Hanuman OTT Release: ಕಡೆಗೂ ಒಟಿಟಿಗೆ ಬಂತು ‘ಹನುಮಾನ್’ ಸಿನಿಮಾ; ಎಲ್ಲಿ ವೀಕ್ಷಣೆ?
ಸದ್ದು ಗದ್ದಲ ಇಲ್ಲದೇ ‘ಹನುಮಾನ್’ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಕೆಲವೇ ದಿನಗಳ ಹಿಂದೆ ರಿಲೀಸ್ ಡೇಟ್ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ ಎಂದು ಹೇಳಿದ್ದ ಒಟಿಟಿ ಸಂಸ್ಥೆಯೇ ಈಗ ಈ ಸಿನಿಮಾದ ಸ್ಟ್ರೀಮಿಂಗ್ ಆರಂಭಿಸಿದೆ. ಪ್ರಶಾಂತ್ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ತೇಜ ಸಜ್ಜಾ ಅವರು ಸೂಪರ್ ಹೀರೋ ಆಗಿ ನಟಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ತೆರೆಕಂಡು ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡ ‘ಹನುಮಾನ್’ (Hanuman Movie) ಸಿನಿಮಾವನ್ನು ಒಟಿಟಿಯಲ್ಲಿ ನೋಡಬೇಕು ಎಂದು ಫ್ಯಾನ್ಸ್ ಕಾಯುತ್ತಿದ್ದರು. ಅವರ ಕಾಯುವಿಕೆಗೆ ಈಗ ತೆರೆ ಬಿದ್ದಿದೆ. ಕಡೆಗೂ ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ‘ಜೀ 5’ ಒಟಿಟಿ (Zee5 OTT) ಮೂಲಕ ‘ಹನುಮಾನ್’ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಈ ಚಿತ್ರದಲ್ಲಿ ತೇಜ ಸಜ್ಜಾ (Teja Sajja) ಅವರು ಹೀರೋ ಆಗಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಅಮೃತಾ ಅಯ್ಯರ್ ನಟಿಸಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನ ಮಾಡಿರುವ ‘ಹನುಮಾನ್’ ಸಿನಿಮಾದಲ್ಲಿ ಸೂಪರ್ ಹೀರೋ ಕಥೆ ಇದೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರದಲ್ಲಿ ‘ಹನುಮಾನ್’ ಸಿನಿಮಾ ಬಿಡುಗಡೆ ಆಗಿತ್ತು. ಅದೇ ಸಂದರ್ಭದಲ್ಲಿ ಸ್ಟಾರ್ ನಟರ ಅನೇಕ ಸಿನಿಮಾಗಳು ತೆರೆಕಂಡಿದ್ದವು. ಬೇರೆಲ್ಲ ಸಿನಿಮಾಗಳಿಗೆ ಪೈಪೋಟಿ ನೀಡಿದ ‘ಹನುಮಾನ್’ ಚಿತ್ರ ಸೂಪರ್ ಹಿಟ್ ಆಯಿತು. ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಈಗ ಈ ಸಿನಿಮಾ ಒಟಿಟಿಯಲ್ಲಿ ಧೂಳೆಬ್ಬಿಸಲು ಬಂದಿದೆ.
ಇದನ್ನೂ ಓದಿ: ‘ಹನುಮಾನ್’ ಸಿನಿಮಾದ ಹೀರೋ ತೇಜ ಸಜ್ಜಾ ಸಂಭಾವನೆಯಲ್ಲಿ ಏರಿಕೆ
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ಹನುಮಾನ್’ ತೆರೆಕಂಡಿತ್ತು. ಸದ್ಯಕ್ಕೆ ‘ಜೀ 5’ ಒಟಿಟಿಯಲ್ಲಿ ತೆಲುಗು ವರ್ಷನ್ ಮಾತ್ರ ಲಭ್ಯವಾಗಿದೆ. ಕನ್ನಡ, ತಮಿಳು, ಮಲಯಾಳಂ ವರ್ಷನ್ಗಾಗಿ ಪ್ರೇಕ್ಷಕರು ಕಾದಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ‘ಹನುಮಾನ್’ ಸಿನಿಮಾದ ಹಿಂದಿ ವರ್ಷನ್ ವೀಕ್ಷಿಸಬಹುದು. ಆಂಜನೇಯನ ಕೃಪೆಯಿಂದ ಸೂಪರ್ ಪವರ್ ಪಡೆಯುವ ಯುವಕನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರೇಕ್ಷಕರಿಗೆ ಅದು ತುಂಬ ಇಷ್ಟ ಆಗಿದೆ.
View this post on Instagram
ತೇಜ ಸಜ್ಜಾ, ಅಮೃತಾ ಅಯ್ಯರ್ ಜೊತೆ ಕನ್ನಡದ ರಾಜ್ ದೀಪಕ್ ಶೆಟ್ಟಿ, ವಿನಯ್ ರೈ, ವರಲಕ್ಷ್ಮೀ ಶರತ್ಕುಮಾರ್ ಮುಂತಾದವರು ‘ಹನುಮಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ‘ಹನುಮಾನ್’ ಚಿತ್ರತಂಡದವರು ಭೇಟಿ ಆಗಿದ್ದರು. ಈ ಸಿನಿಮಾವನ್ನು ಅಮಿತ್ ಶಾ ಹೊಗಳಿದ್ದರು. ಅವರಿಗೆ ಚಿತ್ರತಂಡದವರು ಸ್ಮರಣಿಕೆ ನೀಡಿದ್ದರು. ಈಗ ಈ ಸಿನಿಮಾಗೆ ಸೀಕ್ವೆಲ್ ಕೂಡ ಸಿದ್ಧವಾಗುತ್ತಿದೆ. ಅದಕ್ಕೆ ‘ಜೈ ಹನುಮಾನ್’ ಎಂದು ಹೆಸರು ಇಡಲಾಗಿದೆ. ಆ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.