ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕನ್ನಡದ ‘19.20.21’ ಸಿನಿಮಾ (19.20.21 Kannada Movie) ಬಿಡುಗಡೆ ಆಗಿತ್ತು. ಚಿತ್ರಮಂದಿರದಲ್ಲಿ ನೋಡಿದ ಎಲ್ಲರೂ ಈ ಸಿನಿಮಾಗೆ ಮೆಚ್ಚುಗೆ ಸೂಚಿಸಿದರು. ವಿಮರ್ಶಕರು ಕೂಡ ಪ್ರಶಂಸೆ ವ್ಯಕ್ತಪಡಿಸಿದರು. ನೈಜ ಘಟನೆ ಆಧಾರಿತ ಈ ಚಿತ್ರವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಕಾದಿದ್ದ ಸಿನಿಪ್ರಿಯರಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ. ಇಂದಿನಿಂದ (ಜನವರಿ 12) ಒಟಿಟಿ ಅಂಗಳಕ್ಕೆ ‘19.20.21’ ಸಿನಿಮಾ ಕಾಲಿಟ್ಟಿದೆ. ಈ ಸಿನಿಮಾಗೆ ಮಂಸೋರೆ (Mansore) ನಿರ್ದೇಶನ ಮಾಡಿದ್ದಾರೆ. ರಿಯಲಿಸ್ಟಿಕ್ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಒಟಿಟಿ (OTT Platform) ಮೂಲಕ ಈ ಚಿತ್ರ ಇನ್ನೂ ಹೆಚ್ಚಿನ ಪ್ರೇಕ್ಷಕರನ್ನು ತಲುಪುತ್ತಿದೆ.
‘19.20.21’ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡದವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕನ್ನಡದ ಚಿತ್ರಗಳಿಗೆ ಒಟಿಟಿಯಲ್ಲಿ ಸರಿಯಾದ ರೀತಿಯ ಮನ್ನಣೆ ದೊರೆಯುತ್ತಿಲ್ಲ. ಅದರಲ್ಲೂ ಸ್ವಲ್ಪ ನಿಷ್ಠುರವಾದ ಕಥೆಗಳು ಇದ್ದರಂತೂ ಒಟಿಟಿ ಸಂಸ್ಥೆಗಳು ಮೀನಾಮೇಷ ಎನಿಸುತ್ತವೆ. ಈ ರೀತಿ ಎದುರಾದ ಎಲ್ಲ ವಿಘ್ನಗಳನ್ನು ನಿವಾರಿಸಿಕೊಂಡು ‘19.20.21’ ಚಿತ್ರ ಈಗ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿದೆ.
ಒಟಿಟಿಯಲ್ಲಿ ಬಿಡುಗಡೆ ಆದ ಬಗ್ಗೆ ನಿರ್ದೇಶಕ ಮಂಸೋರೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ನಿಮ್ಮ ಅಂಗೈಯಲ್ಲಿ ನಮ್ಮ ಸಿನಿಮಾ. ಹಲವು ವಿಘ್ನಗಳನ್ನು ದಾಟಿ ನಿಮ್ಮ ಬಳಿಗೆ ನಮ್ಮ ಸಿನಿಮಾ ಬಂದಿದೆ. ನಮ್ಮದೇ ನೆಲದ ಪುಟ್ಟ ಸಮುದಾಯ ಮಲೆಕುಡಿಯರ ಸ್ಫೂರ್ತಿದಾಯಕ ಕತೆಯನ್ನು ಎಲ್ಲರಿಗೂ ತಲುಪಿಸಬೇಕೆಂಬ ಕನಸು ನನಸಾಗಿದೆ. ಜೊತೆಗೆ ನಮ್ಮ ಇನ್ನೊಂದು ಸಿನಿಮಾ ಕೂಡ ಇದೆ. ನೋಡಿ, ಹಂಚಿ, ಪ್ರೋತ್ಸಾಹಿಸಿ’ ಎಂದು ಮಂಸೋರೆ ಬರೆದುಕೊಂಡಿದ್ದಾರೆ.
