
ಯುವ ಪ್ರತಿಭೆ ಶ್ರೀರಾಮ್ ಗಂಧರ್ವ ಸಾರಥ್ಯದಲ್ಲಿ ಮೂಡಿಬಂದಿರುವ ನವಿರಾದ ಪ್ರೇಮಕಥೆಯ ‘ಕನಸಲು…’ ಆಲ್ಬಂ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರೋದ್ಯಮದ ಹಲವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡನ್ನು ಪ್ರದರ್ಶಿಸಿ ಶುಭಕೋರಲಾಯಿತು. ಸಾಧಾರಣ ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಸುಂದರ ಪ್ರೇಮಕಥೆ ಈ ಹಾಡಿನಲ್ಲಿದೆ. ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುವ ಯುವಕ, ಅಲ್ಲಿಗೆ ಬರುವ ಮೀರಾ ಎಂಬ ಯುವತಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆತನ ಪ್ರಾಮಾಣಿಕತೆಗೆ ಒಲಿಯುವ ಯುವತಿಯ ಪ್ರತಿಕ್ರಿಯೆ ಏನು ಎಂಬುದನ್ನು ಹಾಡಿನ ಕೊನೆಯಲ್ಲಿ ಕುತೂಹಲಕಾರಿಯಾಗಿ ತೋರಿಸಲಾಗಿದೆ.
ಶ್ರೀರಾಮ್ ಗಂಧರ್ವ ಅವರು ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿ, ಸ್ವತಃ ಹಾಡಿ ನಿರ್ದೇಶನವನ್ನೂ ಮಾಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರ್ದೇಶಕನಾಗಿ ತಮ್ಮ ಮೂರು ಸಿನಿಮಾಗಳು ಸಿದ್ಧವಾಗುತ್ತಿವೆ ಎಂದು ತಿಳಿಸಿದರು. ಕಿಶೋರ್, ರವಿಶಂಕರ್ ಗೌಡ ನಟನೆಯ ಚಿತ್ರಗಳು ಹಾಗೂ ಒಂದು ಬಾಲಿವುಡ್ ಸಿನಿಮಾ ಕೂಡ ಅದರಲ್ಲಿ ಸೇರಿದೆ ಎಂದು ಅವರು ಹೇಳಿದರು.
ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ‘ಕಂಗ್ರಾಜುಲೇಶನ್ಸ್ ಬ್ರದರ್ಸ್’ ಚಿತ್ರದ ನಾಯಕ ರಕ್ಷಿತ್ ನಾಗ್ ಮಾತನಾಡಿ, ‘ಜನರು ಬೇಗ ಮರೆಯುವುದರಿಂದ ಶ್ರೀರಾಮ್ ಅವರು ನಿರಂತರವಾಗಿ ಇಂತಹ ಉತ್ತಮ ಹಾಡುಗಳನ್ನು ನೀಡುತ್ತಿರಬೇಕು’ ಎಂದು ಸಲಹೆ ನೀಡಿದರು. ಖ್ಯಾತ ಜಾನಪದ ಗಾಯಕ ಜೋಗಿಲಾ ಸಿದ್ಧರಾಜು ಮಾತನಾಡಿ, ‘ಕನ್ನಡದಲ್ಲಿ ಹೆಚ್ಚಾಗಿ ಹೊರಗಿನ ಗಾಯಕರನ್ನೇ ಬಳಸಿಕೊಳ್ಳಲಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಶ್ರೀರಾಮ್ ಅವರಂತಹ ಸ್ಥಳೀಯ ಬಹುಮುಖ ಪ್ರತಿಭೆಗಳು ಹೊರಬರಲು ಇಂತಹ ಆಲ್ಬಮ್‌ಗಳು ಅಗತ್ಯ’ ಎಂದರು.
ಶ್ರೀರಾಮ್ ಅವರ ತಂದೆ ಗಂಧರ್ವ ಅವರು ಮಾತನಾಡಿ, ‘ಎರಡೂವರೆ ಗಂಟೆಯ ಸಿನಿಮಾದಲ್ಲಿ ಹೇಳಲಾಗದ ಭಾವನೆಯನ್ನು ಕೆಲವೇ ನಿಮಿಷಗಳ ಆಲ್ಬಮ್‌ನಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಮಗನ ತಂಡವನ್ನು ಹಾರೈಸಿದರು. ಪ್ರಿಯಕರನಾಗಿ ಅಭಿನಯಿಸಿರುವ ದರ್ಶನ್ ಅವರಿಗೆ ಇದು ಮೊದಲ ಕ್ಯಾಮೆರಾ ಅನುಭವವಾದರೆ, ಪ್ರೇಯಸಿ ಮೀರಾ ಪಾತ್ರದಲ್ಲಿ ನಟಿಸಿರುವ ಗಗನಾ ಅವರಿಗೆ ಇದು ಮೊದಲ ಆಲ್ಬಮ್ ಹಾಡಾಗಿದೆ.
ಇದನ್ನೂ ಓದಿ: ಡ್ರೋನ್ನಲ್ಲಿ ಚಿತ್ರಿತವಾಯ್ತು ‘ಗಗನ ಮಿಲನ’ ರೊಮ್ಯಾಂಟಿಕ್ ಆಲ್ಬಂ ಗೀತೆ
‘ಡಾಲಿ ಪಿಕ್ಚರ್ಸ್’ ಬ್ಯಾನರ್‌ನಲ್ಲಿ ರಿಚರ್ಡ್ ಅವರು ‘ಕನಸಲು..’ ಆಲ್ಬಂ ಗೀತೆಯನ್ನು ನಿರ್ಮಿಸಿದ್ದಾರೆ. ರವಿಕುಮಾರ್ ಬಿ.ಎಮ್. ಅವರು ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ‘ಆನಂದ್ ಆಡಿಯೋ’ ಮೂಲಕ ಈ ಹಾಡು ಬಿಡುಗಡೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.