ನಟಿ ನಯನಾತಾರಾ (Nayanthara) ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ಗೆ (Vignesh Shivan) ನೆಟ್ಫ್ಲಿಕ್ಸ್ ಗಂಟು ಬಿದ್ದಿದೆ. ಒಟಿಟಿ ಸಂಸ್ಥೆ ಈ ದಂಪತಿಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 25 ಕೋಟಿ ರೂಪಾಯಿ ಪಾವತಿಸಿತ್ತು. ಇದನ್ನು ಹಿಂದಿರುಗಿಸಿ ಎಂದು ನೆಟ್ಫ್ಲಿಕ್ಸ್ ಇವರಿಗೆ ನೋಟಿಸ್ ನೀಡಿದೆ ಎನ್ನಲಾಗುತ್ತಿದೆ. ಇದು ಸದ್ಯದ ಮಟ್ಟಿಗೆ ಅಂತೆ-ಕಂತೆಯೇ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೂನ್ ತಿಂಗಳಲ್ಲಿ ಮದುವೆ ಆದರು. ತಿರುಪತಿಯಲ್ಲಿ ಮದುವೆ ಆಗಬೇಕು ಎಂಬುದು ಇವರ ಆಸೆ ಆಗಿತ್ತು. ಆದರೆ, ಇದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಕಾರಣಕ್ಕೆ ಈ ಜೋಡಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ವಿವಾಹ ಆಗಿತ್ತು. ಇವರ ಮದುವೆಯ ಸುಂದರ ಕ್ಷಣಗಳನ್ನು ನೆಟ್ಫ್ಲಿಕ್ಸ್ ಸೆರೆ ಹಿಡಿದಿತ್ತು. ಇದನ್ನು ಎಕ್ಸ್ಕ್ಲೂಸಿವ್ ಆಗಿ ಪ್ರಸಾರ ಮಾಡಲು ದಂಪತಿಗೆ 25 ಕೋಟಿ ರೂಪಾಯಿ ನೀಡಿತ್ತು ಎನ್ನಲಾಗಿದೆ.
ಶೂಟಿಂಗ್ಗೆ ಸಹಕಾರಿ ಆಗಲಿ ಎಂಬ ಕಾರಣಕ್ಕೆ ನಯನತಾರಾ ಮದುವೆಯಲ್ಲಿ ನೆಟ್ಫ್ಲಿಕ್ಸ್ ಹಲವು ಅರೇಜ್ಮೆಂಟ್ಸ್ಗಳನ್ನು ಮಾಡಿತ್ತು. ಇದಲ್ಲದೆ, ಊಟದ ಖರ್ಚನ್ನು ನೆಟ್ಫ್ಲಿಕ್ಸ್ ನೋಡಿಕೊಂಡಿದೆ ಎನ್ನಲಾಗಿದೆ. ಪ್ರತಿ ಪ್ಲೇಟ್ಗೆ ಒಟಿಟಿ ದಿಗ್ಗಜ 3500 ರೂಪಾಯಿ ಪಾವತಿ ಮಾಡಿತ್ತು ಎನ್ನಲಾಗಿದೆ. ಆದರೆ, ಈಗ ನೆಟ್ಫ್ಲಿಕ್ಸ್ ಈ ಡೀಲ್ಅನ್ನು ರದ್ದು ಮಾಡಿದೆ.
ನೆಟ್ಫ್ಲಿಕ್ಸ್ ಈ ದಂಪತಿಗೆ ಕೆಲ ಷರತ್ತುಗಳನ್ನು ವಿಧಿಸಿತ್ತು. ‘ಮದುವೆಯ ಫೋಟೋ ಹಾಗೂ ವಿಡಿಯೋಗಳನ್ನು ನಾವೇ ಪ್ರಸಾರ ಮಾಡುತ್ತೇವೆ, ನೀವು ಎಲ್ಲಿಯೂ ಅದನ್ನು ಪೋಸ್ಟ್ ಮಾಡಬಾರದು’ ಎಂಬುದು ಕೂಡ ಷರತ್ತಿನಲ್ಲಿತ್ತು ಎನ್ನಲಾಗಿದೆ. ಆದರೆ, ಈ ಷರತ್ತನ್ನು ವಿಘ್ನೇಶ್ ಶಿವನ್ ಮುರಿದಿದ್ದಾರೆ. ಮದುವೆ ಆಗುತ್ತಿದ್ದಂತೆ ಇನ್ಸ್ಟಾಗ್ರಾಮ್ನಲ್ಲಿ ಹಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು. ಈ ಬಗ್ಗೆ ದಂಪತಿಗೆ ನೆಟ್ಫ್ಲಿಕ್ಸ್ ಎಚ್ಚರಿಕೆ ನೀಡಿತ್ತು. ಆದಾಗ್ಯೂ, ವಿಘ್ನೇಶ್ ಶಿವನ್ ನಿರಂತರವಾಗಿ ಫೋಟೋ ಪೋಸ್ಟ್ ಮಾಡುತ್ತಲೇ ಬಂದರು. ಹೀಗಾಗಿ, ಈ ಡೀಲ್ ಕ್ಯಾನ್ಸಲ್ ಆಗಿದೆ ಎಂದು ವರದಿ ಆಗಿದೆ.
ಇದನ್ನೂ ಓದಿ: ನವ ದಂಪತಿ ನಯನತಾರಾ-ವಿಘ್ನೇಶ್ ಶಿವನ್ ನಡುವೆ ಮಲೈಕಾ ಅರೋರಾಗೆ ಏನು ಕೆಲಸ? ಫೋಟೋ ವೈರಲ್
ಈ ಮದುವೆಗೆ ಶಾರುಖ್ ಖಾನ್, ಅಟ್ಲೀ, ರಜನಿಕಾಂತ್ ಸೇರಿ ಅನೇಕ ಸೆಲೆಬ್ರಿಟಿಗಳು ಬಂದಿದ್ದರು. ಈ ಕಾರಣಕ್ಕೂ ಈ ಸ್ಟಾರ್ ದಂಪತಿಯ ವಿವಾಹ ದೃಶ್ಯಗಳನ್ನು ಪ್ರಸಾರ ಮಾಡಲು ನೆಟ್ಫ್ಲಿಕ್ಸ್ ಆಸಕ್ತಿ ತೋರಿತ್ತು. ಈ ಕಾರಣಕ್ಕೆ ಈಗ ಈ ದಂಪತಿ 25 ಕೋಟಿ ರೂಪಾಯಿ ಹಿಂದಿರುಗಿಸಬೇಕಿದೆ.