ಬಿಗ್​ ಬಾಸ್​ ಶೋಗೆ ಹೊಸ ನಿರೂಪಕನಾಗಿ ಬಂದ ನಟ ಸಿಂಬು; ಇನ್ಮುಂದೆ ಇವರೇ ಮುಂದುವರಿಯುತ್ತಾರಾ?

ಕಮಲ್​ ಹಾಸನ್​ ಸ್ಥಾನಕ್ಕೆ ಖ್ಯಾತ ನಟ ಸಿಂಬು ಆಗಮನ ಆಗಿದೆ. ಈ ವಿಚಾರವನ್ನು ಬಿಗ್​ ಬಾಸ್​ ಶೋ ಆಯೋಜಕರು ಅಧಿಕೃತವಾಗಿ ಘೋಷಿಸಿದ್ದಾರೆ.

ಬಿಗ್​ ಬಾಸ್​ ಶೋಗೆ ಹೊಸ ನಿರೂಪಕನಾಗಿ ಬಂದ ನಟ ಸಿಂಬು; ಇನ್ಮುಂದೆ ಇವರೇ ಮುಂದುವರಿಯುತ್ತಾರಾ?
ನಟ ಸಿಂಬು
Follow us
| Updated By: ಮದನ್​ ಕುಮಾರ್​

Updated on: Feb 25, 2022 | 3:14 PM

​ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ನಿರೂಪಕರು ಯಾರು ಎಂಬುದು ತುಂಬ ಮುಖ್ಯವಾಗುತ್ತದೆ. ಕನ್ನಡದಲ್ಲಿ ಹಲವು ವರ್ಷಗಳಿಂದ ಸುದೀಪ್​ ಅವರು ಬಿಗ್​ ಬಾಸ್ (Bigg Boss)​ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಹಿಂದಿಯಲ್ಲಿ ಸಲ್ಮಾನ್​ ಖಾನ್​ ಅವರು ಕೂಡ ನಿರೂಪಕನಾಗಿ ಜನರಿಗೆ ಇಷ್ಟ ಆಗಿದ್ದಾರೆ. ಆದರೆ ಇನ್ನಿತರ ಭಾಷೆಗಳಲ್ಲಿ ಆಗಾಗ ನಿರೂಪಕರು ಬದಲಾಗುತ್ತಾ ಇರುತ್ತಾರೆ. ಪ್ರತಿ ಸೀಸನ್​ ಆರಂಭ ಆದಾಗಲೂ ಈ ಬಾರಿ ನಿರೂಪಣೆ ಮಾಡುವುದು ಯಾರು ಎಂಬ ಪ್ರಶ್ನೆ ಪರಭಾಷೆಯಲ್ಲಿ ಎದುರಾಗುತ್ತದೆ. ತಮಿಳು ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಕಳೆದ ಬಾರಿ ಕಮಲ್​ ಹಾಸನ್​ (Kamal Haasan) ನಿರೂಪಣೆ ಮಾಡಿದ್ದರು. ಇತ್ತೀಚೆಗೆ ಆರಂಭ ಆದ ಇದರ ಒಟಿಟಿ ವರ್ಷನ್​ಗೂ ಅವರೇ ನಿರೂಪಕ ಆಗಿದ್ದರು. ಆದರೆ ಕೆಲವು ಕಾರಣಗಳನ್ನು ನೀಡಿ ಅವರು ಈಗ ನಿರೂಪಕನ ಸ್ಥಾನದಿಂದ ಹಿಂದೆ ಸರಿದಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹಾಗಂತ ಶೋ ನಿಲ್ಲಲು ಸಾಧ್ಯವಿಲ್ಲ. ಕಮಲ್​ ಹಾಸನ್​ ಸ್ಥಾನಕ್ಕೆ ಖ್ಯಾತ ನಟ ಸಿಂಬು (Simbu) ಆಗಮನ ಆಗಿದೆ. ಈ ವಿಚಾರವನ್ನು ಶೋ ಆಯೋಜಕರು ಅಧಿಕೃತವಾಗಿ ಘೋಷಿಸಿದ್ದಾರೆ.

ನಟ ಸಿಂಬು ಅವರಿಗೆ ತಮಿಳುನಾಡಿನಲ್ಲಿ ಸಖತ್​ ಜನಪ್ರಿಯತೆ ಇದೆ. ನಟನಾಗಿ, ನಿರ್ದೇಶಕನಾಗಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕಳೆದ ವರ್ಷ ತೆರೆಕಂಡ ಅವರ ‘ಮಾನಾಡು’ ಸಿನಿಮಾ ಸೂಪರ್​ ಹಿಟ್​ ಆಗಿತ್ತು. ಆ ಯಶಸ್ಸಿನ ಬೆನ್ನಲ್ಲೇ ಅವರು ‘ತಮಿಳು ಬಿಗ್​ ಬಾಸ್​ ಅಲ್ಟಿಮೇಟ್​’ ಶೋ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಅದರ ಪ್ರೋಮೋ ಈಗ ವೈರಲ್​ ಆಗಿದೆ. ಸದ್ಯ ಬಿಗ್​ ಬಾಸ್​ನ ಒಟಿಟಿ ವರ್ಷನ್​ಗೆ ಮಾತ್ರ ಸಿಂಬು ನಿರೂಪಣೆ ಮಾಡುತ್ತಾರೆ. ಮುಂಬರುವ 6ನೇ ಸೀಸನ್​ಗೆ ಎಂದಿನಂತೆ ಕಮಲ್​ ಹಾಸನ್​ ನಿರೂಪಕರಾಗಿ ಇರುತ್ತಾರೆ ಎನ್ನಲಾಗಿದೆ.

