ಹೊಸ ಪ್ರಯತ್ನಗಳಿಗೆ ನಟ ಶಿವರಾಜ್ಕುಮಾರ್ (Shivarajkumar) ಅವರು ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಹೊಸ ತಂಡಗಳ ಆಹ್ವಾನಕ್ಕೆ ಅವರು ಓಗೊಟ್ಟು ಬರುತ್ತಾರೆ. ಆ ಮೂಲಕ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಅವರು ಸಾಥ್ ನೀಡುತ್ತಲೇ ಬಂದಿದ್ದಾರೆ. ಈಗ ಕನ್ನಡದ ಹೊಸ ಒಟಿಟಿ ಪ್ಲಾಟ್ಫಾರ್ಮ್ಗೆ ‘ಹ್ಯಾಟ್ರಿಕ್ ಹೀರೋ’ ಪ್ರೋತ್ಸಾಹ ನೀಡಿದ್ದಾರೆ. ‘ಟಾಕೀಸ್’ ಎಂಬ ಒಟಿಟಿಯನ್ನು ಶಿವಣ್ಣ ಲಾಂಚ್ ಮಾಡಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮಕ್ಕೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸ್ವಯಂ ಪ್ರಭ ಸಂಸ್ಥೆಯ ರತ್ನಾಕರ್ ಕಾಮತ್ ಅವರು ಆರಂಭಿಸಿರುವ ‘ಟಾಕೀಸ್’ಗೆ ಶಿವರಾಜ್ಕುಮಾರ್ ಶುಭ ಹಾರೈಸಿದರು. ಇಂದಿನ ಕಾಲದಲ್ಲಿ ಒಟಿಟಿ ವೇದಿಕೆಯ (OTT platform) ಪ್ರಾಮುಖ್ಯತೆ ಬಗ್ಗೆ ಅವರು ಮಾತನಾಡಿದರು. ಎಕ್ಸ್ಕ್ಲೂಸಿವ್ ಆಗಿ ಕನ್ನಡದ ಕಂಟೆಂಟ್ಗಳಿಗಾಗಿ ‘ಟಾಕೀಸ್’ (Talkies Kannada OTT) ಆರಂಭ ಆಗಿದೆ. ಇದರಲ್ಲಿ ಹಲವು ವಿಶೇಷತೆಗಳಿವೆ. ಹಾಗಾಗಿ ಶಿವಣ್ಣ ಅವರು ಈ ತಂಡದ ಬೆನ್ನು ತಟ್ಟಿದ್ದಾರೆ. ಇಂಥ ಕಾರ್ಯಗಳಿಗೆ ತಮ್ಮ ಬೆಂಬಲ ಯಾವಾಗಲೂ ಇರಲಿದೆ ಎಂದು ಅವರು ಭರವಸೆ ನೀಡಿದರು.
ಈ ಮೊದಲು ತುಳು ಸಿನಿಮಾ ಮತ್ತು ಕಿರುಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ‘ಟಾಕೀಸ್’ ಈಗ ತನ್ನ ವ್ಯಾಪ್ತಿ ಹಿರಿದಾಗಿಸಿಕೊಂಡಿದೆ. ಕನ್ನಡಕ್ಕೂ ಕಾಲಿಟ್ಟಿದ್ದು, ಸಕಲ ತಯಾರಿಯೊಂದಿಗೆ ಕಾರ್ಯಾರಂಭ ಮಾಡಿದೆ. ಇದರಲ್ಲಿ ಕನ್ನಡದ ಅನೇಕ ಒರಿಜಿನಲ್ ಕಂಟೆಂಟ್ಗಳು ಲಭ್ಯ ಆಗುತ್ತಿವೆ. ಖ್ಯಾತ ಕಲಾವಿದರು ನಟಿಸಿರುವ ಸಿನಿಮಾ, ಕಿರುಚಿತ್ರ, ವೆಬ್ ಸೀರಿಸ್ಗಳನ್ನು ಪ್ರೇಕ್ಷಕರು ‘ಟಾಕೀಸ್’ನಲ್ಲಿ ನೋಡಬಹುದು.
