ಆರ್ಸಿಬಿಗೆ ಇಲ್ಲ ಕನ್ನಡ ಹಾಡು, ಇದೆಂಥಹಾ ಅವಮಾನ ಎಂದ ಅಭಿಮಾನಿಗಳು
IPL 2025: ಐಪಿಎಲ್ 2025 ಎರಡು ದಿನದ ಹಿಂದಷ್ಟೆ ಕೊಲ್ಕತ್ತದಲ್ಲಿ ಉದ್ಘಾಟನೆಯಾಗಿದೆ. ಮೊದಲ ಪಂದ್ಯ ಕೊಲ್ಕತ್ತ ಮತ್ತು ಆರ್ಸಿಬಿ ನಡುವೆ ನಡೆದು ಆರ್ಸಿಬಿ ಗೆದ್ದಿದೆ. ಆದರೆ ಪಂದ್ಯಕ್ಕೂ ಮುಂಚೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೈದರಾಬಾದ್, ಚೆನ್ನೈ ತಂಡಗಳಿಗೆ ಅವರ ಭಾಷೆಯ ಹಾಡು ಹಾಡಿ, ಆರ್ಸಿಬಿಗೆ ಕನ್ನಡ ಹಾಡು ಹಾಡದೇ ಇರುವ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಐಪಿಎಲ್ 2025 ಶುರುವಾಗಿ ಎರಡು ದಿನಗಳಾಗಿವೆ. ಮೊದಲ ಪಂದ್ಯ ಕೊಲ್ಕತ್ತ ಮತ್ತು ಆರ್ಸಿಬಿ ನಡುವೆ ಕೊಲ್ಕತ್ತದ ಈಡನ್ ಗಾರ್ಡನ್ನಲ್ಲಿ ನಡೆದಿತ್ತು. ಆರ್ಸಿಬಿ ತಂಡ ಅದ್ಧೂರಿ ಜಯ ಕಂಡಿತು. ಆ ಪಂದ್ಯದ ಆರಂಭಕ್ಕೂ ಮುನ್ನ ಐಪಿಎಲ್ 2025ರ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಹಲವಾರು ಕಲಾವಿದರು ಉದ್ಘಾಟನೆ ಕಾರ್ಯಕ್ರಮದಲ್ಲಿ ಮನೊರಂಜನಾ ಕಾರ್ಯಕ್ರಮ ನೀಡಿದರು. ದಿಶಾ ಪಟಾನಿ ಡ್ಯಾನ್ಸ್ ಮಾಡಿದರು. ಬಾದ್ಶಾ ಹಾಡು ಹಾಡಿದರು. ಎಲ್ಲರಿಗಿಂತಲೂ ಹೆಚ್ಚು ಗಮನ ಸೆಳೆದಿದ್ದು ಗಾಯಕಿ ಶ್ರೆಯಾ ಘೋಷಾಲ್ ಅವರ ಪ್ರದರ್ಶನ. ಆದರೆ ಶ್ರೆಯಾ ಘೋಷಲ್ ಅವರು ಹಾಡಿದ್ದು ಖುಷಿ ಕೊಟ್ಟಿತಾದರೂ ಆರ್ಸಿಬಿ ತಂಡಕ್ಕೆ ಆದ ಅವಮಾನದ ಬಗ್ಗೆ ಕೆಲವರು ಟೀಕೆ ಸಹ ವ್ಯಕ್ತಪಡಿಸಿದ್ದಾರೆ.
ಉದ್ಘಾಟನಾ ಪಂದ್ಯಕ್ಕೂ ಮುಂಚೆ ಶ್ರೆಯಾ ಘೋಷಲ್ ವೇದಿಕೆಗೆ ಬಂದು ಐಪಿಎಲ್ನಲ್ಲಿ ಆಡುತ್ತಿರುವ ಎಲ್ಲ ತಂಡಗಳಿಗಾಗಿ ಅವರ ನಗರ ಅಥವಾ ರಾಜ್ಯವನ್ನು ಪ್ರತಿನಿಧಿಸುವ ಒಂದೊಂದು ಹಾಡುಗಳನ್ನು ಹಾಡಿದರು. ಕೊಲ್ಕತ್ತ ತಂಡಕ್ಕಾಗಿ ಬೆಂಗಾಳಿ ಸಾಲುಗಳಿರುವ ‘ಕಾಗಜಕಾ ಎ ಪಂಕ್’ ಹಾಡು ಹಾಡಿದರು. ಕಿಂಗ್ಸ್ 11 ಪಂಜಾಬಿಗಾಗಿ ಪಂಜಾಬಿ ಹಾಡು ಹಾಡಿದರು. ಹೈದರಾಬಾದ್ ತಂಡಕ್ಕಾಗಿ ‘ಪುಷ್ಪ 2’ ಸಿನಿಮಾದ ‘ನಾ ಸಾಮಿ’ ಹಾಡು ಹಾಡಿದರು. ಚೆನ್ನೈ ತಂಡಕ್ಕಾಗಿ ಮಣಿರತ್ನಂ ನಿರ್ದೇಶನದ ‘ಯುವ’ ಸಿನಿಮಾದ ‘ಓ ಯುವ ಯುವ’ ಹಾಡು ಹಾಡಿದರು. ಆದರೆ ಬೆಂಗಳೂರಿನ ಅಂದರೆ ಆರ್ಸಿಬಿಯ ಸರದಿ ಬಂದಾಗ ಕನ್ನಡ ಹಾಡು ಹಾಡುವ ಬದಲಿಗೆ ‘ಭಾಗ್ ಭಾಗ್ ಮಿಲ್ಕಾ ಭಾಗ್’ ಸಿನಿಮಾದ ‘ಜಿಂದಾ’ ಹಾಡು ಹಾಡಿದರು.
