ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ (Leela Bhansali) ಅವರು ಏನೇ ಮಾಡಿದರು ಸಖತ್ ಅದ್ದೂರಿಯಾಗಿ ಮಾಡುತ್ತಾರೆ. ಇಷ್ಟು ವರ್ಷಗಳ ಕಾಲ ಅವರು ಹಿರಿತೆರೆಯಲ್ಲಿ ಮ್ಯಾಜಿಕ್ ಮಾಡಿದ್ದಾರೆ. ‘ದೇವದಾಸ್’, ‘ಬಾಜಿರಾವ್ ಮಸ್ತಾನಿ’, ‘ಪದ್ಮಾವತ್’, ‘ಗಂಗೂಬಾಯಿ ಕಾಠಿಯಾವಾಡಿ’ ಮುಂತಾದ ಸಿನಿಮಾಗಳನ್ನು ನೀಡಿರುವ ಅವರು ಇದೇ ಮೊದಲ ಬಾರಿಗೆ ಒಟಿಟಿ ಜಗತ್ತಿಗೆ ಕಾಲಿಟ್ಟಿದ್ದಾರೆ. ಅವರ ನಿರ್ದೇಶನದಲ್ಲಿ ‘ಹೀರಾಮಂಡಿ’ (Heeramandi) ವೆಬ್ ಸಿರೀಸ್ ನಿರ್ಮಾಣ ಆಗಿದ್ದು ಇದರ ಟ್ರೇಲರ್ ಬಿಡುಗಡೆ ಆಗಿದೆ. ಈ ಟ್ರೇಲರ್ (Heeramandi Trailer) ನೋಡಿ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಆಲಿಯಾ ಭಟ್ ಮುಂತಾದ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಸಖತ್ ವೈಭವದಿಂದ ‘ಹೀರಾಮಂಡಿ’ ವೆಬ್ ಸರಣಿಯನ್ನು ಸಂಜಯ್ ಲೀಲಾ ಬನ್ಸಾಲಿ ಅವರು ಕಟ್ಟಿಕೊಟ್ಟಿದ್ದಾರೆ ಎಂಬುದಕ್ಕೆ ಈ ಟ್ರೇಲರ್ ಸಾಕ್ಷಿ ಒದಗಿಸಿದೆ. ಸ್ವಾತಂತ್ರ್ಯಪೂರ್ವ ಕಾಲದ ಕಹಾನಿಯನ್ನು ಈ ಮೂಲಕ ಹೇಳಲಾಗುತ್ತಿದೆ. ಅನೇಕ ನಟಿಯರು ಈ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡಿದ್ದಾರೆ. ನೆಟ್ಫ್ಲಿಕ್ಸ್ ಮೂಲಕ ಮೇ 1ರಂದು ಈ ವೆಬ್ ಸಿರೀಸ್ ವೀಕ್ಷಣೆಗೆ ಲಭ್ಯವಾಗಲಿದೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾಗಾಗಿ ಹಳ್ಳಿಗೆ ಹೋಗಿ ತರಬೇತಿ ಪಡೆಯುತ್ತಿರುವ ರಣಬೀರ್ ಕಪೂರ್
ಮನಿಶಾ ಕೊಯಿರಾಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ, ರಿಚಾ ಚಡ್ಡಾ, ಶರ್ಮಿನ್ ಸೇಗಲ್, ಸಂಜೀದಾ ಶೇಖ್ ಮುಂತಾದವರು ‘ಹೀರಾಮಂಡಿ’ ವೆಬ್ ಸಿರೀಸ್ನಲ್ಲಿ ನಟಿಸಿದ್ದಾರೆ. ಅದ್ದೂರಿ ಸೆಟ್ಗಳು, ಹಿನ್ನೆಲೆ ಸಂಗೀತ, ಕಲಾವಿದರ ಕಾಸ್ಟ್ಯೂಮ್ ಎಲ್ಲವೂ ಗಮನ ಸೆಳೆಯುತ್ತಿದೆ. ಈ ವೆಬ್ ಸರಣಿ ನೋಡಲು ಸಂಜಯ್ ಲೀಲಾ ಬನ್ಸಾಲಿ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.
‘ಹೀರಾಮಂಡಿ’ ಟ್ರೇಲರ್ ನೋಡಿದ ಆಲಿಯಾ ಭಟ್ ಅವರು ಇದನ್ನು ಮ್ಯಾಜಿಕಲ್ ಎಂದು ಹೊಗಳಿದ್ದಾರೆ. ಈ ಮೊದಲು ಆಲಿಯಾ ಭಟ್ ಅವರು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಿದ್ದರು. ಆ ಚಿತ್ರದಲ್ಲಿನ ಅಭಿನಯಕ್ಕೆ ಅವರು ‘ಅತ್ಯುತ್ತಮ ನಟಿ’ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ವಿಕ್ಕಿ ಕೌಶಲ್ ಅವರಿಗೂ ‘ಹೀರಾಮಂಡಿ’ ಟ್ರೇಲರ್ ಸಖತ್ ಇಷ್ಟ ಆಗಿದೆ. ‘ಇದು ತುಂಬ ಅದ್ಭುತವಾಗಿದೆ. ಶ್ರೇಷ್ಠ ಕಲಾಕೃತಿ’ ಎಂದು ಅವರು ಮೆಚ್ಚಿಗೆ ಸೂಚಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರು ಈ ವೆಬ್ ಸಿರೀಸ್ನಲ್ಲಿನ ಮಹಿಳಾ ಕಲಾವಿದರ ಪ್ರತಿಭೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.