ವಿಜಯ್ ರಾಘವೇಂದ್ರ, ಪ್ರಮೋದ್ ಶೆಟ್ಟಿ, ರಂಜನಿ ರಾಘವನ್, ಮಂಜು ಪಾವಗಡ, ವೈಷ್ಣವಿ ಗೌಡ, ಭೂಮಿ ಶೆಟ್ಟಿ, ಹರೀಶ್ ರಾಜ್ ಸೇರಿದಂತೆ 1200ಕ್ಕೂ ಅಧಿಕ ಕಲಾವಿದರು ‘ಟಾಕೀಸ್’ ಜೊತೆ ಕೈ ಜೋಡಿಸಿದ್ದಾರೆ. 700ಕ್ಕೂ ಹೆಚ್ಚು ತಂತ್ರಜ್ಞರು ಕೆಲಸ ಮಾಡಿದ್ದಾರೆ. 200ಕ್ಕೂ ಅಧಿಕ ದಿನಗಳ ಪರಿಶ್ರಮದಿಂದ ಈ ಒಟಿಟಿ ಶುರುವಾಗಿದೆ. 400ಕ್ಕಿಂತಲೂ ಹೆಚ್ಚಿನ ಕನ್ನಡ ಸಿನಿಮಾಗಳು ಇದರಲ್ಲಿ ಲಭ್ಯವಾಗುತ್ತಿವೆ. ಇದರ ಜೊತೆಗೆ ಇನ್ನೂ ಹೊಸ ಹೊಸ ಮನರಂಜನಾ ಕಂಟೆಂಟ್ಗಳನ್ನು ನಿರ್ಮಿಸುವ ಗುರಿಯೊಂದಿಗೆ ‘ಟಾಕೀಸ್’ ಮುಂದಡಿ ಇಟ್ಟಿದೆ. ಇದರಿಂದ ಸಾಕಷ್ಟು ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಅವಕಾಶ ಸಿಗಲಿದೆ.
‘ಟಾಕೀಸ್’ ಬಗ್ಗೆ ಶಿವರಾಜ್ಕುಮಾರ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ಕನ್ನಡಿಗರಿಂದ ಕನ್ನಡಿಗರಿಗೋಸ್ಕರ ಎಂಬ ಆಶಯದೊಂದಿಗೆ ಈ ಟಾಕೀಸ್ ಒಟಿಟಿ ಶುರುವಾಗಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗ ಸಿಗುತ್ತದೆ. ಇದು ಬೇರೆ ಭಾಷೆಯ ಒಟಿಟಿಗಿಂತಲೂ ಕಮ್ಮಿ ಇಲ್ಲದಂತೆ ಬೆಳೆಯುತ್ತದೆ ಎಂಬ ನಂಬಿಕೆ ನನಗಿದೆ. ಈ ಅವಕಾಶವನ್ನು ಕನ್ನಡದ ಕಲಾವಿದರು ಮತ್ತು ತಂತ್ರಜ್ಞರು ಉಪಯೋಗ ಮಾಡಿಕೊಳ್ಳಬೇಕು. ಓಕೆ ಆಗದಿದ್ದರೂ ಪರವಾಗಿಲ್ಲ. ಧೈರ್ಯವಾಗಿ ಕಥೆ ಹೇಳಿ. ಒಳ್ಳೊಳ್ಳೆಯ ವೆಬ್ ಸಿರೀಸ್ ಕನ್ನಡದಲ್ಲಿ ನಿರ್ಮಾಣ ಆಗಲಿ. ನಮ್ಮಲ್ಲೂ ಸಾಕಷ್ಟು ಜನ ಬುದ್ಧಿವಂತರು ಇದ್ದಾರೆ. ಅವರ ಪ್ರತಿಭೆಯನ್ನು ಗುರುತಿಸಲು ಬಂದಿರುವ ರತ್ನಾಕರ್ ಕಾಮತ್ ಅವರಿಗೆ ಧನ್ಯವಾಗಳು’ ಎಂದು ಶಿವಣ್ಣ ಹೇಳಿದ್ದಾರೆ.
ಲಾಕ್ಡೌನ್ ಬಳಿಕ ಒಟಿಟಿ ಪ್ಲಾಟ್ಫಾರ್ಮ್ಗಳ ಬಳಕೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಶಿವರಾಜ್ಕುಮಾರ್ ಅವರು ಕೂಡ ವೆಬ್ ಸರಣಿಗಳಲ್ಲಿ ನಟಿಸಲಿದ್ದಾರೆ. ಆ ಬಗ್ಗೆ ಇದೇ ವೇದಿಕೆಯಲ್ಲಿ ಅವರು ಮಾಹಿತಿ ಹಂಚಿಕೊಂಡರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ:
‘ಕೆಜಿಎಫ್ 2’ ಎದುರು ಸೋತ ‘ಬೀಸ್ಟ್’ ಚಿತ್ರಕ್ಕೆ ಈಗ ಉಳಿದಿದ್ದು ಒಟಿಟಿ ಆಯ್ಕೆ ಮಾತ್ರ; ಯಾವಾಗ ರಿಲೀಸ್?
1ನೇ ಸೀಸನ್ಗೆ 40 ಲಕ್ಷ ರೂ, 2ನೇ ಸೀಸನ್ಗೆ 20 ಕೋಟಿ ರೂ. ಸಂಬಳ ಪಡೆದ ‘ಪಾತಾಳ್ ಲೋಕ್’ ನಟ