ಒಟಿಟಿಯಲ್ಲಿ ಗಮನ ಸೆಳೆದ ಮಲಯಾಳಂ ಸಿನಿಮಾ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’

‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡ ಸಿನಿಪ್ರಿಯರು ಈಗ ಒಟಿಟಿಯಲ್ಲಿ ವೀಕ್ಷಿಸಿ ಎಂಜಾಯ್ ಮಾಡುತ್ತಿದ್ದಾರೆ. ಮಲಯಾಳಂ ಭಾಷೆಯ ಈ ಸಿನಿಮಾ ಕನ್ನಡದಲ್ಲೂ ಪ್ರಸಾರ ಆಗುತ್ತಿದೆ. ಸಂಗೀತ್ ಪ್ರತಾಪ್, ಶರಾಫುದ್ದೀನ್, ಅಖಿಲಾ ಭಾರ್ಗವನ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಒಟಿಟಿಯಲ್ಲಿ ಗಮನ ಸೆಳೆದ ಮಲಯಾಳಂ ಸಿನಿಮಾ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’
Its A Medical Miracle

Updated on: Oct 30, 2026 | 3:14 PM

ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಜನಪ್ರಿಯ ಕಾಮಿಕ್ ಥ್ರಿಲ್ಲರ್ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ಈಗ ಡಿಜಿಟಲ್ ಜಗತ್ತಿನಲ್ಲೂ ಭರ್ಜರಿ ಯಶಸ್ಸು ಕಾಣುತ್ತಿದೆ. ‘ಮನೋರಮಾಮ್ಯಾಕ್ಸ್‌’ ಒಟಿಟಿಯಲ್ಲಿ ಬಿಡುಗಡೆಯಾದ ಮೊದಲ ವಾರದಲ್ಲೇ ಈ ಚಿತ್ರ ಬರೋಬ್ಬರಿ 1.50 ಕೋಟಿಗೂ ಹೆಚ್ಚು ನಿಮಿಷಗಳ ವೀಕ್ಷಣಾ ಸಮಯವನ್ನು ದಾಖಲಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿರುವುದಾಗಿ ಎಂದು ಚಿತ್ರತಂಡ ಹೇಳಿದೆ. ದಕ್ಷಿಣ ಭಾರತದ ಪ್ರೇಕ್ಷಕರನ್ನು ಸೆಳೆಯಲು ಈ ಚಿತ್ರವನ್ನು ಮಲಯಾಳಂ ಮಾತ್ರವಲ್ಲದೆ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲೂ ಏಕಕಾಲಕ್ಕೆ ಲಭ್ಯವಾಗುವಂತೆ ಮಾಡಲಾಗಿದೆ.

ಹೊಸ ನಿರ್ದೇಶಕ ಸ್ಯಾಮಿನ್ ಗಿರೀಶ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ವಿಭಿನ್ನ ಕಥಾಹಂದರ ಹಾಗೂ ಹಾಸ್ಯದ ಮೇಲೆಯೇ ಸಾಗುವ ರೋಮಾಂಚಕ ತಿರುವುಗಳನ್ನು ಹೊಂದಿದೆ. ‘ಪ್ರೇಮಲು’ ಖ್ಯಾತಿಯ ಸಂಗೀತ್ ಪ್ರತಾಪ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದು, ನಟ ಶರಾಫುದ್ದೀನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ವಿಶೇಷವಾದ ಕಥೆ ಇದೆ.

ಕೋಮಾದಿಂದ ಪವಾಡಸದೃಶವಾಗಿ ಎಚ್ಚರಗೊಳ್ಳುವ ಯುವಕ ರೂಬಿನ್ (ಸಂಗೀತ್ ಪ್ರತಾಪ್), ತನಗೆ ದೂರದ ಸದ್ದು ಹಾಗೂ ಮಾತುಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳುವ ಅಸಾಮಾನ್ಯ ಸಾಮರ್ಥ್ಯ ಬಂದಿರುವುದನ್ನು ಕಂಡುಕೊಳ್ಳುತ್ತಾನೆ. ಈ ಸಂದರ್ಭದಲ್ಲಿ ಆತನಿಗೆ ಎದುರಾಗುವ ಸ್ನೇಹಪರ ಪೊಲೀಸ್ ಅಧಿಕಾರಿ ಸೂರಜ್ (ಶರಾಫುದ್ದೀನ್) ಪಾತ್ರವು ಕಥೆಗೆ ಹೊಸ ಆಯಾಮ ನೀಡುತ್ತದೆ. ಇಬ್ಬರ ನಡುವಿನ ಒಡನಾಟ ಹಾಗೂ ಅನಿರೀಕ್ಷಿತ ಘಟನೆಗಳ ಸುತ್ತ ಹೆಣೆದಿರುವ ಸಸ್ಪೆನ್ಸ್ ಸನ್ನಿವೇಶಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ.

ಈ ಸಿನಿಮಾದಲ್ಲಿ ಸಂಗೀತ್ ಪ್ರತಾಪ್ ಹಾಗೂ ಶರಾಫುದ್ದೀನ್ ಅವರಲ್ಲದೆ ಅಖಿಲಾ ಭಾರ್ಗವನ್, ಪಾರ್ವತಿ ಆರ್. ಕೃಷ್ಣ, ಕೊಟ್ಟಾಯಂ ನಸೀರ್, ಆನಂದ್ ಮನ್ಮದನ್ ಮತ್ತು ಕಿರಣ್ ಪೀತಾಂಬರನ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಕರಿಕ್ಕು’ ಖ್ಯಾತಿಯ ಪ್ರತಿಭಾನ್ವಿತ ಲೇಖಕ ನಿಲೀನ್ ಸಾಂಡ್ರಾ ಈ ಸಿನಿಮಾಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: ಒಟಿಟಿಯಲ್ಲಿ ಕನ್ನಡದಲ್ಲೂ ಇರುವ ವಿಜಯ್ ಸೇತುಪತಿಯ ಹೊಸ ಚಿತ್ರವನ್ನು ಮಿಸ್ ಮಾಡಿಕೊಳ್ಳಲೇಬೇಡಿ

‘ಡಾ. ಪಾಲ್ಸ್ ಎಂಟರ್‌ಟೈನ್‌ಮೆಂಟ್’ ಹಾಗೂ ‘ಡ್ರೀಮ್ ಬಿಗ್ ಫಿಲ್ಮ್ಸ್’ ಬ್ಯಾನರ್‌ಗಳ ಅಡಿಯಲ್ಲಿ ಡಾ. ಪಾಲ್ ವರ್ಗೀಸ್ ಮತ್ತು ಸುಜಿತ್ ಜೆ. ನಾಯರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಖಿಲ್ ಝೇವಿಯರ್ ಅವರ ಛಾಯಾಗ್ರಹಣ, ರಾಕೇಶ್ ಚೆರುಮದಂ ಅವರ ಸಂಕಲನ, ಮುಜೀಬ್ ಮಜೀದ್ ಸಂಗೀತ ಈ ಸಿನಿಮಾಗಿದೆ. ಒಟಿಟಿಯಲ್ಲಿ ಜನಮೆಚ್ಚುಗೆ ಪಡೆದಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us