ನಟಿ ಕಂಗನಾ ರಣಾವತ್ (Kangana Ranaut) ಅವರು ತೀವ್ರವಾಗಿ ಸೋತಿದ್ದಾರೆ. ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ಅವರಿಗೆ ಮುಖಭಂಗ ಆಗಿದೆ. ಕಂಗನಾ ರಣಾವತ್ ನಟನೆಯ ‘ಧಾಕಡ್’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಅತಿ ಕಳಪೆ ಎಂಬ ಕುಖ್ಯಾತಿಗೆ ಒಳಗಾಗಿದೆ. ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ಈ ಸಿನಿಮಾ ಚಿಲ್ಲರೆ ಕಾಸು ಸಂಪಾದನೆ ಮಾಡುವಷ್ಟಕ್ಕೇ ಸುಸ್ತು ಹೊಡೆದಿದೆ. ಕಂಗನಾ ರಣಾವತ್ ಅವರನ್ನು ನಂಬಿ ಹಣ ಹೂಡಿದ್ದ ನಿರ್ಮಾಪಕರು ಈಗ ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಕೊನೇ ಪಕ್ಷ ಒಟಿಟಿ (OTT) ಪ್ಲಾಟ್ಫಾರ್ಮ್ನಲ್ಲಾದರೂ ಸಿನಿಮಾವನ್ನು ಮಾರಾಟ ಮಾಡಿ ನಷ್ಟ ಭರಿಸಿಕೊಳ್ಳೋಣ ಎಂದುಕೊಂಡಿದ್ದ ನಿರ್ಮಾಪಕರಿಗೆ ಈಗ ಅದು ಕೂಡ ಸಾಧ್ಯವಾಗುತ್ತಿಲ್ಲ. ಕಂಗನಾ ರಣಾವತ್ ಅವರು ಅತಿಯಾದ ಆತ್ಮವಿಶ್ವಾಸ ಮತ್ತು ದುರಾಸೆಯಿಂದ ಇಡೀ ತಂಡಕ್ಕೆ ತೊಂದರೆ ಆಗಿದೆ. ಒಟಿಟಿಯಲ್ಲಿ ಕೂಡ ಈ ಚಿತ್ರವನ್ನು ಕೊಂಡುಕೊಳ್ಳಲು ಯಾರೂ ಮುಂದೆ ಬರುತ್ತಿಲ್ಲ. ಮುಂದೇನು ಮಾಡಬೇಕು ಎಂದು ತೋಚದೇ ‘ಧಾಕಡ್’ (Dhaakad) ನಿರ್ಮಾಪಕರು ಚಿಂತೆ ಮಾಡುತ್ತಿದ್ದಾರೆ. ಬೇರೆ ನಟ-ನಟಿಯರ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದ ಕಂಗನಾ ಅವರನ್ನೇ ಜನರು ಆಡಿಕೊಂಡು ನಗುವಂತಹ ಸ್ಥಿತಿ ಬಂದಿದೆ.
‘ಧಾಕಡ್’ ಸಿನಿಮಾದಲ್ಲಿ ಕಂಗನಾ ರಣಾವತ್ ಅವರು ಆ್ಯಕ್ಷನ್ ಹೀರೋ ಅವತಾರ ತಾಳಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆದ ಬಳಿಕ ದೊಡ್ಡ ಮಟ್ಟದ ನಿರೀಕ್ಷೆ ಸೃಷ್ಟಿ ಆಗಿತ್ತು. ಅದ್ದೂರಿ ಬಜೆಟ್, ಗುಣಮಟ್ಟದ ಮೇಕಿಂಗ್ ನೋಡಿ ಎಲ್ಲರೂ ಕಣ್ಣರಳಿಸಿದ್ದರು. ಈ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳನ್ನು ಕೊಂಡುಕೊಳ್ಳಲು ಕೆಲವು ಸಂಸ್ಥೆಗಳು ಆಸಕ್ತಿ ತೋರಿಸಿದ್ದವು. ಆದರೆ ಆಗ ವಹಿವಾಟು ನಡೆಸಲು ಕಂಗನಾ ಬಿಟ್ಟಿರಲಿಲ್ಲ ಎನ್ನುತ್ತಿವೆ ಮೂಲಗಳು.
