
‘ಧುರಂಧರ್ 2’ (Dhurandhar 2) ಸಿನಿಮಾ ಭಾರತ ಮಾತ್ರವಲ್ಲದೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಿದೆ. 1800 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಆದರೆ ಈ ಸಿನಿಮಾ ಸೌದಿ ರಾಷ್ಟ್ರಗಳು, ಪಾಕಿಸ್ತಾನ ಇನ್ನೂ ಕೆಲವೆಡೆ ನಿಷೇಧಕ್ಕೆ ಒಳಗಾಗಿತ್ತು. ಅದರಲ್ಲೂ ಸಿನಿಮಾ ಕತೆಯೇ ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಇರುವಂಥಹದ್ದು. ಆದರೂ ಸಹ ಇದೀಗ ಪಾಕಿಸ್ತಾನದ ಜನ ಮುಗಿಬಿದ್ದು ‘ಧುರಂಧರ್ 2’ ಸಿನಿಮಾ ನೋಡಿದ್ದಾರೆ. ಈಗ ಮಾತ್ರವಲ್ಲ ಈ ಹಿಂದೆ ‘ಧುರಂಧರ್’ ಮೊದಲ ಭಾಗ ಬಿಡುಗಡೆ ಆದಾಗಲೂ ಸಹ ಪಾಕ್ನ ಜನ ಹುಚ್ಚೆದ್ದು ಆ ಸಿನಿಮಾ ವೀಕ್ಷಿಸಿದ್ದರು. ಈಗ ಮತ್ತೆ ಅದೇ ಕ್ರೇಜ್ ಪುನರಾವರ್ತನೆಗೊಂಡಿದೆ.
‘ಧುರಂಧರ್ 2’ ಸಿನಿಮಾ ಮೇ 14 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ಪಾಕಿಸ್ತಾನದಲ್ಲಿ ಸಹ ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾ ವೀಕ್ಷಿಸಬಹುದಾಗಿದೆ. ಸಿನಿಮಾದ ಬಿಡುಗಡೆಗಾಗಿ ನಿರೀಕ್ಷೆಯಿಂದ ಕಾಯುತ್ತಿದ್ದ ಪಾಕಿಸ್ತಾನದ ಸಿನಿಮಾ ಪ್ರೇಮಿಗಳು ಮೇ 13 ರ ಮಧ್ಯರಾತ್ರಿಯವರೆಗೆ ಎದ್ದಿದ್ದು, ಸಿನಿಮಾ ಸ್ಟ್ರೀಮಿಂಗ್ ಆರಂಭಿಸುತ್ತಿದ್ದಂತೆ ನೋಡಿದ್ದಾರೆ. ಕೆಲವೇ ಗಂಟೆಗಳಲ್ಲಿ ‘ಧುರಂಧರ್ 2’ ಸಿನಿಮಾ ಪಾಕಿಸ್ತಾನದ ನೆಟ್‌ಫ್ಲಿಕ್ಸ್‌ನಲ್ಲಿ ನಂಬರ್ 1 ಟ್ರೆಂಡಿಂಗ್ ಆಗಿದೆ. ಅಷ್ಟೇ ಅಲ್ಲದೆ, ಮಾವಿಯಾ ಉಮರ್ ಫಾರೂಕಿ ಎಂಬ ಹೆಸರಿನ ಪಾಕಿಸ್ತಾನಿ ಕಂಟೆಂಟ್ ಕ್ರಿಯೇಟರ್ ಹೇಳಿರುವ ಪ್ರಕಾರ, ‘ಧುರಂಧರ್ 2’ ಕ್ರೇಜ್ ಎಷ್ಟಿತ್ತೆಂದರೆ, ಒಟ್ಟಿಗೆ ಜನ ‘ಧುರಂಧರ್ 2’ ನೋಡಿದ್ದರಿಂದ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಸರ್ವರ್‌ಗಳು ಸ್ವಲ್ಪ ಸಮಯದವರೆಗೆ ಕ್ರ್ಯಾಶ್ ಆಗಿದ್ದವಂತೆ!
