
ಸಿನಿಮಾ (Cinema) ರಂಗಗಳಲ್ಲಿ ಸಿನಿಮಾ ಪ್ರದರ್ಶಕ ಮತ್ತು ನಿರ್ಮಾಪಕರ ನಡುವೆ ಕಲಹ ನಡೆಯುತ್ತಲೇ ಇರುತ್ತದೆ. ನಿರ್ದಿಷ್ಟ ಚಿತ್ರರಂಗಗಳು ಇದರಿಂದ ಹೊರತು ಎನ್ನುವಂತಿಲ್ಲ. ಈ ಸಮಸ್ಯೆ ಬಹುತೇಕ ಎಲ್ಲ ಚಿತ್ರರಂಗಗಳಲ್ಲಿಯೂ ಸಾಮಾನ್ಯ. ಆದರೆ ಸಿನಿಮಾ ಪ್ರದರ್ಶನವನ್ನೇ ನಿಲ್ಲಿಸುವ ಅಥವಾ ಸಿನಿಮಾ ಬಿಡುಗಡೆಗೆ ತಡೆ ಒಡ್ಡುವ ಹಂತಕ್ಕೆ ಈ ಭಿನ್ನಾಭಿಪ್ರಾಯಗಳು ಹೋಗಿದ್ದಿಲ್ಲ. ಆದರೆ ಇದೀಗ ತಮಿಳು ಚಿತ್ರರಂಗದಲ್ಲಿ ಭಿನ್ನಾಭಿಪ್ರಾಯ ಮೇರೆ ಮೀರಿದ್ದು, ಹೊಸ ಸಿನಿಮಾಗಳ ಬಿಡುಗಡೆಗೆ ತಡೆ ಹಾಕಲಾಗಿದೆ.
ಮುಂದಿನ ವಾರದ ನಂತರ ಯಾವುದೇ ಹೊಸ ತಮಿಳು ಚಲನಚಿತ್ರಗಳು ಬಿಡುಗಡೆಯಾಗುವುದಿಲ್ಲ ಎಂದು ತಮಿಳು ಚಿತ್ರರಂಗದ ಎರಡು ಪ್ರಮುಖ ನಿರ್ಮಾಪಕರ ಸಂಘಟನೆಗಳು ಘೋಷಿಸಿವೆ. ಇದಕ್ಕೆ ಕಾರಣವಾಗಿದ್ದು ಕೆಲವೇ ದಿನಗಳ ಹಿಂದೆ ತಮಿಳುನಾಡಿನ ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಮಾಡಿರು ಘೋಷಣೆಯೇ ಆಗಿದೆ. ಯಾವ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಎಂಟು ವಾರದ ಬಳಿಕವಷ್ಟೆ ಒಟಿಟಿಯಲ್ಲಿ ಬಿಡುಗಡೆ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿರುತ್ತವೆಯೋ ಅಂಥಹಾ ಸಿನಿಮಾಗಳನ್ನಷ್ಟೆ ಪ್ರದರ್ಶಿಸುವುದಾಗಿ ತಮಿಳುನಾಡಿನ ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಇತ್ತೀಚೆಗಷ್ಟೆ ಘೋಷಣೆ ಮಾಡಿದ್ದಾರೆ. ಇದು ತಮಿಳುನಾಡು ಸಿನಿಮಾ ನಿರ್ಮಾಪಕರ ಸಿಟ್ಟಿಗೆ ಕಾರಣವಾಗಿದೆ.
ಇದೇ ಕಾರಣಕ್ಕೆ ಟಿಎಫ್ಪಿಸಿ (ತಮಿಳುನಾಡು ಸಿನಿಮಾ ನಿರ್ಮಾಪಕರ ಒಕ್ಕೂಟ) ಸೆಪ್ಟೆಂಬರ್ 1 ರಿಂದ ಚಿತ್ರಮಂದಿರಗಳಲ್ಲಿ ಯಾವುದೇ ಹೊಸ ತಮಿಳು ಚಿತ್ರಗಳು ಬಿಡುಗಡೆಯಾಗುವುದಿಲ್ಲ ಎಂದು ಘೋಷಿಸಿದೆ. ತಮಿಳುನಾಡು ಸಕ್ರಿಯ ನಿರ್ಮಾಪಕರ ಸಂಘವು ಸಹ ಇದಕ್ಕೆ ಬೆಂಬಲ ನೀಡಿದೆ. ‘ನಿರ್ಮಾಪಕರ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ವಿತರಕರ ಸಂಘ ಮತ್ತು ತಮಿಳುನಾಡು ಥಿಯೇಟರ್ ಮಾಲೀಕರ ಸಂಘವು ಹೊಸ ನಿಯಮವನ್ನು ಘೋಷಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದಿದೆ ನಿರ್ಮಾಪಕರ ಸಂಘ.
ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾದ ಮುಖ್ಯ ಆಕರ್ಷಣೆ ಏನು? ರುಕ್ಮಿಣಿ ವಸಂತ್ ಕೊಟ್ಟರು ಉತ್ತರ
‘ಒಟಿಟಿ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡುವ ಮೊದಲು ಚಿತ್ರವು ಚಿತ್ರಮಂದಿರಗಳಲ್ಲಿ ಕಡ್ಡಾಯವಾಗಿ 8 ವಾರಗಳ ಕಾಲ ಪ್ರದರ್ಶನಗೊಳ್ಳುತ್ತದೆ ಎಂದು ನಿರ್ಮಾಪಕರು ಲಿಖಿತ ಭರವಸೆ ನೀಡಿದರೆ ಮಾತ್ರ ಹೊಸ ಚಿತ್ರಗಳನ್ನು ಪ್ರದರ್ಶಿಸುವುದಾಗಿ ಅವು ತಿಳಿಸಿದ್ದವು. ಅಲ್ಲದೆ, ಹೊಸ ಚಿತ್ರಗಳಿಗೆ ಯಾವುದೇ ಮುಂಗಡ ಹಣ ನೀಡುವುದಿಲ್ಲ ಎಂದೂ ಅವರು (ಪ್ರದರ್ಶಕರು-ವಿತರಕರು) ಘೋಷಿಸಿದ್ದಾರೆ. ಇಂತಹ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಕಾರಣ, ನಿರ್ಮಾಪಕರ ಮಂಡಳಿಯು ಹೊಸ ಸಿನಿಮಾ ಅನ್ನು ಬಿಡುಗಡೆ ಮಾಡದೇ ಇರುವ ನಿರ್ಣಯ ಮಾಡಿದೆ’ ಎಂದಿದೆ ನಿರ್ಮಾಪಕರ ಸಂಘ.
ನಿರ್ಮಾಪಕರ ಈ ನಿರ್ಧಾರದಿಂದ ತಮಿಳುನಾಡಿನಲ್ಲಿ ‘ಟಾಕ್ಸಿಕ್’ ಸಿನಿಮಾ ರಿಲೀಸ್ಗೂ ಸಮಸ್ಯೆ ಆಗುವ ಸಾಧ್ಯತೆ ಇದೆ. ಈಗಾಗಲೇ ‘ಟಾಕ್ಸಿಕ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಚೆನ್ನೈನಲ್ಲಿ ಓಪನ್ ಆಗಿದೆ. ಹಾಗಾಗಿ ಮುಂದೇನಾಗುತ್ತದೆ ನೋಡಬೇಕಿದೆ. ಇನ್ನು ಸೆಪ್ಟೆಂಬರ್‌ನ ಮೊದಲ ವಾರಗಳಲ್ಲಿ ಕಾರ್ತಿ ಅಭಿನಯದ ಬಹು ನಿರೀಕ್ಷಿತ ‘ಸರ್ದಾರ್ 2’ ಸೇರಿದಂತೆ ಒಟ್ಟು ನಾಲ್ಕು ತಮಿಳು ಚಿತ್ರಗಳು ಬಿಡುಗಡೆ ಆಗಲಿದ್ದವು. ಈ ಚಿತ್ರವು ಸೆಪ್ಟೆಂಬರ್ 10 ರಂದು ಬಿಡುಗಡೆಯಾಗಬೇಕಿತ್ತು. ಅದರ ಜೊತೆಗೆ ಜಿವಿ ಪ್ರಕಾಶ್ ಕುಮಾರ್ ಮತ್ತು ಕಾಯದು ಲೋಹರ್ ನಟನೆಯ ‘ಇಮ್ಮಾರ್ಟಲ್’, ಸೂರಿ ಮತ್ತು ಸುಹಾಸ್ ಅವರ ‘ಮಂದಾಡಿ’, ಹಾಗೂ ಜ್ಞಾನಮುತ್ತು ಅರುಣ್ನಿಧಿ ಮತ್ತು ಪ್ರಿಯಾ ಭವಾನಿ ಶಂಕರ್ ನಟನೆಯ ‘ಡಿಮೋಂಟೆ ಕಾಲನಿ 3’ ಚಿತ್ರಗಳು ಸೆಪ್ಟೆಂಬರ್ ಮೊದಲಾರ್ಧದಲ್ಲಿ ಬಿಡುಗಡೆಯಾಗಬೇಕಿದ್ದ ಇತರ ಚಿತ್ರಗಳಾಗಿವೆ. ಅದಾದ ಬಳಿಕ ‘ಜೈಲರ್ 2’, ಧನುಷ್ ಅವರ ‘ಓಂ’, ವಿಜಯ್ ಸೇತುಪತಿ ಅವರ ‘ಬತ್ತಾ’, ಮತ್ತು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ಅವರ ನಿರ್ದೇಶನದ ಮೊದಲ ಚಿತ್ರವಾದ ‘ಸಿಗ್ಮಾ’ ಬಿಡುಗಡೆ ಆಗಲಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:05 pm, Sun, 23 August 26