
ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ದಂಪತಿ ತಮ್ಮ ಮುದ್ದಾದ ಅವಳಿ ಮಕ್ಕಳಾದ ಉಯಿರ್ ಮತ್ತು ಉಲಗ್ ಅವರ ನಾಲ್ಕನೇ ವರ್ಷದ ಜನ್ಮದಿನವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದ್ದಾರೆ. ಈ ವಿಶೇಷ ಸಂಭ್ರಮದ ಸುಂದರ ಕ್ಷಣಗಳ ಚಿತ್ರಗಳನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜಂಗಲ್ ಥೀಮ್‌ನಲ್ಲಿ ಸಿದ್ಧಗೊಂಡಿದ್ದ ಈ ಪಾರ್ಟಿಯ ಫೋಟೋಗಳು ಈಗ ಅಭಿಮಾನಿಗಳ ಮನ ಗೆದ್ದಿವೆ.
ಜನ್ಮದಿನದ ಪಾರ್ಟಿಗಾಗಿ ಇಡೀ ಸಭಾಂಗಣವನ್ನು ಅರಣ್ಯದ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ಹಸಿರು ಗಿಡ ಮರಗಳು ಹಾಗೂ ಪ್ರಾಣಿಗಳ ಮಾದರಿಗಳು ಎಲ್ಲರ ಗಮನ ಸೆಳೆದವು. ಫೋಟೋದಲ್ಲಿ ದಂಪತಿಗಳು ಮಕ್ಕಳನ್ನು ಅಪ್ಪಿಕೊಂಡು ಪ್ರೀತಿ ತೋರುತ್ತಿರುವುದನ್ನು ಕಾಣಬಹುದು. ಸುಂದರ ವಾತಾವರಣದಲ್ಲಿ ಮಕ್ಕಳ ಹುಟ್ಟುಹಬ್ಬ ಸಖತ್ ರಂಗೇರಿತ್ತು.
ಮಕ್ಕಳಿಗಾಗಿ ವಿಶೇಷವಾಗಿ ಎರಡೆರಡು ಹಂತಗಳ ಜಂಗಲ್ ಥೀಮ್ ಕೇಕ್ ಸಿದ್ಧಪಡಿಸಲಾಗಿತ್ತು. ಇದಲ್ಲದೆ ಬ್ಲಾಕ್ ಪ್ಯಾಂಥರ್ ಹಾಗೂ ಅವೆಂಜರ್ಸ್ ಥೀಮ್ ಹೊಂದಿದ್ದ ಕೇಕ್‌ಗಳು ಕೂಡ ಪಾರ್ಟಿಯಲ್ಲಿದ್ದವು. ಮಕ್ಕಳು ನೃತ್ಯ ಮಾಡುತ್ತಿರುವ ಮುದ್ದಾದ ವೀಡಿಯೋ ಒಂದನ್ನು ಹಂಚಿಕೊಂಡ ದಂಪತಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ. ತಮ್ಮ ಜೀವನದ ಪ್ರತಿಯೊಂದು ಕ್ಷಣಕ್ಕೂ ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ನಯನತಾರಾ ಮತ್ತು ವಿಘ್ನೇಶ್ ಶಿವನ್ 2022 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಈ ಮಕ್ಕಳನ್ನು ಪಡೆದಿದ್ದರು. ಸಿನಿಮಾ ವಿಚಾರಕ್ಕೆ ಬಂದರೆ ನಯನತಾರಾ ಮುಂದಿನ ದಿನಗಳಲ್ಲಿ ‘ಮೂಕುತ್ತಿ ಅಮ್ಮನ್ 2’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಭಕ್ತಿಪ್ರಧಾನ ಥ್ರಿಲ್ಲರ್ ಸಿನಿಮಾ ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 6 ರಂದು ತೆರೆಕಾಣಲಿದೆ.
ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅಕ್ಕ ಆಗಲು ಒಪ್ಪಿದ್ದೇಕೆ? ನಯನತಾರಾ ಸ್ಪಷ್ಟನೆ
ಇದಷ್ಟೇ ಅಲ್ಲದೆ ಸಲ್ಮಾನ್ ಖಾನ್ ಜೊತೆಗಿನ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆಕ್ಷನ್ ಸಿನಿಮಾದಲ್ಲೂ ನಯನತಾರಾ ನಟಿಸುತ್ತಿದ್ದಾರೆ. ಈ ಬಿಗ್ ಬಜೆಟ್ ಚಿತ್ರವನ್ನು ವಂಶಿ ಪೈಡಿಪಲ್ಲಿ ನಿರ್ದೇಶಿಸುತ್ತಿದ್ದು, ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಪ್ರಸ್ತುತ ನಯನತಾರಾ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.