಪೆಳ್ಳಿ (ಮತ್ತೆ ಮದುವೆ) ಸಿನಿಮಾ ನಾಳೆ (ಮೇ 26) ತೆರೆಗೆ ಬರಲಿದೆ. ಚಿತ್ರತಂಡ ಸಹ ಅಬ್ಬರದ ಪ್ರಚಾರ ನಡೆಸುತ್ತಿದೆ. ಆದರೆ ಈ ನಡುವೆ ಸಿನಿಮಾಕ್ಕೆ ಸಂಕಷ್ಟವೊಂದು ಎದುರಾಗಿದೆ. ನರೇಶ್​ರ ಮೂರನೇ ಪತ್ನಿ ರಮ್ಯಾ ರಘುಪತಿ ಮಳ್ಳಿ ಪೆಳ್ಳಿ ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಘನತೆಗೆ ಧಕ್ಕೆ ಬರುವ ಸನ್ನಿವೇಶಗಳು, ದೃಶ್ಯಗಳು ಇರುವ ಕಾರಣ ಸಿನಿಮಾಕ್ಕೆ ತಡೆ ನೀಡಬೇಕು ಎಂದು ರಮ್ಯಾ ರಘುಪತಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಕೂಕಟಪಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ರಮ್ಯಾ ರಘುಪತಿ ಈ ಮನವಿಯನ್ನು ಮಾಡಿದ್ದಾರೆ. ಅದೇ ನ್ಯಾಯಾಲಯದಲ್ಲಿ ರಮ್ಯಾ ರಘುಪತಿ ಹಾಗೂ ನರೇಶ್​ರ ದಾಂಪತ್ಯಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿದೆ. ನ್ಯಾಯಾಲಯವು ರಮ್ಯಾ ರಘುಪತಿಯವರ ಅರ್ಜಿಯ ವಿಚಾರಣೆ ಇನ್ನೂ ಮಾಡಿಲ್ಲ.

ರಮ್ಯಾ ರಘುಪತಿ, ನರೇಶ್​ರ ಮೂರನೇ ಪತ್ನಿ. ನರೇಶ್ ಹಾಗೂ ಪವಿತ್ರಾ ವಿರುದ್ಧ ಮಾಧ್ಯಮಗಳ ಮುಂದೆ ಆರೋಪ ಮಾಡಿದ್ದ ರಮ್ಯಾ ರಘುಪತಿ, ಮೈಸೂರಿನಲ್ಲಿ ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ಇದ್ದ ಹೋಟೆಲ್​ಗೆ ತೆರಳಿ ರಾದ್ಧಾಂತ ಮಾಡಿದ್ದರು. ನರೇಶ್ ಹಾಗೂ ಪವಿತ್ರಾ ವಿರುದ್ಧ ಸತತವಾಗಿ ಮಾಧ್ಯಮಗಳ ಮುಂದೆ ಆರೋಪಗಳನ್ನು ಮಾಡಿದ್ದರು. ಈಗ ಅದೇ ಕೆಲವು ಘಟನೆಗಳನ್ನು ಇರಿಸಿಕೊಂಡು ‘ಮಳ್ಳಿ ಪೆಳ್ಳಿ’ (ಮತ್ತೆ ಮದುವೆ) ಸಿನಿಮಾ ಮಾಡಲಾಗಿದೆ. ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಸಿನಿಮಾದಲ್ಲಿ ಮರುಸೃಷ್ಟಿಸಲಾಗಿದೆ. ಹಾಗಾಗಿ ಈಗ ರಮ್ಯಾ ರಘುಪತಿ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ:ಪವಿತ್ರಾ ಲೋಕೇಶ್ ಹಾಗೂ ತಮ್ಮ ಸಂಬಂಧದ ಬಗ್ಗೆ ಸತ್ಯ ನುಡಿದ ನಟ ನರೇಶ್

ನಟ ನರೇಶ್​ಗೆ ಮೂವರು ಪತ್ನಿಯರು, ಅದರಲ್ಲಿ ರಮ್ಯಾ ರಘುಪತಿ ಮೂರನೇಯವರು. ಕರ್ನಾಟಕ ಮೂಲದವರಾದ ರಮ್ಯಾ ರಘುಪತಿ ಕೆಲ ವರ್ಷಗಳ ಹಿಂದೆ ನರೇಶ್ ಅವರನ್ನು ವಿವಾಹವಾಗಿದ್ದರು. ಆದರೆ ಇವರ ದಾಂಪತ್ಯ ಹೆಚ್ಚು ಕಾಲ ಇರಲಿಲ್ಲ. ಇಬ್ಬರೂ ಬೇರೆ-ಬೇರೆಯಾಗಿ ವಾಸಿಸುತ್ತಿದ್ದರು. ಅದಾದ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹತ್ತಿರವಾದರು. ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳಲಾರಂಭಿಸಿದರು. ಸಹಜೀವನ ನಡೆಸಲಾರಂಭಿಸಿದರು. ಆಗ ಹಠಾತ್ತನೆ ಮಾಧ್ಯಮಗಳ ಮುಂದೆ ಬಂದ ರಮ್ಯಾ, ತಮಗೆ ನರೇಶ್​ರಿಂದ ಅನ್ಯಾಯವಾಗಿದೆ ಎಂದು ಅವಲತ್ತುಕೊಂಡರು.

ಇದೀಗ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮಳ್ಳಿ ಪೆಳ್ಳಿ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು. ಈ ಸಿನಿಮಾದ ಕತೆ ಬಹುತೇಕ ಅವರ ಜೀವನದ ಕತೆಯಂತೆಯೇ ಇದೆ. ಸಿನಿಮಾದಲ್ಲಿ ರಮ್ಯಾ ರಘುಪತಿ ಪಾತ್ರವೂ ಇರುವುದಾಗಿ ಟ್ರೈಲರ್​ನಿಂದ ತಿಳಿದು ಬರುತ್ತಿದೆ. ಸಿನಿಮಾವನ್ನು ಎಂಎಸ್ ರಾಜು ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಸ್ವತಃ ನರೇಶ್. ಮಳ್ಳಿ ಪೆಳ್ಳಿ ಸಿನಿಮಾವನ್ನು ಕನ್ನಡ, ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ನಾಳೆ (ಮೇ 26)ಕ್ಕೆ ಆಂಧ್ರ ಹಾಗೂ ತೆಲಂಗಾಣಗಳಲ್ಲಿ ಬಿಡುಗಡೆ ಆಗುತ್ತಿದೆ. ಮುಂದಿನ ತಿಂಗಳು ಕನ್ನಡದಲ್ಲಿ ಮತ್ತೆ ಮದುವೆ ಹೆಸರಿನಲ್ಲಿ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