ಥಿಯೇಟರ್ ಬಳಿಕ ಒಟಿಟಿಯಲ್ಲೂ ಒಂದೇ ದಿನ ‘45’-‘ಮಾರ್ಕ್’ ಸಿನಿಮಾ ರಿಲೀಸ್

ಡಿಸೆಂಬರ್ 25ರಂದು ತೆರೆಕಂಡ ಸುದೀಪ್ ನಟನೆಯ 'ಮಾರ್ಕ್' ಮತ್ತು ಶಿವರಾಜ್‌ಕುಮಾರ್, ರಾಜ್ ಬಿ ಶೆಟ್ಟಿ, ಉಪೇಂದ್ರ ಅಭಿನಯದ '45' ಚಿತ್ರಗಳು ಈಗ OTTಗೆ ಬರುತ್ತಿವೆ. ಭರ್ಜರಿ ಕಲೆಕ್ಷನ್ ಮಾಡಿದ 'ಮಾರ್ಕ್' ಜನವರಿ 23ರಿಂದ ಲಭ್ಯ. '45' ಚಿತ್ರದ ಕೂಡ ಅದೇ ದಿನ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಒಂದೇ ದಿನ ತೆರೆಕಂಡ ಈ ಎರಡೂ ಬಹುನಿರೀಕ್ಷಿತ ಚಿತ್ರಗಳು ಈಗ ಒಂದೇ ದಿನ OTTಯಲ್ಲಿ ಪ್ರೇಕ್ಷಕರನ್ನು ತಲುಪಲು ಸಿದ್ಧವಾಗಿವೆ.

ಥಿಯೇಟರ್ ಬಳಿಕ ಒಟಿಟಿಯಲ್ಲೂ ಒಂದೇ ದಿನ ‘45’-‘ಮಾರ್ಕ್’ ಸಿನಿಮಾ ರಿಲೀಸ್
45-ಮಾರ್ಕ್

Updated on: Jan 21, 2026 | 3:02 PM

ಶಿವರಾಜ್​​ಕುಮಾರ್, ರಾಜ್​ ಬಿ ಶೆಟ್ಟಿ ಹಾಗೂ ಉಪೇಂದ್ರ ನಟನೆಯ ‘45’ ಹಾಗೂ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಒಂದೇ ದಿನ ಥಿಯೇಟರ್​​​ನಲ್ಲಿ ರಿಲೀಸ್ ಆಗಿದ್ದವು. ಈ ಚಿತ್ರಗಳು ತೆರೆಗೆ ಬಂದಿದ್ದು ಡಿಸೆಂಬರ್ 25ರಂದು. ಎರಡೂ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿದ್ದು, ಈಗ ಒಟಿಟಿಯಲ್ಲಿ ಈ ಸಿನಿಮಾಗಳು ರಿಲೀಸ್ ಆಗುತ್ತಿವೆ. ವಿಶೇಷ ಎಂದರೆ ಒಂದೇ ದಿನ ಚಿತ್ರಗಳು ಒಟಿಟಿಯಲ್ಲಿ ಪ್ರಸಾರ ಆರಂಭಿಸಲಿವೆ.

ಮಾರ್ಕ್

ಬಾಕ್ಸ್ ಆಫೀಸ್​​​ನಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಖ್ಯಾತಿ ‘ಮಾರ್ಕ್’ ಚಿತ್ರಕ್ಕೆ ಇದೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ, ತಮಿಳಿನಲ್ಲೂ ತೆರೆಗೆ ಬಂತು. ಈ ಸಿನಿಮಾದಲ್ಲಿ ಸುದೀಪ್ ಹೀರೋ. ‘ಮ್ಯಾಕ್ಸ್’ ಶೇಡ್​​ನಲ್ಲೇ ಬಂದ ಈ ಚಿತ್ರವನ್ನು ಜನರು ಭರ್ಜರಿಯಾಗಿ ಇಷ್ಟಪಟ್ಟರು. ಈ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ.

‘ಮಾರ್ಕ್​’ ಸಿನಿಮಾದಲ್ಲಿ ಸುದೀಪ್ ಅವರದ್ದು ಪೊಲೀಸ್ ಪಾತ್ರ. ಈ ಚಿತ್ರ ಜನರಿಗೆ ಇಷ್ಟ ಆಗಿದೆ. ಎರಡು ದಿನಗಳಲ್ಲಿ ನಡೆಯುವ ಕಥೆಯನ್ನು ಸಿನಿಮಾ ಹೊಂದಿದೆ. ತಮಿಳು ಪ್ರೇಕ್ಷಕರೂ ಚಿತ್ರಕ್ಕೆ ಫುಲ್ ಮಾರ್ಕ್ಸ್ ನೀಡಿದರು. ಥಿಯೇಟರ್​​​ನಲ್ಲಿ ಸಿನಿಮಾ ಮಿಸ್ ಮಾಡಿಕೊಂಡವರು ಅಥವಾ ಮತ್ತೊಮ್ಮೆ ಈ ಚಿತ್ರ ನೋಡಬೇಕು ಎಂದು ಪ್ಲ್ಯಾನ್ ರೂಪಿಸಿದವರು ಜಿಯೋ ಹಾಟ್​​ಸ್ಟಾರ್ ಅಲ್ಲಿ ಜನವರಿ 23ರಿಂದ ಸಿನಿಮಾ ವೀಕ್ಷಿಸಬಹುದಾಗಿದೆ.

45 ಚಿತ್ರ

‘45’ ಚಿತ್ರಕ್ಕೆ ಸಂಗೀತ ಸಂಯೋಜಕ ಅರ್ಜುನ್ ಜನ್ಯ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಇದು ಅವರಿಗೆ ಚೊಚ್ಚಲ ಅನುಭವ. ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆಯನ್ನು ಸಂಪೂರ್ಣವಾಗಿ ತಲುಪಲು ಚಿತ್ರಕ್ಕೆ ಸಾಧ್ಯವಾಗಿಲ್ಲ. ಒಂದೊಳ್ಳೆಯ ಸಂದೇಶದ ಜೊತೆಗೆ, ಗರುಡ ಪುರಾಣದ ಕಥೆಯನ್ನು ಸಿನಿಮಾದಲ್ಲಿ ಹೇಳಲಾಗಿದೆ.

ಇದನ್ನೂ ಓದಿ: ‘ಆತ್ಮಸಾಕ್ಷಿ ಬೇಡ್ವಾ’; ಸುದೀಪ್ ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಚಕ್ರವರ್ತಿ ಚಂದ್ರಚೂಡ್

ರಾಜ್ ಬಿ. ಶೆಟ್ಟಿ, ಉಪೇಂದ್ರ ಹಾಗೂ ಶಿವಣ್ಣ ಮೂವರ ಪಾತ್ರಕ್ಕೂ ಸರಿಯಾದ ತೂಕ ಇದೆ. ಶಿವಣ್ಣ ಅವರು ಒಂದು ಕೈ ಮೇಲಿದ್ದಾರೆ ಎಂದರೂ ತಪ್ಪಾಗಲಾರದು. ಈ ಚಿತ್ರ ಒಂದು ವರ್ಗದ ಜನರಿಗೆ ಇಷ್ಟ ಆಗಿದೆ. ಈ ಸಿನಿಮಾ ಒಟಿಟಿಯಲ್ಲಿ ಹೇಗೆ ಗಮನ ಸೆಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.