ಬಾಲಿವುಡ್ನ ಖ್ಯಾತ ನಟ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ (Junaid Khan) ಕೂಡ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅವರು ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ ‘ಮಹಾರಾಜ್’ ಇಂದು (ಜೂನ್ 14) ಬಿಡುಗಡೆ ಆಗಬೇಕಿತ್ತು. ಆದರೆ ಈ ಸಿನಿಮಾದ ಬಿಡುಗಡೆಗೆ ಗುಜರಾತ್ ಹೈಕೋರ್ಟ್ ತಡೆ (Stay Order) ನೀಡಿದೆ. ನೇರವಾಗಿ ನೆಟ್ಫ್ಲಿಕ್ಸ್ ಒಟಿಟಿ ಮೂಲಕ ವೀಕ್ಷಣೆಗೆ ಲಭ್ಯವಾಗಬೇಕಿದ್ದ ಈ ಸಿನಿಮಾಗೆ ಕಾನೂನಿನ ತೊಡಕು ಉಂಟಾಗಿದೆ. ಆದ್ದರಿಂದ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ‘ಮಹಾರಾಜ್’ (Maharaj) ಚಿತ್ರತಂಡ ನಿರ್ಧರಿಸಿದೆ.
‘ಮಹಾರಾಜ್’ ಸಿನಿಮಾಗೆ ಬಾಲಿವುಡ್ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ‘ಯಶ್ ರಾಜ್ ಫಿಲ್ಮ್ಸ್’ ಬಂಡವಾಳ ಹೂಡಿದೆ. ನೈಜ ಘಟನೆಯನ್ನು ಆಧರಿಸಿ ಸೌರಭ್ ಶಾ ಬರೆದ ‘ಮಹಾರಾಜ್’ ಕೃತಿಯನ್ನು ಆಧಾರವಾಗಿ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಯಾರ ಧಾರ್ಮಿಕ ಭಾವನೆಗಳಿಗೂ ಹಾನಿ ಆಗುವಂತಹ ಅಂಶಗಳು ಇಲ್ಲ ಎಂದು ಕೃತಿಯ ಲೇಖಕ ಸೌರಭ್ ಶಾ ಹೇಳಿದ್ದಾರೆ. ಹಾಗಿದ್ದರೂ ಕೂಡ ‘ಮಹಾರಾಜ್’ ಚಿತ್ರದ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ.
ಬಿಡುಗಡೆಗೆ ಇನ್ನೇನು ಕೆಲವೇ ಗಂಟೆಗಳು ಇದೆ ಎನ್ನುವಾಗ ಗುಜರಾತ್ ಹೈಕೋರ್ಟ್ನಿಂದ ತಡೆ ಬಂದಿರುವುದರಿಂದ ಚಿತ್ರತಂಡಕ್ಕೆ ತೊಂದರೆ ಆಗಿದೆ. ಆದ್ದರಿಂದ ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ನಿರ್ಮಾಣ ಸಂಸ್ಥೆಯಾದ ‘ಯಶ್ ರಾಜ್ ಫಿಲ್ಮ್ಸ್’ ಹಾಗೂ ಒಟಿಟಿ ಪ್ರಕಾರ ಹಕ್ಕು ಪಡೆದುಕೊಂಡಿರುವ ‘ನೆಟ್ಫ್ಲಿಕ್ಸ್’ ಸಂಸ್ಥೆಗಳು ನಿರ್ಧರಿಸಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ.
ಇದನ್ನೂ ಓದಿ: ಆಮಿರ್ ಖಾನ್ ಮಗ ಜುನೈದ್ ಖಾನ್ಗೆ ಶ್ರೀದೇವಿಯ 2ನೇ ಮಗಳು ಖುಷಿ ಕಪೂರ್ ಜೋಡಿ
ಚರ್ಚೆ ಹುಟ್ಟುಹಾಕಿರುವ ‘ಮಹಾರಾಜ್’ ಸಿನಿಮಾದಲ್ಲಿ ಜುನೈದ್ ಖಾನ್ ಜೊತೆ ‘ಪಾತಾಳ್ ಲೋಕ್’ ಖ್ಯಾತಿಯ ಜೈದೀಪ್ ಅಹಲಾವತ್ ಅವರು ನಟಿಸಿದ್ದಾರೆ. ಅಲ್ಲದೇ, ‘ಅರ್ಜುನ್ ರೆಡ್ಡಿ’ ಖ್ಯಾತಿಯ ನಟಿ ಶಾಲಿನಿ ಪಾಂಡೆ ಕೂಡ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಜುನೈದ್ ಖಾನ್ ಅವರ ಮೊದಲ ಚಿತ್ರಕ್ಕೆ ಈ ರೀತಿ ವಿಘ್ನ ಎದುರಾಗಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿದೆ. ಇದಲ್ಲದೇ ಇನ್ನೂ ಎರಡು ಸಿನಿಮಾಗಳಲ್ಲಿ ಜುನೈದ್ ಖಾನ್ ಬ್ಯುಸಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.