ನಿಮ್ಮ ಅಂಗೈಯಲ್ಲಿ ನಮ್ಮ ಸಿನೆಮಾ, ಹಲವು ವಿಘ್ನಗಳನ್ನು ದಾಟಿ ನಿಮ್ಮ ಬಳಿಗೆ ನಮ್ಮ ಸಿನಿಮಾ ಬಂದಿದೆ . ನಮ್ಮದೇ ನೆಲದ ಪುಟ್ಟ ಸಮುದಾಯ ಮಲೆಕುಡಿಯರ ಸ್ಫೂರ್ತಿದಾಯಕ ಕತೆ ಎಲ್ಲರಿಗೂ ತಲುಪಿಸಬೇಕೆಂಬ ಕನಸು ನನಸಾಗಿದೆ . ಜೊತೆಗೆ ನಮ್ಮ ಇನ್ನೊಂದು ಸಿನೆಮಾ ಕೂಡ ಇದೆ. ನೋಡಿ, ಹಂಚಿ, ಪ್ರೋತ್ಸಾಹಿಸಿ.
🙏🏽❤️@bcineetott #film192021#ACT1978 pic.twitter.com/GJsRQZAV6Q— ಮಂಸೋರೆ/ManSoRe (@mansore25) January 12, 2024
ಅಪ್ಪಟ ಕನ್ನಡದ ಮಣ್ಣಿನ ಕಥೆಗಳು ಈಗ ಹಿಟ್ ಆಗುತ್ತಿವೆ. ‘ಕಾಟೇರ’, ‘ಕಾಂತಾರ’ ಮುಂತಾದ ಚಿತ್ರಗಳ ರೀತಿಯೇ ‘19.20.21’ ಚಿತ್ರದ್ದು ಕೂಡ ಅಪ್ಪಟ ಕನ್ನಡದ ನೆಲದ ಕಥೆ. ನೆಲದ ಹಕ್ಕುಗಳ ಜೊತೆಗೆ ಅಂಟಿಕೊಂಡಿರುವ ಕಥೆ. ಹಾಗಾಗಿ ಒಟಿಟಿಯಲ್ಲಿ ಈ ಸಿನಿಮಾ ಎಲ್ಲರಿಗೂ ಇಷ್ಟ ಆಗಲಿದೆ ಎಂಬ ನಿರೀಕ್ಷೆ ಇದೆ. ‘Bcineet’ ಒಟಿಟಿ ಮೂಲಕ ಹಲವು ಪ್ಲಾಟ್ಫಾರ್ಮ್ಗಳಲ್ಲಿ ಈ ಸಿನಿಮಾ ಲಭ್ಯವಾಗಿದೆ. ಏರ್ಟೆಲ್ ಎಕ್ಸ್ಸ್ಟ್ರೀಮ್, ಅಮೇಜಾನ್ ಪ್ರೈಂ ವಿಡಿಯೋ, ಮೂವೀಫ್ಲೆಕ್ಸ್, ಜಸ್ಟ್ ವಾಚ್, ಒನ್ಪ್ಲಸ್ ಟಿವಿ, ಹಂಗಾಮಾ ಪ್ಲೇ, ಎಬಿಸಿ ಟಾಕೀಸ್ ಮುಂತಾದ ಕಡೆಗಳಲ್ಲಿ ಈ ಸಿನಿಮಾ ನೋಡಬಹುದು.
ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ
‘19.20.21’ ಸಿನಿಮಾದಲ್ಲಿ ಪ್ರತಿಭಾವಂತ ಕಲಾವಿದರು ನಟಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಶೃಂಗ ಬಿ.ವಿ. ಅಭಿನಯಿಸಿದ್ದಾರೆ. ಮಹದೇವ್ ಹಡಪದ, ಕೃಷ್ಣ ಹೆಬ್ಬಾಳೆ, ಸಂಪತ್ ಮೈತ್ರೇಯ, ಎಂ.ಡಿ. ಪಲ್ಲವಿ, ರಾಜೇಶ್ ನಟರಂಗ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿದ್ದಾರೆ. ಬಿಂದು ಮಾಲಿನಿ ಸಂಗೀತ ನೀಡಿದ್ದಾರೆ. ಶಿವ ಬಿ.ಕೆ. ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