ಕಂಗನಾ ರಣಾವತ್ (Kangana Ranaut) ನಟನೆಯ ‘ಧಾಕಡ್’ (Dhaakad) ಚಿತ್ರ ರಿಲೀಸ್ಗೂ ಮೊದಲು ತೀವ್ರ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಚಿತ್ರದ ಬಿಡುಗಡೆಯ ದಿನದಿಂದಲೇ ಬಹಳ ನೀರಸ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಮಹಿಳಾ ಸೂಪರ್ ಹೀರೋ ಮಾದರಿಯ ಈ ಚಿತ್ರದಲ್ಲಿ ಕಂಗನಾ ಏಜೆಂಟ್ ಅಗ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಪ್ರೇಕ್ಷಕರಿಗೆ ಈ ಪ್ರಯತ್ನ ಮೆಚ್ಚುಗೆಯಾಗಿಲ್ಲ. ಜತೆಗೆ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೂ ಸಿಕ್ಕಿದ್ದು ಮತ್ತಷ್ಟು ಹಿನ್ನಡೆಯಾಯಿತು. ಇದೀಗ ಚಿತ್ರ ತೆರೆಕಂಡು ಒಂದು ವಾರವಾಗಿದ್ದು, ದಿನದಿಂದ ದಿನಕ್ಕೆ ಗಳಿಕೆ ಕುಸಿಯುತ್ತಿದೆ. ಬಾಲಿವುಡ್ ಹಂಗಾಮಾ ಚಿತ್ರದ 8ನೇ ದಿನದ ಗಳಿಕೆಯ ವರದಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ದೇಶಾದ್ಯಂತ ಶುಕ್ರವಾರ ‘ಧಾಕಡ್’ ಚಿತ್ರದ ಕೇವಲ 20 ಟಿಕೆಟ್ಗಳು ಮಾರಾಟವಾಗಿವೆ. ಅದರಿಂದ ‘ಧಾಕಡ್’ ಗಳಿಸಿದ್ದು 4,420 ರೂಗಳನ್ನು ಮಾತ್ರ!
8 ದಿನಗಳ ಅವಧಿಯಲ್ಲಿ ಚಿತ್ರದ ಒಟ್ಟಾರೆ ಕಲೆಕ್ಷನ್ 3 ಕೋಟಿ ರೂ ಆಸುಪಾಸಿನಲ್ಲಿದೆ. ಈಗಾಗಲೇ ಚಿತ್ರಕ್ಕೆ ಲಭ್ಯವಾಗಿದ್ದ ಥಿಯೇಟರ್ಗಳಿಂದ ಸಿನಿಮಾವನ್ನು ತೆಗೆಯಲಾಗುತ್ತಿದೆ. ಪ್ರೇಕ್ಷಕರ ಅಲಭ್ಯತೆಯಿಂದ ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಿಂದ ‘ಧಾಕಡ್’ ಮರೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಪಾರ್ಟಿಯಲ್ಲಿ ಈ ವ್ಯಕ್ತಿಗೆ ಪದೇಪದೇ ಕಿಸ್ ಮಾಡಿದ ಕಂಗನಾ; ಫ್ಯಾನ್ಸ್ಗೆ ಮೂಡಿತು ಅನುಮಾನ
ಕಂಗನಾ ರಣಾವತ್ ನಟನೆಯ ಈ ಚಿತ್ರದ ಬಂಡವಾಳ ಸುಮಾರು 80 ಕೋಟಿ ರೂಗಳಿಂದ 90 ಕೋಟಿ ರೂ. ಪ್ರಚಾರದ ಖರ್ಚೂ ಸೇರಿದರೆ ಚಿತ್ರದ ಒಟ್ಟಾರೆ ಖರ್ಚು 100 ಕೋಟಿ ರೂ ಮುಟ್ಟುತ್ತದೆ. ಆದರೆ ಚಿತ್ರ ಮಾತ್ರ ಹೀನಾಯ ಸೋಲಿನ ರುಚಿ ಕಂಡಿದೆ. ರಜನೀಶ್ ಘಾಯ್ ನಿರ್ದೇಶಿಸಿದ ‘ಧಾಕಡ್’ನಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮತ್ತು ಶಾಶ್ವತ ಚಟರ್ಜಿ ಸಹ ನಟಿಸಿದ್ದಾರೆ.
ಈ ವರ್ಷ ಹಿಂದಿ ಚಿತ್ರಗಳಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿಲ್ಲ. 2022ರಲ್ಲಿ ಇದುವರೆಗೆ ಬಾಕ್ಸಾಫೀಸ್ನಲ್ಲಿ ತುಸು ಕಮಾಯಿ ಮಾಡಿದ ಚಿತ್ರಗಳು ಮೂರೇ ಮೂರು. ‘ದಿ ಕಾಶ್ಮೀರ್ ಫೈಲ್ಸ್’, ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರಗಳು ಒಳ್ಳೆಯ ಗಳಿಕೆ ಮಾಡಿವೆ. ‘ಧಾಕಡ್’ ತೆರೆಕಂಡ ದಿನವೇ ರಿಲೀಸ್ ಆಗಿದ್ದ ‘ಭೂಲ್ ಭುಲಯ್ಯ 2’ಗೂ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದು ಅದರ ಗಳಿಕೆ 100 ಕೋಟಿ ರೂ ಸನಿಹ ಬಂದು ನಿಂತಿದೆ.
ಈ ನಡುವೆ ದಕ್ಷಿಣ ಭಾರತದ ಚಿತ್ರಗಳನ್ನು ಹಿಂದಿ ಪ್ರೇಕ್ಷಕರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ವರ್ಷ ‘ಪುಷ್ಪ: ದಿ ರೈಸ್’, ‘ಆರ್ಆರ್ಆರ್’ ಚಿತ್ರಗಳ ಹಿಂದಿ ಅವತರಣಿಕೆಗಳು ಗೆಲುವಿನ ನಗೆ ಬೀರಿವೆ. ‘ಕೆಜಿಎಫ್ ಚಾಪ್ಟರ್ 2’ನ ಹಿಂದಿ ಅವತರಣಿಕೆ 433 ಕೋಟಿ ರೂ ಬಾಚಿಕೊಂಡಿದೆ. ಸಾರ್ವಕಾಲಿಕವಾಗಿ ಭಾರತದಲ್ಲಿ ಅತ್ಯಂತ ಹೆಚ್ಚು ಗಳಿಸಿದ ಹಿಂದಿ ಚಿತ್ರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಇದೆ. ಸದ್ಯ ಬಾಲಿವುಡ್ ಚಿತ್ರಗಳ ಸೋಲಿಗೆ ಕಾರಣಗಳೇನು ಎಂಬುದರ ಬಗ್ಗೆ ಗಂಭೀರ ಚರ್ಚೆಗಳು ನಡೆಯುತ್ತಿವೆ. ಸ್ಟಾರ್ ನಟರು ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