ಕಿರುತೆರೆ ನಟನ ಅನೈತಿಕ ಸಂಬಂಧ ಬಯಲು ಮಾಡಿದ ಹೆಂಡತಿ; ಸುದ್ದಿಗೋಷ್ಠಿಯಲ್ಲೇ ಛೀಮಾರಿ
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಿಶಾ, ಈ ರೀತಿ ವಿಚಾರಕ್ಕೆ ಮಾಧ್ಯಮದವರನ್ನು ಎದುರುಗೊಳ್ಳುತ್ತಿರುವುದಕ್ಕೆ ಮುಜುಗರವಾಗುತ್ತಿದೆ ಎಂದಿದ್ದಾರೆ.
ಹಿಂದಿ ಕಿರುತೆರೆಯ ಜನಪ್ರಿಯ ಧಾರಾವಾಹಿ ‘ಯೇ ರಿಶ್ತಾ ಕ್ಯಾ ಕೆಹಲಾತಾ ಹೈ’ ನಟ ಕರಣ್ ಮೆಹ್ರಾ ಕೌಟುಂಬಿಕ ಜಗಳ ಪೊಲೀಸ್ ಠಾಣೆ ಮಟ್ಟಿಲೇರಿದೆ. ಪತ್ನಿ ನಿಶಾ ರಾವಲ್ ನೀಡಿದ ದೂರಿನ ಆಧಾರದ ಮೇಲೆ ಕರಣ್ ಅವರನ್ನು ಬಂಧಿಸಲಾಗಿತ್ತು. ಜಾಮೀನು ಪಡೆದು ಹೊರ ಬಂದಿದ್ದ ಕರಣ್ ತನ್ನ ವಿರುದ್ಧ ಹೆಂಡತಿ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವ ಆರೋಪ ಮಾಡಿದ್ದರು. ಇದರಲ್ಲಿ ತಪ್ಪು ಯಾರದ್ದು ಎನ್ನುವ ಚರ್ಚೆ ನಡೆಯುತ್ತಿರುವಾಗಲೇ ಪತಿ ಬಗ್ಗೆ ನಿಶಾ ಗಂಭೀರ ಆರೋಪ ಮಾಡಿದ್ದು, ಗಂಡನ ಅನೈತಿಕ ಸಂಬಂಧ ಬಿಚ್ಚಿಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ನಿಶಾ, ‘ಈ ರೀತಿಯ ವಿಚಾರಕ್ಕೆ ಮಾಧ್ಯಮದವರನ್ನು ಎದುರುಗೊಳ್ಳುತ್ತಿರುವುದಕ್ಕೆ ಮುಜುಗರವಾಗುತ್ತಿದೆ. ನಾವಿಬ್ಬರೂ 5 ವರ್ಷ ಪ್ರೀತಿಸುತ್ತಿದ್ದೆವು. ಈಗ ಮದುವೆ ಆಗಿ 9 ವರ್ಷ ಆಗಿದೆ. ಈ ಸಮಯದಲ್ಲಿ ಸಾಕಷ್ಟು ವಿಚಾರಗಳು ನಡೆದಿವೆ. ಒಂದು ತಿಂಗಳ ಹಿಂದೆ ಕರಣ್ ಚಂಡೀಗಢದಲ್ಲಿದ್ದರು. ಕರಣ್ ಅನೈತಿಕ ಸಂಬಂಧ ಇಟ್ಟುಕೊಂಡ ವಿಚಾರ ಆಗ ಬಯಲಾಗಿತ್ತು. ನಮ್ಮ ವಿಚ್ಛೇದನದ ಬಗ್ಗೆ ಮಾತುಕತೆ ಆರಂಭವಾಗಿದ್ದು ಆಗಲೇ. ಸಂಬಂಧ ಹೊಂದಿರುವ ಬಗ್ಗೆ ಆತನೂ ಒಪ್ಪಿಕೊಂಡಿದ್ದಾನೆ’ ಎಂದು ಮಾಧ್ಯಮಕ್ಕೆ ನಿಶಾ ಹೇಳಿದ್ದಾರೆ.
‘ಆ ಮಹಿಳೆ ದೆಹಲಿಯವಳು. ಇಬ್ಬರ ನಡುವೆ ಪ್ರೀತಿ ಹುಟ್ಟಿದೆಯಂತೆ. ಇಬ್ಬರೂ ದೈಹಿಕವಾಗಿಯೂ ಸಂಬಂಧ ಇಟ್ಟುಕೊಂಡಿದ್ದಾರೆ. ಕರಣ್ ಶೂಟಿಂಗ್ಗಾಗಿ ಚಂಡೀಗಢಕ್ಕೆ ತೆರಳಿದಾಗೆಲ್ಲ ಆಕೆ ಅಲ್ಲಿಗೆ ಬರುತ್ತಾಳೆ. ಹೀಗೆ ಇಬ್ಬರ ಸಂಬಂಧ ಆರಂಭವಾಗಿದೆ’ ಎಂದು ನಿಶಾ ನೇರವಾಗಿಯೇ ಹೇಳಿದ್ದಾರೆ.
‘ಕರಣ್ ಮತ್ತೊಂದು ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಗೊತ್ತಾದಾಗ ನಾನು ಸಿಟ್ಟಾಗಿಲ್ಲ. ಕೂಲ್ ಆಗಿಯೇ ಆತನ ಬಳಿ ಪ್ರಶ್ನೆ ಮಾಡಿದೆ. ಆಗ ನಿಜವಾದ ವಿಚಾರವನ್ನು ಆತ ಹೇಳಿದ. ಆತ ಕ್ಷಮೆ ಕೇಳಿ ಮೊದಲಿನಂತಾದರೆ ನಾನು ಕ್ಷಮಿಸಲು ಸಿದ್ಧಳಿದ್ದೆ. ಆದರೆ, ಆತ ಬದಲಾಗಲಿಲ್ಲ. ಆ್ಯಟಿಟ್ಯೂಡ್ ತೋರಿಸಿದ. ನನ್ನದೇನು ತಪ್ಪು ಎಂಬಂತೆ ಮಾತನಾಡಿದ. 14 ವರ್ಷಗಳಲ್ಲಿ ಕರಣ್ ಈ ರೀತಿ ನಡೆದುಕೊಂಡಿದ್ದು ಇದೇ ಮೊದಲೇನಲ್ಲ ಎಂದಿದ್ದಾರೆ’ ಅವರು.
‘ಕರಣ್ ನನಗೆ ಸದಾ ಹೊಡೆಯುತ್ತಾನೆ. ನಾನು ಇಷ್ಟು ವರ್ಷ ಎಲ್ಲವನ್ನೂ ತಡೆದುಕೊಂಡಿದ್ದೆ. ಅದು ಕರಣ್ ಮೇಲಿನ ಪ್ರೀತಿಗಾಗಿ. ಆದರೆ, ಈಗ ಏನೂ ಉಳಿದಿಲ್ಲ ಎಂದು ನಿಶಾ ಬೇಸರ ಹೊರ ಹಾಕಿದ್ದಾರೆ.