ಇದನ್ನೂ ಓದಿ: Dhaakad Collection: ‘ಧಾಕಡ್’ ಡಿಸಾಸ್ಟರ್; ಕಂಗನಾ ನಂಬಿ ನೂರಾರು ಕೋಟಿ ರೂಪಾಯಿ ಲಾಸ್ ಮಾಡಿಕೊಂಡ ನಿರ್ಮಾಪಕರು ಕಂಗಾಲು
‘ಧಾಕಡ್’ ಸಿನಿಮಾದ ಆದಾಯದಲ್ಲಿ ಕಂಗನಾ ರಣಾವತ್ ಅವರಿಗೆ ಪಾಲು ಸೇರುತ್ತದೆ. ಚಿತ್ರ ರಿಲೀಸ್ ಆಗುವುದಕ್ಕಿಂತ ಮುಂಚೆ ಒಟಿಟಿ ಡೀಲ್ ಮುಗಿಸಿದರೆ ಕಡಿಮೆ ಹಣ ಸಿಗುತ್ತದೆ ಎಂದು ಕಂಗನಾ ಭಾವಿಸಿದ್ದರು. ಸಿನಿಮಾ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗುತ್ತದೆ ಎಂಬುದು ಅವರ ನಿರೀಕ್ಷೆ ಆಗಿತ್ತು. ಚಿತ್ರಮಂದಿರದಲ್ಲಿ ಭರ್ಜರಿಯಾಗಿ ಪ್ರದರ್ಶನ ಕಂಡ ಬಳಿಕ ಒಟಿಟಿ ಹಕ್ಕುಗಳಿಗೆ ಭಾರಿ ಬೇಡಿಕೆ ಬರುತ್ತದೆ. ಆಗ ತಮಗೆ ಹೆಚ್ಚು ಪಾಲು ಸಿಗುತ್ತದೆ ಎಂದು ಅವರು ನಿರೀಕ್ಷಿಸಿದ್ದರು. ಹಾಗಾಗಿ ರಿಲೀಸ್ಗೂ ಮುನ್ನವೇ ಒಟಿಟಿ ಡೀಲ್ ಮಾಡದಂತೆ ನಿರ್ಮಾಪಕರನ್ನು ಕಂಗನಾ ತಡೆದಿದ್ದರು. ಆದರೆ ಈಗ ಎಲ್ಲವೂ ಉಲ್ಟಾ ಪಲ್ಟಾ ಆಗಿದೆ. ಯಾರೂ ಕೂಡ ಈ ಚಿತ್ರವನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸುತ್ತಿಲ್ಲ ಎಂದು ಅನೇಕ ಕಡೆಗಳಲ್ಲಿ ವರದಿ ಆಗಿದೆ.
ಇದನ್ನೂ ಓದಿ: Dhaakad BO collection: 8ನೇ ದಿನ ಸೇಲ್ ಆಗಿದ್ದು ಕೇವಲ 20 ಟಿಕೆಟ್, ಗಳಿಸಿದ್ದು 4,420 ರೂ; ಇದು ಕಂಗನಾ ಚಿತ್ರದ ದುಸ್ಥಿತಿ
ಕಂಗನಾ ಅತಿಯಾದ ಆತ್ಮವಿಶ್ವಾಸ ಮತ್ತು ದುರಾಸೆಯಿಂದಾಗಿ ‘ಧಾಕಡ್’ ರಿಲೀಸ್ಗೂ ಮುನ್ನವೇ ಒಟಿಟಿ ಡೀಲ್ ತಡೆದಿದ್ದರಿಂದ ನಿರ್ಮಾಪಕರ ಹೊಟ್ಟೆ ಮೇಲೆ ಹೊಡೆದಂತಾಗಿದೆ. ಅತ್ತ ಬಾಕ್ಸ್ ಆಫೀಸ್ನಲ್ಲೂ ಹಣ ಇಲ್ಲ, ಇತ್ತ ಒಟಿಟಿಯಲ್ಲೂ ಬೇಡಿಕೆ ಇಲ್ಲ. ಈ ರೀತಿ ದುಸ್ಥಿತಿಗೆ ಕಾರಣವಾದ ಕಂಗನಾ ರಣಾವತ್ ಅವರನ್ನು ಚಿತ್ರತಂಡದವರು ಬಹಿರಂಗವಾಗಿ ದೂಷಿಸುವುದೊಂದೇ ಬಾಕಿ ಉಳಿದಿದೆ. ಬಿಡುಗಡೆಯಾಗಿ 8 ದಿನ ಕಳೆದರೂ ಈ ಸಿನಿಮಾದ ಒಟ್ಟು ಕಲೆಕ್ಷನ್ 3 ಕೋಟಿ ರೂಪಾಯಿ ದಾಟಿಲ್ಲ. ಅನೇಕ ಕಡೆಗಳಲ್ಲಿ ಪ್ರೇಕ್ಷಕರ ಕೊರತೆಯಿಂದ ಎರಡನೇ ದಿನವೇ ಶೋ ಕ್ಯಾನ್ಸಲ್ ಮಾಡಲಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.