ಸಿನಿಮಾ ಆಗುತ್ತಿದೆ ಸುಭಾಷ್ ಚಂದ್ರಬೋಸ್ ಜೀವನ ರಹಸ್ಯ: ಟೀಸರ್ ಬಿಡುಗಡೆ
Subhash Chandra Bose: ಸುಭಾಷ್ ಚಂದ್ರ ಭೋಸ್ ಸಾವಿನ ರಹಸ್ಯ ಕುರಿತಾದ ಕತೆ ಒಳಗೊಂಡಿರುವ ಸ್ಪೈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ.
ಚಿತ್ರರಂಗದಲ್ಲೀಗ ಇತಿಹಾಸ ಕೆದಕುವ ಸಿನಿಮಾಗಳ ಟ್ರೆಂಡ್ ಆರಂಭವಾದಂತಿದೆ. ಕನ್ನಡದಲ್ಲಿ ಉರಿಗೌಡ-ನಂಜೇಗೌಡ ಸಿನಿಮಾ ಮಾಡುವ ಯೋಜನೆ ರೂಪುಗೊಂಡು ಬಳಿಕ ಕೈ ಬಿಡಲಾಗಿದೆ. ‘ದಿ ಕಾಶ್ಮೀರ್ ಫೈಲ್ಸ್‘ (The Kashmir Files) ಸಿನಿಮಾ ಕಾಶ್ಮೀರದಲ್ಲಿ 90 ರಲ್ಲಿ ನಡೆದ ಘಟನೆಯನ್ನು ಸಿನಿಮಾ ಮಾಡಲಾಯ್ತು. ಮುಚ್ಚಿಟ್ಟ ಇತಿಹಾಸದ ದರ್ಶನ ಎಂದೇ ಈ ಸಿನಿಮಾವನ್ನು ಬಿಂಬಿಸಲಾಗಿತ್ತು. ಇದೀಗ ಅದೇ ಸಾಲಿಗೆ ಸೇರಬಹುದಾದ ಮತ್ತೊಂದು ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈ ಬಾರಿ ಸುಭಾಷ್ ಚಂದ್ರ ಬೋಸ್ರ (Subhash Chandra Bose) ಜೀವನ ಕತೆಯ ರಹಸ್ಯವನ್ನು ಸಿನಿಮಾ ಮೂಲಕ ಹೇಳುತ್ತಿರುವುದಾಗಿ ಚಿತ್ರತಂಡ ಒಂದು ಹೇಳಿಕೊಂಡಿದೆ.
ತೆಲುಗು ಚಿತ್ರರಂಗದ ನಟ ನಿಖಿಲ್ ಸಿದ್ಧಾರ್ಥ್, ಕಾರ್ತಿಕೇಯ 2, 18 ಪೇಜಸ್ ಅಂಥಹಾ ಹಿಟ್ ಸಿನಿಮಾಗಳನ್ನು ಇತ್ತೀಚೆಗೆ ನೀಡಿದ್ದಾರೆ. ಇದೀಗ ಸ್ಪೈ ಹೆಸರಿನ ಸಿನಿಮಾದಲ್ಲಿ ನಿಖಿಲ್ ನಟಿಸಿದ್ದು, ಈ ಸಿನಿಮಾದಲ್ಲಿ ಸುಭಾಷ್ ಚಂದ್ರ ಬೋಸ್ರ ಸಾವಿನ ರಹಸ್ಯವನ್ನು ಬಯಲು ಮಾಡುವುದಾಗಿ ಹೇಳಲಾಗುತ್ತಿದೆ. ಆಕ್ಷನ್ ಪ್ಯಾಕ್ಡ್ ಕಥಾಹಂದರ ಈ ಚಿತ್ರದ ಟೀಸರ್ ದೆಹಲಿಯ ರಾಜ್ ಪಥ್ ನಲ್ಲಿರುವ ಸುಭಾಷ್ ಚಂದ್ರಬೋಸ್ ಪುತ್ಥಳಿ ಮುಂದೆ ಅನಾವರಣ ಮಾಡಲಾಗಿದೆ.
ಭಾರತದ ಟಾಪ್ ಸೀಕ್ರೆಟ್ ರಹಸ್ಯಗಳಲ್ಲಿ ಒಂದಾದ ಸುಭಾಷ್ ಚಂದ್ರ ಬೋಸ್ರ ಸಾವಿನ ರಹಸ್ಯವನ್ನು ಬೆನ್ನುತ್ತುವ ಗೂಢಚಾರಿಯ ಪಾತ್ರದಲ್ಲಿ ನಿಖಿಲ್ ನಟಿಸಿದ್ದಾರೆ. ಐಶ್ವರ್ಯ ಮೆನನ್ ನಾಯಕಿಯಾಗಿ, ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರು ಆಗಿರುವ ಗ್ಯಾರಿ ಬಿ ಹೆಚ್ ಸ್ಪೈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಎವರು ಮತ್ತು ಹಿಟ್ ಸಿನಿಮಾಗಳ ನಿರ್ಮಾಪಕ ಕೆ.ರಾಜಶೇಖರ್ ರೆಡ್ಡಿ ED ಎಂಟರ್‌ಟೈನ್‌ಮೆಂಟ್‌ನಡಿ ಚರಣ್ ರಾಜ್ ಉಪ್ಪಲಪಾತಿ ಜೊತೆಗೂಡಿ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ.
ಸ್ಪೈ ಸಿನಿಮಾದ ಪೋಸ್ಟರ್ ಹಾಗೂ ಗ್ಲಿಂಪ್ಸ್ ನಿರೀಕ್ಷೆ ಹೆಚ್ಚಿಸಿದ್ದು, ನಿಖಿಲ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಮೂಡಿ ಬರ್ತಿರುವ ಚಿತ್ರಕ್ಕೆ ರಾಜಶೇಖರ್ ರೆಡ್ಡಿ ನಿರ್ಮಾಣದ ಜೊತೆಗೆ ಕಥೆ ಕೂಡ ಬರೆದಿದ್ದು, ಗ್ಯಾರಿ ಬಿ.ಎಚ್. ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ ನಿಖಿಲ್‌ಗೆ ಜೋಡಿಯಾಗಿ ಐಶ್ವರ್ಯ ಮೆನನ್ ನಟಿಸಿದ್ದು, ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ.
ಹೈ ಬಜೆಟ್‌ನಲ್ಲಿ ತಯಾರಾಗಲಿರುವ ಸ್ಪೈ ಸಿನಿಮಾಗೆ ಹಾಲಿವುಡ್ ತಂತ್ರಜ್ಞರ ಮೆರಗು ಸಿಕ್ಕಿದೆ. ಜೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನ ಸಿನಿಮಾಕ್ಕಿದೆ. ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಸ್ಪೈ ಜೂನ್ 29ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