
ವೆಬ್ ಸೀರಿಸ್ಗಳ ಬಗ್ಗೆ ಎಲ್ಲರೂ ಕೇಳಿರುತ್ತೀರಿ, ನೋಡಿರುತ್ತೀರಿ. ಅದರ ಮುಂದಿನ ಹಂತವಾಗಿ ಮಿನಿ ವೆಬ್ ಸೀರಿಸ್ ಕೂಡ ಬಂತು. ಅಂದರೆ ಕಡಿಮೆ ಅವಧಿಯಲ್ಲಿ ಎಲ್ಲವನ್ನೂ ಹೇಳೋದು. ಈಗ ಮೈಕ್ರೋ ವೆಬ್ ಸೀರಿಸ್ ಟ್ರೆಂಡಿಂಗ್ನಲ್ಲಿ ಇದೆ. ಮೋಕ್ಷಿತಾ ಪೈ ಅವರು ಇದರ ಭಾಗವಾಗಿದ್ದಾರೆ. ಈ ವಿಚಾರ ಅವರಿಗೆ ಖುಷಿ ನೀಡಿದೆ. ಈ ಮೈಕ್ರೋ ಸೀರಿಸ್ನ (Mico Series) ವಿಶೇಷತೆಗಳು ಒಂದೆರಡಲ್ಲ. ಆ ಬಗ್ಗೆ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ.
ಕೊವಿಡ್ ಬಳಿಕ ವೆಬ್ ಸೀರಿಸ್ಗಳು ಟ್ರೆಂಡ್ ಆದವು. 40-60 ನಿಮಿಷಗಳ ಹಲವು ಎಪಿಸೋಡ್ಗಳು ವೆಬ್ ಸೀರಿಸ್ನಲ್ಲಿ ಇರುತ್ತವೆ. ಅದು ದೀರ್ಘ ಎನಿಸಿದಾಗ ಹುಟ್ಟಿಕೊಂಡಿದ್ದೇ ಮಿನಿ ಸೀರಿಸ್. ಇತ್ತೀಚೆಗೆ ಬಂದ ಕನ್ನಡದ ‘ಅಯ್ಯನ ಮನೆ’ ಇದಕ್ಕೆ ಒಳ್ಳೆಯ ಉದಾಹರಣೆ. 20 ನಿಮಿಷಗಲ್ಲಿ ಒಂದು ಎಪಿಸೋಡ್ ಮುಗಿದೇ ಹೋಗುತ್ತದೆ. ಈಗ ಮೈಕ್ರೋ ಸೀರಿಸ್ ಬಂದಿದೆ. ಒಂದೇ ನಿಮಿಷಕ್ಕೆ ಒಂದು ಎಪಿಸೋಡ್ ಪೂರ್ಣಗೊಳ್ಳುತ್ತದೆ.
ಈ ಸರಣಿಯಲ್ಲಿ ವಿನಯ್ ಹಾಗೂ ಮೋಕ್ಷಿತಾ ಪತಿ-ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಲೀಪ್ ರಾಜ್ ಅವರು ಇದನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಇದು ಬುಲೆಟ್ ಆ್ಯಪ್ನಲ್ಲಿ ಬರಲಿದೆ. ‘ನಾನು ಮೈಕ್ರೋ ಸೀರಿಸ್ನ ಭಾಗ ಆಗಿದ್ದೇನೆ. ಒಂದು ಎಪಿಸೋಡ್ ಒಂದು ನಿಮಿಷ ಅಷ್ಟೇ ಇರೋದು. ಒಟ್ಟೂ 50 ಎಪಿಸೋಡ್ಗಳು ಇರಬಹುದು. ಅಂದರೆ 50 ನಿಮಿಷಗಳಲ್ಲಿ ಸೀರಿಸ್ ಪೂರ್ಣಗೊಳ್ಳುತ್ತದೆ. ಕನ್ನಡದಲ್ಲಿ ಹೊಸ ಪ್ರಯತ್ನ. ಮತ್ತೊಂದು ವಿಶೇಷ ಎಂದರೆ ಈ ಸರಣಿ ವರ್ಟಿಕಲ್ ಆಗಿರುತ್ತದೆ. ಅಂದರೆ ರೀಲ್ಸ್ ಸೈಜ್ನಲ್ಲಿ ದೃಶ್ಯಗಳನ್ನು ನೋಡಬೇಕಾಗುತ್ತದೆ’ ಎಂದು ಮೋಕ್ಷಿತಾ ವಿವರಿಸಿದ್ದಾರೆ.