ಇದನ್ನೂ ಓದಿ:ಎರಡನೇ ಸ್ಥಾನದಲ್ಲಿ ಆರ್ಸಿಬಿ ಭದ್ರ: ಇಲ್ಲಿದೆ ಐಪಿಎಲ್ 2025 ಪಾಯಿಂಟ್ಸ್ ಟೇಬಲ್
ಆದರೆ ಆರ್ಸಿಬಿಗೆ ಕನ್ನಡ ಹಾಡು ಹಾಡದೇ ಇರುವ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೈದರಾಬಾದ್, ಚೆನ್ನೈಗೆ ಆಯಾ ಭಾಷೆಯ ಹಾಡು ಹಾಡಿದ ಮೇಲೆ ಆರ್ಸಿಬಿಗೂ ಕನ್ನಡ ಹಾಡನ್ನು ಹಾಡಬೇಕಿತ್ತು ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ, ಗುಜರಾತ್ ತಂಡಗಳಿಗೂ ಶ್ರೆಯಾ ಘೋಷಲ್ ಹಿಂದಿ ಹಾಡುಗಳನ್ನು ಹಾಡಿದರು. ಗುಜರಾತ್ ತಂಡಕ್ಕೆ ಗುಜರಾತಿ ಕತೆಯುಳ್ಳ ಹಿಂದಿ ಸಿನಿಮಾದ ಹಾಡು ಹಾಡಿದರು. ಮುಂಬೈ ಇಂಡಿಯನ್ಸ್ಗೆ ‘ಓಂ ಶಾಂತಿ ಓಂ’ ಸಿನಿಮಾದ ಹಾಡು ಹಾಡಿದರು.
ಒಟ್ಟಾರೆಯಾಗಿ ಕೊಲ್ಕತ್ತದಲ್ಲಿ ಎರಡು ದಿನದ ಹಿಂದೆ ನಡೆದ ಐಪಿಎಲ್ ಉದ್ಘಾಟನಾ ಕಾರ್ಯಕ್ರಮದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಲವರು, ಕಾರ್ಯಕ್ರಮ ಚೆನ್ನಾಗಿ ಮೂಡಿಬರಲಿಲ್ಲ ಎಂದಿದ್ದಾರೆ. ಇನ್ನು ಕೆಲವರು ದಿಶಾ ಪಟಾನಿ ಸಣ್ಣ ಉಡುಗೆಗಳನ್ನು ತೊಟ್ಟು ಡ್ಯಾನ್ಸ್ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಪಂದ್ಯ ವೀಕ್ಷಿಸಲು ಸಣ್ಣ ಮಕ್ಕಳು ಸಹ ಬಂದಿರುತ್ತಾರೆ. ಹೀಗಿರುವಾಗ ದಿಶಾ ಹೀಗೆ ಗ್ಲಾಮರಸ್ ಆಗಿ ವೇದಿಕೆ ಏರುವುದು ಸರಿಯಲ್ಲ ಎಂದಿದ್ದಾರೆ. ಶಾರುಖ್ ಖಾನ್, ಕಾರ್ಯಕ್ರಮದ ನಿರೂಪಣೆ ಮಾಡಿದರು. ಅದು ಸಹ ಮಜವಾಗಿರಲಿಲ್ಲ ಎಂದಿದ್ದಾರೆ. ಏನೇ ಆಗಲಿ, ಮೊದಲ ಪಂದ್ಯದಲ್ಲಿ ಆರ್ಸಿಬಿ ಗೆದ್ದಿದೆ ಕನ್ನಡಿಗರಿಗೆ ಅದೇ ಖುಷಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