ಕಂಟೆಂಟ್ ಕ್ರಿಯೇಟರ್ ಹೇಳಿರುವಂತೆ ‘ಪಾಕಿಸ್ತಾನದಲ್ಲಿ ‘ಧುರಂಧರ್ 2’ ಬಿಡುಗಡೆಯಾದ್ದರಿಂದ ಸರ್ವರ್ ಕ್ರ್ಯಾಶ್ ಆಗಿದೆ. ‘ಧುರಂಧರ್ 2’ ಯಾವಾಗ ಅಪ್ಲೋಡ್ ಆಗುತ್ತದೆ ಎಂದು ಜನ ಮೊಬೈಲ್ ಹಿಡಿದು ಕಾಯುತ್ತಿದ್ದರು. ರಾತ್ರಿ 12ಕ್ಕೆ ಸಿನಿಮಾ ಅಪ್ಲೋಡ್ ಆಗುತ್ತಿದ್ದಂತೆ ಒಟ್ಟಿಗೆ ಕ್ಲಿಕ್ ಮಾಡಿ ಸಿನಿಮಾ ನೋಡಲು ಆರಂಭಿಸಿದರು. ಇದರಿಂದ ಪಾಕ್ನಲ್ಲಿ ನೆಟ್‌ಫ್ಲಿಕ್ಸ್ ಸರ್ವರ್ ಕೆಲ ಹೊತ್ತು ಕ್ರ್ಯಾಶ್ ಆಯ್ತು’ ಎಂದಿದ್ದಾರೆ.
ಇದನ್ನೂ ಓದಿ:ಒಟಿಟಿಯಲ್ಲಿ ಬಿಡುಗಡೆ ಆಯ್ತು ‘ಧುರಂಧರ್ 2’ ಆದರೆ ಭಾರತೀಯರಿಗಲ್ಲ
2025ರಲ್ಲಿ ‘ಧುರಂಧರ್’ ಸಿನಿಮಾ ಬಿಡುಗಡೆ ಆದಾಗ ಆ ಸಿನಿಮಾ ಸಹ ಪಾಕ್ನಲ್ಲಿ ಕ್ರೇಜ್ ಹುಟ್ಟಿಸಿತ್ತು. ಸಿನಿಮಾದ ಪೈರಸಿ ಸಿಡಿಗಳು ಬಿಸಿ ಬಿರಿಯಾನಿಯಂತೆ ಬಿಕರಿ ಆಗಿದ್ದವು. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಆದಾಗಲೂ ಸಹ ಜನ ಮುಗಿಬಿದ್ದು ಸಿನಿಮಾ ನೋಡಿದ್ದರು. ಪಾಕ್ಸ ಸಂಸತ್ನಲ್ಲಿ ಸಹ ಸಿನಿಮಾದ ಬಗ್ಗೆ ಚರ್ಚೆ ಆಗಿತ್ತು. ಈಗ ಮತ್ತೆ ‘ಧುರಂಧರ್ 2’ ಮೂಲಕ ಅದೇ ಕ್ರೇಜ್ ಪುನರಾವರ್ತನೆ ಆಗಿದೆ.
ಪ್ರಸ್ತುತ ‘ಧುರಂಧರ್ 2’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಿದೆ. ಆದರೆ ವಿದೇಶದಲ್ಲಿ ಮಾತ್ರವೇ ಬಿಡುಗಡೆ ಆಗಿದ್ದು, ಭಾರತದಲ್ಲಿ ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ. ಜೂನ್ 4 ರಂದು ಜಿಯೋ ಹಾಟ್ಸ್ಟಾರ್ನಲ್ಲಿ ‘ಧುರಂಧರ್ 2’ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Sat, 16 May 26