ಬ್ಯಾಂಕ್ ಲೋಗೋ ತೋರಿಸಿ ಪೇಚಿಗೆ ಸಿಲುಕಿದ್ದ ‘ಸ್ಕ್ಯಾಮ್ 1992’ ವೆಬ್ ಸಿರೀಸ್ ತಂಡಕ್ಕೆ ಹೈಕೋರ್ಟ್ನಿಂದ ರಿಲೀಫ್
ಬ್ಯಾಂಕ್ ನೀಡಿದ ದೂರನ್ನು ಪ್ರಶ್ನಿಸಿ ‘ಸ್ಕ್ಯಾಮ್ 1992’ ನಿರ್ಮಾಪಕರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ಕೇಸ್ನ ತನಿಖೆಗೆ ತಡೆ ನೀಡಿದೆ.
ಹರ್ಷದ್ ಮೆಹ್ತಾ (Harshad Mehta) ನಡೆಸಿದ್ದ ಷೇರು ಮಾರ್ಕೆಟ್ ಹಗರಣದ ಕುರಿತು ಮೂಡಿಬಂದಿದ್ದ ‘ಸ್ಕ್ಯಾಮ್ 1992’ (Scam 1992) ವೆಬ್ ಸಿರೀಸ್ಗೆ ಜನರು ಫಿದಾ ಆಗಿದ್ದರು. ಕಳೆದ ವರ್ಷ ಅಕ್ಟೋಬರ್ನಲ್ಲಿ ಈ ವೆಬ್ ಸಿರೀಸ್ (Web Series) ಬಿಡುಗಡೆ ಆಗಿತ್ತು. ಸೋನಿ ಲಿವ್ ಓಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾದ ಈ ವೆಬ್ ಸರಣಿಯಲ್ಲಿ ಒಂದು ಎಡವಟ್ಟು ಆಗಿತ್ತು. ಹಾಗಾಗಿ ನಿರ್ಮಾಪಕರ ವಿರುದ್ಧ ಕರಾಡ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ದೂರು ದಾಖಲಿಸಿತ್ತು. ಅದಕ್ಕೆ ಸಂಬಂಧಿಸಿದ ತನಿಖೆಗೆ ಬಾಂಬೆ ಹೈಕೋರ್ಟ್ (Bombay High Court) ತಡೆ ನೀಡಿದೆ.
‘ಸ್ಕ್ಯಾಮ್ 1992’ ವೆಬ್ ಸಿರೀಸ್ನ ಮೂರನೇ ಎಪಿಸೋಡ್ನಲ್ಲಿ ಒಂದು ಬ್ಯಾಂಕ್ನ ಲೋಗೋ ತೋರಿಸಲಾಗಿದೆ. ಅದು ಕರಾಡ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲೋಗೋ ರೀತಿ ಇದೆ. ಅದರಿಂದ ಈ ಬ್ಯಾಂಕ್ನ ಪ್ರತಿಷ್ಠೆಗೆ ಧಕ್ಕೆ ಆಗಿದೆ. ಇದು ಬ್ಯಾಂಕ್ನ ವ್ಯವಹಾರದ ಮೇಲೂ ಪರಿಣಾಮ ಬೀರುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಹಾಗಾಗಿ ಈ ವರ್ಷ ಜುಲೈನಲ್ಲಿ ಪುಣೆಯ ಸಹಕಾರ್ ನಗರ್ ಪೊಲೀಸರು ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದರು.
ಈ ದೂರನ್ನು ಪ್ರಶ್ನಿಸಿ ‘ಸ್ಕ್ಯಾಮ್ 1992’ ನಿರ್ಮಾಪಕರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿರುವ ನ್ಯಾಯಾಲಯವು ಈ ಕೇಸ್ನ ತನಿಖೆಗೆ ತಡೆ ನೀಡಿದೆ. ಮುಂದಿನ ಮೂರು ವಾರಗಳ ಕಾಲ ಯಾವುದೇ ರೀತಿ ವಿಚಾರಣೆ ನಡೆಸಬಾರದು ಎಂದು ಆದೇಶಿಸಿದೆ. ಆ ಮೂಲಕ ನಿರ್ಮಾಪಕರಿಗೆ ರಿಲೀಫ್ ಸಿಕ್ಕಂತಾಗಿದೆ.
‘ಸ್ಕ್ಯಾಮ್ 1992’ ವೆಬ್ ಸರಣಿ ದೊಡ್ಡ ಮಟ್ಟದಲ್ಲಿ ಹಿಟ್ ಆಯಿತು. ಹರ್ಷದ್ ಮೆಹ್ತಾ ಮಾಡಿದ್ದ ಹಗರಣಗಳನ್ನು ಇದರಲ್ಲಿ ಎಳೆಎಳೆಯಾಗಿ ತೆರೆದಿಡಲಾಗಿದೆ. ಈ ವೆಬ್ ಸಿರೀಸ್ಗೆ ಹನ್ಸಲ್ ಮೆಹ್ತಾ ಮತ್ತು ಜೈ ಮೆಹ್ತಾ ನಿರ್ದೇಶನವಿದೆ. ಹರ್ಷದ್ ಮೆಹ್ತಾ ಪಾತ್ರದಲ್ಲಿ ಪ್ರತೀಕ್ ಗಾಂಧಿ ಅವರ ನಟನೆಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಯಿತು. ಹರ್ಷದ್ ಮೆಹ್ತಾ ನಡೆಸಿದ ಹಗರಣದ ಕುರಿತು ಬಾಲಿವುಡ್ನಲ್ಲಿ ‘ಬಿಗ್ ಬುಲ್’ ಸಿನಿಮಾ ಮೂಡಿಬಂತು. ಅದರಲ್ಲಿ ಅಭಿಷೇಕ್ ಬಚ್ಚನ್ ಮುಖ್ಯಭೂಮಿಕೆ ನಿಭಾಯಿಸಿದರು. ಅದು ಕೂಡ ಓಟಿಟಿ ಮೂಲಕವೇ ಬಿಡುಗಡೆ ಆಯಿತು.
ಇದನ್ನೂ ಓದಿ:
ನೆಟ್ಫ್ಲಿಕ್ಸ್ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್ ಸಿರೀಸ್ ಟ್ರೇಲರ್ನಲ್ಲಿ ಘಟಾನುಘಟಿಗಳ ಸಂಗಮ