ಕಮಲ್​ ಹಾಸನ್​ ಬಿಗ್​ ಬಾಸ್​ ತೊರೆದಿದ್ದು ಯಾಕೆ?

ಕಮಲ್​ ಹಾಸನ್​ ಅವರು ಅತ್ಯಂತ ಬ್ಯುಸಿ ನಟ. ನಟನೆ, ನಿರ್ದೇಶನ, ನಿರ್ಮಾಣ, ರಾಜಕೀಯ.. ಹೀಗೆ ಹತ್ತು ಹಲವು ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಅದರ ಜೊತೆಗೆ ‘ಬಿಗ್​ ಬಾಸ್​ ತಮಿಳು ಅಲ್ಟಿಮೇಟ್​’ ಕಾರ್ಯಕ್ರಮದ ನಿರೂಪಣೆ ಕೂಡ ಮಾಡುತ್ತಿದ್ದರು. ಆದರೆ ಈಗ ಅವರು ಈ ಶೋ ನಿರೂಪಣೆಯಿಂದ ಹೊರಬರುವುದಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ.

‘ನನ್ನ ನಟನೆಯ ‘ವಿಕ್ರಮ್​’ ಸಿನಿಮಾ ಮತ್ತು ಬಿಗ್​ ಬಾಸ್​ ಕಾರ್ಯಕ್ರಮದ ಶೂಟಿಂಗ್​ ನಡುವೆ ಕ್ಲ್ಯಾಶ್​ ಆಗಬಾರದು ಎಂದು ಎರಡೂ ತಂಡಗಳು ಕಷ್ಟಪಟ್ಟು ಈ ದಿನದವರೆಗೂ ಪ್ಲ್ಯಾನ್​ ಮಾಡುತ್ತಿದ್ದವು. ಆದರೆ ಎರಡೂ ಪ್ರಾಜೆಕ್ಟ್​ಗಳನ್ನು ಏಕಕಾಲಕ್ಕೆ ಮಾಡಲು ನನಗೆ ಪ್ರಾಯೋಗಿಕವಾಗಿ ಸಾಧ್ಯವಾಗುತ್ತಿಲ್ಲ. ಲಾಕ್​ಡೌನ್​ ಮತ್ತು ಕೊರೊನಾ ನಿರ್ಬಂಧದ ಕಾರಣದಿಂದ ‘ವಿಕ್ರಮ್​’ ಸಿನಿಮಾದ ಕೆಲಸಗಳು ಮುಂದೂಡಲ್ಪಟ್ಟವು. ಅದರ ಪರಿಣಾಮವಾಗಿ ಬಿಗ್​ ಬಾಸ್​ ಅಲ್ಟಿಮೇಟ್​ ಶೋಗೆ ನೀಡಿದ್ದ ಡೇಟ್ಸ್​ ಜೊತೆ ಈಗ ಕ್ಲ್ಯಾಶ್​ ಆಗಿದೆ. ನಾನು ಬಿಗ್​ ಬಾಸ್​ ಕಾರ್ಯಕ್ರಮದ ಒಟಿಟಿ ಅವತರಣಿಕೆಯನ್ನು ಲಾಂಚ್​ ಮಾಡಿದ್ದಕ್ಕೆ ಹೆಮ್ಮೆ ಇದೆ. ಈ ಶೋ ಜೊತೆ ನಾನು ಬೆರೆತುಹೋಗಿದ್ದೇನೆ. ‘ವಿಕ್ರಮ್​’ ಸಿನಿಮಾದಲ್ಲಿ ನನ್ನ ಸಲುವಾಗಿ ದೊಡ್ಡ ದೊಡ್ಡ ಸ್ಟಾರ್​ ನಟರು ಮತ್ತು ತಂತ್ರಜ್ಞರು ಕಾಯುವಂತೆ ಮಾಡುವುದು ನ್ಯಾಯಸಮ್ಮತ ಅಲ್ಲ’ ಎಂದು ಕಮಲ್​ ಹಾಸನ್​ ತಿಳಿಸಿದ್ದಾರೆ.

ಇದನ್ನೂ ಓದಿ:

ಶಿವಣ್ಣ ಮಾಡಿದ್ದ ಪಾತ್ರದಲ್ಲಿ ಸಿಂಬು; ಹೇಗಿದೆ ನೋಡಿ ‘ಮಫ್ತಿ’ ಸಿನಿಮಾದ ತಮಿಳು ರಿಮೇಕ್​ ಟೀಸರ್​

‘ಮಾನಾಡು’ ನಟ ಸಿಂಬುಗೆ ಗೌರವ ಡಾಕ್ಟರೇಟ್​; ಚಿತ್ರರಂಗದಲ್ಲಿ ಈ ಕಲಾವಿದನ ಸಾಧನೆ ಏನು?