‘ಈ ಸರಣಿಯಲ್ಲಿ ನಟಿಸೋದು ಚಾಲೆಂಜಿಂಗ್ ಆಗಿತ್ತು. ಇಲ್ಲಿ ಹೆಚ್ಚು ಭಾವನೆಗಳನ್ನು ತೋರಿಸೋಕೆ ಆಗಲ್ಲ. ಧಾರಾವಾಹಿಗಳಲ್ಲಿ ಭಾವನೆಗಳನ್ನು ಹೆಚ್ಚು ಡ್ರ್ಯಾಗ್ ಮಾಡಲಾಗುತ್ತದೆ. ಇಲ್ಲಿ ಅದಕ್ಕೆ ಅವಕಾಶ ಇಲ್ಲ. ಎಕ್ಸ್ಪ್ರೆಷನ್, ಡೈಲಾಗ್ ಡೆಲಿವರಿ ಎಲ್ಲವನ್ನೂ ಆ ಒಂದು ಟೈಮ್ನಲ್ಲಿ ಮಾಡಬೇಕು. ಇದು ಸುಲಭ ಆಗಿರಲಿಲ್ಲ. ಶೂಟಿಂಗ್, ಡಬ್ಬಿಂಗ್ ಎಲ್ಲವೂ ಮುಗಿದಿದೆ’ ಎಂದು ಮೋಕ್ಷಿತಾ ವಿವರಿಸಿದ್ದಾರೆ.
ಇದನ್ನೂ ಓದಿ: ಸೀರೆಯಲ್ಲಿ ಸಖತ್ ಶೈನ್ ಆಗುವ ಬಿಗ್ ಬಾಸ್ ಸುಂದರಿ ಮೋಕ್ಷಿತಾ ಪೈ
‘ಈ ವೆಬ್ ಸೀರಿಸ್ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ನಾನು ಮುಗ್ಧ ಹುಡುಗಿ ಪಾತ್ರ ಮಾಡಿದ್ದೇನೆ. ಮುಗ್ಧೆ ಎಂದ ಮಾತ್ರಕ್ಕೆ ತಪ್ಪು ನಡೆದಿದೆ ಎಂದಾಗ ಅವಳು ಸುಮ್ಮನೆ ಇರೋದಿಲ್ಲ. ನನ್ನ ಪಾರು ಸೀರಿಯಲ್ನ ದಿಲೀಪ್ ರಾಜ್ ನಿರ್ಮಾಣ ಮಾಡಿದ್ದರು. ಈಗ ಈ ಸೀರಿಸ್ನ ಅವರೇ ನಿರ್ದೇಶನ ಮಾಡಿದ್ದಾರೆ. ಸುಮಾರು ವರ್ಷ ಆದಮೇಲೆ ಮತ್ತೆ ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿತು. ಮೊದಲ ಧಾರಾವಾಹಿ, ಮೊದಲ ಮೈಕ್ರೋ ಸೀರಿಸ್ ಅವರ ಜೊತೆ ಮಾಡಿದ್ದೇನೆ’ ಎಂದು ಖುಷಿ ಹೊರಹಾಕಿದರು ಮೋಕ್ಷಿತಾ. ಈ ಸರಣಿಗೆ ‘ಅದೇ ಕಣ್ಣು’ಎಂಬ ಶೀರ್ಷಿಕೆ ಇಡಲಾಗಿದೆಯಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:18 pm, Mon, 30 June 25